ಬೆಂಗಳೂರು: ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಹತ್ವದ ಗೃಹ ಖಾತೆ ರಮಾನಾಥ್ ರೈ ಅವರಿಗೆ ನೀಡಲಾಗುವುದು ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬಂದಿದ್ದವು. ಸ್ವತಃ ಸಿದ್ದರಾಮಯ್ಯ ಅವರು ಗೃಹ ಖಾತೆ ರೈ ಅವರಿಗೆ ವಹಿಸಲು ಆಸಕ್ತರಾಗಿದ್ದರು. ಆದರೆ, ಬಿಜೆಪಿಯವರ ಹೋರಾಟದ ಎಚ್ಚರಿಕೆ ಹಾಗೂ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಅನಗತ್ಯ ಆರೋಪಗಳಿಗೆ ಗುರಿಯಾಗುವ ಆತಂಕದ ಹಿನ್ನೆಲೆಯಲ್ಲಿ ಗೃಹ ಖಾತೆ ಹೊಣೆಗಾರಿಕೆ ರೈ ಅವರಿಗೆ ಕೊಡುವ ನಿರ್ಧಾರದಿಂದ ಹಿಂದೆ ಸರಿಯಲಾಯಿತು ಎಂದು ಹೇಳಲಾಗಿದೆ. ಮತ್ತೂಂದು ಮೂಲಗಳ ಪ್ರಕಾರ, ರಮಾನಾಥ ರೈಗೆ ಗೃಹ ಇಲಾಖೆ ನೀಡುವ ಬಗ್ಗೆ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ರೈ ವಿರುದ್ಧ ಸಾಕಷ್ಟು ಹೋರಾಟ ಮಾಡುತ್ತಿದ್ದು, ಅವರ ರಾಜೀನಾಮೆಗೆ ಈಗಾಗಲೇ ಬಿಜೆಪಿ ಪಟ್ಟು ಹಿಡಿದಿರುವುದರಿಂದ ಗೃಹ ಸಚಿವರಾದ ಮೇಲೆ ಒಂದೊಮ್ಮೆ ಏನಾದರೂ ಸಮಸ್ಯೆಯಾದರೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಗೃಹ ಖಾತೆ ಸಿಗಬೇಕೆಂಬ ನಿರೀಕ್ಷೆಯನ್ನು ನಾನು ಮಾಡಿಲ್ಲ. ಗೃಹಖಾತೆಯನ್ನು ಇತರರಿಗೆ ವಹಿಸಿಕೊಡುವ ಬಗ್ಗೆ ನನಗೆ ವಾರದ ಮೊದಲೇ ಗೊತ್ತಿತ್ತು. ಹಿಂದೆ ಕೂಡ ಯಾವತ್ತೂ ನನಗೆ ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ. ಪಕ್ಷ ಹೊಣೆಗಾರಿಕೆ ನೀಡಿದರೆ ಅದನ್ನು ಬೇಡ ಎನ್ನುವಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ.
ರಮಾನಾಥ ರೈ, ಸಚಿವ
ಮಾದಿಗ ಜನಾಂಗದ ಮತ್ತೂಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಈ ಹಿಂದಿನ ಬಹುತೇಕ ಸರ್ಕಾರಗಳಲ್ಲಿ ಮಾದಿಗ ಜನಾಂಗದ ಇಬ್ಬರು ಅಥವಾ ಮೂವರು ಸಚಿವರು ಇರುತ್ತಿದ್ದರು. ಈ ಬಾರಿ ನಾನೊಬ್ಬನೇ ಇದ್ದೆ. ಈಗ ಆರ್.ಬಿ. ತಿಮ್ಮಾಪುರ ಅವರನ್ನು ಸಚಿವರನ್ನಾಗಿ ಮಾಡಿರುವುದು ಸಂತೋಷದ ಸಂಗತಿ.
ಆಂಜನೇಯ, ಸಮಾಜ ಕಲ್ಯಾಣ ಸಚಿವ