ನವದೆಹಲಿ: ಇಡೀ ಜಗತ್ತಿನಲ್ಲಿ 2021ರ ಅಂತ್ಯಕ್ಕೆ 1.49 ಕೋಟಿ ಮಂದಿ ಸಾವನ್ನಪ್ಪಿದ್ದಾರೆ. ಅಂದರೆ, ಈಗ ಬಹಿರಂಗವಾಗಿರುವ ಮೃತರ ಸಂಖ್ಯೆಗಿಂತ ಮೂರು ಪಟ್ಟು ಅಧಿಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜಗತ್ತಿನ ಕೊರೊನಾ ಸಾವು ಸಂಬಂಧಿಸಿದಂತೆ ವರದಿ ಬಿಡುಗಡೆ ಮಾಡಿರುವ ಅದು, ಭಾರತದಲ್ಲಿಯೂ ಕೊರೊನಾದಿಂದಾಗಿ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದಿದೆ. ಆದರೆ, ಈ ವರದಿಯನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ. 2021ರ ಅಂತ್ಯದ ವೇಳೆಗೆ ಭಾರತದಲ್ಲಿ 4.80 ಲಕ್ಷ ಮಂದಿಯಷ್ಟೇ ಸಾವನ್ನಪ್ಪಿದ್ದರು. ಸುಮಾರು ಒಂದು ತಿಂಗಳು ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಈ ವರದಿ ಸಿದ್ಧಪಡಿಸಿತ್ತು.
ಆದರೆ, ಭಾರತ, ಚೀನಾ ಸೇರಿದಂತೆ ದೊಡ್ಡ ದೇಶಗಳು ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಸಾವಿನ ಲೆಕ್ಕಾಚಾರಕ್ಕೆ ನೀವು ಬಳಸಿಕೊಂಡ ಮಾಪನವೇ ಸರಿಯಾಗಿಲ್ಲ ಎಂದು ಭಾರತ ಹೇಳಿತ್ತು. ಪುಟ್ಟ ದೇಶಗಳಿಗೂ ಮತ್ತು ದೊಡ್ಡ ದೇಶಗಳಿಗೂ ಒಂದೇ ಮಾಪನ ಹೇಗೆ ಸರಿಯಾಗುತ್ತದೆ ಎಂದೂ ಪ್ರಶ್ನೆ ಕೇಳಿತ್ತು. ಆದರೂ, ಈಗ ವಿಶ್ವ ಆರೋಗ್ಯ ಸಂಸ್ಥೆ ತನ್ನ ವಿವಾದಾತ್ಮಕ ವರದಿಯನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಜಗತ್ತಿನ ಬೇರೆ ಬೇರೆ ದೇಶಗಳನ್ನು ಟೈರ್ 1 ಮತ್ತು ಟೈರ್ 2 ಎಂದು ವಿಂಗಡಿಸಲಾಗಿದೆ. ಆದರೆ, ಭಾರತವನ್ನು ಟೈರ್ 2ಗೆ ಸೇರಿಸಲಾಗಿದೆ. ಇದನ್ನು ಮೊದಲಿನಿಂದಲೇ ಪ್ರಶ್ನಿಸಿದ್ದೇವೆ. ಅಲ್ಲದೆ, ನೀವು ಸಣ್ಣಪುಟ್ಟ ದೇಶಗಳು ಮತ್ತು ಜನಸಂಖ್ಯೆಯಲ್ಲಿ ದೊಡ್ಡ ದೇಶಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದ್ದೀರಿ. ಇದು ಸರಿಯಲ್ಲ ಎಂದು ಬಲವಾಗಿಯೇ ಪ್ರತಿರೋಧ ವ್ಯಕ್ತಪಡಿಸಿದೆ.