ನವದೆಹಲಿ:ಸಗಟು ದರ ಹಣದುಬ್ಬರವು ಮಾರ್ಚ್ ತಿಂಗಳಿನಲ್ಲಿ ಶೇ.14.55ಕ್ಕೆ ಏರಿಕೆಯಾಗಿದ್ದು, ಇದು ನಾಲ್ಕು ತಿಂಗಳಲ್ಲಿನ ಗರಿಷ್ಠ ಪ್ರಮಾಣವಾಗಿದೆ. ಫೆಬ್ರುವರಿ ತಿಂಗಳಲ್ಲಿ ಸಗಟು ದರ ಹಣದುಬ್ಬರ ಶೇ.13.11ರಷ್ಟಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರೇಮಿಗಳಲ್ಲಿ ಮನಸ್ತಾಪ: ಮಂಗಳೂರಿನಲ್ಲಿ ಮೊಬೈಲ್ ಟವರ್ ಏರಿದ ಯುವಕ !
ಕಚ್ಛಾ ತೈಲ ಬೆಲೆ ಏರಿಕೆ, ನೈಸರ್ಗಿಕ ಅನಿಲ ಮತ್ತು ಆಹಾರೇತರ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಹಣದುಬ್ಬರ ಹೆಚ್ಚಳವಾಗಲು ಕಾರಣವಾಗಿದೆ. ವಾಣಿಜ್ಯ ಸಚಿವಾಲಯ ವರದಿ ಪ್ರಕಾರ, ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಾಗತಿಕ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದ್ದು, ಕಚ್ಛಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ ಎಂದು ಹೇಳಿದೆ.
2022ರ ಮಾರ್ಚ್ ನಲ್ಲಿ ಸಗಟು ದರ ಹಣದುಬ್ಬರ ಶೇ.14.55ಕ್ಕೆ ಹೆಚ್ಚಳವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಏರಿಕೆಯಾಗಿದೆ. 2021ರ ಮಾರ್ಚ್ ನಲ್ಲಿ ಸಗಟು ದರ ಹಣದುಬ್ಬರ ಶೇ.7.89ರಷ್ಟಿತ್ತು ಎಂದು ಸಚಿವಾಲಯ ವಿವರಿಸಿದೆ.
ಸಗಟು ದರ ಸೂಚ್ಯಂಕ(ಡಬ್ಲ್ಯುಪಿಐ)ದ ಮಾನದಂಡದ ಮೂಲಕ ಸಗಟು ಹಣದುಬ್ಬರ ಅಂಕಿಅಂಶ ಪಡೆಯಲಾಗುತ್ತದೆ. 2021ರ ಡಿಸೆಂಬರ್ ನಲ್ಲಿ ಸಗಟು ದರ ಹಣದುಬ್ಬರ ಶೇ.14.27ರಷ್ಟಿತ್ತು. ಆದರೆ 2022ರ ಜನವರಿಯಲ್ಲಿ ಸಗಟು ದರ ಹಣದುಬ್ಬರ ಪ್ರಮಾಣ ಶೇ.13.68ಕ್ಕೆ ಇಳಿಕೆಯಾಗಿತ್ತು. ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಶೇ.13.11ಕ್ಕೆ ಇಳಿದಿತ್ತು. ಮತ್ತೊಂದೆಡೆ 2022ರ ಮಾರ್ಚ್ ನಲ್ಲಿ ಸಗಟು ಹಣದುಬ್ಬರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.