Advertisement

ವಿದ್ಯಾರ್ಥಿಗಳ ಗೋಳನ್ನು ಕೇಳ್ಳೋರ್ಯಾರು?

08:57 AM Jul 16, 2018 | Harsha Rao |

ಶಾಲೆಗಳು ವಿದ್ಯಾರ್ಥಿಯನ್ನು ಮಾನವೀಯವಾಗಿ ಕಾಣದೇ ಆತನನ್ನು ಒಂದು “ವಸ್ತು’ವನ್ನಾಗಿ ಕಾಣುತ್ತವೆ. ಇಂತಹ ಸನ್ನಿವೇಶದಲ್ಲಿ ಕಲಿಕೆ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಒಳಗೊಳ್ಳುವ ಒಂದು ಸಂತೋಷ ತುಂಬಿದ ಪ್ರಕ್ರಿಯೆಯಾಗದೇ ಕೇವಲ ಹೇಗೋ ಸಹಿಸಿಕೊಳ್ಳಬೇಕಾದ ಪ್ಯಾಸಿವ್‌ ಆದ ಕ್ರಿಯೆಯಾಗಿ ಹೋಗುತ್ತದೆ.

Advertisement

ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟ ಹಾಗೂ ಶ್ರೇಷ್ಠತೆಯನ್ನು ಸಾಧಿಸುವ ಹಂಬಲದಲ್ಲಿರುವ ನಾವು ಅದರ ಜೀವಾಳವಾದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನೊಮ್ಮೆ ನೋಡಬೇಕು. ದುಃಖದ ವಿಷಯವೆಂದರೆ ಅವರು ಪಂಜರದ ಗಿಳಿಗಳ ಹಾಗೆ. ಹೊರಗಿನಿಂದ ನೋಡಲು ಎಲ್ಲವೂ ಚಂದವೇ! ಆದರೆ ಅವರ ಒಳಗಿನ ನೋವು ಅವರಿಗೇ ಗೊತ್ತು. ಪ್ರಾಥಮಿಕ ಪೂರ್ವ ಶಿಕ್ಷಣದಿಂದ ಹಿಡಿದು ಪಿ.ಎಚ್‌.ಡಿ ತನಕದವರೂ ಈ ವರ್ಗದಲ್ಲಿ ಸೇರುವವರೇ. ಶಿಕ್ಷಣಕ್ಕೆ ಸಂಬಂಧಿಸಿದ ಒಂದಲ್ಲ ಒಂದು ರೀತಿಯ ನೋವು ಅವರ ಮನಸ್ಸನ್ನು  ಮುತ್ತಿಕೊಂಡಿರುತ್ತದೆ. ವಿಷಾದವೆಂದರೆ ಅವರ ನೋವುಗಳನ್ನು ತಂದೆ ತಾಯಿಯರನ್ನು ಬಿಟ್ಟು ಬೇರೆಯವರ ಬಳಿ ಹೇಳಿಕೊಳ್ಳುವ ಹಾಗೆ ಇಲ್ಲ. ಎಲ್ಲವನ್ನೂ ಅರಿತೂ ತಂದೆ ತಾಯಿ ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲಲು ಪ್ರಯತ್ನಿಸದಿರಲೂ ಕಾರಣಗಳಿವೆ. ಎದುರಿಸಿ ಮುಂದೆ ನಿಂತವರನ್ನು ವ್ಯವಸ್ಥೆ ತೀವ್ರವಾಗಿ ಬಗ್ಗು ಬಡಿಯುತ್ತದೆ. ನೂರಾ ಎಂಟು  ತೊಂದರೆಗಳಲ್ಲಿ ಸಿಲುಕಿಸಿಹಾಕಿ ಬಿಡುತ್ತದೆ. ಹಲವು ವರ್ಷಗಳ ಕಾಲ ಅವರು ವ್ಯವಸ್ಥೆಯ ಸುತ್ತಮುತ್ತಲೇ ಸಲಾಮ್‌ ಹೊಡೆಯುತ್ತ ತಿರುಗಾಡುವ ಹಾಗೆ ಮಾಡಿಬಿಡುತ್ತದೆ. ಮತ್ತೆ ಆ ವಿದ್ಯಾರ್ಥಿಯ/ಪಾಲಕರ ಮೇಲೆ ಸಮಯ ಸಾಧಿಸಿ ಪ್ರತೀಕಾರ ತೆಗೆದುಕೊಂಡುಬಿಡುತ್ತದೆ. ಹೀಗಾಗಿ ಪಾಲಕರ-ಶಿಕ್ಷಕರ ಸಭೆಗಳಲ್ಲಿ ಪಾಲಕರು ಮಾತನಾಡಲು, ಸಲಹೆ ಸೂಚನೆ ನೀಡಲು ಮುಂದೆ ಬರುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ನಾವು ವಿದ್ಯಾರ್ಥಿಗಳ ದೃಷ್ಟಿಕೋನವನ್ನು, ನೋವನ್ನು ಅರಿಯುವ ಮತ್ತು ಅದಕ್ಕೆ ಧನಾತ್ಮಕವಾಗಿ ಸ್ಪಂದಿಸುವ ಅಗತ್ಯ ಇದೆ. 

ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಕ್ಕೆ ಹಲವು ಆಯಾಮಗಳಿವೆ. ಮೊದಲನೆಯದೆಂದರೆ ಒಟ್ಟಾರೆಯಾಗಿಯೇ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಸ್ನೇಹಿ ವಾತಾವರಣ ಇಲ್ಲದೇ ಇರುವುದು. ಅವರು ಎದುರಿಸುತ್ತಿರುವ ಕಷ್ಟಗಳ ಕೆಲವು ಉದಾಹರಣೆಗಳನ್ನು ಹೇಳುತ್ತೇನೆ. ಮೊದಲಿನವು ಮೂಲಭೂತ ಸೌಲಭ್ಯಕ್ಕೆ ಸಂಬಂಧಿಸಿದವುಗಳು. ಹಲವು ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಬಹುದಾದ ಸ್ಥಳ ಮತ್ತು ಬೆಂಚುಗಳೂ ಇರುವುದಿಲ್ಲ. ಮಳೆಗಾಲದಲ್ಲಿಯಂತೂ ಕೆಲವೆಡೆ ಕ್ಲಾಸಿನಲ್ಲಿ ಕೊಡೆ ಬಿಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ. ಫ್ಯಾನ್‌ ಇತ್ಯಾದಿಗಳನ್ನಂತೂ ಕೇಳಲೇಬಾರದು. ಕುಡಿಯಲು ಶುದ್ಧವಾದ ನೀರು, ಟಾಯ್ಲೆಟ್‌ಗಳು ಅಪರೂಪ. ಶುದ್ಧ ಟಾಯ್ಲೆಟ್‌ ಹೋಗಲಿ ಕೆಲವು ಕಾಲೇಜುಗಳಲ್ಲಿ ಹುಡುಗಿಯರಿಗೆ ಟಾಯ್ಲೆಟ್‌ಗಳೇ ಇರುವುದಿಲ್ಲ. ಇನ್ನು ಹಾಸ್ಟೆಲ್‌ಗ‌ಳು ಸಾಧಾರಣವಾಗಿ ಎಂತಹ ದುರ್ಗತಿಯಲ್ಲಿರುತ್ತವೆ ಎನ್ನುವುದ‌ು ನೋಡಿದವರಿಗೇ ಗೊತ್ತು.

ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಆಕಾಮಡೇಟ್‌ ಮಾಡಿಕೊಳ್ಳುವ ದೃಷ್ಟಿಯಿಂದ ಹುಡುಗರನ್ನು ತುಂಬಿಕೊಳ್ಳಲಾಗುವ ಇಂತಹ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಕಾಲು ಚಾಚಿ ಮಲಗಲು ಕೂಡ ಸ್ಥಳವಿರುವುದಿಲ್ಲ. ಊಟ ತಿಂಡಿ ಗುಣಮಟ್ಟ ಕಳಪೆ. ಇನ್ನೂ ನೋವಿನ ವಿಷಯವೆಂದರೆ ಹಲವು ಹಾಸ್ಟೆಲ್‌ಗ‌ಳಲ್ಲಿ ಅಧಿಕಾರಿಗಳೆಲ್ಲರೂ ಬಾಸ್‌ಗಳೇ. ಅವರ ಬೈಗುಳಗಳನ್ನು ತಿಂದೇ ಮಕ್ಕಳು ಬೆಳೆಯಬೇಕು.

ಇನ್ನು ಚಿಕ್ಕ ಚಿಕ್ಕ ವಿಷಯಗಳಿಗೂ ವಿದ್ಯಾರ್ಥಿಗಳು ಕಿರುಕುಳ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ ಒಂದು ಅಟೆಸ್ಟೇಷನ್‌ ಮಾಡಿಸಲು, ಅಡ್ಮಿಶನ್‌ ಮಾಡಿಸಲು, ಮರು ಪರೀಕ್ಷೆಗೆ ಅರ್ಜಿ ತುಂಬಲು, ಸ್ಕಾಲರ್‌ಶಿಪ್‌ ಪಡೆದುಕೊಳ್ಳಲು, ಜರ್ನಲ್‌ಗ‌ಳಿಗೆ ಸಹಿ ಹಾಕಿಸಿಕೊಳ್ಳಲು, ಬಸ್‌ಪಾಸ್‌ ಪಡೆಯುವುದಕ್ಕಾಗಿ ಸಹಿ ಹಾಕಿಸಿಕೊಳ್ಳಲು ವಿದ್ಯಾರ್ಥಿಗಳು ಹಲವೊಮ್ಮೆ ದಿನಗಟ್ಟಲೆ ಕಾಯಬೇಕಾಗುತ್ತದೆ.

Advertisement

ಪರೀಕ್ಷೆಗೆ ಸಂಬಂಧಿಸಿದ ನೋವುಗಳಿಗೂ ಕೊನೆಯಿಲ್ಲ. ಪಿ.ಯು. ವಿಜ್ಞಾನ  ವಿದ್ಯಾರ್ಥಿಗಳ ಗತಿಯಂತೂ ಹೇಳತೀರದು. ಅವರಿಗೆ ಇಡೀ ಜೀವನ ಇದೇ  ಪರೀಕ್ಷೆಯ ಮೇಲೆ ಅವಲಂಬಿತವಾಗಿದೆ ಎಂದೇ ಬಿಂಬಿಸಲ್ಪಟ್ಟಿರುತ್ತದೆ. ಕ್ಲಾಸುಗಳು ಬೆಳಿಗ್ಗೆ ಏಳರಿಂದ ಆರಂಭವಾದರೆ ಸಾಯಕಾಲ ಏಳರವರೆಗೆ ನಡೆಯುತ್ತವೆ. ಕೇವಲ ಅರ್ಧತಾಸು ಊಟ ಮತ್ತು ವಿಶ್ರಾಂತಿ. ಅದು ಮುಗಿಸಿ ಬಂದ ನಂತರ ಮತ್ತೆ ಮನೆಯಲ್ಲಿ ಹೋಂ ವರ್ಕ್‌. ಮೊದ ಮೊದಲು ಎಲ್ಲ ವಿದ್ಯಾರ್ಥಿಗಳೂ ಪ್ರಯತ್ನಿಸುತ್ತಾರೆ. ಆದರೆ ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳ ಮೇಲೆ ಎಂತಹ ಒತ್ತಡ ಬರುತ್ತದೆನ್ನುವುದು ಮಾತಿಗೆ ಮೀರಿದ್ದು. ಇದೇ ರೀತಿಯ ಒತ್ತಡದಲ್ಲಿ ಸಿಲುಕಿದ ನಮ್ಮ ಗೆಳೆಯರೊಬ್ಬರ ಮಗ ತಂದೆ ತಾಯಿಯನ್ನೇ ತೀವ್ರವಾಗಿ ದ್ವೇಷಿಸಲಾರಂಭಿಸಿದ. ಮನೆಗೆ ಬರುವುದನ್ನೇ ನಿಲ್ಲಿಸಿದ. ನಮ್ಮ ಸಂಬಂಧಿಯೊಬ್ಬರ ಮಗಳು ಕಾಲೇಜು ಬಿಟ್ಟು ಬಿಡುತ್ತೇನೆಂದು ಹಠಹಿಡಿದು ಕುಳಿತಳು. ದುಃಖದ ಕಥೆ ಹೇಳತೀರದು.

ಈ ರೀತಿಯ ಮಕ್ಕಳ ಶೋಷಣೆ ಪ್ರಾಥಮಿಕ ಹಂತದಲ್ಲಿಯೇ ಆರಂಭವಾಗುತ್ತದೆ. ಹಲವು ಶಾಲೆಗಳಲ್ಲಿ ಒಂದು ಕ್ಲಾಸಿನಲ್ಲಿ ತೊಂಬತ್ತರಿಂದ ನೂರರಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುತ್ತಾರೆ. ಹಿಂದೆ ಕುಳಿತ ವಿದ್ಯಾರ್ಥಿಗಳಿಗೆ ಬೋರ್ಡ್‌ ಮೇಲೆ ಬರೆದಿದ್ದು ಕಾಣಿಸುತ್ತದೆಯೇ ಎನ್ನುವುದೂ ಅನುಮಾನ. ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳೂ ವಿದ್ಯಾರ್ಥಿಗಳಿಗೆ ಅಂಟಿಕೊಳ್ಳುತ್ತವೆ. ಇಂದಿನ ದಿನಗಳಲ್ಲಿ ಅತಿಥಿ ಶಿಕ್ಷಕರೇ ಹೆಚ್ಚು. ಸಿಗುವ ಸಂಬಳ ಅವರಿಗೆ ತೃಪ್ತಿತರುವ ಸಾಧ್ಯತೆ ಕಡಿಮೆ. ಹಾಗಾಗಿ ಅವರ ನಿರುತ್ಸಾಹದ ಬೇಗೆ ಮತ್ತು ನಕಾರಾತ್ಮಕತೆ ಕ್ರಮೇಣ ವಿದ್ಯಾರ್ಥಿಗಳಿಗೂ ಅಂಟು ರೋಗವಾಗಿ ಹರಡಿಕೊಳ್ಳುತ್ತದೆ.

ಜಾನ್‌ ಹಾಲ್ಟ್ ಎನ್ನುವ ಬರಹಗಾರ Why School is Bad for Children ಎನ್ನುವ ಪ್ರಬಂಧದಲ್ಲಿ ಹೇಳುವ ಮಾತು ಇಲ್ಲಿ ಉಲ್ಲೇಖಾರ್ಹ. ಆತ ಹೇಳುವುದೆಂದರೆ ಶಾಲೆಗಳ ವ್ಯವಸ್ಥೆಯೇ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಹತ್ತಿಕ್ಕುವ ವ್ಯವಸ್ಥೆಯಾಗಿ ಮಾರ್ಪಟ್ಟು ಹೋಗಿದೆ. ಶಾಲೆಗಳು ವಿದ್ಯಾರ್ಥಿಯನ್ನು ಮಾನವೀಯವಾಗಿ ಕಾಣದೇ ಆತನನ್ನು ಒಂದು “ವಸ್ತು’ವನ್ನಾಗಿ ಕಾಣುತ್ತವೆ. ಇಂತಹ ಸನ್ನಿವೇಶದಲ್ಲಿ ಕಲಿಕೆ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಒಳಗೊಳ್ಳುವ ಒಂದು ಸಂತೋಷ ತುಂಬಿದ ಪ್ರಕ್ರಿಯೆಯಾಗದೇ ಕೇವಲ ಹೇಗೋ ಸಹಿಸಿಕೊಳ್ಳಬೇಕಾದ ಪ್ಯಾಸಿವ್‌ ಆದ ಕ್ರಿಯೆಯಾಗಿ ಹೋಗುತ್ತದೆ. ವ್ಯವಸ್ಥೆ ವಿದ್ಯಾರ್ಥಿಯ ವ್ಯಕ್ತಿತ್ವದ ಮೇಲೆ ಆಕ್ರಮಣ ಮಾಡಿ ಆತ ಎಲ್ಲಿಯೂ, ಯಾವುದಕ್ಕೂ ಪ್ರಶ್ನೆ ಕೇಳದಿರುವಂತೆ ಮಾಡಿಬಿಡುತ್ತದೆ. ಪ್ರಶ್ನೆ ಕೇಳುವುದೊಂದು ಮಹಾಪರಾಧ ಎಂಬುವುದನ್ನು ಆತನಿಗೆ ಹಲವು ಸಂಕೇತಗಳ ಮೂಲಕ ತಿಳಿಸಲಾಗುತ್ತದೆ. ಹೀಗೆ ಹಾಲ್ಟ್ ಹೇಳುವಂತೆ ಶಾಲೆಗಳು ಮತ್ತು ವ್ಯವಸ್ಥೆ ಒಂದು ಕ್ರಿಯಾಶೀಲವಲ್ಲದ, ಜಡ ವ್ಯವಸ್ಥೆಗಳಾಗಿ ಮಾರ್ಪಟ್ಟು ಹೋಗಿವೆ. ಮುಂದುವರಿದು ಆತ ಹೇಳುವಂತೆ ಶಾಲಾ ವ್ಯವಸ್ಥೆ ವಿದ್ಯಾರ್ಥಿಯ ಪ್ರಾಮಾಣಿಕತೆಯನ್ನೇ ಒತ್ತಿಹಾಕಿ ಆತನಿಗೆ ಸುಳ್ಳು ಹೇಳಲು ಮತ್ತು ಸಂಸ್ಥೆಗಿಂತ ವಿಭಿನ್ನವಾಗಿ ಚಿಂತಿಸದಿರಲು ಕಲಿಸುತ್ತದೆ. ಉದಾಹರಣೆಗೆ ಮೇಲಧಿಕಾರಿಗಳು ಬಂದಾಗ ಅಥವಾ ಅಕ್ರೆಡಿಶನ್‌ ಸಂಸ್ಥೆಗಳು ಪ್ರಶ್ನೆ ಕೇಳಿದಾಗ ವಿದ್ಯಾರ್ಥಿ ತನ್ನ ದುಃಖವನ್ನೆಲ್ಲ ಒಳಗಿಟ್ಟು ಸಂಸ್ಥೆಯಲ್ಲಿ, ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಬೇಕಾಗುತ್ತದೆ.

ಇನ್ನೂ ಸಮಸ್ಯೆಗಳಿವೆ. ನಮ್ಮ ದೇಶದ ಅಪಾರ ಜನಸಂಖ್ಯೆಗೆ ಹೋಲಿಸಿದರೆ ಕಲಿಕೆಯ ಎಲ್ಲ ಸ್ಥರಗಳಲ್ಲಿಯೂ ಇರುವ ಸೀಟುಗಳ ಸಂಖ್ಯೆ ತುಂಬ ಕಡಿಮೆ. ಹಾಗಾಗಿ ಮೇಲಿನ ಹಂತಗಳಲ್ಲಿ, ಅದೂ ಪಿಎಚ್‌.ಡಿ.ಯಂತಹ ಹಂತಗಳಲ್ಲಿ ಇಂದು ಪಿಎಚ್‌.ಡಿ ಮಾಡುವುದಕ್ಕಿಂತಲೂ ಸೀಟು ಪಡೆಯುವುದೇ ದೊಡ್ಡ ಹೋರಾಟ. 

ಒಪ್ಪಿಕೊಳ್ಳಬೇಕಾದ ಮಾತೆಂದರೆ ಶಿಕ್ಷಣ ವ್ಯವಸ್ಥೆಗೂ ತನ್ನದೇ ಆದ ಸಮಸ್ಯೆಗಳಿವೆ. ಮುಖ್ಯ ಸಮಸ್ಯೆ ಸಂಪನ್ಮೂಲದ್ದು. ವಿದ್ಯಾರ್ಥಿಗಳಿಗೆ, ನಾವು ಕನಸು ಕಾಣುವ ಸೌಲಭ್ಯಗಳನ್ನು, ಕಲಿಕೆಯ ಸಂದರ್ಭಗಳನ್ನು ಒದಗಿಸಬೇಕಾದರೆ ಸಂಪನ್ಮೂಲದ ಅವಶ್ಯಕತೆ ಇದೆ. ಅಂತಹ ಬೃಹತ್‌ ಸಂಪನ್ಮೂಲವನ್ನು ಶಿಕ್ಷಣ ಕ್ಷೇತ್ರದ ಮೇಲೆ ವೆಚ್ಚ ಮಾಡುವ ಸ್ಥಿತಿಯಲ್ಲಿ ವ್ಯವಸ್ಥೆಗಳು ಇಲ್ಲ ಎನ್ನುವುದನ್ನೂ ನಾವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಬಡತನ ನಿರ್ಮೂಲನದಂತಹ ಸಮಸ್ಯೆಗಳು ಸರಿಯಾಗಿಯೇ ಹೆಚ್ಚಿನ ಆದ್ಯತೆ ಪಡೆದುಕೊಳ್ಳುತ್ತವೆ. ಆದರೂ ವಿದ್ಯಾರ್ಥಿಗಳ ಜೀವನದ-ಕಲಿಕೆಯ ಗುಣಮಟ್ಟವನ್ನು, ಅವರ ಹಲವು ಪರೀûಾ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಲು ಕನಿಷ್ಠ ಕ್ರಮಗಳನ್ನಾದರೂ ತೆಗದುಕೊಳ್ಳಲು ಈಗ ಯೋಚಿಸಲೇಬೇಕಿದೆ. ಬಹುಶಃ ವಿದ್ಯಾರ್ಥಿಗಳ ನೋವನ್ನು ಕಡಿಮೆಗೊಳಿಸಲು ಎರಡು ಮಾರ್ಗಗಳಿವೆ. ಒಂದನೆಯದೆಂದರೆ ಸಂಸ್ಥೆಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿಸುವುದು ಒಂದು ಶೈಕ್ಷಣಿಕ ಆದ್ಯತೆಯಾಗಬೇಕು. ಎರಡನೆಯದು, ವಿದ್ಯಾರ್ಥಿ ತೀವ್ರ ಸಂಕಷ್ಟದಲ್ಲಿದ್ದಾಗ ಹೇಳಿಕೊಳ್ಳಲು, ಮಾಹಿತಿ ಪಡೆದುಕೊಳ್ಳಲು, ಕೌನ್ಸೆಲಿಂಗ್‌ ಪಡೆದುಕೊಳ್ಳಲು ಪ್ರತಿಯೊಂದು ಸಂಸ್ಥೆಯಲ್ಲಿಯೂ ಜವಾಬ್ದಾರಿಯುತವಾದ ಕೌನ್ಸೆಲಿಂಗ್‌ ಮತ್ತು ವಿದ್ಯಾರ್ಥಿ ಕಲ್ಯಾಣ ಘಟಕವೊಂದು ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುವುದು. ಈ ಕೌನ್ಸೆಲಿಂಗ್‌ ಘಟಕ ಕೂಡ ಸಂಸ್ಥೆಯ ಸುಳ್ಳಿನ ಭಾಗವಾಗಿ ಹೋಗದಂತೆ ಮಾಡವುದು ಮುಖ್ಯ.

ಅದಕ್ಕಾಗಿ ವಿದ್ಯಾರ್ಥಿಯೊಬ್ಬ ಸ್ಥಳೀಯ ಕೌನ್ಸೆಲಿಂಗ್‌ ಘಟಕದಲ್ಲಿ ನೀಡಿದ ದೂರು ರಾಜ್ಯಮಟ್ಟದ ಘಟಕವೊಂದರಲ್ಲಿ ಕೂಡ ದಾಖಲೆಯಾಗುವಂತೆ ಮಾಡುವ ಅಗತ್ಯತೆ ಇದೆ. ಈ ಘಟಕವನ್ನು ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಕೂಡ ಒಂದು ಶಾಸನಬದ್ಧ ಅಪಿಲೇಟ್‌ ಅಥಾರಿಟಿ ಸ್ಥಾಪಿಸಿ ಅದರ ಜತೆ ಲಿಂಕ್‌ ಮಾಡಬಹುದಾಗಿದೆ. ವಿದ್ಯಾರ್ಥಿ ಕಲ್ಯಾಣ ಘಟಕಗಳು ಹಾಗೂ ಅಪಿಲೇಟ್‌ ಅಥಾರಿಟಿಗಳು ಮಾನವೀಯವಾದ, ನ್ಯಾಯ ಸಮ್ಮತವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರಬೇಕು. ಅವು ಕಾಲ್‌ಸೆಂಟರ್‌ ಮಾದರಿಯಲ್ಲಿ ಸಂಪರ್ಕಕ್ಕೆ ಲಭ್ಯವಿರಬೇಕು. ಈ ಅಥಾರಿಟಿ ಎಲ್ಲ ಶೈಕ್ಷಣಿಕ ಹಂತಗಳಲ್ಲಿಯೂ ಅಸ್ತಿತ್ವದಲ್ಲಿ ಬಂದು ಶೀಘ್ರವಾಗಿ, ಸ್ಥಳೀಯವಾಗಿ, ಮಾನವೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರಬೇಕು. ಅಂದರೆ ಒಟ್ಟಾರೆಯಾಗಿ ವಿದ್ಯಾರ್ಥಿಗೆ ತನ್ನ ಸಂಕಟ ಹೇಳಿಕೊಳ್ಳಲು, ಅವಶ್ಯವಿದ್ದರೆ ದೂರು ಸಲ್ಲಿಸಲು ಒಂದು ವ್ಯವಸ್ಥೆಯ ಅಗತ್ಯವಿದೆ.

ಹಾಗೆಂದು ಎಲ್ಲ ಸಮಯಗಳಲ್ಲೂ ವಿದ್ಯಾರ್ಥಿಯೊಬ್ಬ ಹೇಳುತ್ತಿರುವುದೇ ಸರಿ ಎಂದೇನೂ ಅಲ್ಲ. ಆದರೆ ಒಂದು ಮಾನವೀಯ ಸ್ವರದ, ಕೌನ್ಸಿಲಿಂಗ್‌ ಸ್ವರೂಪದ, ಬೇಕಾದ ಮಾಹಿತಿಯನ್ನು ಶಾಂತವಾಗಿ ಆಲಿಸಬಲ್ಲ ವ್ಯವಸ್ಥೆ ಖಂಡಿತಕ್ಕೂ ಎಲ್ಲ ಹಂತಗಳ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ನ್ಯಾಯೋಚಿತ ಸಹಾಯ ನೀಡಬಲ್ಲದು. ಶಿಕ್ಷಣದ ಶ್ರೇಷ್ಠತೆ ಇರುವುದು ಡಿಗ್ರಿಗಳನ್ನು ಪಡೆದ ವಿದ್ಯಾರ್ಥಿಗಳ ಸೃಷ್ಟಿಯಲ್ಲಿ ಅಷ್ಟೇ ಅಲ್ಲ. ಧನಾತ್ಮಕ ಮನಸ್ಸು ಹೊಂದಿ, ಪ್ರೀತಿ ಮತ್ತು ಸಂತೋಷ ತುಂಬಿದ ವ್ಯಕ್ತಿತ್ವ ಹೊಂದಿದ ವಿದ್ಯಾರ್ಥಿಗಳನ್ನು ನಿರೂಪಿಸುವುದರಲ್ಲಿ ಕೂಡ ಇದೆ. 

– ಡಾ. ಆರ್‌.ಜಿ. ಹೆಗಡೆ, ದಾಂಡೇಲಿ

Advertisement

Udayavani is now on Telegram. Click here to join our channel and stay updated with the latest news.

Next