Advertisement

ವೈಟ್‌ಡವ್ಸ್  ಸ್ಥಾಪಕಿ ಸಾವು ಗೆದ್ದು ಬಂದ ಯಶೋಗಾಥೆ

04:48 AM Feb 16, 2019 | |

ಮಹಾನಗರ:  ಬದುಕಿಸಲು ಸಾಧ್ಯವಿಲ್ಲವೆಂದು ವೈದ್ಯರೇ ಕೈಚೆಲ್ಲಿದ್ದರು… ಆದರೆ ವೈದ್ಯಲೋಕಕ್ಕೇ ಸವಾಲೆಂಬಂತೆ ಎಂಟು ದಿನ ಕೋಮಾ ಸ್ಥಿತಿಯಲ್ಲಿದ್ದ ಆಕೆ ಕ್ಯಾನ್ಸರ್‌ ಗೆದ್ದು ಬಂದರು.. ಔಷಧ ಶಕ್ತಿಗೆ ಹೆದರದ ಸಾವು, ದೇವರ ಮಕ್ಕಳ ಪ್ರಾರ್ಥನೆಯೆದುರು ಮಂಡಿಯೂರಿತು! ಕಳೆದ ಇಪ್ಪತೈದು ವರ್ಷಗಳಿಂದ ನಿರಾಶ್ರಿತರು, ನಿರ್ಗತಿಕರು, ಅನಾಥರಿಗೆ ಬದುಕು ಕಲ್ಪಿಸಿಕೊಡುತ್ತಿರುವ ವೈಟ್‌ಡವ್ಸ್‌ ಸಂಸ್ಥೆಯ ಸ್ಥಾಪಕಿ ಕೊರಿನ್‌ ರಸ್ಕಿನ್ಹಾ ಅವರ ಸಾವು ಗೆದ್ದು ಬಂದ ಯಶೋಗಾಥೆ ಇದು. ಯಾರ ಪ್ರಾರ್ಥನೆಯಿಂದ ತನಗೆ ಪುನರ್ಜೀವನ ಲಭಿಸಿತೋ, ಅವರಿಗಾಗಿ ಹೈಫೈ ಆಶ್ರಯತಾಣ ಕಲ್ಪಿಸಿ ಸಶಕ್ತರನ್ನಾಗಿ ರೂಪಿಸುವ ಉದ್ದೇಶ ಈಡೇರಿಸುತ್ತಿದ್ದಾರೆ.

Advertisement

2010ರಲ್ಲಿ ಮಹಾಮಾರಿ ಕ್ಯಾನ್ಸರ್‌ ಜತೆಗೆ ಹೆಪಟೈಟಸ್‌ “ಬಿ’ ಸಮಸ್ಯೆಯಿಂದಾಗಿ ಸಾವಿನ ದವಡೆಯಂಚಿಗೆ ಹೋಗಿದ್ದರು ಕೊರಿನ್‌. ಕೋಮಾದಲ್ಲಿದ್ದ ಕೊರಿನ್‌ ಅವರನ್ನು ಬದುಕಿಸಲು ವೈದ್ಯರು, ಮನೆಯವರು ಅಸಹಾಯಕರಾಗಿದ್ದರು. ಆದರೆ, ಸತತ ಎಂಟು ದಿನ ಕೋಮಾದಲ್ಲಿದ್ದವರು, ಕೋಮಾದಿಂದೆದ್ದು ಬಂದಾಗ ಎಲ್ಲರಿಗೂ ಆಶ್ಚರ್ಯ. ಈಗ ಕಳೆದ ಹತ್ತು ವರ್ಷಗಳಿಂದ ಕ್ರಿಯಾ ಶೀಲ ಬದುಕು ರೂಪಿಸಿಕೊಂಡಿದ್ದಾರೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಕೊರಿನ್‌ ಹೇಳುವುದಿಷ್ಟೇ, ‘ಆರು ನೂರಕ್ಕೂ ಹೆಚ್ಚು ಮಂದಿ ದೇವರ ಮಕ್ಕಳ ನಿರಂತರ ಪ್ರಾರ್ಥನೆ ಮತ್ತು ನನ್ನ ಬದುಕಿನ ಛಲ’.

ಯಾರಿವರು ದೇವರ ಮಕ್ಕಳು?
ಕೊರಿನ್‌ ಅವರು ಕಳೆದ ಇಪ್ಪತೈದು ವರ್ಷಗಳಿಂದ ನಿರ್ಗತಿಕರು, ನಿರಾಶ್ರಿತರಿಗಾಗಿ ಬದುಕು ಮುಡಿಪಾಗಿಟ್ಟಿದ್ದಾರೆ. ನಿರಾಶ್ರಿತ ಮಹಿಳೆಯರಿಗೆ ಮಠದಕಣಿ ಮತ್ತು ಪುರುಷರಿಗೆ ಜೈಲ್‌ ರೋಡ್‌ನ‌ಲ್ಲಿ ದಾನಿಗಳು ನೀಡಿದ ಮನೆಯಲ್ಲಿ ಆಹಾರ, ವಸತಿ ಮತ್ತು ವೈದ್ಯಕೀಯ ಸವಲತ್ತು ಕಲ್ಪಿಸುತ್ತಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಮಂದಿಗೆ ರೀ ಹ್ಯಾಬಿಲಿಟೇಶನ್‌ ಒದಗಿಸಿದ್ದು, ಪ್ರಸ್ತುತ ಸುಮಾರು 150ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಈಗ ಇವರಿಗಾಗಿ ಮರೋಳಿಯಲ್ಲಿ ಶಾಶ್ವತ ಮನೆ ನಿರ್ಮಿಸಲಾಗಿದ್ದು, ಫೆ. 17ರಿಂದ ಅಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ನಿವೃತ್ತ ಶಿಕ್ಷಕಿ ಐರಿನ್‌ ಕರ್ಕಡ ಕುಲಶೇಖರದಲ್ಲಿ ದಾನವಾಗಿ ನೀಡಿದ ಮನೆಯಲ್ಲಿ 41 ಮಂದಿ ನಿರ್ಗತಿಕ ಮತ್ತು ಅನಾಥ ಮಕ್ಕಳಿಗೆ ಆಶ್ರಯದಾತರಾಗಿದ್ದಾರೆ. ಯಾವುದೇ ಪ್ರಚಾರದ ಹಂಗಿಲ್ಲದೆ, ರೈಲ್ವೇ ಸ್ಟೇಷನ್‌, ಪುರಭವನದ ಮುಂಭಾಗ ಇರುವ ಕೈ ಕಾಲು ಕಳೆದುಕೊಂಡ ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಆಹಾರ ಉಣಬಡಿಸುತ್ತಿದ್ದಾರೆ. ಈ ಎಲ್ಲರ ಪಾಲಿಗೆ ಪ್ರೀತಿಯ ‘ಅಮ್ಮ’ ಆಗಿರುವ ಕೊರಿನ್‌, ಇಷ್ಟೂ ಮಂದಿಯನ್ನು ದೇವರ ಮಕ್ಕಳೆಂಬಂತೆ ಸಲಹುತ್ತಿದ್ದಾರೆ.

ಮಾನಸಿಕ ಕಾಯಿಲೆಗೊಳಗಾಗಿ ಮನೆಯಿಂದ ಹೊರ ಬಂದು ನಿರಾಶ್ರಿತನಾಗಿದ್ದ ಬೆಳಗಾವಿ ಮೂಲದ ವಿನಯ್‌ ಪ್ರಸ್ತುತ ಸಾಮಾನ್ಯರಂತಾಗಿಸಂಸ್ಥೆಯಲ್ಲಿದ್ದಾರೆ.

‘ನಾನು ಇಲ್ಲಿ ಬಂದು ಎರಡು ವರ್ಷವಾಯಿತು. ‘ಅಮ್ಮ’ನ ಸೇವೆಯೇ ನನ್ನನ್ನು ಆರೋಗ್ಯವಂತನಾಗಲು ನೆರವಾಗಿದೆ. ಅವರ ಪ್ರೀತಿ, ಕಾಳಜಿ ಇನ್ನೆಲ್ಲೂ ಸಿಗದು’ ಎನ್ನುತ್ತಾರೆ.

Advertisement

1989ರಲ್ಲಿ ಉದ್ಯಮಿ ವೈಟಸ್‌ ರಸ್ಕಿನ್ಹಾ ಅವರನ್ನು ಕೊರಿನ್‌ ರಸ್ಕಿನ್ಹಾ ವಿವಾಹವಾದರು. ಮದುವೆಯಾಗಿ ಐದು ವರ್ಷಗಳಾದರೂ, ದಂಪತಿಗೆ ಮಕ್ಕಳಾಗಿರಲಿಲ್ಲ. ಮಕ್ಕಳಾಗುವ ಎಲ್ಲ ರೀತಿಯ ಚಿಕಿತ್ಸೆಗಳನ್ನು ಮಾಡಿಸಿಕೊಂಡ ಬಳಿಕ ಮಕ್ಕಳಾಗದು ಎಂದು ವೈದ್ಯರೇ ಷರಾ ಎಳೆದು ಬಿಟ್ಟಿದ್ದರು. ಆದರೆ ಕುಗ್ಗದ ಕೊರಿನ್‌ ಆರಿಸಿಕೊಂಡದ್ದು ದೇವರ ಮಕ್ಕಳ ಸೇವೆ. ವೆನ್ಲಾಕ್‌, ಲೇಡಿಗೋಶನ್‌ ಆಸ್ಪತ್ರೆಯಲ್ಲಿರುವ ಬಡವರಿಗೆ ಆಹಾರ ಉಣ ಬಡಿಸುತ್ತಾ ಕ್ರಮೇಣ ರಸ್ತೆ ಬದಿ, ಇರುವ ನಿರ್ಗತಿಕರಿಗೆ ಊಟ ನೀಡತೊಡಗಿದರು. ಜತೆಗೆ ದಾನಿಗಳ ನೆರವಿನೊಂದಿಗೆ ಸೂರು ಮತ್ತು ವೈದ್ಯಕೀಯ ಚಿಕಿತ್ಸೆ ಒದಗಿಸಿಕೊಟ್ಟರು. ಅವರ ಈ ಸೇವೆಯ ಫ‌ಲವೇನೋ ಎಂಬಂತೆ 1994ರಲ್ಲಿ ಅವ ರಿಗೆ ಮಗಳು ಜೀನಾ ರಸ್ಕಿನ್ಹಾ ಜನಿಸಿದಾಗ ಮನೆ ಮಂದಿಯ ಸಂತಸ ಇಮ್ಮಡಿಯಾಯಿತು.

ಉಚಿತ ಸೇವೆ ನೀಡುವ ವೈದ್ಯರು
ಕೊರಿನ್‌ ಅವರಲ್ಲಿ ಆಶ್ರಯದಲ್ಲಿರುವ ನಿರ್ಗತಿಕರ ಪೈಕಿ ಶೇ. 80ರಷ್ಟು ಮಂದಿ ಪೊಲೀಸರ ಮಾಹಿತಿ ಮೂಲಕ ಬಂದಿರುವಂತವರು. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿದ್ದಾರೆ. ಇವರಿಗೆಲ್ಲ ನಗರದ ಕೆಲ ವೈದ್ಯರು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸ್ತುತ ಮರೋಳಿಯಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 43 ಸಾವಿರ ಚ. ಅಡಿಯ ವೈಟ್‌ಡೌಸ್‌ ನಿರ್ಗತಿಕರ ಕೇಂದ್ರದಲ್ಲಿ ಫಿಸಿಯೋಥೆರಪಿ, ವಿವಿಧ ಚಿಕಿತ್ಸೆ, ವ್ಯಾಯಾಮ, ಮನರಂಜನೆ ಸಹಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ನಾಲ್ಕು ವಾರ್ಡ್‌ಗಳು, ನರ್ಸಿಂಗ್‌ ಸೌಲಭ್ಯವೂ ಇದೆ. ಸ್ವತಃ ಗಾಯಕರಾಗಿರುವ ಕೊರಿನ್‌ ವೈಟ್‌ಡವ್ಸ್‌ ಗಾಯನ ತಂಡದ ಮೂಲಕ ಬಂದ ಹಣದೊಂದಿಗೆ ದಾನಿಗಳು, ಸಂಬಂಧಿಕರು ನೀಡಿದ ಹಣವನ್ನು ಒಟ್ಟುಗೂಡಿಸಿ ಈ ಮನೆ ನಿರ್ಮಿಸಿದ್ದಾರೆ 

17ರಂದು ಉದ್ಘಾಟನೆ 
ವೈಟ್‌ಡೌಸ್‌ ಸಂಸ್ಥೆಯ 200 ಹಾಸಿಗೆಗಳ ಮನೋ ರೋಗಿಗಳ ಶುಶ್ರೂಷೆ ಹಾಗೂ ನಿರಾಶ್ರಿತರ ಆಶ್ರಯ ತಾಣ ಫೆ. 17ರಂದು ಮರೋಳಿ ಕುಲಶೇಖರದಲ್ಲಿ ಉದ್ಘಾಟನೆಗೊಳ್ಳಲಿದೆ. ದಾನಿ ಲೆಸ್ಲಿ ಫೆರ್ನಾಂಡಿಸ್‌ ಉದ್ಘಾಟಿಸಲಿದ್ದು, ವಿಶ್ರಾಂತ ಬಿಷಪ್‌ ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾರ್ಥಕ ಭಾವ
ಈಗಾಗಲೇ 600ಕ್ಕೂ ಹೆಚ್ಚು ಮಂದಿ ಇಲ್ಲಿ ಉಚಿತ ಸೂರು, ವಸತಿ, ವಿದ್ಯೆ, ಆಹಾರ ಸೇವೆಗಳನ್ನು ಪಡೆದಿದ್ದಾರೆ. ಕೆಲವರು ಸ್ನಾತಕೋತ್ತರ ಪದವಿ, ವಿವಿಧ ಉದ್ಯೋಗ ಗಳನ್ನು ಗಿಟ್ಟಿಸಿಕೊಂಡು ಜೀವನ ರೂಪಿಸುತ್ತಿದ್ದಾರೆ. ಕೆಲವು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಲಾಗಿದೆ. ವಿವಿಧ ಕಾರಣಗಳಿಂದ ಮನೆಬಿಟ್ಟು ಬಂದವರಿಗೆ ಚಿಕಿತ್ಸೆ ನೀಡಿ, ಬಳಿಕ ವಿಳಾಸ ಸಿಕ್ಕಿದಲ್ಲಿ ಮತ್ತೆ ಮನೆಗೆ ಕಳುಹಿಸಲಾಗುತ್ತದೆ. ಆಗ ಮನೆಯವರಿಗೆ ಆಗುವ ಸಂತಸ ಸಾರ್ಥಕ ಭಾವ ಮೂಡಿಸುತ್ತದೆ.
 - ಕೊರಿನ್‌ ರಸ್ಕಿನ್ಹಾ,
   ಸ್ಥಾಪಕಿ ವೈಟ್‌ಡವ್ಸ್‌

Advertisement

Udayavani is now on Telegram. Click here to join our channel and stay updated with the latest news.

Next