Advertisement

ಭಾರತದಲ್ಲಿ ಯಾಕೆ ರೊನಾಲ್ಡೊ, ಮೆಸ್ಸಿ ಇಲ್ಲ? ಫುಟ್ವಾಲ್ ವಿಶ್ವಕಪ್ ಗೆ ಭಾರತ ಯಾಕಿಲ್ಲ?

04:48 PM Nov 17, 2022 | ಕೀರ್ತನ್ ಶೆಟ್ಟಿ ಬೋಳ |

ಟಿ20 ಕ್ರಿಕೆಟ್ ಹವಾ ಕಡಿಮೆಯಾಗುತ್ತಿದ್ದಂತೆ ಫಿಫಾ ಜ್ವರ ಶುರುವಾಗಿದೆ. ಇನ್ನೇನಿದ್ದರೂ ವಿಶ್ವದೆಲ್ಲೆಡೆ ತಿಂಗಳ ಕಾಲ ಕಾಲ್ಚೆಂಡು ಆಟದ್ದೇ ಮಾತು. ವಿಶ್ವದ ಬಲಾಢ್ಯ 32 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಅರಬ್ಬರ ನಾಡಿನಲ್ಲಿ ನಡೆಯುವ ಈ ಫುಟ್ಬಾಲ್ ಮಹಾ ಯಜ್ಞದ ದಿಶೆಯಲ್ಲಿ ಭಾರತೀಯ ಫುಟ್ಬಾಲ್ ನ ಏಳು ಬೀಳುಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

Advertisement

ಸದ್ಯ ಆಡುತ್ತಿರುವ ಭಾರತೀಯ ಫುಟ್ಬಾಲ್ ಆಟಗಾರರ ಹೆಸರು ಹೇಳಿ ಎಂದರೆ ಹೆಚ್ಚಿನವರ ಪಟ್ಟಿ ಸುನೀಲ್  ಛೇಟ್ರಿ ಬಳಿಕ ನಿಲ್ಲುತ್ತಿದೆ. ಛೇಟ್ರಿ ಬಿಟ್ಟರೆ ಉಳಿದ ರಾಷ್ಟ್ರೀಯ ಆಟಗಾರರ ಹೆಸರೇ ಬಹುತೇಕರಿಗೆ ತಿಳಿದಿಲ್ಲ. ಕ್ರೀಡೆಯನ್ನು ಇಷ್ಟ ಪಡುವ ಈ ದೇಶದಲ್ಲಿ ಇದೊಂದು ದುರಂತವೇ ಸರಿ.

ಕ್ರಿಕೆಟ್ ನಂತೆಯೇ ಫುಟ್ಬಾಲ್ ಕೂಡಾ ಬ್ರಿಟೀಷರ ಕೊಡುಗೆಯೇ. ಅವರ ಕಾಲೊನಿಗಳಲ್ಲಿ ಆರಂಭವಾದ ಆಟ ನಿಧಾನವಾಗಿ ಪ್ರಚಾರ ಪಡೆಯಿತು. 1893ರಲ್ಲಿ ಇಂಡಿಯನ್ ಫುಟ್ಬಾಲ್ ಅಸೋಸಿಯೇಶನ್ ಆರಂಭವಾದರೂ 1930ರವರೆಗೆ ಅದರಲ್ಲಿ ಒಬ್ಬ ಭಾರತೀಯನೂ ಇರಲಿಲ್ಲ ಎನ್ನುವುದು ವಿಪರ್ಯಾಸ. ಭಾರತ ತಂಡದಲ್ಲಿ ಬ್ರಿಟಿಷರೇ ಆಡುತ್ತಿದ್ದರು. ನಂತರ ಭಾರತೀಯ ಆಟಗಾರರು ತಂಡ ಸೇರಿದರೂ ಕೂಡಾ ಅವರಿಗೆ ಧರಿಸಲು ಶೂಗಳ ವ್ಯವಸ್ಥೆಯೂ ಇರಲಿಲ್ಲ. ಖಾಲಿ ಕಾಲಿನಲ್ಲಿ ಆಡಬೇಕಿತ್ತು.

ಅರ್ಹತೆ ಪಡೆದರೂ ಆಡಲಿಲ್ಲ

ಭಾರತೀಯ ಫುಟ್ಬಾಲ್ ತಂಡ ಇದುವರೆಗೂ ಫುಟ್ಬಾಲ್ ವಿಶ್ವಕಪ್ ಆಡಿಲ್ಲ ಎನ್ನುವುದು ಸತ್ಯ. ಆದರೆ ಒಮ್ಮೆ ಕೂಟಕ್ಕೆ ಅರ್ಹತೆ ಪಡೆದಿತ್ತು. ಅದು 1950ರಲ್ಲಿ. ಅದಕ್ಕೂ ಮೊದಲು 1948ರಲ್ಲಿ ಭಾರತ ತಂಡವು ಬರಿಗಾಲಿನಲ್ಲೇ ಒಲಿಂಪಿಕ್ಸ್ ನಲ್ಲಿ ಆಡಿತ್ತು. ಇದಾದ ಬಳಿಕ ಫಿಫಾ ಬರಿಗಾಲಿನಲ್ಲಿ ಆಡುವುದನ್ನು ನಿಷೇಧ ಮಾಡಿತ್ತು. 1950ರಲ್ಲಿ ಬ್ರೆಜಿಲ್ ವಿಶ್ವಕಪ್ ಗೆ ಭಾರತ ತಂಡ ಅರ್ಹತೆ ಪಡೆದಾಗ ಇದೇ ಕಾರಣ ನೀಡಿ (ಬರಿಗಾಲಿಗೆ ನಿಷೇಧ) ತಂಡವನ್ನು ಕಳುಹಿಸಲೇ ಇಲ್ಲ. ಆದರೆ ಇದೆಲ್ಲಾ ಸುಳ್ಳು ಎನ್ನುತ್ತಾರೆ ಆಗಿನ ತಂಡದ ನಾಯಕ ಶೈಲೆನ್ ಮನ್ನಾ. ‘ದೂರದ ಬ್ರೆಜಿಲ್ ಗೆ ತಂಡವನ್ನು ಕಳುಹಿಸಲು ಫೆಡರೇಶನ್ ಬಳಿ ಹಣದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸಿಕ್ಕ ಏಕೈಕ ಅವಕಾಶವನ್ನು ಬಿಡಲಾಯಿತು. ಬಳಿಕ ಅದನ್ನು ಕವರ್ ಮಾಡಲು ಶೂ ಕಡ್ಡಾಯ ಎಂಬ ನಿಯಮದ ನೆಪ ಹೇಳಲಾಯಿತು’ ಎನ್ನುತ್ತಾರೆ ಮನ್ನಾ. ಇದರ ಬಳಿಕ ಭಾರತ ಎಂದೂ ಅರ್ಹತೆಯನ್ನೂ ಪಡೆಯಲಿಲ್ಲ.

Advertisement

ಆದರೆ ಆ ಸಮಯ ಭಾರತೀಯ ಫುಟ್ಬಾಲ್ ನ ಸುವರ್ಣ ಯುಗ ಎಂದರೆ ತಪ್ಪಿಲ್ಲ. 1951ರ ಏಶ್ಯನ್ ಗೇಮ್ಸ್ ನಲ್ಲಿ ಭಾರತ ತಂಡ ಮೊದಲ ಚಿನ್ನ ಗಳಿಸಿತು. ಅದೂ ಶೂ ಧರಿಸಿ ಆಡಿದ್ದ ಇರಾನ್ ತಂಡವನ್ನು ಸೋಲಿಸಿ. 1956ರ ಮೆಲ್ಬರ್ನ್ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಸಲ ಸೆಮಿ ಫೈನಲ್ ಪ್ರವೇಶಿಸಿತು. (ಬೂಟ್ ಧರಿಸಿ ಆಡಿ). ಈ ಸಾಧನೆ ಮಾಡಿದ್ದ ಏಶ್ಯಾದ ಮೊದಲ ತಂಡವಾಗಿತ್ತು. ಆದರೆ 1960ರ ಕಾಲದ ಬಳಿಕ ಭಾರತ ಫುಟ್ಬಾಲ್ ನ ಬೆಳವಣಿಕೆ ಕುಂಠಿತವಾಯಿತು. ವಿಶ್ವದ ಇತರ ದೇಶಗಳು ಫುಟ್ಬಾಲ್ ನಲ್ಲಿ ವೇಗವಾಗಿ ಪ್ರಗತಿ ಸಾಧಿಸಿದರೂ ಭಾರತ ತುಂಬಾ ಹಿಂದೆಯೇ ಉಳಿಯಿತು

ಇತ್ತೀಚಿನ ದಿನಗಳಲ್ಲಿ ಭಾರತೀಯ ಫುಟ್ಬಾಲ್ ನಲ್ಲಿ ಭಾರೀ ಬದಲಾವಣೆಯಾಗಿದೆ. ಕಳೆದೊಂದು ದಶಕದಲ್ಲಿ ದೇಶದಲ್ಲೇ ಲೀಗ್ ಗಳು ಆರಂಭವಾಗಿ ಹೆಚ್ಚಿನ ಬೆಂಬಲವೂ ಸಿಗಲಾರಂಭಿಸಿದೆ. ಆದರೂ ಭಾರತದ ಫುಟ್ಬಾಲ್ ಗುಣಮಟ್ಟದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ವಿಶ್ವಕಪ್ ಪ್ರವೇಶ ಎನ್ನುವುದು ಇನ್ನೂ ಮರೀಚಿಕೆಯೇ ಆಗಿದೆ.

2006 ರಲ್ಲಿ, ಆಗಿನ ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಭಾರತವನ್ನು ಫುಟ್ಬಾಲ್ ಜಗತ್ತಿನ ‘ಮಲಗಿರುವ ದೈತ್ಯ’ ಎಂದು ಬಣ್ಣಿಸಿದ್ದರು. ಆದರೆ ಫಿಫಾ ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆಯಲು ಭಾರತೀಯ ಫುಟ್ಬಾಲ್ ಸಾಕಷ್ಟು ದೂರ ಸಾಗಬೇಕಿದೆ ಎಂಬುದು ಸತ್ಯ.

ಮೂಲಭೂತ ಸೌಕರ್ಯಗಳ ಕೊರತೆ ಮತ್ತು ದೂರದೃಷ್ಟಿ ಇಲ್ಲದಿರುವುದು ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಅಡ್ಡಿಯಾಗುವ ಎರಡು ದೊಡ್ಡ ಅಂಶಗಳು ಎಂದು ನಾವು ಪರಿಗಣಿಸಬಹುದು. ಭಾರತದ ಕೆಲವು ದೊಡ್ಡ ಕ್ಲಬ್ ಗಳು ಆಟಗಾರರಿಗೆ ಸರಿಯಾದ ತರಬೇತಿ ಮತ್ತು ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಹೊಂದಿಲ್ಲ ಎಂದರೆ ನಂಬಲೇ ಬೇಕು. ಇದು ಖಂಡಿತವಾಗಿಯೂ ಭಾರತೀಯ ಫುಟ್ಬಾಲ್ ಸಂಸ್ಥೆಯ ವೈಫಲ್ಯ. ಇಷ್ಟೆಲ್ಲಾ ಆದರೂ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಕನಿಷ್ಠ ಹತ್ತು ಕ್ರೀಡಾಂಗಣಗಳೂ ಭಾರತದಲ್ಲಿಲ್ಲ.

ಭಾರತದಲ್ಲಿ ಫುಟ್ಬಾಲ್ ಯಾಕೆ ಉನ್ನತಿ ಕಂಡಿಲ್ಲ ಎಂದರೆ ಪ್ರಮುಖ ಕಾರಣ ಕ್ರಿಕೆಟ್. ಭಾರತದಲ್ಲಿ ಕ್ರಿಕೆಟ್ ಆಟದ ಎದುರು ಉಳಿದ ಕ್ರೀಡೆಗಳು ಮಂಕಾಗಿ ಕಾಣಿಸುತ್ತದೆ ಎನ್ನುವುದು ಸತ್ಯವೇ. ಆದರೆ ಇದರ ನಡುವೆ ಜವಾಬ್ದಾರಿಯುತ ಸಂಸ್ಥೆಗಳು ಕಾಲ್ಚೆಂಡು ಆಟದ ಸರಿಯಾದ ಪ್ರಚಾರ ಮಾಡಿಲ್ಲ ಎನ್ನುವುದು ಕೂಡಾ ನಿಜವೇ. ಈಗಲೂ ಭಾರತೀಯ ಲೀಗ್ ಕೂಟದ ಕೋಲ್ಕತ್ತಾದಲ್ಲಿ ನಡೆಯುವ ಆಟದಲ್ಲಿ ಮಾತ್ರ ಸ್ಟೇಡಿಯಂ ತುಂಬಿರುತ್ತದೆ. ಉಳಿದದೆಲ್ಲಾ ನೀರಸವೇ.

ಭಾರತದಲ್ಲಿ ಕ್ರಿಕೆಟ್ ಹೊರತಾಗಿ ಆಟವನ್ನು ಕೆರಯರ್ ನಂತೆ ನೋಡುವುದು ತೀರಾ ಕಡಿಮೆ. ಕಷ್ಟವು ಹೌದು. ಕೆಲವೇ ಅಂತಾರಾಷ್ಟ್ರೀಯ ಪಂದ್ಯವಾಡಿದರೆ, ಅಥವಾ ಒಂದು ಐಪಿಎಲ್ ಆಡಿದರೆ ಆತನ ಲೈಫ್ ಸೆಟ್ ಆಗುತ್ತದೆ ಎಂಬ ನಂಬಿಕೆಯಿದೆ. ಆದರೆ ಜೀವವನ್ನೇ ಫುಟ್ಬಾಲ್ ಗೆ ಪಣಕ್ಕಿಟ್ಟರೂ ತಾನು ಹಣ ಗಳಿಸಬಹುದು ಎಂಬ ಖಾತ್ರಿ ಭಾರತದಲ್ಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ಆಕರ್ಷಣೆ ಇದ್ದರೂ ಭಾರತದಲ್ಲಿ ಇನ್ನೂ ಕಮರ್ಷಿಲ್ ಯಶಸ್ಸು ತಂದಿಲ್ಲ. ಇದೆಲ್ಲಾ ಆದರೆ ಯಾವುದೇ  ಹಳ್ಳಿಯ ಬಾಲಕನೋರ್ವ ತಾನೂ ಫುಟ್ಬಾಲ್ ಆಟವನ್ನು ವೃತ್ತಿಯಾಗಿ ಪರಿಗಣಿಸಬಹುದು. ಭಾರತೀಯ ಫುಟ್ಬಾಲ್ ಬೆಳೆಯಬಹುದು. ಮುಂದೊಂದು ದಿನ ಫಿಫಾ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾರತೀಯ ಧ್ವಜವೂ ರಾರಾಜಿಸ ಬಹುದು.

ಕೀರ್ತನ್ ಶೆಟ್ಟಿ ಬೋಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next