Advertisement

ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

07:54 PM Jul 30, 2021 | Team Udayavani |

ವಿಶೇಷ ವರದಿ 

Advertisement

ಗದಗ: ಬಸವರಾಜ ಬೊಮ್ಮಾಯಿ ಅವರು ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬೆನ್ನಲ್ಲೇ ಜಿಲ್ಲೆಯ ಮೂವರು ಬಿಜೆಪಿ ಶಾಸಕರ ಪೈಕಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ ಎಂಬುದು ಚರ್ಚೆ ಮುನ್ನೆಲೆಗೆ ಬಂದಿದೆ. ಜೊತೆಗೆ ನಾನಾ ಕಾರಣಗಳಿಂದಾಗಿ ಜಿಲ್ಲೆಗೆ ಮಂತ್ರಿ ಸ್ಥಾನವೂ ಕೈತಪ್ಪುವ ಆತಂಕವೂ ಆವರಿಸಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದ್ದರಿಂದ ಸಹಜವಾಗಿ ಸಂಪುಟವೂ ವಿಸರ್ಜನೆಯಾಗಿದೆ. ಇದೀಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆಯಾಗಲಿದೆ. ನೂತನ ಸಂಪುಟದಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ. ಯಾರಿಗೆ ಕೋಕ್‌ ನೀಡಲಾಗುತ್ತದೆ ಎಂಬುದು ಜಿಲ್ಲೆಯ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕಾಂಗ್ರೆಸ್‌ ಪಾಲಾಗಿದ್ದರೆ, ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ. ಈ ಮೂವರಲ್ಲಿ ಸಿ.ಸಿ. ಪಾಟೀಲ ಹಾಗೂ ಕಳಕಪ್ಪ ಬಂಡಿ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ಹಿರಿಯರ ಸಾಲಿನಲ್ಲಿ ಸಿಸಿಪಿಗೆ ಸ್ಥಾನ?: ಆ ಪೈಕಿ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಅತ್ಯಾಪ್ತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. 2004, 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರಕಾರದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ (2008- 2010), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ(2010-12) ಕಾರ್ಯನಿರ್ವಹಿಸಿದ್ದರು. ಜೊತೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದರು. ಅದರಂತೆ ಈ ಬಾರಿ ಯಡಿಯೂರಪ್ಪ ಸರಕಾರದಲ್ಲಿ ಒಂದು ವರ್ಷ 11 ತಿಂಗಳು ಸಿ.ಸಿ. ಪಾಟೀಲ ಸಚಿವರಾಗಿದ್ದರು. ಆರಂಭದಲ್ಲಿ ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು. ಆದರೆ, ಆಪರೇಷನ್‌ ಕಮಲದಿಂದ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ಶಾಸಕರಿಗೆ ಸಚಿವ ಸ್ಥಾನ ನೀಡುವ ಒತ್ತಡವಿದ್ದರೂ ಸಿ.ಸಿ.ಪಾಟೀಲ ಅವರನ್ನು ಸಂಪುಟದಲ್ಲಿ ಮುಂದುವರಿಸಲಾಗಿತ್ತು. ಆನಂತರ ಪ್ರಮುಖ ಖಾತೆಗಳ ಬದಲಾವಣೆ ಸಂದರ್ಭದಲ್ಲೂ ಸಿ.ಸಿ. ಪಾಟೀಲ ಅವರಿಗೆ ಸಣ್ಣ ಕೈಗಾರಿಕೆಯೊಂದಿಗೆ ಮುಖ್ಯಮಂತ್ರಿಗಳ ಬಳಿಯಿದ್ದ ವಾರ್ತಾ ಮತ್ತು ಪ್ರಸಾರ ಖಾತೆ ಬಿಟ್ಟುಕೊಟ್ಟಿದ್ದರು. ಹಾಲಿ ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲೂ ಸ್ಥಾನ ಪಡೆಯುವ ಪ್ರಯತ್ನ ಮುಂದುವರಿಸಿದ್ದಾರೆ. ಶುದ್ಧ ಹಸ್ತರು ಹಾಗೂ ಬಿಎಸ್‌ವೈ ಆಪ್ತ ಬಳಗದಲ್ಲಿರುವ ಸಿ.ಸಿ. ಪಾಟೀಲ್‌ಗೆ ಹಿರಿಯರ ಸಾಲಿನಲ್ಲಿ ಮತ್ತೆ ಮಂತ್ರಿ ಸ್ಥಾನ ಒಲಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Advertisement

ಸಂಪುಟದಲ್ಲಿ ಬಂಡಿಗೆ ಸ್ಥಾನ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ರೋಣ ಶಾಸಕ ಕಳಕಪ್ಪ ಜಿ. ಬಂಡಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ತುಸು ಹೆಚ್ಚಿವೆ. 2004, 2008 ಮತ್ತು 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿದ್ದಾರೆ. ಈ ಹಿಂದೆ ಜಗದೀಶ್‌ ಶೆಟ್ಟರ್‌ ಅವರ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದರು. ಸದ್ಯ ಸಣ್ಣ ಕೈಗಾರಿಕೆ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಬೊಮ್ಮಾಯಿ ಸರಕಾರದಲ್ಲಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಬೊಮ್ಮಾಯಿ ಸರಕಾರದಲ್ಲಿ ತಮಗೆ ಸಚಿವ ಸ್ಥಾನ ಬೇಡವೆಂದಿರುವ ಜಗದೀಶ್‌ ಶೆಟ್ಟರ್‌ ತಮ್ಮ ಆಪ್ತ ಕಳಕಪ್ಪ ಬಂಡಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ಲಮಾಣಿಗೆ ಹೊಡೆಯುವುದೇ ಲಕ್‌?: ಶಿರಹಟ್ಟಿ ಮೀಸಲು ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯೂ ಇತ್ತೀಚೆಗೆ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಎರಡನೇ ಬಾರಿಗೆ ಶಾಸಕರಾಗಿರುವ ಲಮಾಣಿಗೆ ಸರಕಾರದಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಜಾತಿವಾರು ಆದ್ಯತೆಯಲ್ಲಿ ಸಚಿವ ಸ್ಥಾನ ಒಲಿದು ಬಂದರೂ ಅಚ್ಚರಿಯಿಲ್ಲ. ಜಿಲ್ಲೆಗೆ ಆತಂಕ ಯಾಕೆ?: ಆಪರೇಷನ್‌ ಕಮಲದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೈ ಬಿಟ್ಟು ಕಮಲ ಹಿಡಿದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕಿದೆ. ಜೊತೆಗೆ ರಾಜ್ಯದ ಕಲಬುರ್ಗಿ, ಯಾದಗಿರಿ ಮತ್ತು ರಾಯಚೂರು ಸೇರಿದಂತೆ ಐದಾರು ಜಿಲ್ಲೆಗಳಿಗೆ ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ಆಯಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಟರು ಯೋಚಿಸುತ್ತಿದ್ದಾರೆ. ಅಲ್ಲದೇ ಮತ್ತಿತರೆ ಕಾರಣಗಳಿಂದಾಗಿಯೂ ಜಿಲ್ಲೆಗೆ ಅವಕಾಶ ಕೈತಪ್ಪಬಹುದು ಎಂದು ವಿಶ್ಲೇಷಣೆಗಳು ಆತಂಕಕ್ಕೆ ಕಾರಣ ಎನ್ನಲಾಗಿದೆ.

ಇದೆಲ್ಲದರ ಮಧ್ಯೆಯೂ ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಮುಂದಿನ 20-25 ವರ್ಷಗಳ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಯುವ ಪಡೆಗೆ ಸಂಪುಟದಲ್ಲಿ ಆದ್ಯತೆ ನೀಡಬಹುದು ಎಂಬ ವಾತಾವರಣವಿದೆ. ಹಾಗೇನಾದರೂ, ಆದರೆ, ರೋಣ ಶಾಸಕ ಕಳಕಪ್ಪ ಬಂಡಿ ಅವರಿಗೆ ಅವಕಾಶ ಸಿಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next