ಜೇವರ್ಗಿ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭೀಮಾನದಿಗೆ ಪ್ರವಾಹ ಬಂದು ಕಲ್ಲೂರ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತಲಿನ ಹಲವು ಜನ ರೈತರ ಫಲವತ್ತಾದ ಜಮೀನು ಹಾಳಾದರೂ ಇಲ್ಲಿಯವರೆಗೂ ನಯಾಪೈಸೆ ಪರಿಹಾರ ವಿತರಿಸದೇ ಇರುವುದರಿಂದ ರೈತರು ಸಂಕಷ್ಟ ಪಡುವಂತಾಗಿದೆ .
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಎನ್ನುವ ಗಾದೆಯಂತೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ರೈತರು ಫಲವತ್ತಾದ ಜಮೀನಿನಲ್ಲಿ ಬೆಳೆ ಬೆಳೆಯುವಂತಾಗದೆ ಪರದಾಡುವಂತೆ ಆಗಿದೆ. ಮಳೆಗಾಲದ ಸಂದರ್ಭದಲ್ಲಿ ಕಲ್ಲೂರ ಬ್ಯಾರೇಜ್‌ಗೆ ಅಳವಡಿಸಲಾದ ಗೇಟ್ ತೆಗೆಯದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕೋಟ್ಯಂತರ ರೂ. ಹಾನಿ ಸಂಭವಿಸಿದೆ.
ಭೀಮಾನದಿ ಪ್ರವಾಹ ಬರುವ ಮುನ್ಸೂಚನೆ ಅಧಿಕಾರಿಗಳಿಗಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ನೆಲೋಗಿ, ಚಿನಮಳ್ಳಿ, ಬಳ್ಳುಂಡಗಿ, ಮಾಹೂರ, ಯಂಕಂಚಿ, ಕಲ್ಲೂರ.ಬಿ, ಕೂಡಲಗಿ, ಬಳ್ಳುಂಡಗಿ, ಕೂಟನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ನೂರಾರು ಎಕರೆ ಬೆಳೆ, ಜಮೀನು ಹಾಳಾಗಿದೆ. ಅಲ್ಲದೇ ಎರಡು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಚಿನಮಳ್ಳಿ ಕಡೆಗೆ ಹೋಗುವ ರಸ್ತೆ ಹಾಗೂ ಬ್ಯಾರೇಜ್‌ಗೆ ಸಾಕಷ್ಟು ಹಾನಿ ಸಂಭವಿಸಿದೆ. 150 ಅಡಿಗೂ ಹೆಚ್ಚು ಆಳವಾದ ತಗ್ಗು ಬಿದ್ದು, ರಸ್ತೆ ಕಿತ್ತುಕೊಂಡು ಹೋಗಿದೆ. ನೆಲೋಗಿ ಕಡೆ ಕೂಡ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದೆ. ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಳಾದ ರೈತರ ಜಮೀನು ಸರ್ವೇ ಮಾಡಿ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳದಿರುವುದು ಸಂಕಷ್ಟಕ್ಕೀಡು ಮಾಡಿದೆ. ಸತತ ಬರಗಾಲದ ನಡುವೆ ರೋಸಿ ಹೋಗಿರುವ ರೈತರು ಪ್ರವಾಹದಿಂದ ಜಮೀನು ಕಳೆದುಕೊಂಡು ಅನಾಥವಾಗಿದ್ದಾರೆ.
ಘಟನೆ ಸಂಭವಿಸಿ ಮೂರು ತಿಂಗಳೂ ಸಮೀಪಿಸುತ್ತಿದ್ದರೂ ಸಂಬಂಧಪಟ್ಟ ಜನಪ್ರತಿನಿ ಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ರೈತರ ನೆರವಿಗೆ ಧಾವಿಸದಿರುವುದು ದುರ್ದೈವದ ಸಂಗತಿ. ಶನಿವಾರ ಬ್ಯಾರೇಜ್‌ಗೆ ಭೇಟಿ ನೀಡಿದ ಶಾಸಕ ಡಾ| ಅಜಯಸಿಂಗ್ ಹಾನಿಗೀಡಾದ ಕಲ್ಲೂರ ಬ್ರಿಡ್ಜ್ ಕಂ ಬ್ಯಾರೇಜ್ ದುರಸ್ತಿಗೆ 50 ಕೋಟಿ ರೂ.ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ತಪ್ಪಿತಸ್ಥ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆ ಜಮೀನು ಹಾಳಾಗಿ ಸಂಕಷ್ಟ ಪಡುತ್ತಿರುವ ರೈತರಿಗೆ ಪರಿಹಾರದ ಜೊತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.