Advertisement

ಕಬ್ಬು ಬೆಳೆದವನ ಪಾಡು ಅಯ್ಯೋ ಪಾಪ..!

02:21 AM Apr 02, 2019 | Sriram |

ಧಾರವಾಡ: ಖಾಲಿ ಯಂತ್ರವೇ ತಿರುಗುತ್ತ ನೀರು ಹೊರ ಹಾಕಲಾರದೇ ಬಿಕ್ಕುತ್ತಿರುವ ಬೋರವೆಲ್‌ಗಳು..ಬಿದ್ದ ಹನಿ ನೀರನ್ನು ಬೆಳೆಗೆ ಇಂಗಿಸುವ ಮುಂಚೆಯೇ ನುಂಗುತ್ತಿರುವ 37 ಡಿಗ್ರಿ ಸೆಲ್ಸಿಯಸ್‌ ನಷ್ಟಿರುವ ಸೂರ್ಯನ ತಾಪಮಾನ..ಅಯ್ಯೋ ಯಾಕಾದ್ರು ಕಬ್ಬು ಬೆಳೆದೆವೋ ಎಂದು ನಿಟ್ಟುಸಿರು ಬಿಡುತ್ತಿರುವ ಕಬ್ಬು ಬೆಳೆಗಾರರು…

Advertisement

ಸದ್ಯ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ರೈತರ ಉದಾಟಛಿರದ ಭಾಷಣ ಮಾಡುತ್ತಿದ್ದಾರೆ. ಆದರೆ ಧಾರವಾಡ ಬೆಳಗಾವಿ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊಳವೆಬಾವಿ ಅವಲಂಬಿಸಿ ಕೊಂಡು ಕಬ್ಬು ಬೆಳೆಯುವ ರೈತರು ಮಾತ್ರ “ಚುನಾವಣೆ ಏನ್‌ ಮಾಡೂದ್ರಿ ಮೊದುರೈತರ ಹೊಲಗಳಿಗೆ ಕನಿಷ್ಠ ಅರೇ ನೀರಾವರಿಗಾದರೂ ದೊಡ್ಡ ಯೋಜನೆಗಳ ಮೂಲಕ ನೀರು ಕೊಡಿ’ ಎನ್ನುತ್ತಿದ್ದಾರೆ.

ಉತ್ತರಕನ್ನಡ ಜಿಲ್ಲೆ ಹಳಿಯಾಳ, ಬೆಳಗಾವಿ ಜಿಲ್ಲೆ ಖಾನಾಪೂರ ಮತ್ತು ಮುನವಳ್ಳಿಯಲ್ಲಿರುವ ಕಬ್ಬಿನ ಕಾರ್ಖಾನೆಗಳಿಗೆ ಕಳೆದ ಹತ್ತು ವರ್ಷಗಳಿಂದ ಕಬ್ಬು ಪೂರೈಸುತ್ತಿರುವ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆ ಕಬ್ಬು ಬೆಳೆಗಾರರು ಸದ್ಯ ನೀರಿನ ಅಭಾವ ಎದುರಾಗಿದ್ದರಿಂದ ಆತಂಕಕ್ಕೊಳಗಾಗಿದ್ದಾರೆ.

ದೀಪಾವಳಿ ನಂತರ ಅಂದರೆ ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ ಅತಿ ಹೆಚ್ಚಾಗಿ ಕಬ್ಬು ಕಟಾವುಮತ್ತು ಮರು ನಾಟಿ ನಡೆಯುತ್ತದೆ. ಈ ವೇಳೆಯಲ್ಲಿ ಸಾಮಾನ್ಯವಾಗಿ ಕೊಳವೆಬಾವಿಗಳಿಂದ ಚೆನ್ನಾಗಿ ನೀರು ಸುರಿಯುತ್ತದೆ. ಆದರೆ ಮಾರ್ಚ್‌-ಏಪ್ರಿಲ್‌ ನಷ್ಟೊತ್ತಿಗೆ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು ಈ ನಾಲ್ಕೂ ಜಿಲ್ಲೆಯಲ್ಲಿನ ಕೊಳವೆಬಾವಿ ಆಧಾರಿತ ರೈತರು ಇದೀಗ ಮುಂಗಾರು ಪೂರ್ವ ಮಳೆಯ ದಾರಿಯನ್ನೇ ಕಾಯುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕಬ್ಬು: ಧಾರವಾಡ ಜಿಲ್ಲೆಯ ಧಾರವಾಡ ಮತ್ತು ಕಲಘಟಗಿ ತಾಲೂಕಿ ನಲ್ಲಿಅತಿ ಹೆಚ್ಚು ಜನರು ಕಬ್ಬು ಬೆಳೆಯುತ್ತಿದ್ದು, ಇಲ್ಲಿ (2019, ಫೆಬ್ರವರಿ) ಅಂಕಿ ಅಂಶಗಳ ಅನ್ವಯ 77 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ, ಜೋಯಿಡಾ ತಾಲೂಕಿನಲ್ಲಿ ಬರೊಬ್ಬರಿ 59 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿದೆ. ಹಾವೇರಿ ಜಿಲ್ಲೆಯ ಹಾನಗಲ್‌,ಹಾವೇರಿ ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿದೆ. ಇನ್ನು ಬೆಳಗಾವಿ ಜಿಲ್ಲೆ ಬೆಳಗಾವಿ,ಖಾನಾಪೂರ ತಾಲೂಕಿನಲ್ಲಿ 67ಸಾವಿರ ಹೆಕ್ಟೇರ್‌
ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.

Advertisement

ಬಾಡಿಗೆ ಬೋರ್‌ವೆಲ್‌: ಈ ಪ್ರದೇಶಗಳಲ್ಲಿ ಸದ್ಯ ಶೇ.70 ಕೊಳವೆಬಾವಿಗಳಲ್ಲಿನ ನೀರು ಬತ್ತಿದ್ದು, ಶೇ.30 ಬೋರ್‌ವೆಲ್‌ಗ‌ಳು ನೀರು ಸುರಿಯುತ್ತಿವೆ.ಈಗಾಗಲೇ ಸಾಕಷ್ಟು ಹಣ ಸುರಿದು ಕಬ್ಬು ಹಾಕಿದ ರೈತರು ನೀರು ಇರುವ ಕೊಳವೆಬಾವಿ ಗಳಿಂದ ನೀರನ್ನು ಕೊಂಡು ಬೆಳೆಗೆ ಹಾಯಿಸುತ್ತಿ ದ್ದಾರೆ.ಒಂದು ಗಂಟೆಗೆ 300 ರೂ.ನಂತೆ ನೀರನ್ನು ಕೊಂಡು ರೈತರು ಕಬ್ಬು ಬದುಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಇನ್ನೂ ಮಾರ್ಚ್‌ ಕೊನೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಾಗಲಿದ್ದು, ಕಬ್ಬು ಬೆಳೆಗಾರರು ನೀರಿಗಾಗಿ ಇನ್ನಷ್ಟು ಪರದಾಡುವ ಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ.

ಮಳೆ ಕೈ ಹಿಡಿಯುವ ನಿರೀಕ್ಷೆ: ಇನ್ನು ಏಪ್ರಿಲ್‌ ಮತ್ತು ಮೇನಲ್ಲಿ ಸುರಿಯುವ ಮುಂಗಾರು ಪೂರ್ವ ಮಳೆಗಳು ಈ ನಾಲ್ಕೂ ಜಿಲ್ಲೆಗಳಲ್ಲಿ ಪ್ರತಿಸಲ ಚೆನ್ನಾಗಿ ಸುರಿಯುತ್ತವೆ. ಕಬ್ಬು ಬೆಳೆಗಾರರಿಗೆ ಪ್ರತಿವರ್ಷ ಈ ಮಳೆಗಳೇ ಮುಖ್ಯ ಮಳೆಗಳು. ಕಬ್ಬು ಹುಲುಸಾಗಿ ಬೆಳೆಯುವ ಸಂದರ್ಭಕ್ಕೆ ಸುರಿಯುವ ಈ ಮಳೆಗಳು ಸರಿಯಾಗಿ ಕೈ ಹಿಡಿದರೆ ಮಾತ್ರ ಕಬ್ಬು ರೈತರ ಕೈ ಸೇರುತ್ತದೆ. ಹೀಗಾಗಿ ಸದ್ಯ ಈ ಭಾಗದ ಕಬ್ಬು ಬೆಳೆಗಾರರು ಮುಂಗಾರು ಪೂರ್ವ ಮಳೆಗಳ ನಿರೀಕ್ಷೆಯಲ್ಲಿದ್ದು, ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.

ಕೊಳವೆ ಬಾವಿಗಳಿಂದ
ಅಂತರ್ಜಲ ಕುಸಿತ ಕೇವಲ ಹತ್ತು ವರ್ಷಗಳ ಹಿಂದೆ ಈ ಭಾಗವೆಲ್ಲ ಹುಲುಸಾಗಿ ದೇಶಿ ತಳಿಯ ಭತ್ತ ಬೆಳೆಯುವ ಭೂಮಿಯಾಗಿತ್ತು. ಆದರೆ ಇಲ್ಲಿ ಇದ್ದಕ್ಕಿದ್ದ ಹಾಗೆ ವಾಣಿಜ್ಯಬೆಳೆ ಕಬ್ಬು ತನ್ನ ಅಧಿಪತ್ಯ ಸ್ಥಾಪಿಸಿಕೊಂಡಿದೆ. ಕಬ್ಬಿಗೆ ಸಾಕಷ್ಟು ನೀರು ಬೇಕಿದ್ದರಿಂದ ಎಲ್ಲರ ರೈತರು ಕೊಳವೆಬಾವಿ ಮೊರೆ ಹೋದರು. ಇಲ್ಲಿನ ಪ್ರತಿ ಗ್ರಾಮದ ಪ್ರತಿ ಸರ್ವೇ ನಂ.ಗಳಲ್ಲೂ ಒಂದೊಂದು ಎರಡೆರಡು ಕೊಳವೆಬಾವಿಗಳನ್ನು ಕೊರೆಸಲಾಗಿದೆ.ಹೀಗಾಗಿ 60-100 ಅಡಿಗೆ ಲಭ್ಯವಾಗುತ್ತಿದ್ದ ಅಂತರ್ಜಲ ಇಂದು 400-500 ಅಡಿಗೆ ಕುಸಿತ ಕಂಡಿದೆ.

ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ವರ್ಷದಿಂದ ವರ್ಷಕ್ಕೆ ನೀರಿನ ತೊಂದರೆಯಾಗುತ್ತಿದ್ದು, ಕಾಳಿ ನದಿ ನೀರು ಈ ಭಾಗಕ್ಕೆ ಹರಿಸುವ ಮಹತ್ವದ ಯೋಜನೆ ಜಾರಿಗೊಳಿಸಬೇಕು. ಇಲ್ಲವಾದರೆ ಈ ಭಾಗದಿಂದ ಜನ ಗುಳೆ ಹೋಗುವ ದಿನ ದೂರವಿಲ್ಲ.
– ಈರಪ್ಪ ಕಾಳೆ, ಲಾಳಗಟ್ಟಿ ರೈತ

  • ಬಸವರಾಜ ಹೊಂಗಲ್‌
Advertisement

Udayavani is now on Telegram. Click here to join our channel and stay updated with the latest news.

Next