ಹಿರೋಶಿಮಾ: ವಿಶ್ವಸಂಸ್ಥೆಯಲ್ಲಿ ಸುಧಾರಣೆ ಆಗಬೇಕೆಂಬ ತನ್ನ ಹಲವು ವರ್ಷಗಳ ಬೇಡಿಕೆಯನ್ನು ಭಾರತ ಮತ್ತೂಮ್ಮೆ ಮುಂದಿಟ್ಟಿದೆ. ವಿಶ್ವಸಂಸ್ಥೆ ಹಾಗೂ ಭದ್ರತಾ ಮಂಡಳಿಯು ಪ್ರಸ್ತುತ ಜಗತ್ತಿನ ವಾಸ್ತವಗಳನ್ನು ಅರಿಯುವಲ್ಲಿ ವಿಫಲವಾದರೆ, ಅವುಗಳು ಕೇವಲ “ಟಾಕ್ ಶಾಪ್'(ಮಾತಲ್ಲಷ್ಟೇ) ಆಗಿ ಉಳಿಯಲಿದೆ ಎಂದು ಮೋದಿ ಖಡಕ್ಕಾಗಿ ನುಡಿದಿದ್ದಾರೆ.
ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಜಿ7 ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ. ನಾವೇಕೆ ಶಾಂತಿ, ಸ್ಥಿರತೆ ಬಗ್ಗೆ ಬೇರೆ ವೇದಿಕೆಗಳಲ್ಲಿ ಮಾತಾಡಬೇಕು? ಶಾಂತಿ ಸ್ಥಾಪನೆಗೆಂದೇ ರೂಪುಗೊಂಡ ವಿಶ್ವಸಂಸ್ಥೆಗೆ ಸಂಘರ್ಷಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲವೇಕೆ? ಭಯೋತ್ಪಾದನೆಯ ವ್ಯಾಖ್ಯಾನವನ್ನೂ ವಿಶ್ವಸಂಸ್ಥೆ ಒಪ್ಪಿಕೊಳ್ಳಲು ಸಿದ್ಧವಿಲ್ಲವೇಕೆ ಎಂದೂ ಮೋದಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಕಳೆದ ಶತಮಾನದಲ್ಲಿ ನಿರ್ಮಿಸಲಾದ ಈ ಸಂಸ್ಥೆಯ 21ನೇ ಶತಮಾನದ ವ್ಯವಸ್ಥೆಗೆ ಪೂರಕವಾಗಿಲ್ಲ. ವಿಶ್ವಸಂಸ್ಥೆಯು ಪ್ರಸ್ತುತ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ. ಹೀಗಾಗಿ, ಇದರಲ್ಲಿ ಸುಧಾರಣೆ ತರಬೇಕಾದ ಅಗತ್ಯವಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಒಗ್ಗಟ್ಟಾಗಿ ಧ್ವನಿಯೆತ್ತಿ:
ಇದೇ ವೇಳೆ, ದೇಶ-ದೇಶಗಳ ನಡುವಿನ ಯಾವುದೇ ವಿವಾದ, ಸಂಘರ್ಷಗಳಿಗೆ ಮಾತುಕತೆಯೊಂದೇ ಪರಿಹಾರ. ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆದರೆ, ಯಥಾಸ್ಥಿತಿಯನ್ನು ಬದಲಿಸಲು ಯಾವುದೇ ಪ್ರಯತ್ನ ನಡೆದರೂ, ಅದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಧ್ವನಿಯೆತ್ತಬೇಕು ಎಂದೂ ಮೋದಿ ಕರೆ ನೀಡಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ, ಚೀನಾದ ವಿಸ್ತರಣಾವಾದದ ಹಿನ್ನೆಲೆಯಲ್ಲಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದಿವೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದ ಕುರಿತು ಪ್ರಸ್ತಾಪಿಸಿದ ಮೋದಿ, “ಉಕ್ರೇನ್‌ನಲ್ಲಿನ ಇಂದಿನ ಸ್ಥಿತಿಯನ್ನು ನಾವು ಮಾನವತೆಗೆ, ಮಾನವೀಯ ಮೌಲ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ನೋಡಬೇಕೇ ಹೊರತು ರಾಜಕೀಯ ಅಥವಾ ಆರ್ಥಿಕತೆಯ ವಿಚಾರವಾಗಿ ನೋಡಬಾರದು. ಎಲ್ಲ ದೇಶಗಳೂ ಅಂತಾರಾಷ್ಟ್ರೀಯ ಕಾನೂನು, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು’ ಎಂದಿದ್ದಾರೆ.
Related Articles
ಜಂಟಿ ಹೇಳಿಕೆಗೆ ಚೀನಾ ಅಸಹನೆ:
ಹಿರೋಶಿಮಾದಲ್ಲಿ ಜಿ7 ರಾಷ್ಟ್ರಗಳ ಜಂಟಿ ಹೇಳಿಕೆಯ ವಿರುದ್ಧ ಚೀನಾ ರಾಜತಾಂತ್ರಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ತೈವಾನ್, ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ವಿಸ್ತರಣಾವಾದದ ವಿರುದ್ಧ ಜಿ7 ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡುತ್ತಿದ್ದಂತೆ, ಚೀನಾ ಕೆರಳಿ ಕೆಂಡವಾಗಿದೆ. ನಮ್ಮ ಆಂತರಿಕ ವಿಚಾರದಲ್ಲಿ ಯಾರೂ ಮೂಗು ತೂರಿಸಬಾರದು ಎಂದು ಎಚ್ಚರಿಕೆಯನ್ನೂ ನೀಡಿದೆ.
ಸುನಕ್-ಮೋದಿ ಮಾತುಕತೆ:
ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಪ್ರಧಾನಿ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿ ಪರಿಶೀಲನೆಯನ್ನೂ ನಡೆಸಿದ್ದಾರೆ.
ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂಗಿನಿ ಪ್ರಧಾನಿ!
ಜಪಾನ್ ಪ್ರವಾಸ ಮುಗಿಸಿದ ಪ್ರಧಾನಿ ಮೋದಿಯವರು ಭಾನುವಾರ ಸಂಜೆ ಪಪುವಾ ನ್ಯೂಗಿನಿಗೆ ತಲುಪಿದ್ದಾರೆ. ವಿಶೇಷವೆಂದರೆ, ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ ಅವರು ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿಯವರು ಈ ಪುಟ್ಟ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ.
ಮೋದಿ ಆಟೋಗ್ರಾಫ್ ಕೇಳಿದ ಬೈಡೆನ್!
ಶನಿವಾರ ಕ್ವಾಡ್ ಶೃಂಗದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ಮೋದಿಯವರತ್ತ ದೌಡಾಯಿಸಿ ಬಂದು ಆಲಿಂಗಿಸಿಕೊಂಡ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆದರೆ, ಅಲ್ಲಿ ಉಭಯ ನಾಯಕರ ನಡುವೆ ನಡೆದಿದ್ದ ಲಘು, ಹಾಸ್ಯಭರಿತ ಮಾತುಕತೆಯ ವಿವರ ಈಗ ಹೊರಬಿದ್ದಿದೆ. ಮುಂದಿನ ತಿಂಗಳು ಮೋದಿ ಅಮೆರಿಕ ಪ್ರವಾಸ ಮಾಡಲಿದ್ದು, ಈಗಾಗಲೇ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಪ್ರಸ್ತಾಪಿಸಿದ ಬೈಡೆನ್, “ನಿಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕೊಡಿ ಎಂದು ಸಾವಿರಾರು ಮಂದಿ ಕೇಳಿಕೊಳ್ಳುತ್ತಿದ್ದಾರೆ. ಅವರನ್ನೆಲ್ಲ ನಿಭಾಯಿಸುವುದೇ ನನಗೆ ದೊಡ್ಡ ಸವಾಲಾಗಿದೆ. ಅಷ್ಟೊಂದು ಜನರನ್ನು ನೀವಾದರೂ ಹೇಗೆ ನಿಭಾಯಿಸುತ್ತೀರಿ’ ಎಂದು ಪ್ರಶ್ನಿಸುತ್ತಾರೆ. ಆಗ ಅಲ್ಲೇ ಇದ್ದ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್, “ಮಾರ್ಚ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ವೀಕ್ಷಣೆಗೆಂದು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ತೆರಳಿದ್ದಾಗ 90 ಸಾವಿರಕ್ಕೂ ಅಧಿಕ ಮಂದಿ ಮೋದಿಯವರನ್ನು ಸ್ವಾಗತಿಸಿದ್ದರು’ ಎಂದು ಹೇಳುತ್ತಾರೆ. ಇದನ್ನು ಕೇಳಿದ ಬೈಡೆನ್, “ಅಬ್ಟಾ, ಹಾಗಿದ್ದರೆ ನನಗೂ ನಿಮ್ಮದೊಂದು ಆಟೋಗ್ರಾಫ್ ಬೇಕಿತ್ತು’ ಎನ್ನುತ್ತಾರೆ. ಆಗ ಮೋದಿ ಮತ್ತು ಆಲ್ಬನೀಸ್ ಇಬ್ಬರೂ ಗೊಳ್ಳನೆ ನಗುತ್ತಾರೆ.