Advertisement

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

06:22 PM Jul 30, 2021 | ಶ್ರೀರಾಜ್ ವಕ್ವಾಡಿ |

ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಕೊಂಚ ಮಟ್ಟಿಗೆ ದೇಶ ಮತ್ತೆ ಚೇತರಿಸಿಕೊಳ್ಳುತ್ತಿದೆ ಎಂಬಷ್ಟರಲ್ಲೇ ಕೇರಳದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆಯ ಸುಳಿವು ಸಿಕ್ಕಿದ್ದು, ಈಗ ಮತ್ತಷ್ಟು ಆಘಾತಕಾರಿಯಾಗಿದೆ.

Advertisement

ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳದಲ್ಲಿ ಈಗ ಸೋಂಕು ನಿಯಂತ್ರಣಕ್ಕೆ ಬಾರದೇ ಕಳೆದ ಕೆಲವು ದಿನಗಳಿಂದ ಪ್ರತಿ ನಿತ್ಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದರಿಂದ ಮೂರನೇ ಅಲೆ ತನ್ನ ಹಬ್ಬುವಿಕೆಯನ್ನು ಆರಂಭ ಮಾಡಿದೆಯೇ ಎಂಬ ಪ್ರಶ್ನೆಯೊಂದನ್ನು ಎಬ್ಬಿಸಿದೆ.

ಕೋವಿಡ್ ನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದ ಕೇರಳ, ಈಗ ಯಾಕೆ ವಿಫಲವಾಯಿತು..? ಕೇರಳ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯದ ಧೋರಣೆ ಮಾಡಿತೇ..?

ದೇವರ ನಾಡು ಎಂದು ಕರೆಸಿಕೊಳ್ಳೂವ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿಯೂ ಈಗ ಸೋಂಕಿನ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ.

ಇದನ್ನೂ ಓದಿ : ಕಿರುತೆರೆ ನಟನಿಂದ ಯುವತಿಗೆ ಮೋಸ: ಕೈಗೆ ಮಗು ಕೊಟ್ಟು ಪರಾರಿಯಾದ ‘ವಿಲನ್’

Advertisement

ಕಳೆದ ಬಾರಿ ಕೋವಿಡ್  ಸೋಂಕು ತಡೆಗಟ್ಟುವಲ್ಲಿ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ಅಂತರಾಷ್ಟ್ರೀಯ  ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಕೇರಳದಲ್ಲಿ ಸೋಂಕು ಮೊದಲು ಕಾಣಿಸಿಕೊಂಡಾಗಲೇ 28 ದಿನಗಳ ಕ್ವಾರಂಟೈನ್, ಹಳ್ಳಿ ಹಳ್ಳಿಗಳಲ್ಲಿ ಕ್ಲೀನಿಂಗ್, ಸ್ಕ್ರೀನಿಂಗ್ ಬೂತ್‌ ಗಳನ್ನು ಅಳವಡಿಸಿದ್ದಲ್ಲದೇ, ಅಲ್ಲಿನ ತುರ್ತು ಪರಿಸ್ಥಿತಿಗಾಗಿ ಕೇರಳ ಸರ್ಕಾರ ಬರೋಬ್ಬರಿ 20,000 ಕೋಟಿ ಪ್ಯಾಕೇಜ್, ರಿವರ್ಸ್ ಕ್ವಾರಂಟೈನ್ ನಂತಹ ಉಪಕ್ರಮಗಳನ್ನು ಜಾರಿಗೆ ತಂದು ಪ್ರಶಂಸೆಗೆ ಪಾತ್ರವಾಯಿತು. ಆದರೇ, ಈಗ ಮತ್ತೆ ಅದೇ ಕೇರಳ ಕೋವಿಡ್ ಸೋಂಕಿನಿಂದ ಬಳಲುತ್ತಿದೆ.

ಕಳೆದ ಬಾರಿ ದೇಶದಾದ್ಯಂತ ಲಾಕ್ ಡೌನ್ ತೆರವುಗೊಳಿದರೇ ಏನಾಗಬಹುದು ಎಂಬುದರ ಬಗ್ಗೆ ಚಿಂತೆ ಮಾಡಿತ್ತು ಕೇರಳ. ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರೂಪುಗೊಳಿಸಿ ಕೋವಿಡ್ ಸೋಂಕಿನಿಂದ ಹಿರಿಯವರನ್ನು ರಕ್ಷಿಸುವಲ್ಲಿ ನಿರಂತರ ಪ್ರಯತ್ನ ಮಾಡಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಕೇರಳ ಮೊದಲ ಅಲೆಯಲ್ಲಿ ಜಾರಿಗೆ ತಂದಿದ್ದ “ರಿವರ್ಸ್ ಕ್ವಾರಂಟೈನ್” ಅಂದ್ರೆ ಏನು..?

‘ರಿವರ್ಸ್ ಕ್ವಾರಂಟೈನ್’ಕೋ ವಿಡ್ ಸೋಂಕನ್ನು ಬಡಿದೋಡಿಸಬೇಕೆಂಬ ಉದ್ದೇಶದಿಂದ ಆಗಿನ ಪಿಣರಾಯ್ ವಿಜಯನ್ ನೇತೃತ್ವದ ಸರ್ಕಾರದ ಆರೋಗ್ಯ ಮಂತ್ರಿಯಾಗಿದ್ದ ಕೆ. ಕೆ ಶೈಲಜಾ (ಶೈಲಜಾ ಟೀಚರ್) ಜಾರಿಗೆ ತಂದ ಯೋಜನೆ.

ಸೋಂಕು ನಿಯಂತ್ರಣಕ್ಕೆ ಬರಬೇಕು, ನಾಗರಿಕರ ಬದುಕು ಕೂಡ ಸಹಜ ಸ್ಥಿತಿಗೆ ಬರಬೇಕು ಎಂಬೆಲ್ಲಾ ಯೋಜನೆಗಳ ಬಗ್ಗೆ ಸಮಯೋಚಿತವಾಗಿ ಪೂರ್ವವಾಗಿ ಯೋಜಿಸಿ ಈ ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರಾಜ್ಯದಾದ್ಯಂತ ಕಾರ್ಯ ರೂಪಕ್ಕೆ ತಂದಿತ್ತು.

ಈ ಕ್ವಾರಂಟೈನ್ ಸಂಪೂರ್ಣ ಭಿನ್ನವಾಗಿತ್ತು. ಸೋಂಕು ತಗಲಿದವರನ್ನು ಅಥವಾ ಅವರನ್ನು ಸಂಪರ್ಕಿಸಿದವರನ್ನು ಪ್ರತ್ಯೇಕಿಸಿ ಇಡುವುದು ಕ್ವಾರಂಟೈನ್ ಆದರೇ, ಸೋಂಕು ಇಲ್ಲದೇ ಇರುವವರನ್ನೂ ಪ್ರತ್ಯೇಕಿಸಿ ಇರಿಸುವುದೇ ಕೇರಳದ ಈ ರಿವರ್ಸ್ ಕ್ವಾರಂಟೈನ್‌ ನ ಸೂತ್ರವಾಗಿತ್ತು. ಇಡೀ ದೇಶಕ್ಕೆ ದೇಶವೇ ಹೋಮ್ ಕ್ವಾರಂಟೈನ್‌ ನಲ್ಲಿರುವಾಗ ಇದೇನು ವಿಶೇಷ ಅಲ್ಲ ಅಂತನ್ನಿಸಿದರೂ ಶೈಲಜಾ ಟೀಚರ್ ಅವರ ಪ್ಲ್ಯಾನ್ ಸಕ್ಸಸ್ ಆದ ಮೇಲೆ ವಿಶ್ವದೆಲ್ಲೆಡೆಯಿಂದ ಶ್ಲಾಘನೆಯ ಮಹಾಪೂರವೇ ಹರಿದು ಬಂದಿತ್ತು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಗುರುತಿಸಿ ಅವರನ್ನು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕಿಸಿ ಇರಿಸುವುದೇ ಕೇರಳ ಸರ್ಕಾರದ ರಿವರ್ಸ್ ಕ್ವಾರಂಟೈನ್‌ ನ ಯೋಜನೆ. ಕೇರಳದ ಒಟ್ಟು 3.47 ಕೋಟಿ ಜನಸಂಖ್ಯೆಯ ಪೈಕಿಯಲ್ಲಿ ಅಂದಾಜು 12 ರಿಂದ 13 ಶೇಕಡಾ ಜನರು ಅನಾರೋಗ್ಯದಿಂದಿದ್ದಾರೆ ಕೇರಳ ಸರ್ಕಾರ ಹೇಳುತ್ತದೆ.

ಇದನ್ನೂ ಓದಿ : ತಾಲ್ಲೂಕು ಮಟ್ಟದ ಅಧಿಕಾರಿಗಳ ದಲಿತ ವಿರೋಧಿ ಧೋರಣೆ : ದಲಿತ ಮುಖಂಡರ ಆಕ್ರೋಶ

ಸ್ಥಳೀಯ ಮಟ್ಟದ ಆಡಳಿತಗಳ ಸಹಾಯದಿಂದ ಅನಾರೋಗ್ಯದವರನ್ನೆಲ್ಲಾ ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿರಿಸುವ ಕೇರಳ ಸರ್ಕಾರದ ಯೋಚನೆಯಿದು. ಟ್ರ್ಯಾಕ್, ಟ್ರೇಸ್, ಟ್ರೀಟ್‌ಮೆಂಟ್ ಸೂತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದಕ್ಕೆ ಕೇರಳ ಸರ್ಕಾರ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟ ಯೋಜನೆ.

ಇನ್ನು, ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಹಾಗೂ ಸಾಮಾಜಿಕ ಜನ ಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಒಳಗೊಂಡು ಎಲ್ಲಾ ರಾಜ್ಯ ಸರ್ಕಾರಗಳು ಯೋಜನೆ ಮಾಡುತ್ತಿದ್ದ ಸಂದರ್ಭ, ಬಹುತೇಕ ಎಲ್ಲಾ ರಾಜ್ಯಗಳು ಹಣೆಗೆ ಕೈಕೊಟ್ಟು ಕೂತಿದ್ದವು. ಇನ್ನು, ಲಾಕ್ಡೌನ್ ಕೊಂಚ ಸಡಿಲಗೊಳಿಸುವುದನ್ನೂ ಕೆಲವು ರಾಜ್ಯ ಸರ್ಕಾರಗಳು ಮಾಡುವುದಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ, ಕೇರಳ ಸರ್ಕಾರ ಮಾತ್ರ ಮುಂದಾಲೋಚನೆಯಿಂದ ಆರ್ಥಿಕ ಸ್ಥಿತಿ ಸರಿದೂಗಿಸುವ ಯೋಚನೆಯೊಂದಿಗೆ ಇಂತಹದ್ದೊಂದು ನೂತನ ಸೋಂಕು ನಿಯಂತ್ರಣಕ್ಕೆ ತರುವ ಮಾರ್ಗದ ಪ್ರಯತ್ನಕ್ಕೆ ಅಲ್ಲಿನ ಸ್ಥಳಿಯ ಆಡಳಿತದ ಸಹಕಾರದಿಂದ ಮುಂದಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಹೌದು,  ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆ ಇದೆ ಎಂಬ ಕಾರಣದಿಂದ ಕೇರಳವನ್ನು ಬದಿಗೆ ದೂಡುವ ಧೋರಣೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಕೂಡ ನಡೆದಿತ್ತು ಎನ್ನುವುದನ್ನು ಒಪ್ಪಲೇಬೇಕು. ಆದರೇ, ಕೇರಳ ಸರ್ಕಾರ ಸೋಂಕು ನಿವಾರಣೆಗೆ  ಕೈಗೊಂಡ ಕ್ರಮಗಳಿಂದ ಅಲ್ಲಿನ ಸೋಂಕಿನ ಹೊಸ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿ ಜಗತ್ತಿಗೆ ತೋರಿಸಿದೆ.

ಮೊದಲನೆ ಅಲೆಯ ಸಂದರ್ಭದಲ್ಲಿ ರಾಷ್ಟ್ರದ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳ, ಸೋಂಕು ಹರಡುವಿಕೆಯ ನಿಯಂತ್ರಣ ಮಾಡುವ ಬಿಗಿ ಕ್ರಮಗಳನ್ನು ಪಾಲನೆಗೆ ತರುವ  ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಅದಕ್ಕೆ ಕೇರಳದಲ್ಲಿ, ಕೋವಿಡ್ ತಡೆಗಟ್ಟುವಿಕೆಗೆ ತಂದ ಕ್ರಮಗಳನ್ನು ಅಮೇರಿಕಾ ಮೂಲದ ‘ದಿ ವಾಸಿಂಗ್ಟನ್ ಪೋಸ್ಟ್’ಎಂಬ ಸುದ್ದಿ ಸಂಸ್ಥೆಯೂ ಹಾಡಿ ಹೊಗಳಿದ್ದೇ ಸಾಕ್ಷಿ.

ಕೇರಳಕ್ಕೆ ‘ನಿಫಾ’ ಸೋಂಕನ್ನು ಎದುರಿಸಿದ ಅನುಭವವಿತ್ತು..!

‘ನಿಫಾ’ ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗ‌ಳಿಂದ ಮನುಷ್ಯರಿಗೆ  ಹರಡುವ ಸೋಂಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2018ರಲ್ಲಿ ನಿಫಾ ಸೋಂಕು ಕಾಣಿಸಿಕೊಂಡಾಗಲೇ, ಕೇರಳ ಸರ್ಕಾರ, ಐಸೋಲೇಷನ್, ಕ್ವಾರಂಟೈನ್‌ ಗಳಂತಹ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿತ್ತು. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸುಮಾರು 40 ರಿಂದ 5೦ ಮಂದಿಗೆ ಈ ಸೋಂಕು ಕಾಣಿಸಿಕೊಂಡು, ಸೋಂಕಿನಿಂದ ಸುಮಾರು 17 ಮಂದಿ ಸಾವಿಗೀಡಾಗಿದ್ದರು. ಆದರೇ, ನಿಫಾ ಸೋಂಕನ್ನು ರಾಜ್ಯದ ಇತರೆ ಯಾವ ಕಡೆಗಳಿಗೂ ಹರಡದಂತೆ ಕೇರಳ ಸರ್ಕಾರ ಯಶಸ್ವಿಯಾಗಿತ್ತು. ‘ನಿಫಾ’ ಕಾಣಿಸಿಕೊಂಡಾಗ ಎದುರಿಸಿದ ಸವಾಲುಗಳು, ಪಾಲಿಸಿದ ನಿಯಮಗಳು.. ಕೋವಿಡ್ ಸೋಂಕಿನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಕೇರಳ ಸರ್ಕಾರಕ್ಕೆ ಸಹಾಯವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಆದರೇ, ಈಗೇಕೆ ಹೀಗೆ..?

ಕೇರಳದಲ್ಲಿಯೇ ಮೊದಲ ಕೊರೋನಾ ಸೋಂಕು ದೃಢಗೊಂಡಿದ್ದು. ಕೇರಳದ ಕಾರಣದಿಂದಾಗಿ ರಾಜ್ಯದ ಮಂಗಳೂರಿಗೆ ಹಾಗೂ ಮಡಿಕೇರಿಗೆ ಅಪಾಯದ ಸಂಭವವೂ ಇದ್ದಿತ್ತು. ಆ ಬಗ್ಗೆ ಕರ್ನಾಟಕ ಸರ್ಕಾರ ತಲೆಗೆ ಕೈವೊತ್ತಿ ಕುಳಿತಿತ್ತು. ಅದೇ ಪರಿಸ್ಥಿತಿ ಈಗ ಮತ್ತೆ ಕರ್ನಾಟಕಕ್ಕೆ ಬಂದಿದೆ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲನೆಗೆ ಕರ್ನಾಟಕ ಜಾರಿಗೆ ತರುವುದರ ಮೂಲಕ ಯಶಸ್ವಿಯಾಯಿತು. ಈಗ ಅದೇ ಸೂತ್ರವನ್ನು ಕರ್ನಾಟಕ ಮಾಡದಿದ್ದಲ್ಲಿ ಕರ್ನಾಟಕವೂ ಕೂ ಸೋಂಕಿನಿಂದ ಮತ್ತೆ ಸೊರಗಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಾಲೋಚಿತ ನಿಯಂತ್ರಣದ ಕ್ರಮಗಳನ್ನು ಕೇರಳ ರಾಜ್ಯ ಸರ್ಕಾರ ಕೈಗೊಂಡಿದ್ದ ಸರ್ಕಾರ ಈಗ ಎಡವಿತೇ..? ಯಾವುದೋ ಒಂದು ಸಮುದಾಯದವರನ್ನು ಓಲೈಸುವುದಕ್ಕೆ ಹೋಗಿ ಈ ಅಪಾಯವನ್ನು ತನ್ನ ಬುಡಕ್ಕೆ ತಂದಿಟ್ಟುಕೊಂಡಿತೇ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ಈಗ ಹರಿದಾಡುತ್ತಿದೆ.

ಇತ್ತೀಚೆಗಷ್ಟೇ ಸೆರೋ ಸರ್ವೇ ಬಿಡುಗಡೆಗೊಳಿಸಿದ ಒಂದು ಅಧ್ಯಯನ ವರದಿಯಲ್ಲಿ ಕೇರಳದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಜನರಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಹೇಳಿದೆ. ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಕಡಿಮೆ ಜನರಲ್ಲಿ ಸೃಷ್ಟಿಯಾಗಿರುವುದು ಮತ್ತು ಕೇರಳ ಸರ್ಕಾರ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳೇ ಮತ್ತೆ ಕೇರಳದಲ್ಲಿ ಸೋಂಕು ಹೆಚ್ಚಳವಾಗುವುದಕ್ಕ ಕಾರಣ ಇರಬಹುದು ಎನ್ನಲಾಗುತ್ತಿದೆ.

ಕೋವಿಡ್ ಸೋಂಕಿನ ಜೊತೆಗೆ ಹೊಸದಾಗಿ ಹುಟ್ಟಿಕೊಂಡ ಝೀಕಾ ವೈರಸ್ ಕೂಡ ಕೇರಳದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಕೋವಿಡ್ ನಿಯಂತ್ರಣ ಮಾಡುವಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ, ಈಗ ಭಯ ಹುಟ್ಟಿಸುತ್ತಿದೆ ಎನ್ನುವುದು ಸುಳ್ಳಲ್ಲ.

ಕೇರಳದೊಂದಿಗೆ ತನ್ನ ಗಡಿ ಹಂಚಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 4 ನ್ನು ದಾಟಿದೆ. ಕೊಡಗಿನ ಪಾಸಿಟಿವಿಟಿ ದರ 3. 51ಕ್ಕೆ ಹೆಚ್ಚಳವಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.

ಒಟ್ಟಿನಲ್ಲಿ,  ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮಾಡದಿದ್ದಲ್ಲಿ ಕರ್ನಾಟಕ ಮತ್ತೆ ಕೋವಿಡ್ ಸೋಂಕಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಮತ್ತೆ ಕೋವಿಡ್ ಪ್ರಕರಣ ಹೆಚ್ಚಳ: ಚೀನಾದಲ್ಲಿ ಲಕ್ಷಾಂತರ ಜನರಿಗೆ ಲಾಕ್ ಡೌನ್ ಬಿಸಿ

Advertisement

Udayavani is now on Telegram. Click here to join our channel and stay updated with the latest news.

Next