Advertisement

“ರಾಷ್ಟ್ರೀಯವಾದಿಗಳು ಯಾರು’ ಮೇಲ್ಮನೆಯಲ್ಲಿ ಚರ್ಚೆಗೆ ಗ್ರಾಸ

12:38 PM Feb 22, 2024 | Team Udayavani |

■ ಉದಯವಾಣಿ ಸಮಾಚಾರ
ವಿಧಾನ ಪರಿಷತ್ತು: “ರಾಷ್ಟ್ರವಾದಿಗಳು ಯಾರೆಂಬ’ ವಿಚಾರ ಸದನದಲ್ಲಿ ಚರ್ಚೆಗೆ ಬಂದು ಬಿಜೆಪಿ-ಕಾಂಗ್ರೆಸ್‌ ಸದಸ್ಯರು ಪರಸ್ಪರ ಕಾಳೆದುಕೊಂಡ ಪ್ರಸಂಗ ಬುಧವಾರ ಮೇಲ್ಮನೆಯಲ್ಲಿ ನಡೆಯಿತು.

Advertisement

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ಆರಂಭಿಸುವಾಗ ಯಾವ ಪಕ್ಷದ ಎಷ್ಟು ಸದಸ್ಯರು ಮಾತನಾಡಿದ್ದಾರೆ ಎನ್ನುತ್ತ ಬಿಜೆಪಿಯ ಏಳು, ಜೆಡಿಎಸ್‌ನ ಒಬ್ಬರು ಮಾತನಾಡಿದ್ದಾರೆ ಎಂದು ಹೇಳುತ್ತಲೇ. ಈಗ ನೀವಿಬ್ಬರೂ ಒಂದೇ ಅಲ್ವಾ ಎಂದು ಛೇಡಿಸಿದರು.

ಅದಕ್ಕೆ ಎಸ್‌.ಎಲ್‌. ಭೋಜೇಗೌಡ ಏನೋ ಹೇಳಲು ಎದ್ದು ನಿಂತರು. “ನೀನು ಸೆಕ್ಯುಲರ್‌ವಾದಿ ಆಗಿದ್ದರೆ ನಮ್ಮ ಕಡೆ ಬಂದು ಬಿಡು; ಕೋಮುವಾದಿ ಆಗಿದ್ದರೆ ಅಲ್ಲೆ ಇರು’ ಎಂದು ಕಾಲೆಳೆದರು. ಅವರು ರಾಷ್ಟ್ರೀಯವಾದಿ ಎಂದು ಬಿಜೆಪಿಯ ರವಿಕುಮಾರ್‌ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ “ಏಯ್‌ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ನಾವು ಕಾಂಗ್ರೆಸ್‌ನವರು; ಅದ್ಹೇಗೆ ನೀವು ಬಿಜೆಪಿಯವರು ರಾಷ್ಟ್ರೀಯವಾದಿಗಳು ಆಗುತ್ತೀರಿ. ಹಾಗೇ ನೋಡಿದರೆ ಆಗ ಬಿಜೆಪಿಯೇ ಇರಲಿಲ್ಲ. ಏನೂ ಮಾಡದೆ, ಸ್ವಾತಂತ್ರ್ಯಕ್ಕೆ ಹೋರಾಡಿಲ್ಲ, ಜೈಲಿಗೂ ಹೋಗಿಲ್ಲ, ಸುಮ್ಮನೆ ಕೂತು ರಾಷ್ಟ್ರೀಯವಾದಿಗಳು ಅಂತ ಹೇಳಿದರೆ, ಏನ್ರಿ ಇದು ವಿಚಿತ್ರ. ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದರು.

ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಸಿಎಂ ಅವರನ್ನು ಮೀರಿಸಲು ನಮ್ಮಿಂದ ಆಗಲ್ಲ ಬಿಡಿ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕುಟುಕಿದರು. ಆಸ್ತಿ-ಪಾಸ್ತಿ, ಪ್ರಾಣ ಕಳೆದುಕೊಂಡು ರಾಷ್ಟ್ರಪಿತ ಮಹಾತ್ಮಗಾಂಧಿ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್‌ ಎಂದು ಸಿಎಂ ಮತ್ತೆ ಸಮರ್ಥನೆ ನೀಡಿದರು. ಗಾಂಧಿ, ನೆಹರು,
ಸರ್ದಾರ ವಲ್ಲಭಭಾಯಿ ಪಟೇಲ್‌, ಆಜಾದ್‌, ಸುಭಾಷಚಂದ್ರ ಬೋಸ್‌ ಸ್ವಾತಂತ್ರ್ಯ ಹೋರಾಟ ಮಾಡಿದವರು, ವಾಜಪೇಯಿ ಅಡ್ವಾಣಿ, ಮೋದಿ ಹೋಗಿದ್ರಾ ಎಂದು ಸಿಎಂ ಹೇಳಿದಾಗ, ಸಾವರ್ಕರ್‌ ಹೆಸರು ಹೇಳಿ ಸರ್‌ ಎಂದು ಬಿಜೆಪಿಯ ರವಿಕುಮಾರ್‌ ಮುಖ್ಯಮಂತ್ರಿಯವರನ್ನು ಛೇಡಿಸಿದರು. ಸಾಕು ಬಿಡಿ ವಿಷಯಕ್ಕೆ ಬನ್ನಿ ಎಂದು ಸಭಾಪತಿ ಬಸವರಾಜ ಹೊರಟ್ಟಿ “ರಾಷ್ಟ್ರೀಯವಾದಿ’ ಚರ್ಚೆಗೆ ತೆರೆ ಎಳೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next