Advertisement

ಸ್ವಚ್ಛತೆಯೇಕೆ ನಮಗೆ ಆದ್ಯತೆ ಆಗುತ್ತಿಲ್ಲ?

10:02 AM Feb 21, 2020 | mahesh |

ಎಲ್ಲಾ ಪ್ರಯತ್ನಗಳನ್ನು ಮಾಡಿಯೂ ಸೋತಾಗ ನಾವು ದೇವರ ಮೊರೆಹೋಗುವುದು ಸಾಮಾನ್ಯ. ಮಹಾಭಾರತದಲ್ಲಿ ಮಹಾ ಮಹಿಮರೆದುರು ದ್ರೌಪದಿಯ ವಸ್ತ್ರಾಪಹರಣವಾದಾಗ ಕೊನೆಗೆ ಆಕೆಯನ್ನು ಕಾಪಾಡಿದ್ದು ಶ್ರೀ ಕೃಷ್ಣನೇ.

Advertisement

ಇದೀಗ ಕಸದ ಬುಟ್ಟಿಗಳ ಹಾಗೆ ಮಾರ್ಪಟ್ಟಿರುವ ನಮ್ಮ ದೇಶದ ಬೀದಿಗಳನ್ನು ಕಂಡಾಗ ಈ ದೇಶವನ್ನು ಸ್ವಚ್ಛಗೊಳಿಸಲು ದೇವರೇ ಬಂದರೂ ಅಸಾಧ್ಯ ಅನಿಸುತ್ತಿದೆ. ರಸ್ತೆ ಬದಿಯಲ್ಲಿ, ಬೀದಿ ಬೀದಿಗಳಲ್ಲಿ, ಬೀದಿ ಬದಿಯ ಮೋರಿಗಳಲ್ಲಿ, ಸಾರ್ವಜನಿಕ ತೋಡುಗಳಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್‌ ತ್ಯಾಜ್ಯಗಳು, ಹರಕು ಬಟ್ಟೆಗಳು ಬಳಸಿ ಎಸೆದ ಸರಕುಗಳ ಗಂಟು ಮೂಟೆಗಳು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯಗಳದ್ದೇ ಕಾರುಬಾರು. ಸ್ವಚ್ಛ ಭಾರತದ ಕನಸು ಹಾಗೂ ಪ್ರಯತ್ನವನ್ನು ನೋಡಿ ನಗುತ್ತಿದ್ದಾನೆ ಪ್ಲಾಸ್ಟಿಕ್‌ ರಾಕ್ಷಸ. ಮಹಾತ್ಮ ಗಾಂಧೀಜಿಯವರ ಬಗ್ಗೆ ಭಾರೀ ಅಭಿಮಾನವಿಟ್ಟುಕೊಂಡ ಜನರಿಗೆ ಅವರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಇಚ್ಛೆ ಇಲ್ಲದಿರುವುದು ವಿಷಾದನೀಯ.

ಒಂದಷ್ಟು ವರ್ಷಗಳಿಂದ ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ವಿವಿಧ ಅಭಿಯಾನಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಕಸ ಹೆಕ್ಕಿ, ಜಾಥಾಗಳಲ್ಲಿ ಕಿರುಚಿ, ಜನ ಜಾಗೃತಿ ಮೂಡಿಸುವ ಭ್ರಮೆಯಲ್ಲಿ ಭಾಗವಹಿ ಸಿದ್ದಾಯಿತು. ಆದರೆ ಜನರ ಮನೋಭಾವದಲ್ಲಿ ಹೆಚ್ಚಿನ ಬದಲಾವಣೆಯೇನೂ ಕಾಣಿಸುತ್ತಿಲ್ಲ. ಕಂಡಲ್ಲಿ ಕಸ ಎಸೆಯುವ ಕೆಟ್ಟ ಅಭ್ಯಾಸಗಳು ದೂರವಾಗಿಲ್ಲ. ಸ್ವತಂತ್ರ ಭಾರತದಲ್ಲಿ ಕಸ ಎಸೆಯುವುದು ನಮ್ಮ ಹಕ್ಕು ಅಂತ ಅಂದು ಕೊಂಡ ಹಾಗಿದೆ ಈ ಜನರು. ನಿಂತಲ್ಲೇ ಕ್ಯಾಕರಿಸಿ ಉಗುಳುವ ಕೊಳಕರಿಗೆ ಸ್ವತ್ಛತೆಯ ಪರಿಜ್ಞಾನವೇ ಇಲ್ಲ.

ವ್ಯಾಪಾರಿಗಳಿಗಂತೂ ತಮ್ಮ ಲಾಭ ನಷ್ಟಗಳದ್ದೇ ಚಿಂತೆ. ಯಾವ ಅಭಿಯಾನಗಳೂ ಇವರ ಲಾಭ ಬಡುಕತನದ ಮನೋಭಾವವನ್ನು ಬದಲಿಸುವುದಿಲ್ಲ. ನಗರದಲ್ಲಿ ಪ್ಲಾಸ್ಟಿಕ್‌ಗಳನ್ನು ಹರಿಯಬಿಡುವವರೇ ಇವರು.ಆಡಳಿತ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಿದ್ದರೂ ಇವರು ನಿಷೇಧಿಸಿಲ್ಲ. ಹೆಚ್ಚಿನ ಅಂಗಡಿಗಳಲ್ಲಿ ಇನ್ನೂ ಪ್ಲಾಸ್ಟಿಕ್‌ ಕವರುಗಳಿಗೇ ಅಗ್ರಸ್ಥಾನ. ಜನರಿಗೂ ಇದು ಸುಲಭದಲ್ಲಿ ಸಿಗುವ ಸಾಧನ.

ಸರಕಾರದ ಯಾವ ಅಭಿಯಾನಗಳೂ ಜನರ ಸಹಭಾಗಿತ್ವ ಇಲ್ಲದೆ ಯಶಸ್ಸನ್ನು ಪಡೆಯಲಾರದು. ಆಡಳಿತದ ಅತಿ ದೊಡ್ಡ ಸಮಸ್ಯೆಯೇ ಘನತ್ಯಾಜ್ಯ ನಿರ್ವಹಣೆ. ದಿನಕ್ಕೆ ಟನ್‌ಗಟ್ಟಲೆಗಳಷ್ಟು ಸಂಗ್ರಹವಾಗುವ ತ್ಯಾಜ್ಯವನ್ನು ಏನು ಮಾಡುವುದು? ಎಲ್ಲಿ ಸಂಗ್ರಹಿಸುವುದು?

Advertisement

ಸುತ್ತ ದುರ್ವಾಸನೆ ಬೀರುವ ಪರಿಸರ ಮಾಲಿನ್ಯವನ್ನುಂಟು ಮಾಡುವ ತ್ಯಾಜ್ಯಗಳಿಗೆ ಮುಕ್ತಿ ಕೊಡುವುದೆ ಬಹು ದೊಡ್ಡ ಸಮಸ್ಯೆ. ಆಡಳಿತದ ವೈಫ‌ಲ್ಯವನ್ನು ಎಲ್ಲರೂ ಎತ್ತಿ ಹಿಡಿಯುತ್ತಾರೆ. ಆದರೆ ಈ ಕಸದ ರಾಶಿಗಳ ಸಮಸ್ಯೆಯಲ್ಲಿ ನಮ್ಮ ಪಾಲೆಷ್ಟಿದೆ ಎಂಬುದನ್ನು ಯಾರೂ ಯೋಚಿಸುವುದಿಲ್ಲ.ತ್ಯಾಜ್ಯಗಳನ್ನು ತಂದು ಬೀದಿಗೆಸೆಯುವ ಅನಾಗರಿಕರೇ ಆಡಳಿತ ಸರಿ ಇಲ್ಲ ಅಂತ ದೂಷಿಸುತ್ತಾರೆ. ಕಸಕಡ್ಡಿಗಳನ್ನು ಒಟ್ಟುಮಾಡಿ ತಂದು ಬೀದಿಬದಿಯ ಮೋರಿಗಳಿಗೆ ಎಸೆಯುವವರೇ ಚರಂಡಿ ವ್ಯವಸ್ಥೆ ಸರಿ ಇಲ್ಲ ಅಂತ ದೂರುತ್ತಾರೆ.

ಇದೀಗ ಹೆಚ್ಚಿನ ಆಡಳಿತ ಸಂಸ್ಥೆಗಳೂ ಸ್ವತ್ಛತೆಯತ್ತ ಗಮನಹರಿಸುತ್ತಿವೆ ಎನ್ನುವುದು ವಾಸ್ತವ. ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಗೊಬ್ಬರ ತಯಾರಿ ಮುಂತಾದ ಯೋಜನೆಗಳ ಮೂಲಕ ಸ್ವತ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಅವುಗಳು ಪ್ರಯತ್ನಿಸುತ್ತಿವೆ.ಆದರೆ ಜನರಲ್ಲಿ ಜಾಗೃತಿ ಮೂಡದ ಹೊರತು ಏನನ್ನೂ ಸಾಧಿಸಲು ಸಾಧ್ಯವಿಲ್ಲ.

ಜನರಿಗೆ ಎಲ್ಲವನ್ನೂ ಆಡಳಿತವೇ ಮಾಡಬೇಕೆಂಬ ಹಂಬಲ.ಬೀದಿ ಬದಿಯಲ್ಲಿ ಗೋಣಿಗಳಲ್ಲಿ, ಪ್ಲಾಸ್ಟಿಕ್‌ ಕವರುಗಳಲ್ಲಿ ತೆಗೆದಷ್ಟೂ ರಾಶಿ ಬೀಳುವ ಕೊಳಕುಗಳನ್ನು ಸ್ವತ್ಛಗೊಳಿಸಲು ಪೌರ ಕಾರ್ಮಿಕರು ದುಡಿಯುವುದನ್ನು ಕಂಡಾಗಲೆಲ್ಲ ಅವರ ಬಗ್ಗೆ ಗೌರವ ಮೂಡುತ್ತದೆ. ನಗರಗಳನ್ನು ಸ್ವಚ್ಚವಾಗಿರಿಸುವಲ್ಲಿ ಅವರ ಶ್ರಮ ಶ್ಲಾಘನೀಯ. ನಾವು ಬಳಸಿ ಎಸೆಯುವುದನ್ನೆಲ್ಲ ಸಂಗ್ರಹಿಸಿ ತ್ಯಾಜ್ಯ ವಿಂಗಡಣೆ ಮಾಡುವ ಅವರ ಪ್ರಯತ್ನ, ಸಹನೆಗೊಂದು ಸಲಾಂ ಹೇಳಲೇಬೇಕು.

ಆದರೆ ಕಸ ಎಸೆಯುವ ನಮ್ಮ ಜನರ ಸಂಸ್ಕೃತಿ ಬದಲಾಗುವುದು ಯಾವಾಗ? ಎಲ್ಲದಕ್ಕೂ ಮುಂದುವರಿದ ದೇಶವನ್ನು ಮಾದರಿ ಯಾಗಿರಿಸಿ ಮಾತನಾಡುವ ನಮ್ಮವರಿಗೆ ಸ್ವತ್ಛತೆಯೇಕೆ ಮಾದರಿ ಯಾಗುವುದಿಲ್ಲ? ಬುದ್ಧಿವಂತರು, ವಿದ್ಯಾವಂತರುಗಳೇ ಈ ಕಸಗಳ ಮೂಲಗಳು. ಸದಾ ಏನಾದರೂ ತಿನ್ನುವ ಚಪಲ, ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್‌ ಕವರಿನಲ್ಲಿರುವ ಅನಾರೋಗ್ಯಕರ ವಿಷಕಾರಿ ತಿಂಡಿಗಳು, ಬೇಕರಿಗಳಲ್ಲಿ ಸಿಗುವ ರೆಡಿಮೇಡ್‌ ತಿಂಡಿಗಳು, ಸ್ವಿಗ್ಗಿ, ಜೊಮೇಟೊ ದಂತಹ ಹೊಸ ಕಂಪೆನಿಗಳು,ಬಹು ರಾಷ್ಟ್ರೀಯ ಉದ್ದಿಮೆಗಳ ತಂಪು ಪಾನೀಯದ ಬಾಟಲಿಗಳು, ಅಲ್ಲಲ್ಲಿ ಎಸೆದ ಮಿನರಲ್‌ ವಾಟರ್‌ ಬಾಟಲಿಗಳು ಇವೆಲ್ಲವೂ ಯಾರ ಕೊಡುಗೆಗಳು? ಅನಗತ್ಯ ವಸ್ತುಗಳನ್ನು ಬಳಸುವುದೂ ನಾವೇ ಅಲ್ಲಲ್ಲಿ ಎಸೆಯುವುದೂ ನಾವೇ.ಆಡಳಿತವನ್ನು ದೂಷಿಸುವವರೂ ನಾವೇ. ನಾವು ಮಾಡಿದ ಕಸವನ್ನು ಇನ್ನೊಬ್ಬ ಬಂದು ಬಿಟ್ಟಿಯಾಗಿ ಸ್ವತ್ಛಗೊಳಿಸಬೇಕು ಎಂಬ ಕಲ್ಪನೆಯೇ ಕೆಟ್ಟದು. ನಮ್ಮ ಯುವಜನತೆಯಲ್ಲಿ ಶೇಕಡಾ ಅರುವತ್ತರಷ್ಟು ಜನರಿಗೂ ಸ್ವತ್ಛತೆಯ ಕುರಿತು ಕಾಳಜಿಯಿಲ್ಲ. ಯಾವುದಾದರೂ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವವರು ಮಾತ್ರ ಈ ಅಭಿಯಾನದಲ್ಲಿ ಕಾಳಜಿಯಿಂದ ಭಾಗವಹಿಸುವುದು ಬಿಟ್ಟರೆ ಉಳಿದಂತೆ ಎಷ್ಟೋ ಜನ ತಮ್ಮ ಕಸಗಳನ್ನು ರಸ್ತೆಗೆ ಎಸೆಯುವವರೇ.

ಸ್ವಚ್ಛತೆಯ ಪರಿಕಲ್ಪನೆ ಅಸಾಧ್ಯವಾದ ವಿಷಯವೇನಲ್ಲ. ಆದರೆ ಎಲ್ಲ ರಲ್ಲೂ ಬದ್ದತೆಯಿರಬೇಕು. ಸ್ವಇಚ್ಛೆಯಿಂದ ಇದರಲ್ಲಿ ತೊಡಗಿಸಿಕೊಳ್ಳ ಬೇಕು. ನಮ್ಮ ತ್ಯಾಜ್ಯ ನಮ್ಮ ಜವಾಬ್ದಾರಿಯೆಂಬ ಪರಿಕಲ್ಪನೆ ಇರಬೇಕು.ಕಂಡ ಕಂಡಲ್ಲಿ ಕಸ ಎಸೆಯುವ ಕೊಳಕು ಸಂಸ್ಕೃತಿಯಿಂದ ಮೊದಲು ಹೊರಬರಬೇಕು. ಆದರೆ ಶೇ.70ರಷ್ಟು ಶಿಕ್ಷಿತರಿರುವ ನಮ್ಮ ದೇಶದಲ್ಲಿ, ಬುದ್ಧಿವಂತ ಜಿಲ್ಲೆಗಳ ಹೆದ್ದಾರಿಯ ಇಕ್ಕೆಲಗಳು ಮೋರಿಗಳು ಕಸದ ರಾಶಿಗಳಿಂದ ರಾರಾಜಿಸುತ್ತಿರುವುದು ಕಂಡಾಗಲೆಲ್ಲ ಈ ದೇಶವನ್ನು ಸ್ವತ್ಛಗೊಳಿಸಲು ದೇವರೇ ಬಂದರೂ ಅಸಾಧ್ಯ ಅನಿಸುತ್ತದೆ. ಆದರೂ ಕೊನೆಯದಾಗಿ ಆ ಕಾಣದ ದೇವರಲ್ಲಿ ಒಂದು ಕಳಕಳಿಯ ನಿವೇದನೆ. ಓ ದೇವರೇ ನನ್ನ ದೇಶವನ್ನು ಈ ಕಸಕಡ್ಡಿಗಳಿಂದ ರಕ್ಷಿಸಲಾರೆಯಾ?

– ವಿದ್ಯಾ ಅಮ್ಮಣ್ಣಾಯ, ಕಾಪು

Advertisement

Udayavani is now on Telegram. Click here to join our channel and stay updated with the latest news.

Next