Advertisement

ವಿಶ್ವಕಪ್‌ ಗೆಲ್ಲುವ ಅದೃಷ್ಟ ಯಾರಿಗೆ

01:13 AM Jul 14, 2019 | Team Udayavani |

ವಿಲಿಯಮ್ಸನ್‌-ಮಾರ್ಗನ್‌
ಈ ಬಾರಿಯ ವಿಶ್ವಕಪ್‌ ಚಾಂಪಿಯನ್‌ ಯಾರೇ ಆದರೂ ಚೊಚ್ಚಲ ನಾಯಕನಾಗಿ ಮೊದಲ ಬಾರಿಗೆ ಕಪ್‌ ಎತ್ತಿದ್ದ ಕೀರ್ತಿ ಅವರದ್ದಾಗಲಿದೆ. ಈ ಅದೃಷ್ಟ ಕೇನ್‌ ವಿಲಿಯಮ್ಸನ್‌-ಇಯಾನ್‌ ಮಾರ್ಗನ್‌ ಅವರಲ್ಲಿ ಯಾರಿಗೆ ಎನ್ನುವುದು ಲಾರ್ಡ್ಸ್‌ ಅಂಗಳದಲ್ಲಿ ತಿಳಿಯಲಿದೆ.

Advertisement

ಇತ್ತಂಡಗಳ ನಾಯಕರು ಕೂಲ್‌ ಕ್ಯಾಪ್ಟನ್‌ ಎಂದೇ ಗುರುತಿಸಿಕೊಂಡಿದ್ದಾರೆ. ಪಂದ್ಯ ಗೆದ್ದರೂ, ಸೋತರೂ ಖುಷಿ ಮತ್ತು ನೋವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇಬ್ಬರಲ್ಲಿರುವುದೇ ವಿಶೇಷ. ವಿಶ್ವಕಪ್‌ನ ಅಗ್ರಸ್ಥಾನಿಯಾಗಿದ್ದ ಭಾರತವನ್ನು ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ 18 ರನ್ನುಗಳಿಂದ ಕೆಡವಿದರೂ ಗೆಲುವನ್ನು ಅಬ್ಬರದಿಂದ ಸಂಭ್ರಮಾಚರಣೆ ಮಾಡದ ವಿಲಿಯಮ್ಸನ್‌ ನಡೆ ಇದಕ್ಕೆ ಉತ್ತಮ ನಿದರ್ಶನ. ಮಾರ್ಗನ್‌ ಮತ್ತು ವಿಲಿಯಮ್ಸನ್‌ ಇಬ್ಬರೂ ಈ ಬಾರಿಯ ವಿಶ್ವಕಪ್‌ನ ವೈಯಕ್ತಿಕ ಅತ್ಯಧಿಕ ಗಳಿಕೆಯಲ್ಲಿ ಸಮಾನ ರನ್‌ (148 ರನ್‌) ಗಳಿಸಿರುವುದು ಇನ್ನೊಂದು ವಿಶೇಷ.

ವಿಲಿಯಮ್ಸನ್‌ ಕಿವೀಸ್‌ ತಂಡಕ್ಕೆ ಹೆಚ್ಚಿನ ಬಲ
ಈ ಬಾರಿಯ ವಿಶ್ವಕಪ್‌ ಕೂಟದಲ್ಲಿ ವಿಲಿಯಮ್ಸನ್‌ 2 ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಂಡ ಎಷ್ಟೇ ಸಂಕಷ್ಟದಲ್ಲಿದ್ದರೂ ಬ್ಯಾಟಿಂಗ್‌ ಮೂಲಕ ತಂಡದ ಮೊತ್ತವನ್ನೂ 250ರ ಗಡಿ ದಾಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ 548 ರನ್‌ ಬಾರಿಸಿದ್ದಾರೆ.

ಇಯಾನ್‌ ಮಾರ್ಗನ್‌
2015ರ ವಿಶ್ವಕಪ್‌ನಲ್ಲಿ ಮೊದಲ ಹಂತದಲ್ಲೇ ಹೊರಬಿದ್ದಾಗ ಇನ್ನೆಂದೂ ನಾವು ವಿಶ್ವಕಪ್‌ ಗೆಲ್ಲಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದರಂತೆ. ಆದರೆ ನಾಯಕರಾದ ಬಳಿಕ ತಂಡದ ಎಲ್ಲ ಆಟಗಾರರಲ್ಲಿ ಧೈರ್ಯ ತುಂಬಿ ಎದೆಗುಂದಬೇಡಿ, ನಮಗೂ ಒಂದು ದಿನ ಅವಕಾಶ ಬರಬಹುದು ಎಂದು ಹುರಿದುಂಬಿಸಿ ನಾಲ್ಕು ವರ್ಷಗಳಲ್ಲಿ ಇಂಗ್ಲೆಂಡ್‌ ಬಹಳಷ್ಟು ಪ್ರಗತಿ ಸಾಧಿಸಿ ನಂಬರ್‌ ವನ್‌ ಆಗುವಲ್ಲಿ ಮಾರ್ಗನ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ 1 ಶತಕವನ್ನು ಬಾರಿಸಿದ್ದಾರೆ. ಫೈನಲ್‌ ಪಂದ್ಯದಲ್ಲೂ ಉತ್ತಮವಾಗಿ ಆಟವಾಡಿ ತಂಡಕ್ಕೆ ಕಪ್‌ ಗೆಲ್ಲಿಸುವ ಪಣ ತೊಟ್ಟಿದ್ದಾರೆ.

ಟಿಕೆಟ್‌ ಬೆಲೆ 1.50 ಲಕ್ಷ ರೂ.ಗೇರಿಕೆ
ವಿಶ್ವಕಪ್‌ ಫೈನಲ್‌ ಹತ್ತಿರ ಬಂದಂತೆ ಟಿಕೆಟ್‌ಗಳ ಮರು ಮಾರಾಟವೂ ಜೋರಾಗಿದೆ. ಪರಿಣಾಮ ಮೂಲ ಬೆಲೆಗಿಂತ 50 ಪಟ್ಟು ಬೆಲೆ ದುಬಾರಿಯಾಗಿದೆ. 1.50 ಲಕ್ಷ ರೂ.ಗಳವರೆಗೆ (2000 ಯೂರೋಸ್‌) ಬೆಲೆಯೇರಿಕೆಯಾಗಿದೆ. ಸ್ಟಬ್‌ಹಬ್‌, ವೈಯಾಗೊಗೊ ವೆಬ್‌ಸೈಟ್‌ಗಳಲ್ಲಿ ಮರುಮಾರಾಟ ತೀವ್ರವಾಗಿದೆ. ಐಸಿಸಿ ತನ್ನ ವೆಬ್‌ಸೈಟ್‌ ಮೂಲಕ ಮರು ಮಾರಾಟಕ್ಕೆ ಚಾಲನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next