Advertisement
ಜೂನ್ ಐದು ಪರಿಸರದ ದಿನ ಎಂದಾಚರಿಸುತ್ತೇವೆ. ಆದರೆ ಜೂನ್ ಐದರಂದು ಮಾತ್ರ ಪರಿಸರದ ಬಗೆಗೆ ಎಂದೂ ಇಲ್ಲದ ಕಾಳಜಿಯ ಢೋಂಗಿತನವನ್ನು ಪ್ರದರ್ಶಿಸುತ್ತಾ ಉಳಿದ ದಿನಗಳಲ್ಲಿ ಪರಿಸರವನ್ನು ಮರೆತದ್ದೇ ಆದಲ್ಲಿ, ಮುಂದೊಂದು ದಿನ ಅದಕ್ಕೆ ಬಹಳ ದೊಡ್ಡ ಬೆಲೆ ತೆರಬೇಕಾಗಿ ಬರುವುದು ಸತ್ಯ. ನಾವು ಹುಟ್ಟಿ ಬೆಳೆಯುವುದೇ ಈ ಪರಿಸರದ ನಡುವೆ. ನಮ್ಮ ದಿನನಿತ್ಯದ ಪ್ರತಿಕ್ಷಣಗಳಲ್ಲೂ ನಾವು ನಮ್ಮ ಉಳಿವಿಗಾಗಿ ಈ ಪರಿಸರವನ್ನೇ ಅವಲಂಬಿ ಸಿದ್ದೇವೆ. ಪರಿಸರವಿಲ್ಲದೆ ನಾವಿಲ್ಲ ಎಂದ ಮೇಲೆ ಅದನ್ನು ಪ್ರತಿ ದಿನ ಅಷ್ಟೇ ಚೆನ್ನಾಗಿ ಕಾಳಜಿಯಿಂದ ನೋಡಿಕೊಳ್ಳಬೇ ಕಾಗಿರುವುದು ಮನುಷ್ಯರೆನ್ನಿಸಿಕೊಂಡ ನಮ್ಮೆಲ್ಲರ ಆದ್ಯ ಕರ್ತವ್ಯ.
Related Articles
Advertisement
ಅಕ್ರಮ ಗಣಿಗಾರಿಕೆ, ಅಣು ಸ್ಥಾವರಗಳು, ಅತ್ಯಾಧುನಿಕ ಜೀವನ ಶೈಲಿ, ಅರಣ್ಯಗಳ ನಾಶ, ಕಟ್ಟಡಗಳ ನಿರ್ಮಾಣ, ಕಾಂಕ್ರೀಟಿಕರಣ, ಅವೈಜ್ಞಾನಿಕ ಮೀನುಗಾರಿಕೆ, ಅಸಂಪ್ರದಾಯಿಕ ವ್ಯವಸಾಯ ಪದ್ಧತಿ, ನದಿ ತಿರುವು ಯೋಜನೆಗಳು, ಅತಿಯಾದ ಇಂಧನ ಹಾಗೂ ಪ್ಲಾಸ್ಟಿಕ್ ಬಳಕೆ ಹೀಗೆ ನೂರಾರು ರೀತಿಯಲ್ಲಿ ಪರಿಸರಕ್ಕೆ ಮಾರಕವಾಗುತ್ತಿರುವ ಕೆಲಸಗಳಲ್ಲಿ ಸತತವಾಗಿ ನಿರತರಾಗಿದ್ದೇವೆ.ಇರುವುದೊಂದೇ ಭೂಮಿ ಎನ್ನುವುದನ್ನು ನಾವು ಮರೆತಂತಿದೆ. ಇದೆಲ್ಲದರ ಪರಿಣಾಮಗಳನ್ನು ಈಗಾಗಲೇ ಅನುಭವಿಸುತ್ತಿದ್ದರೂ ಅದೇನೂ ದೊಡ್ಡದಲ್ಲವೆನ್ನುವಂತೆ ವರ್ತಿಸುತ್ತಿದ್ದೇವೆ. ನಾವು ಸದ್ಯ ಹೇಗೋ ಬದುಕಬಹುದು. ಆದರೆ ನಮ್ಮದೇ ಮಕ್ಕಳಿಗೆ ಒಂದು ಉತ್ತಮವಾದ ಪರಿಸರವನ್ನು ಬಿಟ್ಟು ಹೋಗುವುದು ನಮ್ಮ ಕರ್ತವ್ಯ ಅಲ್ಲವೆನ್ನುತ್ತೀರಾ?
ಒಂದು ಸುದ್ದಿ ಕೇಳಿ. ವಲ್ಡ್ರ್ ವೈಲ್ಡ್ ಲೈಫ್ ಫಂಡ್ ಅಧ್ಯಯನದ ವರದಿಯೊಂದರ ಪ್ರಕಾರ 1970ರಿಂದ 2010 ನಡುವಣ ನಲವತ್ತು ವರುಷಗಳ ಅವಧಿಯಲ್ಲಿ ಈ ಜಗತ್ತಿನಲ್ಲಿ ವನ್ಯ ಜೀವಿಗಳ ಸಂಖ್ಯೆಯಲ್ಲಿ ಶೇಕಡಾ ಐವತ್ತೆರಡರಷ್ಟು ಇಳಿಕೆಯಾಗಿದೆ. ಸಿಹಿ ನೀರು ಜೀವಿ ಪ್ರಬೇಧಗಳು 76 ಶೇಕಡದಷ್ಟು ಕಡಿಮೆಯಾಗಿದ್ದರೆ ಭೂ ಮತ್ತು ಸಾಗರವಾಸಿ ಪ್ರಬೇಧಗಳು ಶೇಕಡ 39ರಷ್ಟು ಕಡಿಮೆಯಾಗಿವೆ. ಸುಮಾರು 3000ಕ್ಕೂ ಅಧಿಕ ವನ್ಯಜೀವಿ ಪ್ರಬೇಧಗಳು ಅವಸಾನದ ಅಂಚಿನಲ್ಲಿವೆ. ಇದಕ್ಕೆಲ್ಲಾ ಮೂಲಕಾರಣ ಮನುಷ್ಯನೇ.
ಮನುಷ್ಯ ತನ್ನ ದುರಾಸೆಗಾಗಿ ವನ್ಯಜೀವಿಗಳ ಆವಾಸ ಸ್ಥಾನಗಳಿಗೆ ಲಗ್ಗೆಯಿಟ್ಟ. ಅರಣ್ಯಗಳ ಅತಿಕ್ರಮಣ ನಡೆಸುತ್ತಾ ಬಂದ. ಮೋಜಿಗಾಗಿ ರೆಸಾರ್ಟ್‌ಗಳು ನಿರ್ಮಾಣವಾದವು. ಕೈಗಾರಿಕಾ ವಲಯಗಳು ಹೆಚ್ಚಾದಂತೆ ವಾತಾವರಣ ಕಲುಷಿತವಾಯಿತು. ಪರಿಣಾಮ ಹವಾಮಾನದಲ್ಲಿಯೂ ಏರುಪೇರು. ಇದರ ಒಟ್ಟು ಪರಿಣಾಮ ವನ್ಯಜೀವಿಗಳ ಅವನತಿ. ಅವುಗಳು ಸತ್ತರೆ ನಮಗೇನಾಯಿತು ಅಂದುಕೊಳ್ಳಬೇಡಿ. ನೆಲ, ಜಲ, ಜೀವ ಸಂಕುಲದ ನಡುವಣ ಪ್ರಕೃತಿಯ ಸಂಬಂಧಗಳು ನಾವಂದು ಕೊಂಡಷ್ಟು ಸರಳವಲ್ಲ.
ನಮ್ಮ ಬದುಕನ್ನು ಸುಂದರವಾಗಿಸುವಲ್ಲಿ ಈ ಸಸ್ಯಗಳು, ಪ್ರಾಣಿಗಳು ನೀಡುತ್ತಿರುವ ಕೊಡುಗೆ ಅಪಾರ. ಅವುಗಳು ಅಳಿದ ವೆಂದರೆ ನಾವು ಅಳಿದಂತೆಯೇ. ಅಷ್ಟಕ್ಕೂ ಪ್ರಕೃತಿ ಮುನಿದರೆ ಏನೇನಾಗಬಲ್ಲುದು ಎನ್ನುವುದನ್ನು ಪ್ರಕೃತಿಯೇ ನಮಗೆ ಆಗಾಗ ತೋರಿಸಿಕೊಡುತ್ತಿದೆ. ಭವಿಷ್ಯದ ಬಗೆಗೆ ಭಯ ಹುಟ್ಟಿಸುವ ಇಂತಹ ಅಂಕಿ ಅಂಶಗಳು ಸಹಸ್ರಾರು ಲಭ್ಯವಿವೆ. ಇನ್ನೂ ಕೂಡ ನಾವು ಎಚ್ಚೆತ್ತುಕೊಳ್ಳುವುದಿಲ್ಲವೆಂದರೆ ಅದು ನಮ್ಮ ಮೂರ್ಖತನವಷ್ಟೆ ಮತ್ತು ಅಂತಹ ಮೂರ್ಖತನಕ್ಕೆ ಮುಂದೊಂದು ದಿನ ಪಶ್ಚತ್ತಾಪ ಪಡಲೂ ಆಗದಿರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಎನ್ನುವುದು ಸತ್ಯ.
ಪರಿಸರವನ್ನು ಉಳಿಸುವಲ್ಲಿ ವಿಶ್ವಾದ್ಯಂತ ವಿವಿಧ ರೀತಿಯ ಪ್ರಯತ್ನಗಳನ್ನು ಸಹಸ್ರಾರು ಸಣ್ಣ ದೊಡ್ಡ ಸಂಘಟನೆಗಳು ಸಂಸ್ಥೆಗಳು ಮಾಡಿಕೊಂಡು ಬರುತ್ತಲೇ ಇವೆ. ವಿಶ್ವಸಂಸ್ಥೆ ಕೂಡ ಈ ನಿಟ್ಟಿನಲ್ಲಿ ಹಲವಾರು ಗಮನಾರ್ಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೆಲ್ಲದರ ಒಟ್ಟು ಪರಿಣಾಮವಾಗಿ ಒಂದಿಷ್ಟು ಆಶಾದಾಯಕ ಅಂಶಗಳು ಪರಿಸರದ ರಕ್ಷಣೆಯ ಬಗೆಗೆ ಕಂಡುಬಂದಿರುವುದು ಸತ್ಯ. ಆದರೆ ಈ ಪ್ರಯತ್ನಗಳು ಮಾತ್ರ ಸಾಕಾಗುವುದಿಲ್ಲ. ಈ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೂಡ ಪರಿಸರ ಮತ್ತು ಅದರ ರಕ್ಷಣೆಯ ಅಗತ್ಯದ ಬಗೆಗೆ ಅರಿವು ಹುಟ್ಟಬೇಕಿದೆ.
ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ. ಶಾಲಾ ಕಾಲೇಜು ಗಳಲ್ಲಿ ಪಠ್ಯಕ್ರಮದ ಕಡ್ಡಾಯ ಭಾಗವಾಗಿ ಪರಿಸರ ಶಿಕ್ಷಣವನ್ನು ಆಳವಡಿಸಿಕೊಳ್ಳಬೇಕಿದೆ. ಸಾವಯವ ಕೃಷಿಗೆ ಪ್ರೋತ್ಸಾಹ, ಇಂಧನ ಮತ್ತು ಪ್ಲಾಸ್ಟಿಕ್‌ನ ಮಿತವಾದ ಬಳಕೆ, ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುವುದು, ಗಣಿಗಾರಿಕೆ ಮೀನು ಗಾರಿಕೆ ರಸಗೊಬ್ಬರಗಳ ತಯಾರಿಕೆ ಇತ್ಯಾದಿಗಳಲ್ಲಿ ಕಠಿಣ ನಿಯಮಗಳ ಅಳವಡಿಕೆ ಹೀಗೆ ನೂರಾರು ರೀತಿಯಲ್ಲಿ ಪರಿಸರವನ್ನು ಉಳಿಸುವತ್ತ ನಾವು ಸರಕಾರದ ಪ್ರಯತ್ನಗಳೊಂದಿಗೆ ಕೈ ಜೋಡಿಸಬಹುದು.
ಗಿಡ ನೆಡುವುದು ಮುಖ್ಯ ಅಲ್ಲ. ಹಾಗೆ ನೆಟ್ಟ ಗಿಡವನ್ನು ದಿನಂಪ್ರತಿ ನೀರೆರೆದು ಪೋಷಿಸಿ ಮರವನ್ನಾಗಿಸುವಲ್ಲಿ ನಮ್ಮ ನಿಜವಾದ ಕಾಳಜಿ ಅಡಗಿದೆ. ಸ್ವಚ್ಛತೆ, ಶಿಸ್ತುಬದ್ಧ ಜೀವನ ಶೈಲಿ, ಉಪಕಾರ ಸ್ಮರಣೆ ಮತ್ತು ಮಾನವೀಯತೆ ಪರಿಸರ ರಕ್ಷಣೆಯ ಮುಖ್ಯ ಸಾಧನಗಳು. ಭಾಷಣ ಮತ್ತು ಬರಹದ ಮಾತುಗಳು ಕಾರ್ಯರೂಪಕ್ಕೆ ಬರಬೇಕಿದೆ.
ನಮ್ಮ ಪ್ರಯತ್ನಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯನಿರಂತರವಾಗಿ ಸಾಗಬೇಕಿದೆ. ಹಾಗಾದಲ್ಲಿ ಮಾತ್ರ ಪರಿಸರ ದಿನಾಚರಣೆಗೆ ಒಂದು ಅರ್ಥ ಮೂಡಲು ಸಾಧ್ಯ. ಆ ನಿಟ್ಟಿನಲ್ಲಿ ಶ್ರಮಿಸೋಣ. ಏಕೆಂದರೆ ಈ ಪರಿಸರ ಅಥವಾ ಪ್ರಕೃತಿ ನಮ್ಮೆಲ್ಲರ ತಾಯಿ. ಅವಳ ರಕ್ಷಣೆ ನಮ್ಮ ಹೊಣೆ. ಅದಕ್ಕೆ ಕಟಿಬದ್ಧರಾಗೋಣ.
ಸೂಚನೆ: ಜೂ.2 ಮತ್ತು 3ರಂದು ಪ್ರಕಟವಾದ ರಾಜಕೀಯ ವಿಶ್ಲೇಷಣೆಯ ಲೇಖನಗಳು ಖ್ಯಾತ ಲೇಖಕ ಎಂ.ಜೆ.ಅಕ್ಬರ್ ಸ್ಟೇಟ್ ಟೈಮ್ಸ್ ಎಂಬ ಪತ್ರಿಕೆಗೆ ಬರೆದ ಲೇಖನದ ಭಾವಾನುವಾದ.
– ನರೇಂದ್ರ ಎಸ್ ಗಂಗೊಳ್ಳಿ