Advertisement

ಉಗ್ರ ಸಂಪರ್ಕವೇ ನಿಷೇಧಕ್ಕೆ ಕಾರಣ; ಪಿಎಫ್ಐ ನಿಷೇಧಕ್ಕೆ ಸ್ಪಷ್ಟನೆ ಕೊಟ್ಟ ಕೇಂದ್ರ ಸರಕಾರ

11:55 PM Sep 28, 2022 | Team Udayavani |

ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ)ದ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ. ಜತೆಗೆ ಅದರ ಸಹವರ್ತಿ ಸಂಘಟನೆಗಳ ಮೇಲೆ ಕೂಡ ಪ್ರಹಾರ ಮಾಡಿದೆ. ಉಗ್ರರಿಗೆ ವಿತ್ತೀಯ ನೆರವು ನೀಡಿದ ಆರೋಪ ಮತ್ತು ಜಗತ್ತಿನ ಉಗ್ರ ಸಂಘಟನೆಗಳ ಜತೆಗೆ ಬಾಂಧವ್ಯ ಹೊಂದಿರುವ ಹಿನ್ನೆಲೆಯಲ್ಲಿ ನಿಷೇಧ ಮಾಡಲಾಗಿದೆ ಎಂದು ಆದೇಶದಲ್ಲಿ ಕೇಂದ್ರ ಸರಕಾರ ಹೇಳಿಕೊಂಡಿದೆ. ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರದ ಗೃಹ ಸಚಿವಾಲಯ ಮತ್ತು ಇಂಟೆಲಿಜೆನ್ಸ್‌ ಬ್ಯೂರೋ ಈ ಕೆಳಗಿನ ಕಾರಣಗಳನ್ನು ನೀಡಿದೆ.

Advertisement

1. ಪ್ರಬಲ ಮೂಲ
ಭೂತವಾದಿ ಸಂಘಟನೆ
ಪಿಎಫ್ಐ ದೇಶದ ಅತ್ಯಂತ ಪ್ರಬಲ ಮೂಲಭೂತವಾದಿ ಸಂಘಟ ನೆಗಳಲ್ಲಿ ಒಂದಾಗಿದೆ. ಅದರ ಸದಸ್ಯರು ಹಲವು ಹಿಂಸಾಕೃತ್ಯಗಳು, ಕಾನೂನುಬಾಹಿರ, ಭಯೋತ್ಪಾದನ ಕೃತ್ಯಗಳಲ್ಲಿ ತೊಡಗಿಸಿಕೊಂಡಿ ದ್ದಾರೆ. ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು 17ಕ್ಕಿಂತಲೂ ಅಧಿಕ ರಾಜ್ಯಗಳಲ್ಲಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡಿವೆ. ದೇಶದ ವಿವಿಧ ವರ್ಗಗಳ ನಡುವೆ ಶಾಂತಿ, ಸೌಹಾರ್ದತೆ ಕದಡುವಂಥ ಕೃತ್ಯಗಳನ್ನು ನಡೆಸಲು ಸದಸ್ಯರಿಗೆ ಕುಮ್ಮಕ್ಕು ನೀಡುತ್ತಿದೆ. ಈ ಮೂಲಕ ದೇಶದ ಜಾತ್ಯತೀತ ವಾತಾವರಣಕ್ಕೆ ಧಕ್ಕೆ ತರಲು ಮುಂದಾಗುತ್ತಿದೆ. ಹೀಗಾಗಿ, ಆ ಸಂಘಟನೆಯನ್ನು ನಿಷೇಧಿತ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ಅನ್ವಯ ನಿಷೇಧಿಸಲಾಗಿದೆ.

2. ಪಿಎಫ್ಐನ ಸಹವರ್ತಿ ಸಂಘಟನೆಗಳಿಗೂ ನಿಷೇಧ
ರಿಹಾಬ್‌ ಇಂಡಿಯಾ ಫೌಂಡೇಶನ್‌ (ಆರ್‌ಐಎಫ್), ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾ (ಸಿಎಫ್ಐ), ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ), ನ್ಯಾಶನಲ್‌ ಕಾನೆ#ಡರೇಶನ್‌ ಆಫ್ ಹ್ಯೂಮನ್‌ ರೈಟ್ಸ್‌ ಆರ್ಗನೈಸೇಶನ್‌ (ಎನ್‌ಸಿಎಚ್‌ಆರ್‌ಒ), ನ್ಯಾಶನಲ್‌ ವಿಮೆನ್ಸ್‌ ಫ್ರಂಟ್‌, ಜ್ಯೂನಿಯರ್‌ ಫ್ರಂಟ್‌, ಎಂಪವರ್‌ ಇಂಡಿಯಾ ಫೌಂಡೇಶನ್‌ ಮತ್ತು ರೆಹಾಬ್‌ ಫೌಂಡೇಶನ್‌ಗಳ ಮೇಲೆ ನಿಷೇಧ ಹೇರಲಾಗಿದೆ.

3. ಹಲವು ರಾಜ್ಯಗಳಲ್ಲಿ ಕ್ರಿಮಿನಲ್‌ ಕೇಸುಗಳು
ದೇಶದ ವಿವಿಧ ರಾಜ್ಯಗಳಲ್ಲಿ ಸಂಘಟನೆ ಮತ್ತು ಅದರ ಸದಸ್ಯರ ವಿರುದ್ಧ 1,300ಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಾಗಿದೆ. ಆಯಾ ರಾಜ್ಯಗಳ ಪೊಲೀಸ್‌ ಇಲಾಖೆ ಮತ್ತು ಎನ್‌ಐಎ ಹಲವು ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಂಡಿದೆ. ಐಪಿಸಿ ವಿವಿಧ ಕಲಂಗಳು, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಅನ್ವಯ ಕೇಸುಗಳು ದಾಖಲಾಗಿವೆ.

4. ಹಲವು ಭಯೋತ್ಪಾದಕ ಸಂಘಟನೆಗಳ ಜತೆಗೆ ಲಿಂಕ್‌
ಪಿಎಫ್ಐ ಅನ್ನು ಸ್ಥಾಪಿಸಿದ ಕೆಲವು ಸದಸ್ಯರು ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ)ದ ಸ್ಥಾಪನೆಗೆ ಕೂಡ ಕಾರಣರಾಗಿದ್ದಾರೆ. ಪಿಎಫ್ಐಗೆ ಜಮಾತ್‌-ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಜತೆಗೆ ಲಿಂಕ್‌ ಇದೆ. ಇದರ ಜತೆಗೆ ಜಗತ್ತಿನ ಕೆಲವೊಂದು ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಇದೆ.

Advertisement

5. ಉಗ್ರ ಸಂಘಟನೆ ಐಸಿಸ್‌ ಜತೆಗೆ ಸಂಪರ್ಕ
ಜಾಗತಿಕ ಉಗ್ರ ಸಂಘಟನೆ ಐಸಿಸ್‌ ಜತೆಗೆ ಪಿಎಫ್ಐಗೆ ನಿಕಟ ಸಂಪರ್ಕ ಇದೆ. ಸಂಘಟನೆಯ ಕೆಲವು ಸದಸ್ಯರು ವಿಶೇಷವಾಗಿ ಕೇರಳದಿಂದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌)ಗೆ ಸೇರ್ಪಡೆಯಾಗಿದ್ದಾರೆ. ಇರಾಕ್‌, ಸಿರಿಯಾ ಮತ್ತು ಅಫ್ಘಾನಿಸ್ಥಾನದಲ್ಲಿ ನಡೆದಿದ್ದ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಕೆಲವರು ಕಾರ್ಯಾಚರಣೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಐಸಿಸ್‌ಗೆ ಸೇರ್ಪಡೆಯಾದವರನ್ನು ಎನ್‌ಐಎ ಮತ್ತು ವಿವಿಧ ರಾಜ್ಯಗಳ ಪೊಲೀಸರು ಬಂಧಿಸಿದ್ದಾರೆ.

6. ಹಿಂಸಾಕೃತ್ಯಗಳಲ್ಲಿ ಭಾಗಿ
ವಿವಿಧ ರಾಜ್ಯಗಳ ಪೊಲೀಸ್‌ ಇಲಾಖೆಗಳು ನಡೆಸಿದ ತನಿಖೆಯಿಂದ ತಿಳಿದುಬಂದಿರುವ ಪ್ರಕಾರ ಹಲವು ಹಿಂಸಾಕೃತ್ಯಗಳಲ್ಲಿ ಪಿಎಫ್ಐನ ಸದಸ್ಯರು ಶಾಮೀಲಾಗಿರುವುದು ದೃಢಪಟ್ಟಿದೆ. ಜತೆಗೆ ಸಾರ್ವಜನಿಕ ಆಸ್ತಿಗೆ ಹಾನಿಯನ್ನೂ ಉಂಟು ಮಾಡಿದ್ದಾರೆ. 2021 ನ.15ರಂದು ಕೇರಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಸಂಜಿತ್‌ನನ್ನು ಸಂಘಟನೆ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಅದೇ ರೀತಿ, ಕೇರಳದವರಾದ ನಂದು (2021), ಅಭಿಮನ್ಯು (2018), ಬಬಿನ್‌ (2017)ರನ್ನು, ಕರ್ನಾಟಕದ ಶರತ್‌ ಮಡಿವಾಳ (2017), ಆರ್‌.ರುದ್ರೇಶ್‌ (2016)ರನ್ನೂ ಕೊಲೆಗೈದಿದ್ದರು. ದೈವ ನಿಂದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಕೇರಳದ ಪ್ರಾಧ್ಯಾಪಕ ಟಿ.ಜೆ.ಜೋಸೆಫ್ ಅವರ ಕೈ ಕಡಿದಿದ್ದರು.

7. ಆಂತರಿಕ ಭದ್ರತೆಗೆ ಅಪಾಯ
ದೇಶದ ಹೊರಭಾಗದಿಂದ ವಿತ್ತೀಯ ಮತ್ತು ಸೈದ್ಧಾಂತಿಕ ನೆರವಿನ ಮೂಲಕ ಸಾಂವಿಧಾನಿಕ ವ್ಯವಸ್ಥೆಗೆ ಮತ್ತು ಸಂಸ್ಥೆಗಳಿಗೆ ಪಿಎಫ್ಐ ಅಗೌರವ ತೋರಿಸುತ್ತಾ ಬಂದಿದೆ. ಇದರಿಂದಾಗಿ ಸಂಘಟನೆಯನ್ನು ದೇಶದ ಆಂತರಿಕ ಭದ್ರತೆಗೆ ಅಪಾಯ ಎಂದು ಪರಿಗಣಿಸಲಾಗಿದೆ.

8. ಭಾರೀ ಪ್ರಮಾಣದಲ್ಲಿ
ಹಣ ಸಂಗ್ರಹ, ರವಾನೆ
ಹವಾಲಾ ಜಾಲದ ಮೂಲಕ ಸಂಘಟನೆಗೆ ಹೇರಳವಾಗಿ ಹಣ ರವಾನೆಯಾಗುತ್ತಿತ್ತು. ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕೂ ಪಿಎಫ್ಐಗೆ ದೇಣಿಗೆ ಬರುತ್ತಿತ್ತು. ಜನಪರ ಕಾರ್ಯಕ್ರಮಗಳು ಎಂಬ ಸೋಗಿನ ಮೂಲಕ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಅದು ಜಮೆಯಾಗುತ್ತಿತ್ತು. ಹಲವಾರು ಬ್ಯಾಂಕ್‌ಗಳ ಶಾಖೆಗಳಲ್ಲಿ ತೆರೆಯಲಾಗಿರುವ ಖಾತೆಗಳಿಗೆ ಸೂಕ್ತ ರೀತಿಯಲ್ಲಿ ದಾಖಲೆಗಳನ್ನೇ ಸಲ್ಲಿಕೆ ಮಾಡಲಾಗಿರಲಿಲ್ಲ.

9. ಸಹವರ್ತಿ ಸಂಸ್ಥೆಗಳ ಮೂಲಕ ದೇಣಿಗೆ
ದೇಶದ ವಿವಿಧ ಭಾಗಗಳಲ್ಲಿ ವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ ಪಿಎಫ್ಐ ಹಲವು ಸಹವರ್ತಿ ಸಂಸ್ಥೆಗಳನ್ನು ರಚಿಸಿತ್ತು. ಅವುಗಳ ಮೂಲಕವೂ ಸಂಘಟನೆ ಹೇರಳವಾಗಿ ಧನ ಸಂಗ್ರಹ ಮಾಡಿತ್ತು. ಅವುಗಳ ಮೂಲ ಕವೇ ಅದು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿತ್ತು.

10. ಕೆಟ್ಟ ಕಾರಣಗಳಿಗೇ ಸುದ್ದಿ
2006ರ ನವೆಂಬರ್‌ನಲ್ಲಿ ಕೇರಳದಲ್ಲಿ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಳ್ಳುವ ಮೂಲಕ ಪಿಎಫ್ಐ ಶುರುವಾಗಿತ್ತು. ಆರಂಭದಲ್ಲಿ ಕಲ್ಲಿಕೋಟೆಯಲ್ಲಿ ಇದ್ದ ಪ್ರಧಾನ ಕಚೇರಿಯನ್ನು ಹೊಸದಿಲ್ಲಿಗೆ ಸ್ಥಳಾಂತರಿಸಲಾಗಿತ್ತು. ತುಳಿತಕ್ಕೊಳಗಾದವರ ಧ್ವನಿಯಾಗಿ ಕೆಲಸ ಮಾಡುವ ಘೋಷಣೆಯೊಂದಿಗೆ ಅದು ರೂಪುಗೊಂಡಿತ್ತು. 2012ರಲ್ಲಿ ಕೇರಳ ಸರಕಾರ ಹೈಕೋರ್ಟ್‌ಗೆ ನೀಡಿದ್ದ ಹೇಳಿಕೆಯಲ್ಲಿ “ಸಂಘಟನೆ ನಿಷೇಧಗೊಂಡಿರುವ ಸಿಮಿಯ ಧೋರಣೆಯನ್ನೇ ಹೊಂದಿದೆ’ ಎಂದು ಅರಿಕೆ ಮಾಡಿತ್ತು.

ಎಸ್‌ಡಿಪಿಐಗೆ 11 ಕೋಟಿ ದೇಣಿಗೆ!
ಪಿಎಫ್ಐನ ರಾಜಕೀಯ ಅಂಗವಾದ ಎಸ್‌ಡಿಪಿಐ (ಸೋಶಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್ ಇಂಡಿಯಾ)ಗೆ 2018-19ರಿಂದ ಈವರೆಗೆ ಬರೋಬ್ಬರಿ 11 ಕೋಟಿ ರೂ. ದೇಣಿಗೆ ಹರಿದುಬಂದಿತ್ತು ಎಂದು ಚುನಾವಣ ಆಯೋಗದ ದತ್ತಾಂಶಗಳು ತಿಳಿಸಿವೆ. ದಿಲ್ಲಿಯಲ್ಲಿ ನೋಂದಣಿಯಾಗಿರುವ ಎಸ್‌ಡಿಪಿಐ 2009ರ ಜೂನ್‌ನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 2020ರಲ್ಲಿ ಅದು ಚು. ಆಯೋಗದಲ್ಲಿ ನೋಂದಣಿ ಆಗಿತ್ತು. 2018-19ರಲ್ಲಿ ಪಕ್ಷವು 5.17 ಕೋಟಿ ರೂ. ದೇಣಿಗೆ ಪಡೆದರೆ, 2019-20ರಲ್ಲಿ 3.74 ಕೋಟಿ ರೂ., 2020-21ರಲ್ಲಿ 2.86 ಕೋಟಿ ರೂ.ಗಳನ್ನು ಪಡೆದಿತ್ತು. ಈ ಪೈಕಿ ಅತೀ ಹೆಚ್ಚಿನ ದೇಣಿಗೆ ಹರಿದುಬಂದಿದ್ದು ಕರ್ನಾಟಕ, ತಮಿಳುನಾಡು ಮತ್ತು ಕೇರಳದಿಂದ ಎಂದೂ ಆಯೋಗ ಮಾಹಿತಿ ನೀಡಿದೆ.

ಆರ್‌ಎಸ್‌ಎಸ್‌ ಕಚೇರಿಗೆ ಭದ್ರತೆ
ಪಿಎಫ್ಐ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ನಾಗಪುರದಲ್ಲಿ ಇರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಇತ್ತೀಚೆಗೆ ನಡೆದ ದೇಶಾದ್ಯಂತ ದಾಳಿಯ ಬಳಿಕ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪ್ರಮುಖರನ್ನು ಗುರಿಯಾಗಿ ಇರಿಸಿಕೊಂಡು ದಾಳಿ ಮಾಡಲು ಸಂಘಟನೆ ಯೋಚಿಸಿತ್ತು ಎಂದು ಮಹಾರಾಷ್ಟ್ರ ಎಟಿಎಸ್‌ ಮುನ್ನೆಚ್ಚರಿಕೆ ನೀಡಿರುವಂತೆಯೇ ಹೆಚ್ಚಿನ ಭದ್ರತೆ ನೀಡಲಾಗಿತ್ತು.

ನಿಷೇಧವಾಯಿತು; ಮುಂದೇನು?
ಪಿಎಫ್ಐ ನಿಷೇಧದಿಂದಾಗಿ ಆ ಸಂಸ್ಥೆಯ ಕಾರ್ಯಚಟುವಟಿಕೆಗಳ ಮೇಲೆ, ಅದರ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಕಾನೂನಾತ್ಮಕ ಅಧಿಕಾರ ಸಿಕ್ಕಿದಂತಾಗಿದೆ. 2019ರಲ್ಲಿ ತಿದ್ದುಪಡಿ ಮಾಡಲಾಗಿರುವ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಗಳ ಅನ್ವಯ ಪಿಎಫ್ಐ ವಿರುದ್ಧ ನಿಷೇಧ ಹೇರಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪಿಎಫ್ಐನ ಸದಸ್ಯತ್ವವನ್ನು ಹೊಂದುವುದು ಅಪರಾಧವಾಗುತ್ತದೆ. ಕೇಂದ್ರ ಸರ್ಕಾರ ಆ ಸಂಘಟನೆಗೆ ಸೇರಿದ ಆಸ್ತಿ, ನಗದು ಸೇರಿದಂತೆ ಇನ್ನಿತರ ಯಾವುದೇ ಸ್ವಾಮಿತ್ವ ಹೊಂದಿದ ವಸ್ತು - ವಿಚಾರವನ್ನು ವಶಪಡಿಸಿಕೊಳ್ಳಲಿದೆ. ಮುಟ್ಟುಗೋಲು ಹಾಕಿಕೊಳ್ಳಲೂ ಅವಕಾಶ ಇದೆ.

ಉಗ್ರ ಸಂಘಟನೆ
ಎಂದು ನಿರ್ಧಾರ ಹೇಗೆ?
ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ಸೆಕ್ಷನ್‌ 25ರ ಅನ್ವಯ ಕೇಂದ್ರ ಸರಕಾರಕ್ಕೆ ನಿಗದಿತ ಸಂಘಟನೆ ಉಗ್ರ ಸಂಬಂಧಿ ಕೃತ್ಯಗಳಲ್ಲಿ ಭಾಗಿ ಯಾಗಿರುವುದು ಹೌದು ಎಂದು ದೃಢಪಟ್ಟರೆ “ಉಗ್ರ ಸಂಘಟನೆ’ ಎಂದು ಘೋಷಣೆ ಮಾಡಲು ಅವಕಾಶ ಉಂಟು. ಅದಕ್ಕೆ ಬೇಕಾಗಿರುವ ಕೆಲವು ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸುವ ಮತ್ತು ತೆಗೆದು ಹಾಕುವ ಅಧಿಕಾರ ಕೇಂದ್ರಕ್ಕೆ ಇದೆ. ಸದ್ಯ ಕಾಯ್ದೆಯಲ್ಲಿ ಇರುವ ಅಂಶಗಳ ಪ್ರಕಾರ ನಿಗದಿತ ಸಂಘಟನೆ
1. ಉಗ್ರ ಸಂಘಟನೆಯಲ್ಲಿ ಭಾಗವಹಿಸಿದರೆ ಮತ್ತು ಕೃತ್ಯವೆಸಗಿದರೆ
2. ಉಗ್ರ ಕೃತ್ಯಗಳನ್ನು ಎಸಗಲು ಸಿದ್ಧತೆ
3. ವಿಧ್ವಂಸಕ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದರೆ ಅಂಥ ಸಂಘಟನೆಯನ್ನು “ಉಗ್ರ ಸಂಘಟನೆ’ ಎಂದು ತೀರ್ಮಾನಿಸಿ, ಘೋಷಣೆ ಮಾಡಲಾಗುತ್ತದೆ.

2 ವರ್ಷ ಜೈಲು; ಜುಲ್ಮಾನೆ
ನಿಷೇಧದ ಬಳಿಕ ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ರವಾನೆ ಮಾಡಲಾಗಿದೆ. ಅದರ ಪ್ರಕಾರ ಪಿಎಫ್ಐ ಸದಸ್ಯರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು, ಸಂಘಟನೆ ಹೊಂದಿರುವ ಸೊತ್ತುಗಳನ್ನು ವಶಪಡಿಸಲು ಆದೇಶ ನೀಡಲಾಗಿದೆ. ಒಂದು ವೇಳೆ ಹೊಸತಾಗಿ ಸಾರ್ವಜನಿಕರು ಸಂಘಟನೆಯ ಸದಸ್ಯರಾದರೆ, ಅಂಥವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ.

ಸಾರ್ವಜನಿಕವಾಗಿ ಪ್ರಕಟಿಸಲು ಕ್ರಮ
ಸಂಘಟನೆಯ ಮೇಲೆ ಹೇರಲಾಗಿರುವ ನಿಷೇಧವನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸ್ಥಳೀಯ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ದೇಶದ ವಿವಿಧ ಸ್ಥಳಗಳಲ್ಲಿ ಇರುವ ಸಂಘಟನೆಯ ಕಚೇರಿಗಳ ಮೇಲೆ ಕೇಂದ್ರ ಸರಕಾರದ ಪ್ರಕಟನೆಯನ್ನು ಸ್ಥಳೀಯ ಠಾಣೆ ಪೊಲೀಸರು ಅಂಟಿಸಬೇಕಾಗುತ್ತದೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಧ್ವನಿವರ್ಧಕದ ಮೂಲಕ ಪ್ರಕಟನೆ ನೀಡಬೇಕು.

15 ದಿನಗಳ ಅವಕಾಶ
ಕೇಂದ್ರ ಸರಕಾರ ನಿಷೇಧ ಹೇರಿದ 15 ದಿನಗಳ ಒಳಗಾಗಿ ಸಂಘಟನೆಯ ಸದಸ್ಯರಿಗೆ ತಮ್ಮ ಬಗ್ಗೆ ವಿವರಗಳನ್ನು ನೀಡಲು ಅವಕಾಶ ನೀಡಲಾಗುತ್ತದೆ. ಅದರ ಸದಸ್ಯರಿಗೆ ಸಂಘಟನೆಯನ್ನು ತೊರೆಯಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಅವರ ಬಳಿ ಪ್ರಚೋದನಾತ್ಮಕವಾಗಿರುವ ದಾಖಲೆಗಳು ಇದ್ದರೆ ಅಂಥವರ ವಿರುದ್ಧ ಕೇಸು ದಾಖಲಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಅಧಿಕಾರ
ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಪಿಎಫ್ಐಗೆ ಸೇರಿದ ಆಸ್ತಿಯನ್ನು ಪಟ್ಟಿಮಾಡಿ ಅದನ್ನು ಮುಟ್ಟುಗೋಲು ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ವಿತ್ತೀಯ ಚಟುವಟಿಕೆಗಳಿಗೆ ನಿಷೇಧ
ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ಪಿಎಫ್ಐ ಸಂಘಟನೆಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಹಣ ಪಾವತಿ, ವರ್ಗಾವಣೆ, ಹಣ ಸ್ವೀಕಾರಕ್ಕೆ ಅವಕಾಶ ನಿಷೇಧಿಸಲಾಗಿದೆ. ಇದರ ಜತೆಗೆ ಖಾತರಿ ನೀಡುವುದು ಕೂಡ ಸಾಧ್ಯವಿಲ್ಲ.

“ಬಾಂಬ್‌ ತಯಾರಿಕೆ’, ಮಿಷನ್‌ 2047 ದಾಖಲೆ
ಪಿಎಫ್ಐ ಕಚೇರಿಗಳ ಮೇಲೆ ಇತ್ತೀಚೆಗೆ ತನಿಖಾ ಸಂಸ್ಥೆಗಳು ದೇಶಾದ್ಯಂತ ದಾಳಿ ನಡೆಸಿದ್ದ ವೇಳೆ ಉತ್ತರಪ್ರದೇಶದ ಪಿಎಫ್ಐ ನಾಯಕ ಮೊಹಮ್ಮದ್‌ ನದೀಮ್‌ನ ಮನೆಯಲ್ಲಿ “ಸುಧಾರಿತ ಸ್ಫೋಟಕವನ್ನು ತಯಾರಿಸುವುದು ಹೇಗೆ’ ಎಂಬ ಮಾಹಿತಿಯಿದ್ದ ಪುಸ್ತಿಕೆಯೊಂದು ದೊರೆತಿತ್ತು. ಉ.ಪ್ರದೇಶದ ಮತ್ತೂಬ್ಬ ನಾಯಕ ಅಹ್ಮದ್‌ ಬೇಗ್‌ ಬಳಿ, “ಸುಲ ಭವಾಗಿ ದೊರೆಯುವಂಥ ವಸ್ತುಗಳನ್ನು ಬಳಸಿ ಬಾಂಬ್‌ ತಯಾರಿಸುವ’ ಕುರಿತ ಡಾಕ್ಯುಮೆಂಟ್‌ ಸಿಕ್ಕಿತ್ತು. “ಮಿಷನ್‌ 2047′ ಎಂಬ ಶೀರ್ಷಿಕೆಯ ಸಿಡಿ, ಪ್ರಕಟನೆಗಳನ್ನು ಮಹಾರಾಷ್ಟ್ರದ ಪಿಎಫ್ಐ ಅಧ್ಯಕ್ಷನಿಂದ ವಶಪಡಿಸಿಕೊಳ್ಳಲಾಗಿತ್ತು. ಮತ್ತೂಬ್ಬನ ಬಳಿ ಐಸಿಸ್‌, ಗಜ್ವತ್‌ ಎ ಹಿಂದ್‌ಗೆ ಸಂಬಂಧಿಸಿದ ವೀಡಿಯೋಗಳಿದ್ದ ಪೆನ್‌ಡ್ರೈವ್‌ಗಳೂ ಸಿಕ್ಕಿವೆ ಎಂದು ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ.

ನಿಷೇಧಿತ ಪಿಎಫ್ಐನ ಮುಖಂಡರು ಇವರು

1. ಒಮಾ ಸಲಾಂ,
ಪಿಎಫ್ಐ ಮುಖ್ಯಸ್ಥ
ಕೇರಳ ರಾಜ್ಯ ವಿದ್ಯುತ್ಛಕ್ತಿ ಮಂಡಳಿಯ ಉದ್ಯೋಗಿ. ಈಗ ಅಮಾನತು ಆಗಿದ್ದು, ಪಿಎಫ್ಐ ಜತೆ ನಂಟು ಹಿನ್ನೆಲೆ ಇಲಾಖಾ ತನಿಖೆ ಎದುರಿಸುತ್ತಿದ್ದಾರೆ.
2. ಅನೀಸ್‌ ಅಹ್ಮದ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಅನೀಸ್‌, ಪಿಎಫ್ಐನ ಸೈಬರ್‌ ಚಟುವಟಿಕೆ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾಗತಿಕ ಟೆಲಿಕಮ್ಯೂನಿಕೇಶನ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅಮಾನತುಗೊಂಡಿದ್ದಾರೆ.
3. ಪಿ. ಕೋಯಾ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ
ನಿಷೇಧಿತ ಸಿಮಿಯ ಸಕ್ರಿಯ ಸದಸ್ಯರಾಗಿದ್ದವರು. ಕೇರಳದ ಕಲ್ಲಿಕೋಟೆ ವಿವಿಯಲ್ಲಿ ಉಪನ್ಯಾಸಕರೂ ಆಗಿದ್ದರು. ಕೇರಳದ ಇಸ್ಲಾಮಿಕ್‌ ಯೂತ್‌ ಸೆಂಟರ್‌ನ ನಿರ್ದೇಶಕರೂ ಆಗಿದ್ದರು. ಇಸ್ಲಾಮಿಕ್‌ ಮೂಲಭೂತವಾದ, ಮುಸ್ಲಿಂ ಉಗ್ರವಾದಕ್ಕೆ ಪ್ರೇರಣೆ ನೀಡುವ ಸಂಸ್ಥೆಯಿದು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.
4. ಅಫ‌ರ್‌ ಪಾಷಾ, ರಾಷ್ಟ್ರೀಯ ಕಾರ್ಯದರ್ಶಿ
ಉದ್ಯಮಿಯಾಗಿರುವ ಪಾಷಾ, ಪಿಎಫ್ಐ ಸ್ಥಾಪನೆ ಆದಾಗಿ ನಿಂದಲೂ ಅಂದರೆ 2006 ರಿಂದಲೂ ಅದರ
ಸಕ್ರಿಯ ಸದಸ್ಯ.
5. ಇ.ಎಂ.ಅಬ್ದುರ್ರಹಮಾನ್‌, ರಾಷ್ಟ್ರೀಯ ಉಪಾಧ್ಯಕ್ಷ
ಕೊಚ್ಚಿನ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ನಿವೃತ್ತ ಲೈಬ್ರೇರಿಯನ್‌. ಸಿಮಿಯ ಮಾಜಿ ಅಧ್ಯಕ್ಷರಾಗಿದ್ದರು. ಅವರು ಪಿಎಫ್ಐನ ಪ್ರಭಾವಿ ನಾಯಕನಾಗಿದ್ದು, ಪ್ರಮುಖ ನಿರ್ಣಯಗಳನ್ನು ಕೂಡ ಇವರೇ ಕೈಗೊಳ್ಳುತ್ತಿದ್ದರು ಎಂದು ಫೆಡರಲ್‌ ಏಜೆನ್ಸಿಗಳು ಹೇಳಿವೆ.
6. ಅಬ್ದುಲ್‌ ವಾಹಿತ್‌ ಸೇಟ್‌, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ
ಬೆಂಗಳೂರಿನ ಶಿವಾಜಿನಗರ ಮೂಲದ ಕುಚ್ಚಿ
ಮೆಮನ್‌ ಸಮುದಾಯಕ್ಕೆ ಸೇರಿದವರು. ಪಿಎಫ್ಐನ ಸ್ಥಾಪಕ ಸದಸ್ಯರಾಗಿರುವ ವಾಹಿತ್‌ ಸೇಟ್‌, ಸಾಫ್ಟ್ವೇರ್‌ ಸೊಲ್ಯೂಶನ್ಸ್‌ ಸಂಸ್ಥೆಯನ್ನು ಹೊಂದಿದ್ದಾರೆ.
7. ಮೊಹಮ್ಮದ್‌ ಶಕೀಬ್‌ ಅಲಿಯಾಸ್‌ ಶಕೀಫ್, ರಾಷ್ಟ್ರೀಯ ಕಾರ್ಯದರ್ಶಿ(ಮಾಧ್ಯಮ)
ಪಿಎಫ್ಐನ ಸ್ಥಾಪಕ ಸದಸ್ಯ. ಅದರ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕವನ್ನು ನೋಡಿಕೊಳ್ಳುತ್ತಿದ್ದರು. ಜತೆಗೆ, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದರು.
8. ಮಿನಾರುಲ್‌ ಶೇಕ್‌, ಪ.ಬಂಗಾಲ ಪಿಎಫ್ಐ ಅಧ್ಯಕ್ಷ
ಅಲೀಗಢ ಮುಸ್ಲಿಂ ವಿವಿಯಲ್ಲಿ ಪಿಎಚ್‌.ಡಿ ಪದವೀಧರ. ವಿದ್ಯಾರ್ಥಿಗಳಿಗೆ ಕೋಚಿಂಗ್‌ ತರಬೇತಿ ನೀಡುತ್ತಿದ್ದರು ಮತ್ತು ಸಂಶೋಧನ ಪ್ರಬಂಧದಲ್ಲೂ ನೆರವಾಗುತ್ತಿದ್ದರು.
9. ಮೊಹಮ್ಮದ್‌ ಆಸಿಫ್, ರಾಜಸ್ಥಾನ ಪಿಎಫ್ಐ ಅಧ್ಯಕ್ಷ
ಪದವಿ ಓದುತ್ತಿದ್ದಾಗ ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾಗೆ ಸೇರಿದ್ದರು. ಅನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. 2013-14ರಲ್ಲಿ ಪಿಎಫ್ಐ ರಾಜ್ಯಾಧ್ಯಕ್ಷ ಹುದ್ದೆಗೇರಿದರು. ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಮುಸ್ಲಿಂ ನಾಯಕರನ್ನು ಸಂಪರ್ಕಿಸಿದ್ದ ಕೇಂದ್ರ?
ಪಿಎಫ್ಐ ಮೇಲೆ ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸರ ದಾಳಿಯ ಮೊದಲೇ ಈ ಬಗ್ಗೆ ಪ್ರಮುಖ ಮುಸ್ಲಿಂ ಸಂಘಟನೆಗಳ ನಾಯಕರನ್ನು ಸೆ.17ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭೇಟಿಯಾಗಿ ಅವರ ಅಭಿಪ್ರಾಯ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಕೋಮು ಸಂಘ ರ್ಷಕ್ಕೆ ಕುಮ್ಮಕ್ಕು ನೀಡುವ ನಿಟ್ಟಿನಲ್ಲಿ ಭಯೋತ್ಪಾದನೆ ಪ್ರಚಾರದಲ್ಲಿ ತೊಡಗಿರುವ ಪಿಎಫ್ಐ, ವಹಾಬಿ-ಸಲಫಿ ಅಜೆಂಡಾವನ್ನು ಅನುಸರಿಸುತ್ತಿದೆ ಎಂದು ಮುಸ್ಲಿಂ ನಾಯಕರು ಏಕಕಂಠದಿಂದ ಖಂಡಿಸಿದ್ದರು.
ಸಚಿವರ ವಜಾಕ್ಕೆ ಆಗ್ರಹ: ಕೇರಳ ಬಂದರು ಖಾತೆ ಸಚಿವ ಅಹಮದ್‌ ದೇವರ್‌ಕೋವಿಲ್‌ ಸದ್ಯ ನಿಷೇಧ ಗೊಂಡಿರುವ ರಿಹಾಬ್‌ ಫೌಂಡೇಶನ್‌ನ ಮುಖ್ಯಸ್ಥರ ಆಪ್ತರಾಗಿದ್ದು, ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕೇರಳ ಸಿಎಂಗೆ ಬಿಜೆಪಿ ಆಗ್ರಹಿಸಿದೆ. “ರಿಹಾಬ್‌ ಫೌಂಡೇಶನ್‌ನ ಮುಖ್ಯಸ್ಥರು ಮತ್ತು ಇಂಡಿಯನ್‌ ನ್ಯಾಷನಲ್‌ ಲೀಗ್‌ ಪಕ್ಷದ ಅಧ್ಯಕ್ಷರು ಒಬ್ಬರೇ ಆಗಿದ್ದಾರೆ. ಮೊಹಮದ್‌ ಸುಲೈಮಾನ್‌ ಅವರೇ ಈ ಎರಡಕ್ಕೂ ಮುಖ್ಯಸ್ಥ. ಅವರ ಪಕ್ಷದ ದೇವರ್‌ಕೋವಿಲ್‌ರನ್ನು ಸಂಪು ಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.

ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ ಪಿಎಫ್ಐ, ಸಹವರ್ತಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಸ್ವಾಗತಾರ್ಹ ಮತ್ತು ಅಭಿನಂದ ನಾರ್ಹ ನಡೆ. ನವ ಭಾರತದಲ್ಲಿ ದೇಶದ ಏಕತೆ ಮತ್ತು ಸಮಗ್ರತೆಗೆ ಹಾಗೂ ಭದ್ರತೆಗೆ ಅಪಾಯ ತಂದೊಡ್ಡುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ.
-ಯೋಗಿ ಆದಿತ್ಯನಾಥ್‌,
ಉ.ಪ್ರದೇಶ ಮುಖ್ಯಮಂತ್ರಿ

ದೇಶವು ಸುರಕ್ಷಿತವಾಗಿದ್ದರೆ ನಾವೂ ಸುರಕ್ಷಿತವಾಗಿರುತ್ತೇವೆ. ಯಾವುದೇ ಸಂಸ್ಥೆ, ಚಿಂತನೆಗಳಿಗಿಂತಲೂ ದೇಶ ದೊಡ್ಡದು. ದೇಶವನ್ನು ಒಡೆಯಲು, ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸುವವರು ಇಲ್ಲಿ ಬದುಕುವ ಅರ್ಹತೆ ಹೊಂದಿಲ್ಲ. ಸರಕಾರದ ನಿರ್ಧಾರ ಸ್ವಾಗತಾರ್ಹ.
-ಝೈನುಲ್‌ ಆಬಿದೀನ್‌ ಅಲಿ ಖಾನ್‌,
ಅಜ್ಮೇರ್ ದರ್ಗಾ ಮುಖ್ಯಸ್ಥ

ಸಮಾಜವನ್ನು ವಿಭಜಿಸಲು ಧರ್ಮವನ್ನು ಬಳಸುವಂಥ ಎಲ್ಲ ಸಿದ್ಧಾಂತ ಮತ್ತು ಸಂಘಟ ನೆಗಳನ್ನೂ ನಾವು ವಿರೋಧಿಸುತ್ತೇವೆ. ಬಹು ಸಂಖ್ಯಾಕ ಹಾಗೂ ಅಲ್ಪಸಂಖ್ಯಾಕ ಎರಡೂ ಬಗೆಯ ಕೋಮುವಾದವನ್ನು ನಾವು ಖಂಡಿಸುತ್ತೇವೆ.
-ಜೈರಾಂ ರಮೇಶ್‌, ಕಾಂಗ್ರೆಸ್‌ ನಾಯಕ

ಪಿಎಫ್ಐನಂಥ ಸಂಘಟನೆಗಳನ್ನು ನಿಷೇಧ ಮಾಡುವುದು ಈ ಸಮಸ್ಯೆಗೆ ಪರಿಹಾರವಲ್ಲ. ಬದಲಿಗೆ, ಅವುಗಳನ್ನು ರಾಜಕೀಯವಾಗಿ ಏಕಾಂಗಿ ಯಾಗಿಸಬೇಕು. ನಕ್ಸಲ್‌ಗ‌ೂ ಈ ಹಿಂದೆ ನಿಷೇಧ ಹೇರ ಲಾಗಿತ್ತು. ಆದರೆ, ಈಗಲೂ ನಕ್ಸಲರು ಸಕ್ರಿಯವಾಗಿಲ್ಲವೇ?
-ಸೀತಾರಾಂ ಯೆಚೂರಿ,
ಸಿಪಿಎಂ ಪ್ರಧಾನ ಕಾರ್ಯದರ್ಶಿ

ಪಿಎಫ್ಐ ನಿಷೇಧ ಸ್ವಾಗತಾರ್ಹ. ಇದು ಪ್ರಧಾನಿ ಮೋದಿ ಸರಕಾರದ ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌. ಸರಕಾರವು ಇಡೀ ಪಿಎಫ್ಐ ಜಾಲವನ್ನು ಕಿತ್ತೂಗೆದು, ಅದು ಮತ್ತೆ ಬೇರೆ ಹೆಸರಿ ನಲ್ಲಿ ಮರುಹುಟ್ಟು ಪಡೆಯದಂತೆ ತಡೆಯಬೇಕು.
-ಅಖಿಲ ಭಾರತ ಬಾರ್‌ ಅಸೋಸಿಯೇಶನ್‌

ಪಿಎಫ್ಐನ ಧೋರಣೆಯನ್ನು ನಾನು ಹಿಂದಿನಿಂದಲೂ ಖಂಡಿಸುತ್ತ ಬಂದಿದ್ದೇನೆ. ಆದರೆ ನಿಷೇಧವನ್ನು ನಾನು ಬೆಂಬಲಿಸಲ್ಲ. ಏಕೆಂದರೆ ಇನ್ನು ಮುಂದೆ ಪಿಎಫ್ಐನ ಹೆಸರಿನಲ್ಲಿ ದೇಶದ ಪ್ರತಿಯೊಬ್ಬ ಮುಸ್ಲಿಂ ಯುವಕನನ್ನೂ ಬಂಧಿಸುವ ಸಾಧ್ಯತೆಯಿದೆ.
-ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಮುಖ್ಯಸ್ಥ

ಮಹಾರಾಷ್ಟ್ರದಲ್ಲಿ ಗಂಭೀರವಾದ ವಿಧ್ವಂಸಕ ಕೃತ್ಯಕ್ಕೆ ಪಿಎಫ್ಐ ಸಂಚು ರೂಪಿಸಿತ್ತು ಎಂಬ ಸುದ್ದಿ ಕೇಳಿಬಂದಿತ್ತು. ಪುಣೆಯಲ್ಲಿ ಶಾಂತಿ ಕದಡಲೂ ಅದರ ಸದಸ್ಯರು ಯತ್ನಿಸಿದ್ದರು. ನಿಷೇಧ ನಿರ್ಧಾರ ಕೈಗೊಂಡ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದಗಳು.
-ಏಕನಾಥ ಶಿಂಧೆ, ಮಹಾರಾಷ್ಟ್ರ ಸಿಎಂ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next