Advertisement

ಚಿನ್ನ, ಬೆಳ್ಳಿ ಗಿಫ್ಟ್ ಯಾಕೆ?ವಿಧಾನಮಂಡಲ ವಜ್ರಮಹೋತ್ಸವ ವಿವಾದ

09:45 AM Oct 16, 2017 | Team Udayavani |

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಆಚರಣೆ ಸಂದರ್ಭದಲ್ಲಿ ಶಾಸಕರಿಗೆ ಚಿನ್ನದ ನಾಣ್ಯವನ್ನು ಕೊಡುವ ಸಚಿವಾಲಯದ ನಿರ್ಧಾರಕ್ಕೆ ಈಗ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮೂರೂ ಪಕ್ಷಗಳ ನಾಯಕರು ಚಿನ್ನದ ಉಡುಗೊರೆಯನ್ನು ತಿರಸ್ಕರಿಸಲು ಮುಂದಾಗಿದ್ದಾರೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ ಎಲ್ಲ 300 ಶಾಸಕರಿಗೆ ಚಿನ್ನದ ನಾಣ್ಯವನ್ನು ಹಾಗೂ ಸಚಿವಾಲಯದ ಎಲ್ಲ ಸಿಬ್ಬಂದಿಗೆ ಬೆಳ್ಳಿ ತಟ್ಟೆಯನ್ನು ಉಡುಗೊರೆ ರೂಪದಲ್ಲಿ ಕೊಡಲು ವಿಧಾನ ಮಂಡಲ ಸಚಿವಾಲಯ ನಿರ್ಧರಿಸಿತ್ತು.

Advertisement

ಮೊದಲೇ ಸ್ಪೀಕರ್‌ ಕಚೇರಿ ಮತ್ತು ಸರ್ಕಾರದ ನಡುವಿನ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾಗಿರುವ ವಜ್ರಮಹೋತ್ಸವ ಈಗ ಮತ್ತೂಂದು ವಿವಾದಕ್ಕೆ ಕಾರಣವಾಗುತ್ತಿದೆ. ವಿಧಾನ ಮಂಡಲ ಸಚಿವಾಲಯದ ನಿರ್ಧಾರವನ್ನು ಸ್ವತಃ ಮುಖ್ಯಮಂತ್ರಿಗಳೇ ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ದುಂದು ವೆಚ್ಚದಲ್ಲಿ ಆಚರಣೆಗೆ ಹಣಕಾಸು ಇಲಾಖೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. “”ವಜ್ರಮಹೋತ್ಸವಕ್ಕೆ ಮೀಸಲಿಟ್ಟಿರುವ ಹಣದಲ್ಲಿಯೇ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಿಲ್ಲವೇ?
ಇಷ್ಟೊಂದು ದುಬಾರಿ ಉಡುಗೊರೆ ನೀಡುವ ಅಗತ್ಯ ಏನಿದೆ,” ಎಂದು ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರು, “”ಈ ವಿಚಾರದಲ್ಲಿ ಮುಖ್ಯಮಂತ್ರಿ ತಮ್ಮ ಅಭಿಪ್ರಾಯ ತಿಳಿಸಿರಬಹುದು. ಆದರೆ, ಅಂತಿಮ ತೀರ್ಮಾನವನ್ನು ವಿಧಾನಸಭಾಧ್ಯಕ್ಷರೇ ಕೈಗೊಳ್ಳುತ್ತಾರೆ” ಎಂದಿದ್ದಾರೆ. 

ಸಚಿವ ಎಂ. ಕೃಷ್ಣಪ್ಪ ಅವರು ಉಡುಗೊರೆ ಕೊಡುವ ಕ್ರಮದ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರು ತಮ್ಮ ಪಕ್ಷದ ಶಾಸಕರಿಗೆ ಚಿನ್ನದ ನಾಣ್ಯ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರಮುಖ ನಾಯಕರೂ ಈ ಪ್ರಸ್ತಾವನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನ ಸಭೆ ಪ್ರತಿ ಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, “” ಚಿನ್ನದ ನಾಣ್ಯ ನೀಡಿದರೆ ಜನ ಛೀ, ಥೂ ಅನ್ನಬಹುದು ” ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌ ಆರ್‌ ಪಾಟೀಲರು ಪ್ರತಿಕ್ರಿಯಿಸಿ, “”ಈ ಕಾರ್ಯಕ್ರಮದ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಬೇಕು. ಚಿನ್ನದ ನಾಣ್ಯ, ಬೆಳ್ಳೆ ತಟ್ಟೆ ಉಡುಗೊರೆಯ ಅದ್ಧೂರಿ ಕಾರ್ಯಕ್ರಮ ಮಾಡುವುದರಿಲ್ಲ ಅರ್ಥವಿಲ್ಲ” ಎಂದು ನೇರವಾಗಿ ಹೇಳಿದ್ದಾರೆ. ವಿಧಾನ ಸಭೆಯಲ್ಲಿ ಬಿಜೆಪಿ ಸಚೇತಕ ವಿ.ಸುನಿಲ್‌ ಕುಮಾರ್‌, ಈ ನಿರ್ಧಾರ ಬಗ್ಗೆ ಮರು ಚಿಂತನೆ ಮಾಡಲು ಅಗ್ರಹಿಸಿದ್ದಾರೆ.

ಇದು ಒಳ್ಳೆಯ ಬೆಳವಣಿಗೆಯಲ್ಲ ಇಷ್ಟು ದೊಡ್ಡ ಮೊತ್ತದಲ್ಲಿ ಶಾಸಕರಿಗೆ ಕೊಡುಗೆ ಅಥವಾ ಸ್ಮರಣಿಕೆ ನೀಡುವ ಔಚಿತ್ಯ, ಅಗತ್ಯತೆ
ಏನಿತ್ತು. ಸ್ಪೀಕರ್‌ ಅಥವಾ ಸಭಾಪತಿಗಳೇ ಆಗಲಿ ಕಾನೂನಿನಿಂದ ಹೊರತಾಗಿಲ್ಲ. ಕಾನೂನಿನ ವ್ಯಾಪ್ತಿಯೊಳಗೆ ಬರುತ್ತಾರೆ.
ಸಾರ್ವಜನಿಕ ಹಣದ ದುಂದುವೆಚ್ಚ ಸರಿಯಲ್ಲ.
 ●ರಮೇಶ್‌ ಬಾಬು,ಪರಿಷತ್‌ ಸದಸ್ಯ(ಜೆಡಿಎಸ್‌)

ವಿಧಾನಸೌಧದ ವಜ್ರ ಮಹೋತ್ಸವ ಆಚರಿಸುತ್ತಿರುವುದು ಒಳ್ಳೆಯ ಕಾರ್ಯ. ಆದರೆ, ಅದರ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಮನಸ್ಸಿಗೆ ಬಂದಂತೆ ಖರ್ಚು ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ. ರೈತರು ಸಂಕಷ್ಟದಲ್ಲಿರುವಾಗ, ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಕ್ಕಿರುವಾಗ ವಜ್ರಮಹೋತ್ಸವದ ನೆನಪಿಗಾಗಿ ಚಿನ್ನದ ನಾಣ್ಯಗಳನ್ನು ನೀಡುವುದು ಸರಿಯಲ್ಲ. ಒಂದು ಚಿಕ್ಕ ಪುಸ್ತಕವಾದರೂ ನೆನಪುಗಳನ್ನು ಕಟ್ಟಿಕೊಡುತ್ತದೆ.
 ●ಸಿ.ಟಿ.ರವಿ, ಬಿಜೆಪಿ ಶಾಸಕ

Advertisement

ರಾಜ್ಯದ ಹಿತದೃಷ್ಟಿಯಿಂದ ಇದು ಸರಿಯಲ್ಲ. ಜನ ಸಾಮಾನ್ಯರ ದೃಷ್ಟಿಯಲ್ಲಿ ನಾವು ಜನ ಪ್ರತಿನಿಧಿಗಳು. ಈ ರೀತಿ ಉಡುಗೊರೆ ಪಡೆದರೆ ನಮ್ಮನ್ನು ಬೇರೆ ರೀತಿ ನೋಡುತ್ತಾರೆ. ಕಾರ್ಯಕ್ರಮದ ಹೆಸರಿನಲ್ಲಿ ಚಿನ್ನದ ನಾಣ್ಯ ನೀಡುವುದು ಸರಿಯಲ್ಲ. ರಾಜಕಾರಣಿಗಳು ಸಾಮಾಜಿಕ ಚೌಕಟ್ಟನ್ನು ಮೀರ ಬಾರದು. ಈ ಬಗ್ಗೆ ಸಾರ್ವಜನಿಕವಾಗಿ ಯೋಚಿಸುವ ಅಗತ್ಯವಿದೆ.
 ●ಎಂ.ಕೃಷ್ಣಪ್ಪ, ವಸತಿ ಸಚಿವ

ಮೊದಲೇ ಶಾಸನಸಭೆಗೆ ಶಾಸಕರು ಬರುತ್ತಿಲ್ಲ, ಸದನ ಸರಿಯಾಗಿ ನಡೆಯುತ್ತಿಲ್ಲ ಎಂದು ಜನ ಕೋಪಗೊಂಡಿದ್ದಾರೆ. ಹೀಗಿರುವಾಗ
ವಜ್ರಮಹೋತ್ಸವದ ಹೆಸರಿನಲ್ಲಿ ಚಿನ್ನದ ನಾಣ್ಯ ನೀಡಿದರೆ ಅವರ ಕೋಪ ಇನ್ನಷ್ಟು ಹೆಚ್ಚುತ್ತದೆ. ಅಲ್ಲದೆ, ಇದು ಒಳ್ಳೆಯ ಶಖೆಯೂ ಅಲ್ಲ.
ಚಿನ್ನದ ನಾಣ್ಯದ ಬದಲು ಸದನ ಮತ್ತು ವಿಧಾನಸಭೆ ಬೆಳವಣಿಗೆ ಕುರಿತ ಪುಸ್ತಕ ಕೊಟ್ಟರೆ ಅದು ಸೂಕ್ತವಾಗಿರುತ್ತದೆ. ಚಿನ್ನದ ನಾಣ್ಯ ಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ.
 ●ಎಸ್‌.ಸುರೇಶ್‌ಕುಮಾರ್‌, ಬಿಜೆಪಿ ಹಿರಿಯ ಶಾಸಕ

ರಾಜ್ಯದ ಜನರ ಸಂಕಷ್ಟ ಅರಿತು ಪರಿಹರಿಸುವ ಬದಲು ಬೆಳ್ಳಿ-ಬಂಗಾರ ಕೊಟ್ಟು ಅದ್ಧೂರಿಯಾಗಿ ವಿಧಾನಸೌಧದ ವಜ್ರಮಹೋತ್ಸವ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಅದಕ್ಕಾಗಿ ಕೋಟ್ಯಂತರ ಹಣ ವ್ಯಯಿಸುತ್ತಿರುವುದೂ ಒಳ್ಳೆಯದಲ್ಲ.
 ●ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ನಾವ್ಯಾರೂ ಚಿನ್ನದ ನಾಣ್ಯ ಕೇಳಿಲ್ಲ. ಅದನ್ನು ತೆಗೆದುಕೊಳ್ಳುವುದು ಸರಿಯಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಚಿನ್ನದ ನಾಣ್ಯ ಉಡುಗೊರೆ ಸಹ್ಯವೂ ಅಲ್ಲ. ಕಾರ್ಯಕ್ರಮ ಮಾಡಿ, ಸಾಧಕರಿಗೆ ಸನ್ಮಾನ ಮಾಡಿದರೆ ಸಾಕಾಗುತ್ತದೆ.
 ●ಕೆ.ಗೋಪಾಲಯ್ಯ, ಜೆಡಿಎಸ್‌ ಶಾಸಕ 

ಶಾಸಕರಿಗೆ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡುವ ಅಗತ್ಯವಾದರೂ ಏನಿದೆ. ಈ ವಿಚಾರವಾಗಿ ನಮ್ಮ ಪಕ್ಷದ ಶಾಸಕಾಂಗ ಸಭೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. 
 ●ಕೋಟಾ ಶ್ರೀನಿವಾಸ ಪೂಜಾರಿ, ಮೇಲ್ಮನೆ ಸದಸ್ಯ ಬಿಜೆಪಿ

ಕೆಂಗಲ್‌ ಹನುಮಂತನಯ್ಯನವರು ಕಟ್ಟಿದ ವಿಧಾನಸೌಧಕ್ಕೆ ಬರುವುದೇ ನಮ್ಮ ಅದೃಷ್ಟ. ಅದರ  ವಜ್ರಮಹೋತ್ಸವಕ್ಕೆ ಆಡಂಬರ ಮಾಡುವ ಅಗತ್ಯವಿಲ್ಲ. ಅಬ್ಬರದ ಆಚರಣೆ ಮಾಡಿದರೂ, ಬಂಗಾರದ ನಾಣ್ಯ ಉಡುಗೊರೆ ಕೊಡುವ ಬದಲು ವಿಧಾನಸೌಧದ ನೆನಪು
ಉಳಿಯುವ ಪುಸ್ತಕ ಕೊಟ್ಟರೆ ಸಾಕು.
 ●ನರೇಂದ್ರ ಸ್ವಾಮಿ, ಕಾಂಗ್ರೆಸ್‌ ಶಾಸಕ

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷ ಸತತ ಬರಗಾಲವಿತ್ತು. ಈಗ ಮಳೆಯಿಂದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ 50 ಸಾವಿರ ಬೆಲೆಯ ಚಿನ್ನದ ನಾಣ್ಯ ನೀಡುವ ಪದ್ಧತಿ ಸರಿಯಲ್ಲ.
 ●ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

ನಮಗೆ ಚಿನ್ನದ ನಾಣ್ಯದ ಅವಶ್ಯಕತೆ ಇಲ್ಲ. ನೀಡಿದರೂ ಅದನ್ನು ತೆಗೆದುಕೊಳ್ಳುವುದಿಲ್ಲ. ಇಂಥ ಆಲೋಚನೆ ಹೇಗೆ ಬಂತು ಎಂಬುದೇ ದೊಡ್ಡ ಪ್ರಶ್ನೆ.
 ●ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ

ವಜ್ರಮಹೋತ್ಸವ ಸ್ವಾಗತಾರ್ಹ. ಆದರೆ, ಅಷ್ಟೊಂದು ದುಡ್ಡು ಖರ್ಚು ಮಾಡುವ ಅಗತ್ಯವಿಲ್ಲ. ವಿಧಾನಸೌಧದಲ್ಲಿ ಎಲ್ಲರೂ 
ಕೊಳ್ಳೆಹೊಡೆಯುವವರೇ ಇದ್ದಾರೆ ಎಂದು ಜನ ಭಾವಿಸುವಂತಾಗಬಾರದು. ಚಿನ್ನದ ನಾಣ್ಯ, ಬೆಳ್ಳಿತಟ್ಟೆ ಉಡುಗೊರೆಯ ಅದ್ಧೂರಿ
ಕಾರ್ಯಕ್ರಮ ಮಾಡುವುದರಲ್ಲಿ ಅರ್ಥವಿಲ್ಲ 
 ●ಎಸ್‌.ಆರ್‌.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next