ಬೆಂಗಳೂರು: ಸ್ಯಾಂಟ್ರೋ ರವಿಯನ್ನು ಪೂನಾದಿಂದ ಗುಜರಾತ್‌ಗೆ ಯಾಕೆ ಕರೆಸಿಕೊಂಡರು. ಅವನಿಗೆ ಏನು ಪ್ರಾಮೀಸ್ ಮಾಡಿ ಕರೆಸಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಹಾಕಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಯಾಂಟ್ರೋ ರವಿಯನ್ನು ಎರಡು-ಮೂರು ದಿನಗಳ ಹಿಂದೆಯೇ ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಏನೆಲ್ಲಾ ಸಾಕ್ಷ್ಯ ಇಟ್ಟುಕೊಂಡಿದ್ದನೋ ಅದನ್ನೆಲ್ಲ ಕಿತ್ತುಕೊಂಡು ಬಂದಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಇವನ್ನದ್ದೇ ನೇರಪಾತ್ರವಿದೆ. ಮೈಸೂರಿನಲ್ಲಿ ಮಹಿಳೆಯೊಬ್ಬರು ದಾಖಲಿಸಿದ ಪ್ರಕರಣ ಬಿಟ್ಟು ಉಳಿದ ಪ್ರಕರಣವನ್ನು ಯಾವ ರೀತಿ ತನಿಖೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದ ಗೃಹ ಸಚಿವರು ಗುಜರಾತ್‌ನಲ್ಲಿದ್ದಾರೆ. ಸ್ಯಾಂಟ್ರೋ ರವಿ ಕೂಡ ಅಲ್ಲೇ ಇದ್ದ, ಗೃಹ ಸಚಿವರು ಗುಜರಾತ್ ಗೆ ಯಾವಾಗ ಹೋದರು ಎನ್ನುವುದೇ ಯಕ್ಷಪ್ರಶ್ನೆ. ಗುಜರಾತಿನಲ್ಲೂ ಬಿಜೆಪಿ ಸರ್ಕಾರವಿದೆ. ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ರವಿಯನ್ನು ಗುಜರಾತ್‌ನಿಂದ ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ರಾಜಾತಿಥ್ಯ ಕೊಟ್ಟು ಕರೆದೊಯ್ದಿದ್ದಾರೆ. ವಿಐಪಿ ಗೇಟ್ ಮೂಲಕ ಸ್ಯಾಂಟ್ರೊ ರವಿಯನ್ನು ಎಲ್ಲರ ಕಣ್ತಪ್ಪಿಸಿ ಕರೆತಂದದ್ದು ಏಕೆ. ವಿಐಪಿ ಗೇಟ್ ಇರುವುದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ. ಒಬ್ಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಇಷ್ಟೊಂದೆಲ್ಲ ರಾಜಾತಿಥ್ಯ ಏಕೆ ಎಂದರು.
ಗೃಹ ಸಚಿವರು ಯಾಕೆ ಗುಜರಾತ್ ಗೆ ಹೋದರು. ಸಾಬರಮತಿ ಆಶ್ರಮದಲ್ಲಿ ಗಾಂಧಿ ಪ್ರತಿಮೆ ಬಳಿ ಫೋಟೊ ತೆಗೆಸಿಕೊಳ್ಳುವುದು, ವಿಡಿಯೋ ಕ್ಲಿಪ್ಪಿಂಗ್ ಯಾಕೆ ಕಳಿಸಿರುವುದು. ನನಗೆ ಅನುಮಾನ ಅಂತೂ ಇದೆ. ಪೂನಾದಲ್ಲೇ ಅರೆಸ್ಟ್ ಮಾಡಬಹುದಿತ್ತಲಾ. ಆತನನ್ನು ಗುಜರಾತ್ ಗೆ ಯಾಕೆ ಕರೆಸಿಕೊಂಡರು. ನಾನೇ ಎಲ್ಲ ಹೇಳ್ಳೋದಾದ್ರೆ ಸರ್ಕಾರ ತನಿಖೆ ಮಾಡಬೇಕಲಾ, ವಾಸ್ತವಾಂಶ ಹೇಳಬೇಕಲ್ಲವೇ ಎಂದು ಕೇಳಿದರು.