ವಾಷಿಂಗ್ಟನ್: ಅಮೆರಿಕಾದ ಆಡಳಿತ ಕೇಂದ್ರ ಶ್ವೇತಭವನ ಮತ್ತು ಕ್ಯಾಪಿಟಲ್ ಹಿಲ್ ಸುತ್ತಲಿನ ಹಾರಾಟ ನಿರ್ಬಂಧ ಪ್ರದೇಶದಲ್ಲಿ ವಿಮಾನ ಒಂದರ ಹಾರಾಟ ಈ ಪ್ರದೇಶದಲ್ಲಿ ಕೆಲವು ಸಮಯ ಆತಂಕಕ್ಕೆ ಕಾರಣವಾಯ್ತು. ಈ ಘಟನೆಯ ಬಳಿಕ ತೀವ್ರ ಕಟ್ಟೆಚ್ಚರ ಘೋಷಿಸಿದ ಅಮೆರಿಕಾದ ಭದ್ರತಾ ಪಡೆಗಳು ಮಂಗಳವಾರದಂದು ಈ ಸಂಪೂರ್ಣ ಪ್ರದೇಶದಲ್ಲಿ ನಿಷೇಧವನ್ನು ಘೋಷಿಸಿಬಿಟ್ಟಿತ್ತು.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಯಿತು. ಯು.ಎಸ್. ಗುಪ್ತದಳ ಇಲಾಖೆಯು ವೈಟ್ ಹೌಸ್ ಸಿಬ್ಬಂದಿಗೆ ‘ಶೆಲ್ಟರ್-ಇನ್-ಪ್ಲೇಸ್’ (ಇರುವಲ್ಲಿಯೇ ಸುರಕ್ಷಿತವಾಗಿರುವ) ಆದೇಶವನ್ನು ಎಲ್ಲೆಡೆ ರವಾನಿಸಿತು. ಮತ್ತು ವೈಟ್ ಹೌಸ್ ನಲ್ಲಿದ್ದ ಪತ್ರಕರ್ತರಿಗೆ ವೆಸ್ಟ್ ವಿಂಗ್ ನ ಪಕ್ಕದಲ್ಲೇ ಇರುವ ಪತ್ರಿಕಾ ಪ್ರಕಟನೆ ಹೊರಡಿಸುವ ಕೋಣೆಯಲ್ಲೇ ಇರುವಂತೆ ಸೂಚನೆ ನೀಡಲಾಯಿತು.
ಇನ್ನು ಕ್ಯಾಪಿಟಲ್ ಪೊಲೀಸರು ಬೆಳಿಗ್ಗೆ 8.30ರ ಸುಮಾರಿಗೆ ಸಂಭಾವ್ಯ ಬೆದರಿಕೆಯ ಮಾಹಿತಿಯನ್ನು ರವಾನಿಸಿ ಹೆಲಿಕಾಫ್ಟರ್ ಒಂದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದರು. ಅತ್ತ ಅಮೆರಿಕಾ ಮಿಲಿಟರ ಪಡೆಯು ವಾಷಿಂಗ್ಟನ್ ನಲ್ಲಿರುವ ಜಾಯಿಂಟ್ ಬೇಸ್ ಆ್ಯಂಡ್ರ್ಯೂಸ್ ನಲ್ಲಿ ಫೈಟರ್ ಜೆಟ್ ಗಳನ್ನೂ ಸಹ ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು.
ಆದರೆ 30 ನಿಮಿಷದ ಬಳಿಕ ಶ್ವೇತ ಭವನದ ಸುತ್ತ ಜಾರಿಗೊಳಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಯಿತು. ನಿರ್ಬಂಧಿತ ವಾಯುಪ್ರದೇಶದಲ್ಲಿ ಹಾರಿಬಂದ ವಿಮಾನವು ಅಪಾಯಕಾರಿಯಲ್ಲ ಎಂದು ಖಚಿತವಾದ ಬಳಿಕ ಈ ನಿರ್ಬಂಧವನ್ನು ತೆರವುಗೊಳಿಸಲಾಯಿತು.