Advertisement

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

12:10 AM Oct 23, 2021 | Team Udayavani |

ಅ.23ರಂದು ಟಿ-20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಸೂಪರ್‌-12ರ ಸುತ್ತು ಆರಂಭವಾಗಲಿದೆ. 24ರಂದು ಬಹುನಿರೀಕ್ಷಿತ ಭಾರತ-ಪಾಕ್‌ ಪಂದ್ಯ. ನ.14ಕ್ಕೆ ಅಂತಿಮ ಸಮರ. ಇಂತಹದ್ದೊಂದು ಸಂತೋಷದ ಹೊತ್ತಿನಲ್ಲಿ ಇಡೀ ಕೂಟವನ್ನು ಪರಿಚಯಿಸುವ ವಿಶೇಷ ಪುಟ ಇಲ್ಲಿದೆ.

Advertisement

ವಿಶ್ವದ ನಂ.1 ತಂಡ ಇಂಗ್ಲೆಂಡ್‌
ಟಿ20 ಮಾದರಿಯಲ್ಲಿ ವಿಶ್ವದ ನಂ.1 ತಂಡವೆಂಬ ಗರಿಮೆ ಇಂಗ್ಲೆಂಡ್‌ನ‌ದ್ದು. ಆದರೆ ಇದಕ್ಕೆ ಸರಿಸಾಟಿಯೆನಿಸಿದ ಪ್ರದರ್ಶನ ನೀಡಲು ಇಂಗ್ಲೆಂಡಿಗೆ ಸಾಧ್ಯವೇ ಎಂಬುದೊಂದು ಪ್ರಶ್ನೆ. ಕಾರಣ, ನಾಯಕ ಇಯಾನ್‌ ಮಾರ್ಗನ್‌ ಅವರ ಕಳಪೆ ಬ್ಯಾಟಿಂಗ್‌ ಫಾರ್ಮ್. ಮಾರ್ಗನ್‌ ಇಂಗ್ಲೆಂಡಿಗೆ ಮೊದಲ ಏಕದಿನ ವಿಶ್ವಕಪ್‌ ತಂದಿತ್ತ ನಾಯಕ ನಿಜ. ಆದರೆ ಟಿ20ಯಲ್ಲಿ ಇಂಥದೇ ಲಕ್‌ ಇದೆ ಎನ್ನಲು ಧೈರ್ಯ ಸಾಲದು. ಐಪಿಎಲ್‌ನಲ್ಲಿ ಕೆಕೆಆರ್‌ ತಂಡವನ್ನು ಫೈನಲ್‌ ತನಕ ಮುನ್ನಡೆಸಿದರೂ ರನ್ನರ್ ಅಪ್‌ ಸ್ಥಾನವೇ ಗತಿಯಾಯಿತು. ಇಂಗ್ಲೆಂಡ್‌ ಬ್ಯಾಟಿಂಗ್‌ ಲೈನ್‌ಅಪ್‌ ಹೊಡಿಬಡಿ ಶೈಲಿಗೆ ಹೇಳಿ ಮಾಡಿಸಿದಂತಿದೆ. ರಾಯ್‌, ಬೇರ್‌ಸ್ಟೊ, ಬಟ್ಲರ್‌, ಮಾಲನ್‌, ಲಿವಿಂಗ್‌ಸ್ಟೋನ್‌, ಅಲಿ ಅವರೆಲ್ಲ ಮುನ್ನುಗ್ಗಿ ಬೀಸಬಲ್ಲ ಛಾತಿ ಹೊಂದಿದ್ದಾರೆ.

ಮೊದಲ ಕಪ್‌ ಎತ್ತೀತೇ ನ್ಯೂಜಿಲ್ಯಾಂಡ್‌?
ಐಸಿಸಿ ಕೂಟಗಳಲ್ಲಿ ಬಹುತೇಕ ವೈಫ‌ಲ್ಯವನ್ನೇ ಅನುಭವಿಸಿರುವ ತಂಡವೆಂದರೆ ಅದು ನ್ಯೂಜಿಲ್ಯಾಂಡ್‌. ಎಲ್ಲ ಸಾಮರ್ಥ್ಯವಿದ್ದೂ, ಸಶಕ್ತ ತಂಡವನ್ನು ಹೊಂದಿರುವ ಕಿವೀಸ್‌ ಈಗಷ್ಟೇ ವಿಶ್ವದರ್ಜೆಯ ತಂಡವಾಗಿ ರೂಪುಗೊಳ್ಳುತ್ತಿದೆ. ಇದುವರೆಗೆ ಒಮ್ಮೆಯೂ ಕಿವೀಸ್‌ ಟಿ20 ವಿಶ್ವಕಪ್‌ ಗೆದ್ದಿಲ್ಲ. ಆದರೆ ಇದೇ ವರ್ಷ ಟೆಸ್ಟ್‌ ವಿಶ್ವಕಪ್‌ ಗೆದ್ದಿರುವ ಭರವಸೆಯಲ್ಲಿದೆ. ಕಳೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಅದೃಷ್ಟ ಕಣ್ಣಾಮುಚ್ಚಾಲೆ ಯಾಡಿತು. ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ ಕೇನ್‌ ವಿಲಿಯಮ್ಸನ್‌ ಯಶಸ್ಸಿನ ಕುದುರೆ ಏರಿಲ್ಲ. ಆದರೆ ಕಿವೀಸ್‌ನ ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಮಿಂಚಿದ್ದಾರೆ. ಇವರೆಲ್ಲ ಒಂದೂಗೂಡಿ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟರೆ ನ್ಯೂಜಿಲ್ಯಾಂಡ್‌ ಮೊದಲ ಸಲ ಟಿ20 ವಿಶ್ವಕಪ್‌ ಎತ್ತಲೂಬಹುದು.

ಭಾರತ: ಸಾಮರ್ಥ್ಯವಿದೆ, ಅದೃಷ್ಟ ಬೇಕು
ಚುಟುಕು ಕ್ರಿಕೆಟ್‌ ಪಂದ್ಯಗಳನ್ನು ಅತ್ಯಂತ ಯೋಜನಾಬದ್ಧವಾಗಿ ಆಡುವ ತಂಡ ಭಾರತ. ಕಾರಣ, ಐಪಿಎಲ್‌. ಈಗಷ್ಟೇ ಅರಬ್‌ ನಾಡಿನಲ್ಲೇ ಮುಗಿದ ಈ ಕೂಟದ ಲಾಭವನ್ನು ವಿಶ್ವಕಪ್‌ನಲ್ಲೂ ಗಳಿಸುವ ಯೋಜನೆ ಟೀಮ್‌ ಇಂಡಿಯಾದ್ದು. ಆದರೆ ಭಾರತಕ್ಕೆ ತುರ್ತಾಗಿ ಬೇಕಿರುವುದು ನಾಯಕ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ಫಾರ್ಮ್ ಹಾಗೂ ಅದೃಷ್ಟ! ಕೊಹ್ಲಿ ಮೊದಲ ಸಲ ಟಿ20 ವಿಶ್ವಕಪ್‌ ನಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ಟಿ20 ನಾಯಕನಾಗಿ ಅವರ ಕೊನೆಯ ಸರಣಿಯೂ ಹೌದು. ಆದರೆ ಐಸಿಸಿ ಕೂಟಗಳಲ್ಲಿ ಅವರಿಗೆ ಸತತವಾಗಿ ಅದೃಷ್ಟ ಕೈಕೊಡುತ್ತಲೇ ಇದೆ. ಈ ಬಾರಿ ಅದೃಷ್ಟ ಒಲಿದರೆ ಕಪ್‌ ನಮ್ದೇ! ಎಲ್ಲವೂ ಇದೆ, ಅದೃಷ್ಟದ ಕೊರತೆ ಕಾಡುತ್ತಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

Advertisement

ವಿಂಡೀಸ್‌ ಬಹಳ ಅಪಾಯಕಾರಿ
ಎರಡು ಸಲ ಟಿ20 ವಿಶ್ವಕಪ್‌ ಗೆದ್ದ ಹೆಗ್ಗಳಿಕೆಯುಳ್ಳ ವೆಸ್ಟ್‌ ಇಂಡೀಸ್‌ ಹಾಲಿ ಚಾಂಪಿಯನ್‌ ಆಗಿದ್ದು, ಕೂಟದ ಅತ್ಯಂತ ಅಪಾಯಕಾರಿ ತಂಡವೆಂದೇ ಗುರುತಿಸಲ್ಪಟ್ಟಿದೆ. ಶಿಸ್ತಿನಿಂದ, ಅಷ್ಟೇ ಗಂಭೀರ ಹಾಗೂ ಬದ್ಧತೆಯಿಂದ ಆಡಿದರೆ ಕೆರಿಬಿಯನ್ನರನ್ನು ತಡೆಯುವುದು ಬಹಳ ಕಷ್ಟ. ಕೆಲವೊಮ್ಮೆ ತೀರಾ ಬೇಕಾಬಿಟ್ಟಿಯಾಗಿ ಆಡಿ ಎಡವಟ್ಟು ಮಾಡಿಕೊಳ್ಳುವುದಿದೆ. 2016ರಲ್ಲಿ ಚಾಂಪಿಯನ್‌ ಆದ ಬಳಿಕ ವಿಂಡೀಸ್‌ ಟಿ20 ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆಗೈದಿಲ್ಲ ಎಂಬುದಿಲ್ಲಿ ಉಲ್ಲೇಖನೀಯ. 67 ಪಂದ್ಯಗಳಲ್ಲಿ 24ನ್ನಷ್ಟೇ ಗೆದ್ದಿದ್ದಾರೆ. ಗೆಲುವಿನ ಪ್ರತಿಶತ ಸಾಧನೆ 35.8% ಮಾತ್ರ. ಗೇಲ್‌, ಪೊಲಾರ್ಡ್‌, ಬ್ರಾವೊ ಟಿ20 ಮಾದ ರಿಯ ಲೆಜೆಂಡ್‌ಗಳೆಂಬುದರಲ್ಲಿ ಅನುಮಾನವಿಲ್ಲ.

ಎರಡನೇ ತವರಲ್ಲಿ ಪಾಕ್‌ ಫೇವರಿಟ್‌
ಪಾಕಿಸ್ಥಾನಕ್ಕೆ ಯುಎಇ ಎರಡನೇ ತವರಿದ್ದಂತೆ. ಕಳೆದ ಕೆಲವು ವರ್ಷಗಳಿಂದ ಪಾಕ್‌ ಆತಿಥ್ಯದ ಸರಣಿಗಳೆಲ್ಲ ನಡೆಯುವುದು ಇಲ್ಲಿಯೇ. ಯುಎಇಯಲ್ಲಿ ಪಾಕಿಸ್ಥಾನದ ದಾಖಲೆ ಕೂಡ ಉತ್ತಮ ಮಟ್ಟದಲ್ಲಿದೆ. ಹೀಗಾಗಿ ಬಾಬರ್‌ ಆಜಂ ಪಡೆ ಕೂಟದ ಮೆಚ್ಚಿನ ತಂಡವೇ ಆಗಿದೆ. ಟಿ20 ಮಾದರಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಲೇ ಬಂದಿರುವ ಪಾಕಿಸ್ತಾನದ ಬತ್ತಳಿಕೆಯಲ್ಲಿ ಅಪಾಯಕಾರಿ ಕ್ರಿಕೆಟ್‌ ಅಸ್ತ್ರಗಳಿರುವುದು ಸುಳ್ಳಲ್ಲ. ಇಲ್ಲಿನ ಕೆಲವು ಆಟಗಾರರ ಸಾಮರ್ಥ್ಯ ಎದುರಾಳಿಗಳ ಅರಿವಿಗೆ ಇನ್ನೂ ಬಂದಿಲ್ಲ. ಅನುಭವಿಗಳಾದ ಶೋಯಿಬ್‌ ಮಲಿಕ್‌, ಮೊಹಮ್ಮದ್‌ ಹಫೀಜ್‌ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಪಾಕ್‌ ರಣತಂತ್ರ ಸದ್ಯಕ್ಕೆ ನಿಗೂಢವಾಗಿಯೇ ಇದೆ. ಮುಖ್ಯವಾಗಿ ಬೌಲಿಂಗ್‌ ವಿಭಾಗ. 2016ರ ವಿಶ್ವಕಪ್‌ ಬಳಿಕ ಈ ಮಾದರಿಯಲ್ಲಿ ಶೇ. 64.8ರಷ್ಟು ಪಂದ್ಯಗಳನ್ನು ಗೆದ್ದಿರುವುದು ಪಾಕ್‌ ಪಾರಮ್ಯಕ್ಕೆ ಸಾಕ್ಷಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next