Advertisement

ರಸ್ತೆ ಅಭಿವೃದ್ಧಿಗೆ ದಿನವಿಡೀ ಪ್ರತಿಭಟನೆ

09:03 AM Jul 30, 2019 | Team Udayavani |

ಹುಬ್ಬಳ್ಳಿ: ಗ್ರಾಮೀಣ ಭಾಗದ ರಸ್ತೆ ದುರಸ್ತಿಗೆ ಒತ್ತಾಯಿಸಿ ಜಿಪಂ ಉಪಾಧ್ಯಕ್ಷ ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು ಇಡೀ ದಿನ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.

Advertisement

ತಾಲೂಕಿನ ಕುಸುಗಲ್ಲ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಸತತ ಮಳೆ ಮಧ್ಯೆಯೇ ಪ್ರತಿಭಟನಕಾರರು ಯಾವುದಕ್ಕೂ ಜಗ್ಗದೆ ಮಳೆಯಲ್ಲೇ ತಮ್ಮ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸುರಿಯುವ ಮಳೆಯಲ್ಲೇ ಭಜನೆ ಮೂಲಕ ತಮ್ಮ ಗ್ರಾಮಗಳ ರಸ್ತೆ ದುರಸ್ತಿ ಮಾಡಿಸುವಂತೆ ಒತ್ತಾಯಿಸಿದರು.

ಕುಸುಗಲ್ಲ-ಅಳಗವಾಡಿ, ಸುಳ್ಳ-ಹೆಬಸೂರ ಹಾಗೂ ಸುಳ್ಳ-ಹುಬ್ಬಳ್ಳಿ ರಸ್ತೆಗಳು ಹದಗೆಟ್ಟಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬಾರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಕುಸುಗಲ್ಲ, ಬ್ಯಾಹಟ್ಟಿ, ಹೆಬಸೂರು ಹಾಗೂ ಸುಳ್ಳ ಗ್ರಾಮಗಳ ಗ್ರಾಮಸ್ಥರು ಪಟ್ಟು ಹಿಡಿದರು. ಬೆಳಗ್ಗೆ 10:30 ಗಂಟೆಗೆ ಆರಂಭಗೊಂಡ ರಸ್ತೆ ತಡೆ ಪ್ರತಿಭಟನೆ ಸಂಜೆಯಾದರೂ ಪ್ರತಿಭಟನೆ ಹಿಂಪಡೆಯಲಿಲ್ಲ.

ಎಸಿ-ತಹಶೀಲ್ದಾರ್‌ ಬಂದರೂ ಜಗ್ಗಲಿಲ್ಲ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಅಧಿಕಾರಿಗಳು, ತಹಶೀಲ್ದಾರ್‌ ಸಂಗಪ್ಪ ಬಾಡಗಿ, ಉಪವಿಭಾಗಾಧಿಕಾರಿ ಮಹ್ಮದ ಜುಬೇರ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದ ರಸ್ತೆ ದುರಸ್ಥಿ ಮಾಡಿಕೊಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಈ ಭಾಗದ ರಸ್ತೆ ರಿಪೇರಿ ಮಾಡಿಲ್ಲ. ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಯಾರು ಕೇಳುವವರೇ ಇಲ್ಲದಂತಾಗಿದೆ. ರಸ್ತೆ ಗುಂಡಿಗೆ ಮಣ್ಣು ಸುರಿಯುತ್ತಾರೆ. ಮಳೆ ಬಂದಾಗ ಹಾಕಿರುವ ಮಣ್ಣು ದೊಡ್ಡ ರಾಡಿಯಾದರೆ, ಬಿಸಿಲಿಗೆ ಒಣಗಿ ಸಿಕ್ಕಾಪಟ್ಟೆ ಧೂಳು ಬರುತ್ತದೆ. ಜಿಲ್ಲಾಧಿಕಾರಿ ಬಾರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

Advertisement

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಗ್ರಾಮೀಣ ರಸ್ತೆಗಳ ದುರಸ್ತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒತ್ತಾಯಿಸಲಾಗಿದೆ. ಆದರೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಆದ್ದರಿಂದ ಹೋರಾಟದ ಹಾದಿ ಅನಿವಾರ್ಯವಾಗಿದೆ ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟಕ್ಕೆ ಎರಡೆತ್ತಿನ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಹಾಗೂ ಕಲ್ಮಠದ ಸ್ವಾಮೀಜಿ ಸಾಥ್‌ ನೀಡಿದರು. ರೈತ ಮುಖಂಡ ಗುರು ರಾಯನಗೌಡ್ರ, ಕುಸುಗಲ್ಲ ಗ್ರಾಪಂ ಅಧ್ಯಕ್ಷ ಮುದಕಣ್ಣ ಸಂಕರಡ್ಡಿ, ಬ್ಯಾಹಟ್ಟಿ ಗ್ರಾಪಂ ಉಪಾಧ್ಯಕ್ಷ ಅಶೋಕ ಕಲಾಲ, ಅಜಿತ ನವಲೂರ, ಮುದಕಣ್ಣ ಬೆಟದೂರ, ಫಕ್ಕಿರಗೌಡ ಪಾಟೀಲ, ಶಿವಾನಂದ ಪೂಜಾರ, ಜೀವಣ್ಣ ಬೈಲಮ್ಮನವರ, ಬಸಣ್ಣ ಅಣ್ಣಿಗೇರಿ, ಫಕ್ಕೀರಪ್ಪ ದೊಡ್ಡವಾಡ, ನಿಜಗುಣಿ ಬಿಚಗತ್ತಿ, ಮಿರ್ಜಾಣವರ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next