ನಾರ್ತ್ ವೆಸ್ಟ್ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ ಡಾ.ಉದಿತ್ ರಾಜ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆಮ್ ಆದ್ಮಿ ಪಕ್ಷದ ವತಿಯಿಂದ ಗುಗನ್ ಸಿಂಗ್ ರಂಗಾ, ಕಾಂಗ್ರೆಸ್‌ನಿಂದ ರಾಜೇಶ್ ಲಿಲೋತಿಯಾ ಕಣದಲ್ಲಿ ಇದ್ದಾರೆ. 2014ರಲ್ಲಿ ಬಿಜೆಪಿಯ ಡಾ.ಉದಿತ್ ರಾಜ್ ಗೆದ್ದಿದ್ದರು. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ರೇಖಾ ಬಿದ್ಲಾನ್ ಸೋಲುಂಡಿದ್ದರು.
ಈ ಬಾರಿ ಬಿಜೆಪಿ ಪಂಜಾಬಿ ಗಾಯಕ ಹನ್ಸ್ ರಾಜ್ ಹನ್ಸ್ ಅವರನ್ನು ಕಣಕ್ಕೆ ಇಳಿಸಿದೆ. ಮಾಜಿ ಕ್ರಿಕೆಟಿಗ, ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಹುರಿಯಾಳು ಗೌತಮ್ ಗಂಭೀರ್ ವಿರುದ್ಧದ ಕೇಳಿ ಬಂದ ಆರೋಪದ ಮಾದರಿಯಲ್ಲಿ ಗಾಯಕನ ವಿರುದ್ಧವೂ ಆರೋಪಗಳು ಕೇಳಿ ಬಂದಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ‘ಹನ್ಸ್ ರಾಜ್ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳದಲ್ಲಿದ್ದವರು. ನಂತರ ಅವರು ಇಸ್ಲಾಂಗೆ ಮತಾಂತರವಾಗಿದ್ದಾರೆ’ ಎಂದು ಆರೋಪಿ ಸಿದ್ದಾರೆ. ಅದಕ್ಕೆ ಉತ್ತರಿಸಿರುವ ಹನ್ಸ್ ‘ಕೇಜ್ರಿವಾಲ್ ನಂಬುವಂತೆ ಸುಳ್ಳು ಹೇಳುತ್ತಾರೆ. ಮಾಧ್ಯಮಗಳೂ ಅದನ್ನು ಖಚಿತಪಡಿಸದೆ ಪ್ರಕಟಿಸುತ್ತವೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರೆ ಹಲವಾರು ಸುನ್ನಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೆ’ ಎಂದಿದ್ದಾರೆ.
ಬಿಜೆಪಿ ನಾಯಕರಾಗಿದ್ದ ಗುಗನ್ ಸಿಂಗ್ ರಂಗಾ 2017ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ಈ ಬಾರಿ ಅವರು ವಾಯವ್ಯ ದೆಹಲಿಯ ಹುರಿಯಾಳಾಗಿದ್ದಾರೆ. ನವದೆಹಲಿಯ ಪಟೇಲ್ನಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ರಾಜೇಶ್ ಲಿಲೋತಿಯಾ ಪಕ್ಷದ ಅಭ್ಯರ್ಥಿ. ಇತ್ತೀಚೆಗಷ್ಟೇ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಇನ್ನು ಈ ಕ್ಷೇತ್ರದ ಬಗ್ಗೆ ಹೇಳುವುದಾದರೆ, 2008ರಲ್ಲಿ ಕ್ಷೇತ್ರಗಳ ಮರು ವಿಂಗಡಣೆ ಬಳಿಕ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ರಚನೆಯಾದ ಒಟ್ಟು ಏಳು ಕ್ಷೇತ್ರಗಳಲ್ಲಿ ಇದೂ ಒಂದು. ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಗೆ 8,245 ಮಂದಿ ಜನರು ಈ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆ, ಯೋಗ್ಯವಾದ ಕುಡಿಯುವ ನೀರಿನ ಕೊರತೆ ಮತ್ತು ದೆಹಲಿ ಮೆಟ್ರೋದ 4ನೇ ಹಂತಕ್ಕಾಗಿ ಈ ಪ್ರದೇಶದ ಜನರು ಕಾಯುತ್ತಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕೂಡ ಈ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಉಂಟಾಗುತ್ತಿರುವ ಸಮನ್ವಯದ ಸಮಸ್ಯೆ ಜನರಿಗೆ ಬಹುವಾಗಿ ಕಾಡುತ್ತಿದೆ. ಕಿರಾರಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಋತುರಾಜ್ ಝಾ ಪ್ರಕಾರ ‘ಉದಿತ್ ರಾಜ್ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿಲ್ಲ. ಸಂಚಾರ ದಟ್ಟಣೆಯಂಥ ಪ್ರಮುಖ ವಿಚಾರಗಳ ಪರಿಹಾರಕ್ಕೆ ಅವರು ಮನಸ್ಸು ಮಾಡಿಯೇ ಇಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದರ ಬಗ್ಗೆಯೇ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಕಳೆದ ವರ್ಷ ಮಂಗೋಲ್ಪುರಿಯಲ್ಲಿ ಸುಮಾರು 900 ಎಫ್ಐಆರ್‌ಗಳು ದಾಖಲಾಗಿವೆ. ಅದು ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ.’
ಕೇಜ್ರಿವಾಲ್ ನೇತೃತ್ವದ ಸರ್ಕಾರ ಹಿಂದಿನ ಚುನಾವಣೆಯಲ್ಲಿ ವಾಗ್ಧಾನ ಮಾಡಿದ್ದಂತೆ ನಡೆದುಕೊಂಡಿದ್ದರೆ, ಇಂಥ ಸಮಸ್ಯೆಗಳು ಇರುತ್ತಿರಲಿಲ್ಲ ಎಂದು ಬಿಜೆಪಿ ನಾಯಕ, ಶಾಸಕ ವಿಜೇಂದರ್ ಗುಪ್ತಾ ಅಭಿಪ್ರಾಯಪಡುತ್ತಾರೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.17ರಷ್ಟು ದಲಿತರು, ಮುಸ್ಲಿಮರು ಶೇ.13ರಷ್ಟು ಇದ್ದಾರೆ.
ಒಟ್ಟು ಹತ್ತು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ನರೇಲಾ (ಆಪ್), ಬದ್ಲಿ (ಆಪ್), ರಿತಾಲಾ (ಆಪ್), ಬವಾನಾ (ಆಪ್), ಮುಂಡ್ಕಾ (ಆಪ್), ಕಿರಾರಿ (ಆಪ್), ಸುಲ್ತಾನ್‌ಪುರ್ ಮಜ್ರಾ (ಆಪ್), ನಂಗೋಲಿ ಜಾಟ್ (ಆಪ್), ಮಂಗೋಲಿ ಪುರಿ (ಆಪ್), ರೋಹಿಣಿ (ಬಿಜೆಪಿ). ಹತ್ತರ ಪೈಕಿ ಒಂಬತ್ತರಲ್ಲಿ ದೆಹಲಿಯ ಆಡಳಿತಾರೂಢ ಪಕ್ಷದ ಶಾಸಕರೇ ಇದ್ದಾರೆ. ಹೀಗಾಗಿ, ಆಪ್‌ಗೆ ಕೊಂಚ ಧನಾತ್ಮಕವಾಗಿ ಇರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಹದಿನೈದು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದರೂ, ಕೆಲವೊಂದು ಪ್ರದೇಶಗಳಿಗೆ ಮೂಲ ಸೌಕರ್ಯಗಳು ಸಿಕ್ಕಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.