ಮಹಾರಾಷ್ಟ್ರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾರೀ ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಕರ್ಫ್ಯೂ ಜಾರಿಗೊಳಿಸಿರುವ ಘಟನೆ ಬುಧವಾರ (ಜೂನ್ 07) ನಡೆದಿದೆ.
ಇದನ್ನೂ ಓದಿ:Sakleshpura; ಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ವಸ್ಥ
ಏನಿದು ವಿವಾದ?
ಕೊಲ್ಹಾಪುರ ನಗರದಲ್ಲಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ನನ್ನು ವೈಭವೀಕರಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಮಂಗಳವಾರ ಮೂವರು ಅಪ್ರಾಪ್ತರು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.
Related Articles
ವರದಿಯ ಪ್ರಕಾರ, ವಾಟ್ಸಪ್ ಸ್ಟೇಟಸ್ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಇದರ ಪರಿಣಾಮ ಕೊಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ ನಲ್ಲಿದ್ದ ಕೆಲವು ಅಂಗಡಿ, ವಾಹನಗಳನ್ನು ಪುಡಿಗೈಯಲಾಗಿತ್ತು ಎಂದು ತಿಳಿಸಿದೆ.
ವಿವಾದಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳದೇ, ಶಾಂತಿಯುತವಾಗಿರಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮನವಿ ಮಾಡಿಕೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಕೊಲ್ಹಾಪುರದಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ.