ಮುಂಬಯಿ:ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಬಂದ ʼಬ್ರಹ್ಮಾಸ್ತ್ರʼ ಬಾಲಿವುಡ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ರಣ್ಬೀರ್ ಕಪೂರ್ – ಆಲಿಯಾ ಭಟ್ ರಿಯಲ್ ಲೈಫ್ ಜೋಡಿ, ರೀಲ್ ಲೈಫ್ ನಲ್ಲಿ ಮೋಡಿ ಮಾಡಿತ್ತು. ಸಿನಿಮಾದ ಮೊದಲ ಭಾಗ ಹಿಟ್ ಆದ ಬಳಿಕ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ʼಬ್ರಹ್ಮಾಸ್ತ್ರ ಪಾರ್ಟ್ -1 ಶಿವʼ ನಲ್ಲಿ ರಣ್ಬೀರ್ ಕಪೂರ್ – ಆಲಿಯಾ ಭಟ್ ಜೊತೆ ಅಮಿತಾಭ್ ಬಚ್ಚನ್, ನಾಗಾರ್ಜುನ್, ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಚಿತ್ರದ ಎರಡನೇ ಭಾಗಕ್ಕೆ ʼಬ್ರಹ್ಮಾಸ್ತ್ರ ಪಾರ್ಟ್ -2 ದೇವ್ʼ ಎಂದು ಹೆಸರಿಡಲಾಗಿದೆ. ಎರಡನೇ ಭಾಗದಲ್ಲಿ ದೇವ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದು ಬಿಟೌನ್ ನಲ್ಲಿ ಚರ್ಚೆಗಳು ಆರಂಭವಾಗಿದೆ.
ರಣ್ ವೀರ್ ಸಿಂಗ್ ದೇವ್ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿದೆ. ಇದರೊಂದಿಗೆ ಹೃತಿಕ್ ರೋಷನ್ ಅವರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇವು ಎರಡು ಹೆಸರಿನೊಂದಿಗೆ ಕೇಳಿ ಬರುತ್ತಿರುವ ಇನ್ನೊಂದು ದೊಡ್ಡ ಹೆಸರು ಅದು ರಾಕಿಂಗ್ ಸ್ಟಾರ್ ಯಶ್ ಅವರದ್ದು.
ಈ ಬಗ್ಗೆ ಸ್ವತಃ ನಿರ್ದೇಶಕ ಅಯಾನ್ ಮುಖರ್ಜಿ ಅವರು ಮಾತಾನಾಡಿದ್ದಾರೆ. “ಒಂದು ವೇಳೆ ಯಶ್ ಅವರು ಈ ದೇವ್ ಪಾತ್ರವನ್ನು ಮಾಡಿದರೆ ನನಗೆ ನಿಜ್ಕೂ ತುಂಬಾ ಖುಷಿಯಾಗುತ್ತದೆ. ದೇವ್ ಪಾತ್ರ ಮಾಡಲು ಕೇಳಿ ಬರುತ್ತಿರುವ ದೊಡ್ಡ ಹೆಸರೆಂದರೆ ಅದು ರಣ್ ವೀರ್ ಸಿಂಗ್ ಅವರದ್ದು. ಇತರ ವದಂತಿಗಳ ಬಗ್ಗೆ ನಾನೇನು ಹೇಳಲ್ಲ. ಈ ಪ್ರಶ್ನೆಗಳಿಗೆ ನಾನು ಈಗಲೇ ಉತ್ತರಿಸಲು ಸಾಧ್ಯವಿಲ್ಲ “ಎಂದಿದ್ದಾರೆ. ಅಂದ ಹಾಗೆ “ಬ್ರಹ್ಮಾಸ್ತ್ರ ಪಾರ್ಟ್ -1” ಇದೇ ನವೆಂಬರ್ 4 ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ.