Advertisement

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

01:24 PM Oct 14, 2024 | ನಾಗೇಂದ್ರ ತ್ರಾಸಿ |

ಡಿಸಿಎಂ ಅಜಿತ್‌ ಪವಾರ್‌ ಬಣದ ಎನ್‌ ಸಿಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿದೆ. ಇದರ ಹೊರತಾಗಿಯೂ ಹೈ ಪ್ರೊಫೈಲ್‌ ಪ್ರಕರಣಗಳಲ್ಲೂ ಲಾರೆನ್ಸ್‌ ಹೆಸರು ಹರಿದಾಡುತ್ತಿದ್ದರೂ ಕೂಡಾ ಗುಜರಾತ್‌ ನ ಸಬರ್‌ ಮತಿ ಜೈಲಿನಲ್ಲಿರುವ ಪಾತಕಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಳ್ಳಲು ಮುಂಬೈ ಕ್ರೈಂ ಬ್ರ್ಯಾಂಚ್‌ ಭಾರೀ ಸವಾಲನ್ನು ಎದುರಿಸುತ್ತಿದೆ!

Advertisement

ಏಪ್ರಿಲ್‌ ತಿಂಗಳಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ ಹೊಣೆ ಕೂಡಾ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿತ್ತು. ಆ ಬಳಿಕ ಸಲ್ಮಾನ್‌ ಖಾನ್‌ ಹಾಗೂ ನಿವಾಸದ ಭದ್ರತೆಯನ್ನು ಬಿಗಿಗೊಳಿಸಿದೆ.

ಲಾರೆನ್ಸ್‌ ಬಿಷ್ಣೋಯಿ ವಶಕ್ಕೆ ಪಡೆಯಲು ಮುಂಬೈ ಪೊಲೀಸರಿಗೆ ಅಡ್ಡಿಯಾಗಿದ್ದೇನು?

ಗುಜರಾತ್‌ ನ ಸಬರಮತಿ ಜೈಲಿನಲ್ಲಿರುವ ನಟೋರಿಯಸ್‌ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ತಮ್ಮ ಕಸ್ಟಡಿಗೆ ಒಪ್ಪಿಸಿ ಎಂದು ಮುಂಬೈ ಪೊಲೀಸರು ಹಲವು ಮನವಿಯನ್ನು ಸಲ್ಲಿಸಿದ್ದರು ಕೂಡಾ ಅದು ನಿಷ್ಪ್ರಯೋಜಕವಾಗಿತ್ತು ಎಂದು ವರದಿ ತಿಳಿಸಿದೆ.

ಅಂದ ಹಾಗೆ ಗುಜರಾತ್‌ ಜೈಲಿನಲ್ಲಿರುವ ಬಿಷ್ಣೋಯಿಯನ್ನು‌ ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಸುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಸಹಜ. ಇದಕ್ಕೆ ಕಾರಣ ಕೇಂದ್ರ ಗೃಹ ಸಚಿವಾಲಯ! ಅಹಮದಾಬಾದ್‌ ನ ಸಬರಮತಿ ಜೈಲಿನಲ್ಲಿರುವ ಬಿಷ್ಣೋಯಿ ಟ್ರಾನ್ಸ್‌ ಫರ್‌ (ಒಂದು ಜೈಲಿನಿಂದ ಮತ್ತೊಂದು ರಾಜ್ಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ)ಗೆ ಸಚಿವಾಲಯ ನಿರ್ಬಂಧ ವಿಧಿಸಿರುವುದಾಗಿ ವರದಿ ವಿವರಿಸಿದೆ.

Advertisement

2024ರ ಆಗಸ್ಟ್‌ ವರೆಗೆ ಈ ಆದೇಶ ಅನ್ವಯ ಎಂದು ಸಚಿವಾಲಯ ತಿಳಿಸಿತ್ತು. ಆದರೆ ಇದೀಗ ಆ ಅವಧಿಯನ್ನು‌ ವಿಸ್ತರಿಸಲಾಗಿದೆ ಎಂದು ವರದಿ ತಿಳಿಸಿದೆ. ಗಡಿಭಾಗದ ಡ್ರಗ್ಸ್‌ ಕಳ್ಳಸಾಗಣೆ ಪ್ರಕರಣದ ಸಂಬಂಧ 2023ರ ಆಗಸ್ಟ್‌ ನಲ್ಲಿ ಗ್ಯಾಂಗ್‌ ಸ್ಟರ್‌ ಬಿಷ್ಣೋಯಿಯನ್ನು ದೆಹಲಿಯ ತಿಹಾರ್‌ ಜೈಲಿನಿಂದ ಸಬರಮತಿ ಸೆಂಟ್ರಲ್‌ ಜೈಲ್‌ ಗೆ ಸ್ಥಳಾಂತರಿಸಲಾಗಿತ್ತು.

ಕುಖ್ಯಾತ ಪಾತಕಿ ಲಾರೆನ್ಸ್‌ ಬಿಷ್ಣೋಯಿ ವಿರುದ್ಧ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲ‌ ಪಂಜಾಬ್‌ ನ ಖ್ಯಾತ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿತ್ತು.

ಬಿಷ್ಣೋಯಿ ಜೈಲಿನಲ್ಲಿದ್ದಾಗ ಈತನ ಗ್ಯಾಂಗ್‌ ನ ಕಾರ್ಯಾಚರಣೆಗಳನ್ನು ಲಾರೆನ್ಸ್‌ ಗ್ಯಾಂಗ್‌ ನ ವಿದೇಶದಲ್ಲಿ ನೆಲೆಸಿರುವ ಮೂವರು ನಟೋರಿಯಸ್‌ ಗ್ಯಾಂಗ್‌ ಸ್ಟರ್ಸ್‌ ಗಳು ನೋಡಿಕೊಳ್ಳುತ್ತಾರೆ. ಲಾರೆನ್ಸ್‌ ಸಹೋದರ ಅನ್ಮೋಲ್‌ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಹಾಗೂ ರೋಹಿತ್‌ ಗೋದಾರ್‌ ಪಾತಕ ಚಟುವಟಿಕೆಯ ರೂವಾರಿಗಳಾಗಿದ್ದಾರೆ. ಆರಂಭದಲ್ಲಿ‌ ಸಣ್ಣ-ಪುಟ್ಟ ಅಪರಾಧ ಮಾಡುತ್ತಿದ್ದ ದಾವೂದ್‌ ಇಬ್ರಾಹಿಂ 1990ರ ದಶಕದಲ್ಲಿ ಹೇಗೆ ಬೃಹತ್‌ ಭಯೋತ್ಪಾದಕ ಗ್ಯಾಂಗ್‌ ಅನ್ನು ಸಂಘಟಿಸಿದ್ದನೋ ಅದೇ ರೀತಿ ಈ ಬಿಷ್ಣೋಯಿ ಸಂಘಟನೆ ಕೂಡಾ ದೊಡ್ಡ ಪ್ರಮಾಣದಲ್ಲಿ ಬೆಳೆದು ಬಿಟ್ಟಿರುವುದಾಗಿ ಎನ್‌ ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.

ಭಾನುವಾರ(ಅ.13) ಬಿಷ್ಣೋಯಿ ಗ್ಯಾಂಗ್‌ ಎನ್‌ ಸಿಪಿ ಮುಖಂಡ ಬಾಬಾ ಸಿದ್ದಿಖಿಯನ್ನು ಹ*ತ್ಯೆಗೈದಿರುವುದಾಗಿ ಹೊಣೆ ಹೊತ್ತುಕೊಂಡಿತ್ತು. ಈ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಶಾರ್ಪ್‌ ಶೂಟರ್ಸ್‌ ಗಳನ್ನು ಬಂಧಿಸಿದ್ದು, ಆರೋಪಿಗಳು ಬಿಷ್ಣೋಯಿ ಗ್ಯಾಂಗ್‌ ಹೆಸರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಬಿಷ್ಣೋಯಿ ಸಮುದಾಯ ದೇವರು ಎಂದೇ ಪೂಜಿಸುವ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಪ್ರಕರಣದ ನಂತರ ಬಿಷ್ಣೋಯಿ ಗ್ಯಾಂಗ್‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮೇಲೆ ತಿರುಗಿಬಿದ್ದಿದ್ದು, ದಾಳಿ ನಡೆಸಲು ಸಂಚು ರೂಪಿಸಿತ್ತು. ಇದೀಗ ಸಿದ್ದಿಖಿ ಕೂಡಾ ಸಲ್ಮಾನ್‌ ಜೊತೆ ತುಂಬಾ ನಿಕಟ ಸಂಬಂಧ ಹೊಂದಿದ್ದರ ಪರಿಣಾಮ ಹ*ತ್ಯೆಗೈದಿರುವುದಾಗಿ ಬಿಷ್ಣೋಯಿ ಗ್ಯಾಂಗ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ನಲ್ಲಿ ಉಲ್ಲೇಖಿಸಿತ್ತು. ಅಷ್ಟೇ ಅಲ್ಲ ಯಾರೇ ಆಗಲಿ ಸಲ್ಮಾನ್‌ ಖಾನ್‌ ಅಥವಾ ದಾವೂದ್‌ ಗ್ಯಾಂಗ್‌ ಗೆ ನೆರವು ನೀಡಿದರೆ ಅವರನ್ನು ಬಿಡುವುದಿಲ್ಲ ಎಂಬ ಬೆದರಿಕೆ ಕೂಡಾ ಹಾಕಿತ್ತು.

ಕಳೆದ ಕೆಲವು ವರ್ಷಗಳಿಂದ ಲಾರೆನ್ಸ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು. ಏಪ್ರಿಲ್‌ ತಿಂಗಳಿನಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಆಗಮಿಸಿ, ನಿವಾಸದ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು. 2022ರಲ್ಲಿ ಸಿಧು ಮೂಸೆವಾಲನಿಗೆ ಆದ ಗತಿ ನಿನಗೂ (ಸಲ್ಮಾನ್‌ ಖಾನ್)‌ ಆಗಲಿದೆ ಎಂದು ಎಚ್ಚರಿಕೆಯ ಪತ್ರ ಕಳುಹಿಸಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next