Advertisement

2002ರಲ್ಲಿ ನರೇಂದ್ರ ಮೋದಿ ವಿಧಾನಸಭೆ ವಿಸರ್ಜಿಸಿದ್ದೇಕೆ?

06:00 AM Oct 12, 2018 | Team Udayavani |

ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿಗೆ ಹೆದರಿ ವಿಧಾನಸಭೆ ವಿಸರ್ಜಿಸಲಾಯಿತು ಎಂಬ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಲೇವಡಿಗೆ ತೆಲಂಗಾಣ ರಾಷ್ಟ್ರ ಸಮಿತಿ ಆಕ್ಷೇಪ ಮಾಡಿದೆ. 2002ರಲ್ಲಿ ಗುಜರಾತ್‌ನಲ್ಲಿ ಅವಧಿಗಿಂತ ಮೊದಲೇ ಚುನಾವಣೆ ನಡೆಸಲು ಯಾಕೆ ನಿರ್ಧಾರ ಕೈಗೊಂಡಿರಿ ಎಂದು ಟಿಆರ್‌ಎಸ್‌ ನಾಯಕ ಬಿ.ವಿನೋದ್‌ ಕುಮಾರ್‌ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ. “ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ, ಎನ್‌.ಟಿ.ರಾಮರಾವ್‌, ಚಂದ್ರಬಾಬು ನಾಯ್ಡು ಕೂಡ ಅವಧಿಗಿಂತ ಮೊದಲೇ ಚುನಾವಣೆ ಘೋಷಣೆ ಮಾಡಿದ್ದರು. ಹಿಂದಿನ ಕ್ರಮಗಳಂತೆಯೇ ನಮ್ಮ ಪಕ್ಷದ ನಾಯಕ ಕೆ.ಚಂದ್ರಶೇಖರ ರಾವ್‌ ನಿರ್ಧಾರ ಕೈಗೊಂಡಿದ್ದಾರೆ.  2002ರಲ್ಲಿಯೂ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೂ ಅವಧಿಗಿಂತ ಮೊದಲು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದ್ದರು. ಅದಕ್ಕೆ ಪ್ರಧಾನಿ ಮೊದಲು ಉತ್ತರ ಕೊಡಬೇಕು ಎಂದು ಸವಾಲು ಹಾಕಿದ್ದಾರೆ. 

Advertisement

ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡುವ ಬಗ್ಗೆ ಟಿಆರ್‌ಎಸ್‌ ವಾಗ್ಧಾನ ಮಾಡಿತ್ತು ಎಂಬ ಶಾ ಟೀಕೆಗೆ ಉತ್ತರಿಸಿದ ಅವರು, “ಕೆಸಿಆರ್‌ 2014ರಲ್ಲಿ ಅಂಥ ತೀರ್ಮಾನವನ್ನೇ ಕೈಗೊಂಡಿರಲಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಹಿಂದಿನ ಚುನಾವಣೆ ವೇಳೆ ಪಕ್ಷದ ವತಿ ಯಿಂದ ಘೋಷಣೆ ಮಾಡಲಾಗಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ದೇವೆ ಎಂದು ವಿನೋದ್‌ ಕುಮಾರ್‌ ಹೇಳಿಕೊಂಡಿದ್ದಾರೆ. 

ಶೀಘ್ರ ತೀರ್ಮಾನಕ್ಕೆ ಒತ್ತಾಯ:  ಕಾಂಗ್ರೆಸ್‌, ಟಿಡಿಪಿ ಜತೆಗೆ ತೆಲಂಗಾಣದಲ್ಲಿ ಮೈತ್ರಿಗೆ ಮುಂದಾಗಿರುವ ತೆಲಂಗಾಣ ಜನ ಸಮಿತಿ (ಟಿಜೆಎಸ್‌)ಸ್ಥಾನ ಹೊಂದಾಣಿಕೆ ಬಗ್ಗೆ ಇರುವ ವಿಚಾರಗಳನ್ನು ಮೊದಲು ಬಗೆ ಹರಿಸಿ ಕೊಳ್ಳಬೇಕು ಎಂದು ಒತ್ತಾಯಿಸಿದೆ. ಪಕ್ಷದ ಅಧ್ಯಕ್ಷ ಎಂ.ಕೋದಂಡರಾಮಂ ಮಾತನಾಡಿ ಕಾಂಗ್ರೆಸ್‌ ಕ್ಷಿಪ್ರವಾಗಿ ಸ್ಥಾನ ಹೊಂದಾಣಿಕೆ ಮತ್ತು ಇತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇಂದಿನಿಂದ ಶಾ ಛತ್ತೀಸ್‌ಗಡ ಪ್ರವಾಸ
ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶುಕ್ರವಾರ ಮತ್ತು ಶನಿವಾರ ಛತ್ತೀಸ್‌ಗಡ ಪ್ರವಾಸ ಕೈಗೊಳ್ಳಲಿದ್ದಾರೆ. ನಾಲ್ಕು ಸ್ಥಳಗಳಲ್ಲಿ ಅವರು ಬೂತ್‌ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಬಿಜೆಪಿ ಅಧ್ಯಕ್ಷರು ಮೂರನೇ ಬಾರಿಗೆ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ ಅವರು ಪರಾಮರ್ಶೆ ನಡೆಸಲಿದ್ದಾರೆ. 90 ಸದಸ್ಯರ ವಿಧಾನಸಭೆಗೆ ನ.12, ನ.20ರಂದು ಮತದಾನ ನಡೆಯಲಿದೆ. 2003ರಿಂದ ಬಿಜೆಪಿ ಅಧಿಕಾರದಲ್ಲಿದೆ. 

ನಾಳೆ ಮಾಯಾವತಿ ರ್ಯಾಲಿ
ಮಾಜಿ ಸಿಎಂ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸ್‌ಗಡ (ಜೆಸಿಸಿ)ಜತೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಶನಿವಾರ ಜಂಟಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಬಿಲಾಸ್ಪುರದಲ್ಲಿ ಬೃಹತ್‌ ಕಾರ್ಯಕ್ರಮ ನಡೆಯಲಿದೆ. ಒಪ್ಪಂದದ ಪ್ರಕಾರ ಬಿಎಸ್‌ಪಿ 35, ಜೆಸಿಸಿ 55 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next