Advertisement
ಮತದಾನೋತ್ತರ ಸಮೀಕ್ಷೆಗಳ ಬಳಿಕ ರಾಜಕೀಯ ನಾಯಕರಲ್ಲಿ ನಾನಾ ರೀತಿಯ ಲೆಕ್ಕಾಚಾರಗಳು/ ವ್ಯಾಖ್ಯಾನಗಳು ನಡೆಯುತ್ತಿದ್ದು, ಅತಂತ್ರವೋ, ಸಮ್ಮಿಶ್ರವೋ, ಸ್ವಂತ ಬಲದ ಸರಕಾರವೋ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಶೇ.73.19ರಷ್ಟು ದಾಖಲೆಯ ಮತದಾನವಾಗಿ ಇತಿಹಾಸ ನಿರ್ಮಾಣವಾಗಿದೆ. ಒಟ್ಟು 5.30 ಕೋಟಿ ಮತದಾರರ ಪೈಕಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.85.56 ರಷ್ಟು ಅತಿ ಹೆಚ್ಚು ಮತದಾನ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಿಗೆ ಲಾಭವಾಗುತ್ತದೆ, ಶೇ.57ರಷ್ಟು ಅತಿ ಕಡಿಮೆ ಮತದಾನ ಆಗಿರುವ ಬೆಂಗಳೂರು ನಗರದಲ್ಲಿ ಯಾರಿಗೆ ನಷ್ಟವಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.
Related Articles
ಫಲಿತಾಂಶದ ಬಗ್ಗೆ ಮೂರು ಪಕ್ಷಗಳ ನಾಯಕರು ಶುಕ್ರವಾರ ಸಭೆ ನಡೆಸಿ ಚರ್ಚಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ನಾಯಕರ ಜತೆ ಚರ್ಚಿಸಿದರು.
Advertisement
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೆವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಂದಿನ ತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ದೂರವಾಣಿ ಮೂಲಕ ಮುಖಂಡರ ಜತೆ ಸಮಾಲೋಚಿಸಿದರು. ಜಿ.ಟಿ.ದೇವೇಗೌಡರು ಪದ್ಮನಾಭನಗರ ನಿವಾಸದಲ್ಲಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.
ಲೆಕ್ಕಾಚಾರಗಳದ್ದೇ ಸಾಮ್ರಾಜ್ಯಮತ ಎಣಿಕೆಗೆ ಮುನ್ನಾ ದಿನವಾದ ಶುಕ್ರವಾರ ಇಡೀ ದಿನ ಮೂರೂ ಪಕ್ಷಗಳ ನಾಯಕರದ್ದು ಲೆಕ್ಕಾಚಾರಗಳದ್ದೇ ಸಾಮ್ರಾಜ್ಯವಾಗಿತ್ತು. ನಮ್ಮದೇ ಬಹುಮತ ಎಂದು ಮೇಲ್ನೋಟಕ್ಕೆ ಹೇಳಿದರೂ ಒಂದೊಮ್ಮೆ ಅಗತ್ಯ ಸಂಖ್ಯಾಬಲ ಸಿಗದಿದ್ದರೆ ಏನು ಮಾಡಬೇಕೆಂಬ ಬಗ್ಗೆ ಚರ್ಚೆಯಲ್ಲೇ ಮುಳುಗಿದ್ದರು. ಬಿಜೆಪಿ ನಾಯಕರು ತಮಗೆ 80ರಿಂದ 85 ಸೀಟು ಸಿಕ್ಕಿ, ಜೆಡಿಎಸ್‌ಗೆ 30ರಿಂದ 35 ಸ್ಥಾನಗಳು ಲಭಿಸಿದರೆ ಜತೆಗೂಡಿ ಸರಕಾರ ರಚಿಸಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಕೂಡ ಕನಿಷ್ಠ 115 ಸ್ಥಾನ ಬಂದೇ ಬರುತ್ತದೆ. ಒಂದೊಮ್ಮೆ ಬಾರದಿದ್ದರೆ ಪಕ್ಷೇತರರ ಬೆಂಬಲ ಪಡೆಯಲು ಮೊದಲು ಪ್ರಯತ್ನ ಮಾಡಬೇಕು. 100ರಿಂದ 105 ಸ್ಥಾನವಷ್ಟೇ ಸಿಕ್ಕಿದರೆ ಜೆಡಿಎಸ್ ಜತೆ ಮೈತ್ರಿ ಬಗ್ಗೆ ಮಾತುಕತೆಗೆ ಮುಂದಾಗಬೇಕಾಗುತ್ತದೆ ಎಂಬ ಚಿಂತನೆ ನಡೆಸಿದ್ದಾರೆ. ಜೆಡಿಎಸ್‌ನದು ಬೇರೆಯೇ ಲೆಕ್ಕಾಚಾರವಿದ್ದು, ಫಲಿತಾಂಶ ಪ್ರಕಟಗೊಂಡ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಪಡೆಯುವ ಸಂಖ್ಯೆ ನೋಡಿಕೊಂಡು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.