ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರವಾಗಿರುವ ಜಯನಗರ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ “ಜಿದ್ದಾಜಿದ್ದಿ’ನ ಕಣ.
ರಾಜ್ಯ ರಾಜಕಾರಣದ ಸಂಭಾವಿತ ರಾಜಕಾರಣಿ ಎಂದೇ ಖ್ಯಾತಿ ಪಡೆದಿದ್ದ ಎಂ.ಚಂದ್ರಶೇಖರ್ ಪ್ರತಿನಿಧಿಸಿದ್ದ, ಸೋಲಿಲ್ಲದ ಸರದಾರ ರಾಮಲಿಂಗಾರೆಡ್ಡಿ ಅವರನ್ನು ಗೆಲ್ಲಿಸಿದ್ದ ಜಯನಗರ ರಾಜಧಾನಿಯ ಹೃದಯಭಾಗದ ಪ್ರಜ್ಞಾವಂತ ಮತದಾರರ ಕ್ಷೇತ್ರ.
ತುರ್ತು ಪರಿಸ್ಥಿತಿಯ ನಂತರದಲ್ಲಿ ಜನತಾಪಾರ್ಟಿಯ ಭದ್ರಕೋಟೆಯಾಗಿದ್ದ ಜಯನಗರದಲ್ಲಿ 1989ರ ನಂತರದಲ್ಲಿ ಕಾಂಗ್ರೆಸ್ ಕೋಟೆ ಕಟ್ಟಿಕೊಂಡು ಕ್ಷೇತ್ರ ಪುನರ್ ವಿಂಗಡಣೆವರೆಗೂ ರಾಮಲಿಂಗಾರೆಡ್ಡಿ “ಸಾಮ್ರಾಜ್ಯ’ವಾಗಿತ್ತು.
ರಾಜಧಾನಿ ಮಟ್ಟಿಗೆ ಹೇಳುವುದಾದರೆ ರಾಜಕೀಯವಾಗಿಯೂ ಕ್ಷೇತ್ರದ ಮಹಿಮೆ ಕಡಿಮೆಯೇನಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹಿತ ಘಟಾನುಘಟಿ ನಾಯಕರು ಇದೇ ಕ್ಷೇತ್ರದ ಮತದಾರರು. ಅಷ್ಟೇ ಏಕೆ ಸಚಿವ ಆರ್.ಅಶೋಕ್ ಅವರು ಪದ್ಮನಾಭನಗರ ಪ್ರತಿನಿಧಿಸಿದರೂ ಅವರು ವಾಸ ಇರುವುದೂ ಜಯನಗರದಲ್ಲೇ. ಈ ಕ್ಷೇತ್ರದಲ್ಲಿ 1978ರಿಂದ 1985ರವರೆಗೆ ಸತತವಾಗಿ ಜನತಾಪಾರ್ಟಿಯ ಎಂ.ಚಂದ್ರಶೇಖರ್ ಜಯಗಳಿಸಿದ್ದರು. ಇವರು ಸಚಿವರಾಗಿಯೂ ಕೆಲಸ ಮಾಡಿದ್ದರು.
Related Articles
1989ರಿಂದ 2004ರ ವರೆಗೆ ರಾಮಲಿಂಗಾರೆಡ್ಡಿ ಶಾಸಕರಾಗಿದ್ದರೆ, ಬಳಿಕ ಎರಡು ಬಾರಿ ಬಿಜೆಪಿಗೆ ಒಲಿದಿತ್ತು. ಬಿ.ಎನ್.ವಿಜಯಕುಮಾರ್ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿಯೂ 2ನೇ ಬಾರಿಗೆ ವಿಜಯಕುಮಾರ್ ಮರು ಆಯ್ಕೆ ಯಾದರು. ಆದರೆ, 2018ರಲ್ಲಿ ವಿಜಯಕುಮಾರ್ ಅಕಾಲಿಕ ಮರಣಕ್ಕೆ ತುತ್ತಾದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಅವರನ್ನು ಕಣಕ್ಕಿಳಿಸಲಾಯಿತು. ಆಗ ಬಿ.ಎನ್. ವಿಜಯಕುಮಾರ್ ಅವರ ಸಹೋದರ ಬಿ.ಎನ್. ಪ್ರಹ್ಲಾದ್ ಬಿಜೆಪಿಯಿಂದ ಸ್ಪರ್ಧಿಸಿ ಸೋತಿ ದ್ದ ರು.
ಹಲವರ ಕಣ್ಣು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸೌಮ್ಯರೆಡ್ಡಿ ಸ್ಪರ್ಧೆ ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಪ್ರಹ್ಲಾದ್ ಜತೆಗೆ ಕೇಂದ್ರ ಸಚಿವರಾಗಿದ್ದ ಅನಂತ್‌ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್, ಬಿಜೆಪಿ ವಕ್ತಾರ ಪಾಲಿಕೆಯ ಮಾಜಿ ಸದಸ್ಯ ಎನ್.ಆರ್.ರಮೇಶ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆಯ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ, ನಟಿ ತಾರಾ, ಮಾಜಿ ಶಾಸಕ ಸುಬ್ಟಾರೆಡ್ಡಿ ಪುತ್ರ ವಿವೇಕ್ ರೆಡ್ಡಿ ಬಿಜೆಪಿಯಿಂದ ಆಕಾಂಕ್ಷಿಗಳಾಗಿದ್ದಾರೆ.
ಇವರೆಲ್ಲರ ಜತೆಗೆ ಇತ್ತೀಚೆಗಷ್ಟೇ ಆಮ್ ಆದ್ಮಿ ಪಾರ್ಟಿ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್ ಸಹ ಪ್ರಬಲ ಆಕಾಂಕ್ಷಿ ಯಾಗಿದ್ದಾರೆ. ಬಸವನಗುಡಿ ಅಥವಾ ಜಯನಗರದಲ್ಲಿ ಟಿಕೆಟ್ ಖಾತರಿ ಕೊಟ್ಟೇ ಅವರನ್ನು ಬಿಜೆಪಿಗೆ ಕರೆತರಲಾಗಿದೆ ಎಂಬ ಮಾತುಗಳೂ ಇವೆ. ಅವರಿಗೆ ಅಲ್ಲಿ ಟಿಕೆಟ್ (ಬಸವನಗುಡಿ) ಇಲ್ಲದಿದ್ದರೆ ಇಲ್ಲಿ (ಜಯನಗರ) ಎಂಬಂತಾಗಿದೆ.
ಜೆಡಿಎಸ್ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದ ಜಮೀರ್ ಅಹಮದ್ ಜಯನಗರದಿಂದ ಸ್ಪರ್ಧಿಸಿ ಕಾಂಗ್ರೆಸ್‌ಗೆ ಪೈಪೋಟಿ ನೀಡಿದ್ದು ಬಿಟ್ಟರೆ ಆ ನಂತರ ಜೆಡಿಎಸ್ ಅಭ್ಯರ್ಥಿಗಳು ಇಲ್ಲಿ ಅಂತಹ ಸಾಧನೆ ಮಾಡಲಾಗಲಿಲ್ಲ. ಈ ಬಾರಿಯೂ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಕೆಆರ್‌ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ರವಿಕೃಷ್ಣಾರೆಡ್ಡಿ ಸಹ ಈ ಬಾರಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಜತೆಗೆ, ಆಮ್ ಆದ್ಮಿ ಪಕ್ಷದಿಂದಲೂ ಅಭ್ಯರ್ಥಿ ಕಣಕ್ಕಿಳಿಯುವ ಸಂಭವವಿದೆ.
ಮೂರ್ನಾಲ್ಕು ವರ್ಷಗಳಿಂದ ಗ್ರೌಂಡ್ ವರ್ಕ್
ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಮೂರು ಸೀಟು ಗೆಲ್ಲುವ ಹಠ ತೊಟ್ಟಿರುವ ಬಿಜೆಪಿ ಮೊದಲು ಕಣ್ಣು ಹಾಕಿರುವುದೇ ಜಯನಗರದ ಮೇಲೆ. ಇಲ್ಲಿ ಗೆಲುವು ಸಾಧಿಸಿ ಹಿಡಿತ ಹೊಂದಿದ್ದರೆ ಪಕ್ಕದ ಬಿಟಿಎಂ ಲೇಔಟ್‌ಗೂ “ರಂಗಪ್ರವೇಶ’ ಮಾಡಬಹುದು ಎಂಬ ದೂರಾಲೋಚನೆಯೂ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ, ಕಳೆದ ಮೂರ್‍ನಾಲ್ಕು ವರ್ಷಗಳಿಂದ “ಗ್ರೌಂಡ್’ ವರ್ಕ್ ಮಾಡಲಾಗುತ್ತಿದೆ. ಈ ಬಾರಿ ಶತಾಯಗತಾಯ ಗುರಿ ತಲುಪುವ ಹಠ ಬಿಜೆಪಿಯದ್ದು, ಏನಾದರೂ ಸರಿಯೇ ಕ್ಷೇತ್ರ ಬಿಟ್ಟುಕೊಡಬಾರದು ಎಂಬ ಪಟ್ಟು ಕಾಂಗ್ರೆಸ್‌ನದು. ಇವರಿಬ್ಬರ ನಡುವೆ ಉಳಿದವರ ಸ್ಪರ್ಧೆ ಲೆಕ್ಕಕ್ಕೆ ಬರುತ್ತಾ ಕಾದು ನೋಡಬೇಕಾಗಿದೆ.