Advertisement

ಅಮ್ಮ-ಮಗಳು ಯಾಕೆ ಜಗಳ ಆಡ್ತಾರೆ?

06:00 AM Nov 16, 2018 | |

ಮಕ್ಕಳನ್ನು ಅಪ್ಪನಿಗಿಂತ ಅಮ್ಮನೇ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾಳೆ. ಅದರಲ್ಲೂ ಅಮ್ಮ-ಮಗಳ ಸಂಬಂಧದಲ್ಲಿ, ಇಬ್ಬರೂ ಒಂದೇ ಜೈವಿಕ ರಚನೆ-ಭಾವನಾತ್ಮಕ ನೆಲೆಗಟ್ಟು ಹೊಂದಿರುತ್ತಾರೆ. ಅಂದರೆ, ಮಗಳು ಹಾದು ಹೋಗುವ ಹದಿಹರೆಯ-ಮುಟ್ಟು-ಮದುವೆ-ಬಸಿರು-ಬಾಣಂತನ ಎಲ್ಲವನ್ನೂ ಹಿಂದೊಮ್ಮೆ ಅಮ್ಮನೂ ಅನುಭವಿಸಿರುತ್ತಾಳೆ. ಹಾಗೆಯೇ, ಸಾಮಾನ್ಯವಾಗಿ ತಾಯಿ ಋತುಬಂಧದ (ಮೆನೋಪಾಸ್‌) ಸಮಸ್ಯೆಗಳನ್ನು ಎದುರಿಸಲು ಆರಂಭಿಸುವುದು 30-40 ವರ್ಷ ವಯಸ್ಸಿನಲ್ಲಿ. ಮಗಳು ಹದಿಹರೆಯವನ್ನು ಪ್ರವೇಶಿಸುವ ಕಾಲವೂ ಅದೇ! ಅಂದರೆ, ತಾಯಿಯಲ್ಲಿ ಹಾರ್ಮೋನುಗಳು ಕಡಿಮೆಯಾಗಿ, ಸಿಟ್ಟು-ಕಿರಿಕಿರಿ ಆರಂಭವಾದರೆ, ಮಗಳಲ್ಲಿ ಹಾರ್ಮೋನುಗಳು ಮೈ-ಮೆದುಳುಗಳ ತುಂಬಾ ಹರಿದಾಡುತ್ತ ಸಿಟ್ಟು-ಉದ್ವೇಗಗಳನ್ನು ಏರಿಸುತ್ತವೆ. ಅನ್ಯೋನ್ಯವಾಗಿರುವ ತಾಯಿ-ಮಗಳ ಜೋಡಿಗಳನ್ನು ಕೇಳಿ ನೋಡಿ, ಅವರಲ್ಲಿ ಹೆಚ್ಚಿನವರು ಹದಿಹರೆಯದ ಸಂಘರ್ಷಗಳನ್ನು ನೆನಪಿಸಿಕೊಳ್ಳುತ್ತಾರೆ.

Advertisement

ಅಮ್ಮ-ಮಗಳ್ಯಾಕೆ ಜಗಳ ಆಡ್ತಾರೆ?
“ಅಮ್ಮ’ನ ಬಗ್ಗೆ ಮಗಳು, ಸಾಮಾನ್ಯವಾಗಿ ದೂರುವುದೇನೆಂದರೆ, “ಅಮ್ಮ ನನ್ನನ್ನು ನಿಯಂತ್ರಿಸುತ್ತಾಳೆ’, “ಏನು ಮಾಡಿದ್ರೂ ತಪ್ಪು ಕಂಡುಹಿಡೀತಾಳೆ’, “ಹೀಗೆ ಮಾಡು, ಹಾಗೆ ಮಾಡು ಅಂತಾಳೆ’ ಅಂತ. ಇದಕ್ಕೆ ಅಮ್ಮ ಹೇಳುವುದು: “ಮಗಳು ನನ್ನ ಮಾತು ಕೇಳ್ಳೋದೇ ಇಲ್ಲ. ತಪ್ಪು ನಿರ್ಧಾರ ತಗೊಂಡು, ಕಷ್ಟಪಡ್ತಾಳೆ’.

ಎಷ್ಟೇ ಜಗಳಗಳಾದರೂ ಅವರಿಬ್ಬರಿಗೆ ಇರುವ ಬಲವಾದ ಭಾವನೆಯೆಂದರೆ, “ನಾವಿಬ್ಬರೂ ಒಬ್ಬರ ಮನಸ್ಸನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಮುಕ್ತವಾಗಿ ಹೇಳದೆಯೂ ಇನ್ನೊಬ್ಬರ ಮನಸ್ಸಿನಲ್ಲೇನಿದೆ ಅಂತ ಗೊತ್ತಾಗುತ್ತೆ’ ಎಂಬುದು. ಈ ಬಲವಾದ ನಂಬಿಕೆಯೇ ಸಂವಹನದ ಕೊರತೆಗೆ ಅಥವಾ ಒರಟಾಗಿ ಮಾತಾಡುವುದಕ್ಕೆ, ಮನಸ್ಸಿಗೆ ನೋವುಂಟು ಮಾಡುವುದಕ್ಕೆ ಕಾರಣವಾಗುತ್ತದೆ.

ಅಮ್ಮನ ಇನ್ನೊಂದು ನಂಬಿಕೆಯೆಂದರೆ, “ಅನುಭವಗಳಿಂದ ನಾನು ಪಾಠ ಕಲಿತಿದ್ದೇನೆ. ಹಾಗಾಗಿ, ಯಾವುದು ಒಳ್ಳೆಯದು, ಯಾವುದು ಕೆಟ್ಟದು ಅಂತ ಮಗಳಿಗಿಂತ ನನಗೆ ಚೆನ್ನಾಗಿ ಗೊತ್ತು’ ಎನ್ನುವುದು. ಆದರೆ, ಅಮ್ಮ ಹೇಳಿದಂತೆ ಕೇಳಲು ಮಗಳಿಗೆ ಕಷ್ಟ ! ಯಾಕೆಂದರೆ, ಅವಳಿಗೊಂದು ವ್ಯಕ್ತಿತ್ವವಿದೆ. ಸಮಸ್ಯೆಯನ್ನು ಅವಳು ನೋಡುವ ದೃಷ್ಟಿಕೋನ, ಅವಳು ಬದುಕುತ್ತಿರುವ ಕಾಲಘಟ್ಟದ ಅನುಭವಗಳು ಬೇರೆಯೇ ಅಲ್ಲವೇ? ಉದಾ: ಅಮ್ಮ ತಾನು ಪ್ಯಾಂಟ್‌ ಹಾಕಿ ಟೀಕೆ ಅನುಭವಿಸಿದ್ದರಿಂದ ಮಗಳಿಗೆ ಪ್ಯಾಂಟ್‌ ಹಾಕಬೇಡ ಎನ್ನಬಹುದು. ಆದರೆ, ಮಗಳು ಅಂಥ ಟೀಕೆಯನ್ನು ಕಡೆಗಣಿಸಬಹುದು ಅಥವಾ ಅವಳಿಗೆ ಟೀಕೆಯೇ ಎದುರಾಗದಿರಬಹುದು! ಅಮ್ಮ-ಮಗಳು ಪರಸ್ಪರ ಒಪ್ಪದ ಇಂಥ ಹಲವು ಸಂಗತಿಗಳಿವೆ.

ಅಮ್ಮ-ಮಗಳ ಸಂಬಂಧವನ್ನು ಸದೃಢವಾಗಿಸುವಲ್ಲಿ ಮುಖ್ಯ ಪಾತ್ರ ಅಮ್ಮನದೇ. ಅವಳದ್ದು ಇಲ್ಲಿ “ಡಬಲ್‌ ರೋಲ್‌’-ದ್ವಿಪಾತ್ರ! ಅಂದರೆ, ತನ್ನನ್ನು ತಾನು ಮಗಳ ಸ್ಥಾನದಲ್ಲಿ ಕಲ್ಪಿಸಿಕೊಂಡು, ಅವಳಂತೆ ಒಮ್ಮೆ ಯೋಚಿಸಿ ನೋಡಬೇಕು. ಡಿಜಿಟಲ್‌ ಕ್ಯಾಮೆರಾದಲ್ಲಿ ಫೋಟೋ ತೆಗೆದಂತಲ್ಲ. ದೊಡ್ಡ ಪ್ಯಾನರಾಮಿಕ್‌ ಲೆನ್ಸ್‌ನಲ್ಲಿ ದೃಶ್ಯಗಳನ್ನು ವಿಶಾಲ ದೃಷ್ಟಿಯಲ್ಲಿ ನೋಡುವುದನ್ನು ಅಮ್ಮ ಕಲಿಯಬೇಕು. ಅಷ್ಟೇ ಅಲ್ಲ, ಮಗಳ ಜೊತೆ ತನ್ನ ಅನುಭವಗಳನ್ನು ಹಂಚಿಕೊಂಡರೂ, ಅವುಗಳಿಂದ ಮಗಳು ಬುದ್ಧಿ ಕಲಿಯಬೇಕು ಎಂದು ನಿರೀಕ್ಷಿಸುವಂತಿಲ್ಲ. ಅದರ ಬದಲು “ನನ್ನ ಅನುಭವ ತಿಳಿಸಿದ್ದೇನೆ, ನಿರ್ಧಾರ ಅವಳದೇ’ ಎಂಬ ಮನಃಸ್ಥಿತಿ ಇಬ್ಬರ ಮಾನಸಿಕ ನೆಮ್ಮದಿಗೂ ಅವಶ್ಯ. ಮಗಳು ಬೆಳೆದಂತೆಲ್ಲಾ ಅಮ್ಮನೂ ಮಾನಸಿಕವಾಗಿ ಬೆಳೆಯಬೇಕು, ತನ್ನ ಅನುಭವಗಳನ್ನು ಉಳಿಸಿಕೊಂಡೂ ಬದಲಾಗಬೇಕು.

Advertisement

ಇಂದಿನ ಅಮ್ಮಂದಿರ ಮುಂದಿರುವ ದೊಡ್ಡ ಸವಾಲೆಂದರೆ, ಸ್ವಾವಲಂಬನೆ -ಆಧುನಿಕತೆ-ಆತ್ಮವಿಶ್ವಾಸ ಗಳ ಮಧ್ಯೆಯೂ; ಮಗಳನ್ನು, ಭಾವನೆಗಳನ್ನು ಕಳೆದುಕೊಳ್ಳದ, ಸಂವೇದನಾಶೀಲ ಸ್ತ್ರೀಯಾಗಿ ಬೆಳೆಸುವುದು ಹೇಗೆ ಎಂಬುದು. ಮಗಳ ಪಾಲನೆಯಲ್ಲಿ, ತನ್ನ ವ್ಯಕ್ತಿತ್ವದ ಬಗೆಗೆ ತನಗಿರುವ ಆತ್ಮವಿಶ್ವಾಸ/ಕೀಳರಿಮೆ, ತನ್ನ ಭಾವನೆಗಳು, ತಾನು ಒತ್ತಡವನ್ನು ಎದುರಿಸುವ ರೀತಿ… ಇವೆಲ್ಲವನ್ನೂ ತಾಯಿಯಾದವಳು ಗಮನಿಸಬೇಕು. ಏಕೆಂದರೆ, ಮಗಳ ಆತ್ಮವಿಶ್ವಾಸ-ವ್ಯಕ್ತಿತ್ವದ ಮೇಲೆ, ಅಮ್ಮನ ಈ ಎಲ್ಲ ಗುಣಗಳು ಹೆಚ್ಚು ಪ್ರಭಾವ ಬೀರುತ್ತದೆ ಎನ್ನುತ್ತದೆ ಅಧ್ಯಯನಗಳು.

ಹೇಳಿದಷ್ಟು ಸುಲಭವಲ್ಲ ಇದು! ಆದರೆ, ಅಸಾಧ್ಯವೂ ಅಲ್ಲ. ಇದನ್ನು ಸಾಧಿಸಲು ಇರುವ ಸುಲಭ ದಾರಿ, “ಮಾತನಾಡುವ’ “ಸಂವಹಿಸುವ’ ಸೂತ್ರ. ಇಲ್ಲಿ “ಮಾತನಾಡುವುದು’ ಓದಿನ ಬಗೆಗಲ್ಲ, ನಡವಳಿಕೆಯ ಬಗೆಗಲ್ಲ, ಸ್ನೇಹಿತರ ಕುರಿತೂ ಅಲ್ಲ ಅಥವಾ ಸಾಧನೆಗಳ ಬಗೆಗೂ ಅಲ್ಲ. ಅಮ್ಮ-ಮಗಳು ಪರಸ್ಪರ ಅನುಭವಗಳ- ಭಾವನೆಗಳನ್ನು  ಹಂಚಿಕೊಳ್ಳುತ್ತಾ, ಒಂದಿಷ್ಟು ಸಮಯ ಯಾವ ಗುರಿಯೂ ಇರದೇ ಅಥವಾ ಮಾತಾಡುವುದನ್ನೇ ಗುರಿಯನ್ನಾಗಿಸಿ ಮಾತಾಡಬೇಕು! ಇದು ಇಬ್ಬರ ಮನಸ್ಸನ್ನೂ ತೆರೆಸುತ್ತದೆ, ವಿಸ್ತಾರವಾಗಿರುತ್ತದೆ, ಖನ್ನತೆ-ಒತ್ತಡಗಳನ್ನು ದೂರವಾಗಿಸುತ್ತದೆ. ಇಂಥ ಮಾತುಕತೆ ಇಬ್ಬರಿಗೂ “ಆಪ್ತಸಲಹೆ’ಯಾಗುತ್ತದೆ. ಹೀಗೆ ಅಮ್ಮನೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವ ಮಗಳು ಮುಂದೆ ತನ್ನ ಮಗಳೊಂದಿಗೆ ಒಳ್ಳೆಯ ಸಂಬಂಧ ಹೊಂದುತ್ತಾಳೆ.

ನಾನು ಒಳ್ಳೆಯ ತಾಯಿಯೇ, ಅಲ್ಲವೇ?
ಬಹಳಷ್ಟು ಅಮ್ಮಂದಿರನ್ನು ಕಾಡುವ ಪ್ರಶ್ನೆ: “ನಾನು ಒಳ್ಳೆಯ ತಾಯಿಯೇ, ಅಲ್ಲವೇ?’ ಎಂಬುದು! ಹಾಗೆಯೇ ತನ್ನ ಕಾಳಜಿಯನ್ನು ಮಗಳಿಗೆ ಹೇಗೆ ಅರ್ಥ ಮಾಡಿಸುವುದು ಎಂಬುದು. ಆಗೆಲ್ಲಾ ಅಮ್ಮ ಹೇಳುವುದು, “ನೀನು ಅಮ್ಮನಾದಾಗ ಮಾತ್ರ ನಿನಗೆ ಇವೆಲ್ಲ ಅರ್ಥ ಆಗುತ್ತೆ’ ಅಂತ! ಬಹಳಷ್ಟು ತಾಯಂದಿರು ತಮ್ಮ ಹೆಣ್ಣು ಮಕ್ಕಳು ಹದಿಹರೆಯದಲ್ಲಿ ಎದುರು ಮಾತಾಡಿದಾಗ, “ಅಯ್ಯೋ, ಆಗ ಅಮ್ಮ ಹೇಳಿದ್ದು ಈಗ ಅರ್ಥವಾಗ್ತಾ ಇದೆ’ ಅಂತ ಅಂದುಕೊಳ್ಳುತ್ತಾರೆ. ಹಾಗಾಗಿ, ಇಲ್ಲಿ ಒಂದು ಮಾತಂತೂ ನಿಜ, ಎಲ್ಲ ಅಮ್ಮಂದಿರೂ ಒಳ್ಳೆಯ ಅಮ್ಮಂದಿರೇ! ಒಟ್ಟಿನಲ್ಲಿ ಅಮ್ಮ-ಮಗಳ ವ್ಯಕ್ತಿತ್ವ ಆಗಾಗ ದೂರ ನಿಂತರೂ, ಇಬ್ಬರೂ ಹತ್ತಿರವೇ ಇರುತ್ತಾರೆ ಎಂಬುದು ನಿಶ್ಚಿತ.

ಡಾ. ಕೆ. ಎಸ್‌. ಪವಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next