ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11) ಯಶಸ್ವಿಯಾಗಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಬಿಗ್ ಬಾಸ್ ಶೋ ಒಂದಷ್ಟು ಕಾರಣದಿಂದ ಸದ್ದು ಮಾಡುತ್ತಿದೆ.
ಕಿಚ್ಚ ಸುದೀಪ್ (Kiccha Sudeep) ಅವರಿಂದ ಬಿಗ್ ಬಾಸ್ ಶೋಗೆ ಹೆಚ್ಚಿನ ತೂಕವಿದೆ ಎಂದು ಹೇಳಿದರೆ ತಪ್ಪಾಗದು. ಸುದೀಪ್ ಅವರು ಮುಂದಿನ ಬಾರಿಯಿಂದ ನಿರೂಪಣೆ ಮಾಡುತ್ತಿಲ್ಲ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಸುದೀಪ್ ಅವರು ಕಾರ್ಯಕ್ರಮದ ನಡುವಿನಲ್ಲೇ ಟ್ವೀಟ್ ಮಾಡಿ ಹೇಳಿದ್ದರು.
ಸುದೀಪ್ ಅವರು ನಡೆಸಿಕೊಡುವ ವೀಕೆಂಡ್ ಎಪಿಸೋಡ್‌ಗೆ ಪ್ರತ್ಯೇಕ ವೀಕ್ಷಕರ ವರ್ಗವೇ ಇದೆ. ಸಮರ್ಥವಾಗಿ ಶೋ ನಡೆಸಿಕೊಡುವ ಸುದೀಪ್ ಕೊನೆಯ ಸೀಸನ್ ಎಂದು ಹೇಳಿರುವುದು ವೀಕ್ಷಕರಿಗೆ ಶಾಕ್ ನೀಡಿದೆ.
ಬಿಗ್ ಬಾಸ್ ಬಿಡುವ ಹಿಂದಿನ ಕಾರಣವೇನು ಎನ್ನುವುದರ ಬಗ್ಗೆ ಸುದೀಪ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ʼಮ್ಯಾಕ್ಸ್ʼ (Max Movie) ಪ್ರಚಾರದ ಅಂಗವಾಗಿ ʼದಿ ಹಿಂದೂʼ ಜತೆ ಮಾತನಾಡಿರುವ ಅವರು ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದರ ಹಿಂದಿನ ಕಾರಣವೇನು ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ.
“ನಾನು ಟ್ವೀಟ್ ಮಾಡಿದ ದಿನ ತುಂಬಾ ದಣಿದಿದ್ದೆ. ಆ ಸಮಯದಲ್ಲಿ ನಾನು ಟ್ವೀಟ್ ಮಾಡದಿದ್ದರೆ ಬಹುಶಃ ಮರುದಿನ ನನ್ನ ಆಲೋಚನಾ ಪ್ರಕ್ರಿಯೆ ವಿಭಿನ್ನವಾಗಿರುತ್ತಿತ್ತು. ಶೋ ಬಿಡುವ ಆಲೋಚನೆ ಬಂದ ಬಳಿಕ ಆ ಸಮಯದಲ್ಲೇ ಅದನ್ನು ಟ್ವೀಟ್ ಮಾಡಿ ಬಿಡುವುದು ಉತ್ತಮ ಎಂದು ಭಾವಿಸಿದೆ. ಅದು ನನಗೆ ನಾನೇ ಹಾಕಿಕೊಂಡ ಬದ್ಧತೆ ಆಗಿತ್ತು” ಎಂದಿದ್ದಾರೆ.
“ನನಗೆ ಬಿಗ್ ಬಾಸ್ ಹೆಚ್ಚು ಗೌರವ ತಂದುಕೊಟ್ಟಿದೆ. ಅಪಾರ ಪ್ರೀತಿಯನ್ನು ತಂದುಕೊಟ್ಟಿದೆ. ಎಲ್ಲೋ ಒಂದು ಕಡೆ ಶೂಟಿಂಗ್ ಆಗುತ್ತಿರುವಾಗ ವೀಕೆಂಡ್‌ಗೆ ಇಲ್ಲಿಗೆ ಬರಬೇಕು. ಸಾಕಷ್ಟು ಪ್ರಯಾಣ ಮಾಡಿ ಮಾಡಿ ಶುಕ್ರವಾರ ಬಂದು ಎಲ್ಲಾ ಎಪಿಸೋಡ್ ನೋಡಿ ಶೋ ನಡೆಸಿಕೊಡಬೇಕು. ಇದೊಂದು ಹೆಚ್ಚು ಪರಿಶ್ರಮದ ಕೆಲಸ. ಎಪಿಸೋಡ್ ನೋಡದೆ ನಿರೂಪಣೆ ಮಾಡುವುದು ನನಗೆ ಇಷ್ಟವಿಲ್ಲ. ಅದನ್ನು ನಾನು ಮಾಡಲು ಸಾಧ್ಯವಿಲ್ಲ. ನಾನು ಸಾಕಷ್ಟು ಪರಿಶ್ರಮ ಹಾಕುತ್ತೇನೆ. ಆದರೆ ಆ ಶ್ರಮಕ್ಕೆ ಸರಿಯಾದ ರೀತಿಯಲ್ಲಿ ಬೆಲೆಯನ್ನು ನೀಡುವವರು ಸಹ ಬೇಕು. ಅದು ಇಲ್ಲಿ ಸಾಧ್ಯವಾಗದಿದ್ದಾಗ ಆ ಶ್ರಮವನ್ನು ನಾನು ಸಿನಿಮಾದಂತಹ ಕೆಲಸಕ್ಕೆ ಹಾಕಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.
ಬೇರೆಯವರು ಶೋ ನಡೆಸಿಕೊಡಬಹುದು. ಅವರು ನನಗಿಂತ ಉತ್ತಮವಾಗಿ ನಿರೂಪಣೆ ಮಾಡಬಹುದು. ನನಗಿಂತ ಬೇರೆ ಯಾರು ಸಹ ಇದನ್ನು ಚೆನ್ನಾಗಿ ಮಾಡಲ್ಲವೆಂದು ಭಾವಿಸುವವನು ನಾನಲ್ಲ. ನನಗೆ ಏನಾದರೂ ಹೇಳೋಕೆ ಇದ್ರೆ ನಾನು ನೇರವಾಗಿಯೇ ಹೇಳುತ್ತೇನೆ. ನಾನಾ ಕಾರಣ ಕೊಟ್ಟು ನನಗೆ ಕಾರ್ಡ್ಸ್ ಪ್ಲೇ ಮಾಡಲು ಬರಲ್ಲ. ನಾನು ಜನರ ಪರಿಶ್ರಮಕ್ಕೆ ಗೌರವ ಕೊಡುವ ವ್ಯಕ್ತಿಯೆಂದು” ಸುದೀಪ್ ಹೇಳಿದ್ದಾರೆ.
“ಇತರೆ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಿಗುವ ಉತ್ತಮ ಮೆಚ್ಚುಗೆ ಮತ್ತು ಗೌರವ ಕನ್ನಡ ಬಿಗ್ ಬಾಸ್ ಶೋಗೂ ಸಿಗಬೇಕು. ಖಂಡಿತ ಕನ್ನಡ ಬಿಗ್ ಬಾಸ್ ಕೂಡ ಇದಕ್ಕೆ ಅರ್ಹವಾಗಿದೆ. ಆದರೆ ಇಲ್ಲಿ ಅದು ನಡೆಯುತ್ತಿರುವುದು ನನಗೆ ಕಾಣುತ್ತಿಲ್ಲ. ಇದು ಬರೀ ನನಗೆ ಸಂಬಂಧಿಸಿದಲ್ಲ. ಬೇಕಾದರೆ ಬಿಗ್ ಬಾಸ್ ಕನ್ನಡ ಮತ್ತು ಇತರ ಎಲ್ಲಾ ಭಾಷೆಯ ಶೋಗಳನ್ನು ಹೋಲಿಕೆ ಮಾಡಿ ಮತ್ತು ನಂತರ ದೃಶ್ಯಗಳು, ವಿಧಾನವನ್ನು ಪರಿಶೀಲಿಸಿ. ನಮ್ಮ ಪ್ರೇಕ್ಷಕರು ಹೆಚ್ಚಿನ ಗೌರವಕ್ಕೆ ಅರ್ಹರಾಗಬೇಕು” ಎಂದು ಹೇಳಿದ್ದಾರೆ.
ನಿರೂಪಣೆ ಬಿಡುವುದರ ಹಿಂದೆ ಕೆಲವೊಂದು ʼಇನ್ ಸೈಡ್ ಅಜೆಂಡಾಗಳ’ ಕೂಡ ಇದೆ. ಏನು ಇಲ್ಲ ಅಂಥ ನಾನು ಹೇಳಲ್ಲ ಎಂದು ಸುದೀಪ್ ಹೇಳಿದ್ದಾರೆ.