Advertisement
ಪುರುಷರ ವಿಭಾಗದಲ್ಲೇನೋ, ಶ್ರೀಕಾಂತ್, ಪಿ. ಕಶ್ಯಪ್, ಅಜಯ್ ಜಯರಾಮ್ ಮುಂತಾದವರಿದ್ದಾರೆ. ಆದರೆ, ಮಹಿಳೆಯರ ವಿಭಾಗದಲ್ಲಿ ಸೈನಾ, ಸಿಂಧು ಬಿಟ್ಟರೆ ಮುಂದೆ ಯಾರು ಎಂಬ ಪ್ರಶ್ನೆ, ಸದ್ಯದ ಮಟ್ಟಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಸ್ವಲ್ಪ ಕೆದಕಿದರೆ, ಬರುವ ಹೆಸರು ಗಾಯತ್ರಿ ಗೋಪಿಚಂದ್. ರಾಷ್ಟ್ರೀಯ ಕೋಚ್ ಹಾಗೂ ಸೈನಾ, ಸಿಂಧು ಅವರ ಗುರು ಪುಲ್ಲೇಲ ಗೋಪಿಚಂದ್ ಪುತ್ರಿ. ಈಕೆಯನ್ನು ಬಿಟ್ಟರೆ, ಸಿಂಗಲ್ಸ್‌ನಲ್ಲಿ ಸೈನಾ, ಸಿಂಧು ಅವರನ್ನು ತುಂಬುವಂಥ ಮತ್ತೂಬ್ಬ ಭರವಸೆಯ ಆಟಗಾರ್ತಿಯ ಹೆಸರು ಕಾಣುತ್ತಿಲ್ಲ. ಇದು ನಿಜಕ್ಕೂ ಆತಂಕಕಾರಿ ವಿಚಾರ.
ಅದು 2006ರ ಸಮಯ. ಭಾರತೀಯ ಬ್ಯಾಡ್ಮಿಂಟನ್ ರಂಗದಲ್ಲಿ ಸೈನಾ ನೆಹ್ವಲ್ ಎಂಬ ಮಿಂಚು ವಿಶ್ವ ಬಾನಂಗಳದಲ್ಲಿ ಮಿಂಚಲಾರಂಭಿಸಿತ್ತು. ಏಷ್ಯನ್ ಸ್ಯಾಟೆಲೈಟ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸೈನಾ, ಈ ಪಂದ್ಯಾವಳಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆಯುವುದರೊಂದಿಗೆ ಪ್ರವರ್ಧಮಾನಕ್ಕೆ ಬಂದರು. ಅದೇ ವರ್ಷ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಭರವಸೆಯ ಆಟಗಾರ್ತಿಯಾಗಿ ಮೂಡಿಬಂದರು. ಅಲ್ಲಿಂದ ಮುಂದಕ್ಕೆ ಸೈನಾ ಹಿಂದಿರುಗಿ ನೋಡಿದ್ದೇ ಇಲ್ಲ. ಹಲವಾರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಘಟಾನುಘಟಿ ಕ್ರೀಡಾಳುಗಳಿಗೇ ನೀರು ಕುಡಿಸಿ ಮೇಲೆದ್ದು ಬಂದ ಸೈನಾ, ನೋಡ ನೋಡುತ್ತಿದ್ದಂತೆ ಬ್ಯಾಡ್ಮಿಂಟನ್ ರಂಗದಲ್ಲಿ ಮೇರು ಆಟಗಾರ್ತಿಯಾಗಿ ಕಂಗೊಳಿಸಿದರು. ಹಾಗೆ ಶುರುವಾದ ಅವರ ಗೆಲುವಿನ ಓಟ, ಕೆಲವೆಡೆ ಏರಿಳಿ ಕಂಡರೂ 2009ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮಟ್ಟದವರೆಗೂ ಬೆಳೆಯುವಂತೆ ಮಾಡಿತು.
Related Articles
Advertisement
ಸಿಂಧು ಹಾದಿಪುಸರ್ಲ ವೆಂಕಟ ಸಿಂಧು ಅಥವಾ ಪಿ.ವಿ. ಸಿಂಧು, ಸೈನಾ ಅವರಂತೆಯೇ ಆಂಧ್ರಪ್ರದೇಶದ ಪ್ರತಿಭೆ. ಬಾಲಕಿಯರ ವಿಭಾಗದಲ್ಲಿದ್ದಾಗಲೇ 2011ರಲ್ಲಿ ನಡೆದಿದ್ದ ಡಗ್ಲಾಸ್ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಸಾಧನೆಯ ಪರ್ವಕ್ಕೆ ಇತಿಶ್ರೀ ಹಾಡಿದ ಸಿಂಧು, ಅಲ್ಲಿಂದ ಮುಂದಕ್ಕೆ ಒಂದರ ಹಿಂದೊಂದು ಯಶಸ್ಸುಗಳನ್ನು ತಮ್ಮ ಬೆನ್ನಿಗೆ ಹಾಕಿಕೊಂಡು ಮುನ್ನಡೆದರು.
ಸೈನಾ ಅವರಿಗೆ ಗುರುವಾಗಿದ್ದ ಪುಲ್ಲೇಲ ಗೋಪಿಚಂದ್ ಅವರ ಗರಡಿಯಲ್ಲೇ ಪಳಗಿದ ಸಿಂಧು, ಸೈನಾ ಅವರು ಗೋಪಿಚಂದ್ ಅವರನ್ನು ತ್ಯಜಿಸಿದ ನಂತರ ಆ ಮಹಾಗುರುವಿನ ಪಟ್ಟ ಶಿಷ್ಯೆಯಾದರು. ಕಠಿಣ ಪರಿಶ್ರಮ, ನಿಲ್ಲದ ಪಯಣದಿಂದಾಗಿ ಹಂತ ಹಂತವಾಗಿ ಪ್ರವರ್ಧಮಾನಕ್ಕೆ ಬಂದ ಅವರು, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದರು. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಸೇರಿ, ಏಷ್ಯನ್ ಕ್ರೀಡಾಕೂಟಗಳಲ್ಲಿ ಎರಡು ಚಿನ್ನ, ನಾಲ್ಕು ಕಂಚು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ, ಎರಡು ಕಂಚು ತಮ್ಮದಾಗಿಸಿಕೊಂಡ ಹೆಗ್ಗಳಿಕೆಯೂ ಅವರ ಕಡೆಗಿದೆ.
ಹೀಗೆ, ಸೈನಾ ಹಾಗೂ ಸಿಂಧು ಮಿಂಚಲು ಶುರುವಾಗಿ ದಶಕಗಳೇ ಉರುಳಿದರೂ ಆ ಮಟ್ಟದ ಮತ್ತೂಬ್ಬ ಆಟಗಾರ್ತಿ ಉದಯಿಸಿಲ್ಲ ಎಂದು ಖೇದಕರ ವಿಚಾರ. ಈ ನಿಟ್ಟಿನಲ್ಲಿ ಅಭಿಮಾನಿಗಳು ಮಾತ್ರವಲ್ಲ ಇಡೀ ಭಾರತೀಯ ಬ್ಯಾಡ್ಮಿಂಟನ್ ರಂಗವೇ ಆಲೋಚನೆ ಮಾಡಬೇಕಿದೆ. ಚೇತನ್ ಓ.ಆರ್.