Advertisement

ಪಾವಿತ್ರ್ಯ ಕಾಪಾಡೋರ್ಯಾರೋ ಬಸವಣ್ಣ?

01:28 PM Aug 14, 2017 | |

ವಿಜಯಪುರ: ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣ ಮಾಡುವ ಯೋಚನೆ ನಡೆದಿದೆ. ಇತ್ತ ಮೂಲ ನಂದೀಶ್ವರ ದೇವಸ್ಥಾನ ಪಾವಿತ್ರ್ಯ ಕಳೆದುಕೊಳ್ಳುತ್ತಿದೆ. ವಾರ್ಷಿಕ ಕೋಟಿ ಕೋಟಿ ರೂ. ಆದಾಯವಿದ್ದರೂ ದೇವಸ್ಥಾನದ ಆವರಣದಲ್ಲೇ ಭಕ್ತರು, ಸ್ನಾನ, ಅಡುಗೆ ಮಾಡುವ ಕಾರಣ ಪವಿತ್ರ ಆವರಣದಲ್ಲಿ ದುರವಸ್ಥೆ ರಾಚುವಂತೆ ಮಾಡುತ್ತಿದೆ. ಸಾಮಾಜಿಕ ಕ್ರಾಂತಿ ಪುರುಷ ಬಸವೇಶ್ವರ ಜನ್ಮಸ್ಥಳ ಮಾತ್ರವಲ್ಲ, ಅವರ ಕುಟುಂಬದ ಆರಾಧ್ಯದೈವ ಮೂಲನಂದೀಶ್ವರ ಇರುವ ತಾಣ. ಶ್ರಾವಣ ಮೂರನೇ ಸೋಮವಾರ ನಂದೀಶ್ವರ ಜಾತ್ರೆಗೆ ಸಿದ್ಧತೆ ನಡೆದಿದೆ. ದೇವಸ್ಥಾನ ಸುತ್ತಲೂ ಮಿಠಾಯಿ, ಆಟಿಕೆ ಸಾಮಾನು ಅಂಗಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ ದೇವಸ್ಥಾನದ ಆರಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಂತೆ ನಡೆಯುವ ವ್ಯವಸ್ಥೆಗೆ ಕಡಿವಾಣ ಹಾಕುವ ಕೆಲಸ ನಡೆಯಬೇಕಿದೆ. 2005ರಲ್ಲಿ ನಂದೀಶ್ವರ ದೇವಸ್ಥಾನದ ಟ್ರಸ್ಟ್‌ ವ್ಯವಸ್ಥೆ ರದ್ದು ಮಾಡಿ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲಾಗಿದೆ. ಪ್ರಾಧಿಕಾರಕ್ಕೆ ಸೇರಿಸಿದರೂ ಪ್ರಾಧಿಕಾರದಿಂದ ಬಾಗೇವಾಡಿಗೆ ಅನುದಾನ
ಬರಲೇ ಇಲ್ಲ. ಬದಲಾಗಿ ಇಲ್ಲಿನ ಆದಾಯದಿಂದಲೇ ಸರ್ಕಾರಕ್ಕೆ ವಾರ್ಷಿಕ ಲಕ್ಷ ಲಕ್ಷ ಆದಾಯ ಹೋಗುತ್ತಿದೆ. ನಂದೀಶ್ವರ ದೇವಸ್ಥಾನದ ನವೀಕರಣದ ಹೊರತಾಗಿ ಇತರೆ ಸೌಲಭ್ಯ ದೊರೆತಿಲ್ಲ. ಪಟ್ಟಣದಲ್ಲಿ ದೇವಸ್ಥಾನಕ್ಕೆ ಸೇರಿದ 180 ವಾಣಿಜ್ಯ ಮಳಿಗೆಗಳಿವೆ. ಭಕ್ತರು ನೀಡುವ ದೇಣಿಗೆ, ಹುಂಡಿ, ಧಾರ್ಮಿಕ ವಿವಿಧ ಸೇವೆ, ಕಾಣಿಕೆಗಳಿಂದ ವಾರ್ಷಿಕ ಕೋಟಿ ಕೋಟಿ ರೂ. ಆದಾಯವಿದೆ. ಇದೇ ಹಣದಲ್ಲಿ ಬಸವೇಶ್ವರ ಸ್ಮಾರಕ ಹಾಗೂ ನಂದೀಶ್ವರ ದೇವಸ್ಥಾನದ ಅಭಿವೃದ್ಧಿ ನಡೆಯುತ್ತಿದೆ. ಆದರೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದರೂ ಅದರಿಂದ ಯಾವ ಅನುದಾನ ಬಸವನಬಾಗೇವಾಡಿಗೆ ಬಂದಿಲ್ಲ. ಕಳೆದ ಆರ್ಥಿಕ ವರ್ಷದಲ್ಲೇ 1.35 ಕೋಟಿ ರೂ. ಆದಾಯ ಬಂದಿದ್ದು ಇದೇ ಹಣದಲ್ಲಿ ದೇವಸ್ಥಾನ ಹಾಗೂ ಬಸವ ಸ್ಮಾರಕ ಸ್ವತ್ಛತೆ, ಭದ್ರತೆ, ಪೂಜೆ, ದಾಸೋಹ ಅಂತೆಲ್ಲ 1.09 ಕೋಟಿ ರೂ. ಖರ್ಚಾಗಿದೆ. ಇದರ ಹೊರತಾಗಿಯೂ 25 ಲಕ್ಷ ರೂ. ಉಳಿಕೆ ಆಗಿರುವುದೇ ನಂದೀಶ್ವರ ದೇವಸ್ಥಾನದಿಂದ ಸರ್ಕಾರಕ್ಕಿರುವ ಆದಾಯಕ್ಕೆ ಸಾಕ್ಷಿ. ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ ಕೋಟಿ ಕೋಟಿ ಕುಟುಂಬಗಳಿಗೆ ಬಾಗೇವಾಡಿ ನಂದೀಶ್ವರನೇ ಕುಲದೈವ, ಮನೆದೈವ. ಹೀಗಾಗಿ ಪ್ರತಿ ದಿನ ಮಾತ್ರವಲ್ಲದೇ  ಮಾವಾಸ್ಯೆ, ಸೋಮವಾರ ಇಲ್ಲಿಗೆ ಸಾವಿರಾರು ಭಕ್ತರು ಬರುತ್ತಾರೆ. ಶ್ರಾವಣದ ಮೂರನೇ ಸೋಮವಾರದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಆದರೆ ಭಕ್ತಿಗೆ ಅಗತ್ಯ ಸೌಲಭ್ಯಗಳು ಮಾತ್ರ ಇಲ್ಲವಾಗಿದೆ. ಇಲ್ಲಿಗೆ ಬರುವ ಭಕ್ತರು ಆವರಣದಲ್ಲೇ ಅಳವಡಿಸಿರುವ 7-8 ನಳಗಳಲ್ಲಿ ಪುರುಷ-ಮಹಿಳೆಯರು ಒಂದೇ ಕಡೆ ಬಹಿರಂಗವಾಗಿ ಬಯಲು ಸ್ನಾನ ಮಾಡುತ್ತಾರೆ. ಅಲ್ಲೇ ತಮ್ಮ ಬಟ್ಟೆ ತೊಳೆದು, ಗರ್ಭಗುಡಿಯ ಪಕ್ಕದಲ್ಲೇ ಒಣಗಲು ಹಾಕುತ್ತಾರೆ. ಇದರಿಂದ ದೇವಸ್ಥಾನದ ಇಡಿ ಪರಿಸರ ಅಂದ ಕಳೆದುಕೊಳ್ಳುವ ಜೊತೆಗೆ ಅಸಹ್ಯ ಹುಟ್ಟಿಸಿ, ಧಾರ್ಮಿಕ ಪಾವಿತ್ರ್ಯಕ್ಕೂ ಧಕ್ಕೆ ಆಗುತ್ತಿದೆ. ದೇವಸ್ಥಾನದ ಆವರಣದಲ್ಲಿ ಸ್ವತ್ಛ ಭಾರತ ಪರಿಕಲ್ಪನೆ ದರ್ಶನವಾಗಿಲ್ಲ. ಈ ವರ್ಷ ಭಕ್ತರ ಅನುಕೂಲಕ್ಕೆ 14 ಶೌಚಾಲಯ, 8 ಸ್ನಾನ ಗೃಹ ಕಟ್ಟಿಸಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿರ್ಮಾಣವಾಗಿದೆ ಎಂದು ಅಧಿ ಕಾರಿಗಳು ಸಮಜಾಯಿಸಿ ನೀಡುತ್ತಾರೆ. ಇನ್ನು ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ಆಗಮಿಸುವ ಭಕ್ತರು ದೇವರಿಗೆ ಸ್ಥಳದಲ್ಲೇ ಪ್ರಸಾದ ತಯಾರಿಸಿ, ನೈವೇದ್ಯ ಮಾಡುವುದು ಇಲ್ಲಿನ ಪರಂಪರೆ. ಆದರೆ ಈ ರೀತಿ ಪ್ರಸಾದ ತಯಾರಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಆವರಣದಲ್ಲೇ ಭಕ್ತರು ಎಲ್ಲೆಂದರಲ್ಲಿ ಕಟ್ಟಿಗೆ ಒಲೆ ಉರಿಸಿ ಪ್ರಸಾದ ತಯಾರಿಸುತ್ತಿದ್ದು, ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ಬಸವ ಜನ್ಮಭೂಮಿಯ ಹಾಗೂ ಕೋಟ್ಯಂತರ ಭಕ್ತರ ಪಾಲಿನ ಆರಾಧ್ಯದೈವ ನಂದೀಶ್ವರ ದೇವಸ್ಥಾನದಲ್ಲಿ
ಇನ್ನಾದರೂ ಪಾವಿತ್ರ್ಯ ರಕ್ಷಣೆಗೆ ಪ್ರಾಧಿಕಾರ ಹಾಗೂ ಸ್ಥಳೀಯರ ಆದ್ಯತೆ ನೀಡಬೇಕು. ಧಾರ್ಮಿಕ ಶ್ರದ್ಧೆಯಿಂದ ಆಗಮಿಸುವ ಭಕ್ತರಿಗೆ ಪರಿಶುದ್ಧ ಧಾರ್ಮಿಕ ಪರಿಸರ ನಿರ್ಮಾಣಕ್ಕೆ ಪ್ರಾಧಿಕಾರ ಮುಂದಾಗಲಿದೆಯೇ ಕಾದು ನೋಡಬೇಕು.  

Advertisement
Advertisement

Udayavani is now on Telegram. Click here to join our channel and stay updated with the latest news.

Next