Advertisement

ರಾಜಾಜಿನಗರದಲ್ಲಿ ಕಾಂಗ್ರೆಸ್‌ ರಾಜ ಯಾರು?

12:00 AM Mar 21, 2023 | Team Udayavani |

ಬೆಂಗಳೂರು: ಭಾರತೀಯರು ಅಭಿಮಾನದಿಂದ “ರಾಜಾಜಿ’ ಎಂದು ಕರೆಯುತ್ತಿದ್ದ ದೇಶದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸ್ವತಂತ್ರ ಭಾರತದ ಮೊದಲ ಅಟಾರ್ನಿ ಜನರಲ್‌ ಮತ್ತು ಕೊನೆಯ ಗರ್ವನರ್‌ ಜನಲರ್‌ ಆಗಿದ್ದ ಸಿ. ರಾಜಗೋಪಾಲಚಾರಿ ಅವರ ನಾಮಧೇಯ ಹೊಂದಿರುವ ರಾಜಾಜಿನಗರ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು. ಜನವಸತಿ ಮತ್ತು ಕೈಗಾರಿಕ ಪ್ರದೇಶಗಳ ಸಂಗಮವಾಗಿರುವ ರಾಜಾಜಿನಗರ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Advertisement

ಈವರೆಗೆ 10 ಚುನಾವಣೆಗಳನ್ನು ಕಂಡಿರುವ ರಾಜಾಜಿನಗರ ಕ್ಷೇತ್ರ ಇದೀಗ 11ನೇ ಚುನಾವಣೆಗೆ ಸಿದ್ದವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗಳು ಗರಿಗೆದರಿದ್ದು, ಟಿಕೆಟ್‌ ಸೆಣಸಾಟ ಜೋರಾಗಿದೆ. ಈವ ರೆಗಿನ 10 ಚುನಾವಣೆಗಳಲ್ಲಿ ಐದು ಬಾರಿ ಬಿಜೆಪಿ ಗೆದ್ದಿರುವುದ ರಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದೆ. ಆ ಪ್ರಕಾರ ಈ ಬಾರಿಯೂ ಹಾಲಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಆದರೆ ಕಾಂಗ್ರೆಸ್‌ ಟಿಕೆಟ್‌ ವಿಚಾರ ಗೊಂದಲದ ಗೂಡಾಗಿದೆ. ಮಾಜಿ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅವರ “ರಂಗಪ್ರವೇಶದಿಂದ’ ಕೈ ಪಾಳೆಯದಲ್ಲಿನ ಲೆಕ್ಕಾಚಾರಗಳು ಅಂಕ ತಪ್ಪಿವೆ. ಈ ಮಧ್ಯೆ ರಾಜಾಜಿನಗರದಿಂದ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ ಅನ್ನು ಅಡಕತ್ತರಿಗೆ ಸಿಲುಕಿಸಿದೆ. ಹೀಗಾಗಿ ರಾಜಾಜಿ ನಗರಕ್ಕೆ ಕಾಂಗ್ರೆಸ್‌ ರಾಜಾ ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಜೆಡಿಎಸ್‌ ಗಂಗಾಧರ ಮೂರ್ತಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ, ಇದು ಜೆಡಿಎಸ್‌ನ “ಅಂತಿಮ ಬದಲಾವಣೆ ನಿಯಮ’ಕ್ಕೆ ಇದು ಒಳಪಡಲಿದೆ ಎನ್ನಲಾಗಿದೆ.

ಬಿಜೆಪಿಯಲ್ಲೂ ಆಕಾಂಕ್ಷಿ ಗಳ ಸಂಖ್ಯೆ ಹೆಚ್ಚು: ಈ ಕ್ಷೇತ್ರವನ್ನು ಐದು ಬಾರಿ ಗೆದ್ದಿರುವ ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಮತ್ತೂಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಆದರೆ ಬಿಜೆಪಿಯಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಸಚಿವ ಸ್ಥಾನದಿಂದ ನಿರ್ಗಮಿಸಿದ ಬಳಿಕ ರಾಜಕೀಯವಾಗಿ ಅಷ್ಟೊಂದು ಕಾಣಿಸಿಕೊಂಡಿರಲಿಲ್ಲ. ಆದರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಲಾಗುತ್ತಿದೆ. ಸುರೇಶ್‌ ಕುಮಾರ್‌ ಸತತ ಐದು ಬಾರಿ ಗೆದ್ದಿದ್ದಾರೆ. ಈ ಬಾರಿ ಅವರ ಬದಲಿಗೆ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಅದರಂತೆ ಬಿಜೆಪಿಯ ಮಾಜಿ ನಗರ ಸಂಘಟನಾ ಕಾರ್ಯದರ್ಶಿ ಎಸ್‌. ರಘುನಾಥ್‌, ಮಾಜಿ ಕಾರ್ಪೊರೇಟರ್‌ಗಳಾದ ಮಂಜುನಾಥ್‌, ರಂಗಣ್ಣ ಬಿಜೆಪಿಯ ಟಿಕೆಟ್‌ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.

ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿಗಳು ಇಲ್ಲ ಎಂಬ ವಿಚಾರ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಚುನಾವಣ ಸಮಿತಿ ಸಭೆಯಲ್ಲಿ ಪ್ರಸಾವವಾಗಿದೆ. ಅಂತಹ ಕ್ಷೇತ್ರಗಳಲ್ಲಿ ರಾಜಾಜಿನಗರವೂ ಒಂದು ಎಂದು ಹೇಳಲಾಗುತ್ತಿದೆ. ಪ್ರತೀ ಚುನಾವಣೆಯಲ್ಲೂ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಬದಲಾಗಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್‌ನಿಂದ ಮಹಿಳೆಯರೇ ಸ್ಪರ್ಧಿಸಿದ್ದಾರೆ. ಈ ಬಾರಿ ಸಚಿವ ವಿ. ಸೋಮಣ್ಣ ಅವರನ್ನು ಬಿಜೆಪಿಯಿಂದ ಕರೆತಂದು ಕಣಕ್ಕಿಳಿಸುವ ಇರಾದೆ ಕಾಂಗ್ರೆಸ್‌ ಮಾಡಿತ್ತು. ಆದರೆ ಸೋಮಣ್ಣ ಈ ಕ್ಷೇತ್ರಕ್ಕೆ ಮನಸ್ಸು ಮಾಡಿಲ್ಲ ಎನ್ನಲಾಗಿದೆ. ಅದಕ್ಕಾಗಿ ಬಿಜೆಪಿ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅವರನ್ನು ಕಣ್ಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿದೆ.

Advertisement

ಕೈ ಸ್ಥಳೀಯರ ವಿರೋಧ
ಪುಟ್ಟಣ್ಣ ಅವರಿಗೆ ಟಿಕೆಟ್‌ ನೀಡುವ ವಿಚಾರದ ಬಗ್ಗೆ ಸ್ಥಳೀಯ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ “ಮೂಲ-ವಲಸಿಗ’ ವಿಚಾರ ಮುನ್ನೆಲೆಗೆ ಬಂದಿದ್ದು. ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಗಳಾಗಿರುವ ಭವ್ಯ ನರಸಿಂಹಮೂರ್ತಿ, ಮನೋಹರ್‌, ರಘುವೀರ್‌ ಗೌಡ, ಪುಟ್ಟರಾಜ್‌ ನಮ್ಮಲ್ಲಿ ಯಾರಿಗಾದರೂ ಕೊಡಿ ಹೊರಗಿನವರಿಗೆ ಮಣೆ ಹಾಕಬೇಡಿ ಎಂದು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮುಂದೆಯೂ ಅಹವಾಲು ಇಟ್ಟಿದ್ದಾರೆ. ಈ ವಿವಾದ ಹೇಗೆ ಬಗೆಹರಿಯಲಿದೆ ಎಂದು ಕಾದು ನೋಡಬೇಕಿದೆ. ಜೆಡಿಎಸ್‌ ಕಳೆದ ವರ್ಷ ಡಿಸೆಂಬರ್‌ನಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು. ಅದರಂತೆ ರಾಜಾಜಿನಗರಕ್ಕೆ ಪಕ್ಷದ ವಕ್ತಾರ ಎಲ್‌. ಗಂಗಾಧರಮೂರ್ತಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಅವರು ಕ್ಷೇತ್ರದಲ್ಲಿ ಚುನಾವಣ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆಮ್‌ ಆದ್ಮಿ ಪಕ್ಷ ಬಿ.ಟಿ. ನಾಗಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next