Advertisement

ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಾವೇಶಕ್ಕೆ ಸಿದ್ದು ಗೈರು ಏಕೆ

11:12 PM Mar 06, 2023 | Team Udayavani |

ಬೆಂಗಳೂರು: ತುಮಕೂರಿನ ಕೊರಟಗೆರೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಕಾಂಗ್ರೆಸ್‌ ತನ್ನ ಶಕ್ತಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಯಶಸ್ಸಿನ ಅಬ್ಬರದಲ್ಲೂ “ಕೈ’ ಕಾರ್ಯಕರ್ತರ ಮುಖದಲ್ಲಿ ಮಾತ್ರ ಅನುಮಾನದ ಗೆರೆಗಳು ಮೂಡಿವೆ. ಇದಕ್ಕೆ ಕಾರಣ- ಸಿದ್ದರಾಮಯ್ಯ ಅವರ ಅನುಪಸ್ಥಿತಿ.

Advertisement

ಪ್ರಮುಖವಾಗಿ ಅದು ರಾಜೀವ್‌ ಭವನ ಲೋಕಾರ್ಪಣೆ ಕಾರ್ಯಕ್ರಮವಾಗಿತ್ತು. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅದರ ಕೇಂದ್ರಬಿಂದು ಆಗಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುಜೇìವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಭಾಗವಹಿಸಿದ್ದರು. ಈ ದಿಗ್ಗಜರೊಂದಿಗೆ ಸಿದ್ದರಾಮಯ್ಯ ಕಾಣಿಸಿಕೊಳ್ಳದಿರುವುದು ಹಲವು “ಭಿನ್ನರಾಗ’ಗಳಿಗೆ ಎಡೆಮಾಡಿಕೊಟ್ಟಿದೆ.

ಮಲ್ಲಿಕಾರ್ಜುನ ಖರ್ಗೆ ಬದಲಿಗೆ ಬೇರೆ ಯಾರಾದರೂ ಎಐಸಿಸಿ ಅಧ್ಯಕ್ಷರಾಗಿದ್ದು, ಅವರು ಕೊರಟಗೆರೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರೆ, ಸಿದ್ದರಾಮಯ್ಯ ಅವರ ನಡೆ ಇದೇ ಆಗಿರುತ್ತಿತ್ತಾ? ಇದೆಲ್ಲಕ್ಕಿಂತ ಅರಸೀಕೆರೆ ಕಾರ್ಯಕ್ರಮ ಮುಖ್ಯವಾಗಿತ್ತೇ? ನಾಯಕರುಗಳ ನಡುವಿನ ಮುನಿಸು ಈಗಲೂ ಬೂದಿಮುಚ್ಚಿದ ಕೆಂಡವಾಗಿ ಮುಂದುವರಿದಿದೆಯೇ? ಇಂತಹ ಹಲವು ಪ್ರಶ್ನೆಗಳು ಈಗ ಕಾಂಗ್ರೆಸ್‌ ವಲಯದಲ್ಲೇ ಕೇಳಿಬರುತ್ತಿದೆ.

ಡಾ.ಜಿ. ಪರಮೇಶ್ವರ್‌ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ತಾವು ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲೂ ಗುರುತಿಸಿಕೊಂಡಿದ್ದರು. ಆದರೆ, ಸೋಲು ಅನುಭವಿಸಿದ್ದರಿಂದ ನಿರಾಸೆ ಉಂಟಾಯಿತು. ಇನ್ನು ಅದೇ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರೊಂದಿಗೆ ರೇಸ್‌ನಲ್ಲಿದ್ದವರು ಮಲ್ಲಿಕಾರ್ಜು ಖರ್ಗೆ ಅವರು. ಈ ಮಧ್ಯೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ ಸಹ ತಾವು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಗುರುತಿಸಿಕೊಂಡಿದ್ದಾರೆ.

ಇವರೆಲ್ಲರನ್ನು ಒಳಗೊಂಡ “ಶಕ್ತಿ ಪ್ರದರ್ಶನ’ ಕೊರಟಗೆರೆ ಕಾರ್ಯಕ್ರಮವಾಗಿತ್ತು. ಅಂತಹ ಪ್ರಮುಖ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಗೈರು ಎದ್ದುಕಾಣುತ್ತಿತ್ತು. ಈ ಗೈರಿಗೆ ಇದುವರೆಗೆ ಯಾವುದೇ ಸಮಜಾಯಿಷಿ ಕೂಡ ನಾಯಕರಿಂದ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಬಲಿಗರು, ಕಾರ್ಯಕರ್ತರಲ್ಲಿ ಪ್ರಶ್ನೆಗಳು ಹಾಗೇ ಉಳಿದಿವೆ.
ಅಂದಹಾಗೆ ಭಾನುವಾರ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆ ಅರಸೀಕರೆಯ ಗುತ್ತಿನಕೆರೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ 5 ಗಂಟೆಗೆ ರಸ್ತೆ ಮೂಲಕ ಮೈಸೂರಿಗೆ ತೆರಳಿ ಅಲ್ಲಿ ವಾಸ್ತವ್ಯ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next