Advertisement
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1 ಕ್ಷೇತ್ರದಲ್ಲಿ ಗೆದ್ದಿವೆ.
ಈ ಕ್ಷೇತ್ರವು 1951ರಿಂದ ಈ ವರೆಗೆ 17 ಚುನಾವಣೆ ಕಂಡಿದ್ದು, ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇಲ್ಲಿಜೆಡಿಎಸ್ ಬಲಿಷ್ಠವಾಗಿದ್ದರೂ ಒಮ್ಮೆಯೂ ಗೆದ್ದಿಲ್ಲ. 12 ಬಾರಿ ಕಾಂಗ್ರೆಸ್ ಗೆದ್ದಿತ್ತು. 1998ರಿಂದೀಚೆಗೆ ಕಾಂಗ್ರೆಸ್ 2 ಬಾರಿ, ಬಿಜೆಪಿಗೆ 4 ಬಾರಿ ಒಲಿದಿರುವ ಕ್ಷೇತ್ರವಿದು. ಕಳೆದೆರಡು ಬಾರಿಯಿಂದ ಬಿಜೆಪಿಯ ಪ್ರತಾಪ ಸಿಂಹ ಗೆಲ್ಲುತ್ತಾ ಬಂದಿದ್ದಾರೆ.
Related Articles
Advertisement
ಕಾಂಗ್ರೆಸ್ ಆಕಾಂಕ್ಷಿಗಳ ದಂಡುಅತಿ ಹೆಚ್ಚು ವಿಧಾನಸಭಾ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಾಳಯದಲ್ಲಿ ಸಹಜವಾಗಿಯೇ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಹೆಸರು ಬಲವಾಗಿ ಕೇಳಿಬರುತ್ತಿದ್ದರೂ, ಇತ್ತೀಚೆಗೆ ಸಿದ್ದರಾಮಯ್ಯ ಅವರೇ ಈ ಸಾಧ್ಯತೆಯನ್ನು ಬಹಿರಂಗವಾಗಿ ತಳ್ಳಿ ಹಾಕಿದ್ದಾರೆ. ಆದರೆ ರಾಜಕೀಯದಲ್ಲಿ ಕೊನೆ ಕ್ಷಣದವರೆಗೂ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ| ಬಿ.ಜೆ.ವಿಜಯ್ ಕುಮಾರ್, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ನಗರದ ಡಾ| ಸುಶ್ರುತ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ, ಮಾಜಿ ಸಂಸದ ಹಾಗೂ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಲೋಕಸಭಾ ಕಣಕ್ಕಿಳಿಸುವ ಪ್ರಯತ್ನವೂ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕ ವಿ. ಸೋಮಣ್ಣ ಅವರಿಗೂ ಗಾಳ ಹಾಕಿರುವ ಗುಸು ಗುಸು ಇದೆಯಾದರೂ, ಅವರು ಇತ್ತೀಚೆಗೆ ಬಿಜೆಪಿ ವರಿಷ್ಠ ಭೇಟಿಯಾದ ಬಳಿಕ ಪಕ್ಷಾಂತರದ ಬಗ್ಗೆ ಒಲವು ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಮೈಸೂರಿಗೆ ಯದುವೀರ, ಉಡುಪಿ- ಚಿಕ್ಕಮಗಳೂರಿಗೆ ಪ್ರತಾಪ್ ಸಿಂಹ: ವದಂತಿ
ಕ್ಷೇತ್ರದಲ್ಲಿ ಹಲವು ದಿನಗಳಿಂದ ವದಂತಿಯೊಂದು ಓಡಾಡುತ್ತಿದೆ. ಆದರೆ ಇದಕ್ಕೆ ಯಾವುದೇ ರಾಜಕೀಯ ಬಲ ಇನ್ನೂ ದೊರೆತಿಲ್ಲ. ಅದೆಂದರೆ, ಮೈಸೂರು-ಕೊಡಗು ಕ್ಷೇತ್ರಕ್ಕೆ ರಾಜವಂಶಸ್ಥ ಯದುವೀರ ಒಡೆಯರ್ ಅವರನ್ನು ನಿಲ್ಲಿಸುವುದು. ಹಾಲಿ ಸಂಸದ ಪ್ರತಾಪಸಿಂಹ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವುದು. ಶೋಭಾ ಅವರು ಡಿ.ವಿ.ಸದಾನಂದ ಗೌಡ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದು. ಇದು ಎಷ್ಟು ನಿಜ, ಎಷ್ಟು ಸುಳ್ಳು ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.