Advertisement

ಖರ್ಗೆ ಕುಟುಂಬ ಹತ್ಯೆ ಬೆದರಿಕೆ ವಿಚಾರದಲ್ಲಿ ಪಿಎಂಮೋದಿ- ಸಿಎಂ ಮೌನವೇಕೆ? ಕಾಂಗ್ರೆಸ್ ಪ್ರಶ್ನೆ

05:04 PM May 07, 2023 | Team Udayavani |

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ನಾಶಪಡಿಸುತ್ತೇನೆ ಎಂದು ಬೆದರಿಕೆ ಹಾಕಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಕೆ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Advertisement

ಚುನಾವಣಾ ಪ್ರಚಾರ ಸಭೆಯುದ್ದಕ್ಕೂ ಕಾಂಗ್ರೆಸ್ ಬಗ್ಗೆ ಮಾತನಾಡುವ ಮೋದಿ, ಅಭಿವೃದ್ಧಿ ಸಂಬಂಧವಾಗಿ ತುಟಿ ಬಿಚ್ಚಿಲ್ಲ. ಅಷ್ಟೇ ಏಕೆ ಅವರದ್ದೇ ಅಭ್ಯರ್ಥಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಮುಗಿಸುವುದಾಗಿ ಹೇಳಿದ್ದರೂ ಮೋದಿ, ಬೊಮ್ಮಾಯಿ ಅವರ ಮೌನ ನಡೆ ಹಿನ್ನೆಲೆ ಏನು? ಎಂದು ಎಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು ಹಾಗೂ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಗಳು ಜಂಟಿಯಾಗಿ ಪತ್ರಿಕಾಗೋಷ್ಠಿ ಪ್ರಶ್ನಿಸಿದರು.

40 ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ಕ್ರಿಮಿನಲ್ ವ್ಯಕ್ತಿಗೆ ಟಿಕೆಟ್ ನೀಡಿ, ಅದರ ಮೂಲಕ ಖರ್ಗೆ ಅವರನ್ನು ಬೆದರಿಕೆ ಹಾಕಲು ಯತ್ನಿಸುತ್ತಿರುವುದು ನಾಚಿಗೇಡಿತನದ ಸಂಗತಿಯಾಗಿದೆ. ಇದನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.

ಪ್ರಧಾನಿ ಹಾಗೂ ಸಿಎಂ ಈ ಸಂಬಂಧ ಮೌನ ಮುರಿಯುವುದರ ಜತೆಗೆ ಕಾನೂನು ಕ್ರಮಕ್ಕೆ ಮುಂದಾಗಬೇಕು.‌ ಚುನಾವಣಾ ಆಯೋಗ ಸಹ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕೆಂದು ಶ್ರೀಧರ ಬಾಬು ಒತ್ತಾಯಿಸಿದರು.

ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಗಡಿಪಾರು ಆದೇಶಕ್ಕೆ ಒಳಗಾಗಿದ್ದಾರೆ. ಅಂತಹ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದೆ.‌ ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರಿಗೆ ಪ್ರಖರವಾಗಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ವಿರುದ್ದ ಧೈರ್ಯದಿಂದ ಮಾತನಾಡುವುದನ್ನು ಹತ್ತಿಕ್ಕಲು ಅದೇ ರೀತಿ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ದ ನೇರವಾಗಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಹಣೆಯಬೇಕೆಂಬ ಹಿನ್ನೆಯಲ್ಲಿ ಮಣಿಕಂಠ ಮೂಲಕ ಕೊಲೆಗೆ ಸಂಚು ರೂಪಿಸಲಾಗಿದೆ. ಒಂದು ವೇಳೆ ಖರ್ಗೆ ಕುಟುಂಬಕ್ಕೆ ಏನಾದರೂ ಆದರೆ ಪಿಎಂ ನೇರ ಹೊಣೆ. ತಾವು ಅಧಿಕಾರದಲ್ಲಿ ಇದ್ದಾಗ ಈ ತರಹ ದ್ವೇಷ ಮಾಡಿಲ್ಲ. ಈಗ ಪ್ರಮುಖವಾಗಿ ಚುನಾವಣಾ ಆಯೋಗ ಬೆದರಿಕೆ ಅಡಿ ಪ್ರಕರಣ ದಾಖಲಿಸಬೇಕು. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದರು.

Advertisement

ಆರು ತಿಂಗಳ ಹಿಂದೆಯೇ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದ.  ಇಂತಹವರು ಶಾಸಕರಾದರೆ ಏನು ಗತಿ. ಖರ್ಗೆ ಬೆದರಿಕೆ ಹಾಕಿದರೆ ಜನ ಸಾಮಾನ್ಯರ ಗತಿ ಏನು?  ಬೆದರಿಕೆ ಹಾಕಿರುವ ಆಡಿ ಯೋ ಅವರದ್ದೇ ಇದೆ.‌ ಸುಮ್ಮನೇ ಬಚಾವ್ ಆಗಲು ಅಭ್ಯರ್ಥಿ ಈಗ ತನ್ನದಲ್ಲ ಎನ್ನುತ್ತಿದ್ದಾರೆ.‌ ಬೆದರಿಕೆ ಸಂಬಂಧ ದೂರು ನೀಡಲಾಗಿದ್ದರೂ  ಸಿಎಂ ಪ್ರಕರಣ ದಾಖಲಾಗದಂತೆ ಒತ್ತಡ ತರ್ತಾ ಇದ್ದಾರೆ ಎಂದು ಬಲವಾಗಿ ಆರೋಪಿಸಿದರು.

ಆಳಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ ಮಾತನಾಡಿ, ಮಣಿಕಂಠ ರಾಠೋಡ ಬೆದರಿಕೆ ಹಾಕಿರುವ ಹಿಂದೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ ಶಾ ಬೆಂಬಲವಿದೆ. ಅವರ ಬೆಂಬಲವಿಲ್ಲದೇ ಇಂತಹ ಅಘೋರ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ‌

ಖರ್ಗೆ ಅವರಿಗೆ ಕೂದಲೆಳೆಗೆ ಧಕ್ಕೆಯಾದರೆ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ ಬಿ. ಅರ್. ಪಾಟೀಲ್, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದರು.

ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಎಂ.ವೈ ಪಾಟೀಲ್ ಮಾತನಾಡಿ,  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ನಾಥುರಾಮ ಗೂಡ್ಸೆ ಮೂಲಕ ಹತ್ಯೆಗೈದಿರುವಂತೆ ಖರ್ಗೆ ಅವರನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೊದಿಲ್ಲ ಎಂದು ತಿಳಿದುಕೊಂಡು ಹತಾಶಗೊಂಡು ಈ ರೀತಿ ಮಾಡುತ್ತಿದೆ.‌ ಈಗ 30 ಸೀಟು ಕಾಂಗ್ರೆಸ್ ಗೆಲ್ಲಲಿದೆ. ಪ್ರಜಾಪ್ರಭುತ್ವ ಮೂಲಕ ಸೋಲಿಸಲು ಸಾಧ್ಯ ಇಲ್ಲ ತಿಳಿದುಕೊಂಡು ಬಿಜೆಪಿ ಏನೆಲ್ಲ ಮಾಡ ಹೊರಟಿದೆ.  ಏನು ಮಾಡಿದರೂ ಆಗೋದಿಲ್ಲ ಎಂದು ತಿಳಿದುಕೊಂಡು ಪ್ರಧಾನಿ ಮೋದಿ ಚಿತ್ತಾಪುರ ಹಾಗೂ ಅಮಿತ ಶಾ ಜೇವರ್ಗಿ ಪ್ರವಾಸ ರದ್ದು ಮಾಡಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಹೇಡಿತನದಿಂದ ದಾಳಿ: ಬಿಜೆಪಿ, ತತ್ವ ಸಿದ್ದಾಂತ ಮಾರಿಕೊಂಡಿದೆ ಎಂದು ತಿಳಿದಿದ್ದೇ, ಆದರೆ ಇಷ್ಟು ಕೆಳಮಟ್ಟಕ್ಕೆ ಇಳಿದು ತಮ್ಮ ಮನೆ ಮೇಲೆ ಐಟಿ ದಾಳಿ ನಡೆಸುತ್ತದೆ ಎಂದುಕೊಂಡಿರಲಿಲ್ಲ ಬಿಜೆಪಿ ತೊರೆದು ಈಚೆಗೆ ಕಾಂಗ್ರೆಸ್ ಸೇರಿದ ಅರವಿಂದ ಚವ್ಹಾಣ ಶಾಸಕ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಪ್ರತ್ಯೇಕ ಸುದ್ದಿಗೋಷ್ಟಿ ನಡೆಸಿ ಆರೋಪಿಸಿದರು.

ಕಾಂಗ್ರೆಸ್ ಪರ ಪ್ರಚಾರ ಮಾಡಬಾರದೆಂದು ತಿಳಿದುಕೊಂಡು ತಮ್ಮ ಮನೆ, ಹೋಟೆಲ್, ‌ಕ್ರಷಿಂಗ್ ಮಶೀನ್ ಮೇಲೆ ಐಟಿ ದಾಳಿ ನಡೆಸಲಾಗಿದೆ. ಬಿಜೆಪಿ ಬಿಟ್ಟು ಬಂದಿದ್ದಕ್ಕೆ ದ್ವೇಷದಿಂದ ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.

ಮಣಿಕಂಠ ಗೆದ್ದರೆ ಜನ ಜೈಲಿಗೆ ಇಲ್ಲವೇ ಕೋರ್ಟ್ ಗೆ ಹೋಗಿ ಕೆಲಸ ಕೇಳಬೇಕಾಗುತ್ತದೆ. 40 ಕೇಸು ಇರೋದ್ರದಿಂದ ಜೈಲಿಗೆ ಇಲ್ಲವೇ ಕೋರ್ಟ್ ನಲ್ಲಿ ಸಮಯ ಕಳೆಯಬೇಕಾಗುತ್ತದೆ.‌ ಅಕ್ಕಿ ಕಳ್ಳ, ಪೌಡರ ಕಳ್ಳ, ಬುಕ್ಕಿಗೆ ಮತ ಹಾಕಿ ಎಂದು ಕೇಳುವುದರಿಂದ ತಪ್ಪಿಸಿಕೊಳ್ಳಲು ಹಾಗೂ ಚಿತ್ತಾಪುರ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಾಗಿದೆ. ಆದರೆ ದ್ವೇಷದಿಂದ ಸಾಮಾನ್ಯ ಕಾರ್ಯಕರ್ತನ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ.‌ ಎಲ್ಲವನ್ನು ಎದುರಿಸಲು ಸಿದ್ದವಾಗಿರುವುದಾಗಿ ಅರವಿಂದ ಚವ್ಹಾಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next