ಸಿನಿಮಾ ಸುಲಭವಾಗಿ ಆಗೋದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗೆಯೇ, ಎಲ್ಲರೂ ಕಷ್ಟಪಟ್ಟೇ ಸಿನಿಮಾ ಮಾಡ್ತಾರೆ. ಸಿನಿಮಾ ಮುಗಿದ ಮೇಲೆ ಪ್ರಚಾರ ಬೇಕೇ ಬೇಕು. ಪ್ರಚಾರ ಅಂದಮೇಲೆ ಪತ್ರಿಕಾಗೋಷ್ಠಿ ಮಾಡಲೇಬೇಕು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಚಿತ್ರದ ಬಗ್ಗೆ ಏನನ್ನೂ ಹೇಳದಿದ್ದರೆ ಹೇಗೆ? ಸಿನಿಮಾ ಕಥೆ ಬಗ್ಗೆ ಹೇಳಬೇಕೆಂದೇನೂ ಇಲ್ಲ. ಆದರೆ, ಪತ್ರಿಕಾಗೋಷ್ಠಿಗೆ ಪತ್ರಕರ್ತರನ್ನು ಕರೆಸಿ, ವಿನಾಕಾರಣ ಗಂಟೆಗಟ್ಟಲೆ ಅವರ ಮುಂದೆ ಕೇವಲ ಥ್ಯಾಂಕ್ಸ್‌ಗಷ್ಟೇ ಆ ಪತ್ರಿಕಾ ಗೋಷ್ಠಿಯನ್ನು ಸೀಮಿತಗೊಳಿಸಿದರೆ ಹೇಗಾಬೇಡ? ಇದು ಒಂದು, ಎರಡು ಚಿತ್ರಗಳ ಸಮಸ್ಯೆಯಲ್ಲ. ಸಾಕಷ್ಟು ಹೊಸಬರು ತಮ್ಮ ಚಿತ್ರಗಳ ಬಗ್ಗೆ ಮಾತನಾಡದೆ, ಬರೀ ಅವರಿವರಿಗೆ ಥ್ಯಾಂಕ್ಸ್ ಹೇಳಿ ಜೈ ಎನ್ನುತ್ತಾರೆ. ಅದಕ್ಕೆಲ್ಲ ಪತ್ರಿಕಾಗೋಷ್ಠಿಗೂ ಮುನ್ನ, ಸರಿಯಾಗಿ ಮಾಹಿತಿ ಪಡೆಯದಿರುವುದು ಕೊರತೆ. ಅಷ್ಟಕ್ಕೂ ಪ್ರಚಾರಕ್ಕೆಂದೇ ಪತ್ರಕರ್ತರ ಮುಂದೆ ಬರುವ ಹೊಸ ತಂಡಕ್ಕೆ ಏನು ಹೇಳಬೇಕು, ಎಷ್ಟು ಹೇಳಬೇಕೆಂಬ ಮಾಹಿತಿಯೂ ಸಿಗುವುದಿಲ್ಲವೆಂದರೆ ಹೇಗೆ? ಅಂತಹವರಿಗೆ ಮಾಹಿತಿ ಕೊರತೆಯೋ ಗೊತ್ತಿಲ್ಲ. ಒಟ್ಟಾರೆ, ಗಂಟೆಗಟ್ಟಲೆ ಪತ್ರಕರ್ತರು ಕುಳಿತರೂ, ಒಂದು ಒಂದು ಕಾಲಂ ಬರೆಯುವಷ್ಟಾದರೂ ಮಾಹಿತಿ ಸಿಗದೇ ಹೋದರೆ, ಬರೆಯುವುದಾದರೂ ಹೇಗೆ? ಇದು ಪ್ರತಿಯೊಬ್ಬ ಸಿನಿಮಾ ಪತ್ರಕರ್ತರ ಪ್ರಶ್ನೆಯೂ ಹೌದು.
ಅಷ್ಟಕ್ಕೂ ಇಷ್ಟೊಂದು ಪೀಠಿಕೆಗೆ ಕಾರಣವಾಗಿದ್ದು, “ಕಾಣದಂತೆ ಮಾಯವಾದನು’ ಪತ್ರಿಕಾಗೋಷ್ಠಿ. ಇದು ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರ. ಶುರುವಾಗಿ ಬರೋಬ್ಬರಿ ಎರಡು ವರ್ಷ ಕಳೆದಿದೆ. ಎಲ್ಲರಂತೆ ಈ ಚಿತ್ರತಂಡ ಕೂಡ ಸಾಕಷ್ಟು ಕಷ್ಟಪಟ್ಟು ಸಿನಿಮಾ ಮಾಡಿದೆ. ಪತ್ರಕರ್ತರ ಮುಂದೆ ಸಿನಿಮಾ ಬಗ್ಗೆ ಹೇಳ್ಳೋಕೆ ಅಂತ ಬಂದಮೇಲೆ, ಸಿನಿಮಾ ಬಗ್ಗೆ ಏನಾದರೂ ಒಂದಷ್ಟು ಮಾತಾಡಬೇಕು. ಆದರೆ, ಅಲ್ಲಿದ್ದವರೆಲ್ಲರೂ ಸಿನಿಮಾಗಾಗಿ ಕಷ್ಟಪಟ್ಟಿದ್ದನ್ನೇ ಪದೇ ಪದೇ ಹೇಳಿಕೊಂಡರೇ ಹೊರತು, ಸಿನಿಮಾ ಕುರಿತು ಏನನ್ನೂ ಹೇಳಲಿಲ್ಲ. ನಿರ್ದೇಶಕ ರಾಜ್ ಅವರಿಗೆ ಏನಾದರೂ ಮಾತನಾಡಿ, ನಿಮ್ಮ ಚಿತ್ರದ ಒನ್‌ಲೈನ್ ಕಥೆ ಏನು, ಏನೆಲ್ಲಾ ಇದೆ ಒಂದಷ್ಟು ಮಾಹಿತಿ ಕೊಡಿ ಅಂತಂದರೂ, ಮೈಕ್ ಹಿಡಿದು “ಎಲ್ಲರಿಗೂ ಥ್ಯಾಂಕ್ಸ್’ ಅಂದಷ್ಟೇ ಹೇಳಿ ಕುಳಿತುಕೊಂಡರು. ಒಂದು ಸಿನಿಮಾ ಮಾಡಿದ ಮೇಲೆ, ಆ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಕೊಡಬೇಕು. ನಿರ್ದೇಶಕರಾದವರಿಗೆ ಅದೂ ಸಾಧ್ಯವಿಲ್ಲ ಅಂದಮೇಲೆ, ನಿರ್ಮಾಪಕರ ಗತಿ ಏನು?
ಈ ಚಿತ್ರಕ್ಕೆ ಸೋಮ್‌ಸಿಂಗ್, ಚಂದ್ರಶೇಖರ ನಾಯ್ಡು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಪೈಕಿ ಸೋಮಸಿಂಗ್ ಅವರು, ಸಿನಿಮಾ ಬಗ್ಗೆ ಬಹಳ ಹೇಳುವುದಿದೆ ಅಂತ ಮೊದಲು ಮಾತಿಗಿಳಿದರು. ಆಮೇಲೆ ಅವರೂ ಸಹ, ಎಲ್ಲರೂ ಕಷ್ಟಪಟ್ಟಿದ್ದನ್ನು ಹೇಳ್ಳೋಕೆ ಬಂದಿದ್ದಾರೆ. ನಿಮ್ಮ ಸಹಕಾರ ಇರಲಿ’ ಅಂತ ಹೇಳಿದರೇ ಹೊರತು, ಸಿನಿಮಾ ಬಗ್ಗೆ ಮಾಹಿತಿಯನ್ನೂ ಕೊಡಲಿಲ್ಲ. ನಾಯಕ ವಿಕಾಸ್, “ಇದೊಂದು ಫ್ಯಾಂಟಸಿ ಸಿನಿಮಾ. ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ. ಕಥೆ ಹೇಳಿಬಿಟ್ಟರೆ ಕುತೂಹಲ ಇರಲ್ಲ. ಹೇಳಿಬಿಟ್ಟರೆ, ಕಥೆ ಗೊತ್ತಾಗುತ್ತೆ. ಟ್ರೇಲರ್ ನೋಡಿದರೆ, ಎಲ್ಲವೂ ಗೊತ್ತಾಗುತ್ತೆ’ ಅಂತ ಹೇಳಿ ಸುಮ್ಮನಾದರು.
ಅಂದು ನಾಯಕಿ ಸಿಂಧು, “ಸಿನಿಮಾದಲ್ಲಿ ಸಾಕಷ್ಟು ಅಡಚಣೆಯಾಗುತ್ತಿತ್ತು. ಮಾತ್ ಮಾತಿಗೂ ಟೈಟಲ್ ಸರಿ ಇಲ್ಲ. ಕಾಣದಂತೆ ಮಾಯವಾದನು ರೀತಿ ಒಬ್ಬೊಬ್ಬರೇ ಕಾಣೆಯಾಗುತ್ತಿದ್ದಾರೆ ಎಂದು ಹೇಳುತ್ತಿದ್ದೆ. ನಾವು ಕಾಣೆಯಾಗೋದೊಳಗೆ ಸಿನಿಮಾ ರಿಲೀಸ್ ಮಾಡಿ. ನಾನಿಲ್ಲಿ ಎನ್‌ಜಿಓ ಪಾತ್ರ ಮಾಡಿದ್ದೇನೆ. ರಿಲೀಸ್ ಆದಾಗ, ಯಾರ್ ಇರ್ತಾರೆ, ಯಾರ್ ಕಾಣೆಯಾಗ್ತಾರೆ ಅಂತ ನೋಡಬೇಕು’ ಅಂತ ಹೇಳಿ ಮೈಕ್ ಇಟ್ಟರು.
ನಟ ಅಚ್ಯುತ ಅವರು ತಂಡದ ಬಗ್ಗೆ ಹೇಳಿಕೊಂಡರು, ಅವರ ಮಾತನ್ನೇ ಬಾಬು ಹಿರಣ್ಣಯ್ಯ, ಸೀತಾ ಕೋಟೆ, ಧರ್ಮಣ್ಣ ಪುನರುಚ್ಛರಿಸಿದರು.