ಕುಂದಾಪುರ: ಮನೆಯಂಗಳದಲ್ಲೇ ಇದ್ದ ಕಾರಿಗೆ ಟೋಲ್ ಕಡಿತವಾದ ಘಟನೆಗೆ ಸಂಬಂಧಿಸಿ ಉದಯವಾಣಿಯಲ್ಲಿ ಮಂಗಳವಾರ ಪ್ರಕಟವಾದ ವರದಿಯನ್ನು ಓದುತ್ತಿದ್ದ ಇಲ್ಲಿನ ವ್ಯಕ್ತಿಯೊಬ್ಬರ ಫಾಸ್ಟ್‌ಟ್ಯಾಗ್ ಅಕೌಂಟಿನಿಂದಲೂ ಹಣ ಕಡಿತವಾದ ಕಾಕತಾಳೀಯ ಘಟನೆ ಸಂಭವಿಸಿದೆ.
ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಅಂಗಡಿಯ ವರ್ತಕ ರಾಘವೇಂದ್ರ ಪ್ರಭು ಅವರ ಕಾರು ಮೇ 16ರಂದು ಬಿ.ಸಿ.ರೋಡ್‌ನ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಮೂಲಕ ಸಾಗಿರುವುದಾಗಿ ಹೇಳಿ ಫಾಸ್ಟ್ಯಾಗ್ ವ್ಯಾಲೆಟ್‌ನಿಂದ ಹಣ ಕಡಿತವಾಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿತ್ತು. ಆ ವರದಿಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿ ಟೋಲ್‌ನವರು ಹಣವನ್ನು ಮರಳಿ ನೀಡಿದ್ದರು. ಆ ವಿಷಯವನ್ನೂ “ಉದಯವಾಣಿ’ ಮೇ 23ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಆಶ್ಚರ್ಯವೆಂದರೆ ಆ ವರದಿಯನ್ನು ಓದುತ್ತಿದ್ದಾಗಲೇ ಕುಂದಾಪುರದ ಶಾಸ್ತ್ರೀ ಸರ್ಕಲ್‌ನ ಅಪ್ಸರಾ ಬ್ಯಾಗ್ ಆ್ಯಂಡ್ ಫ್ಯಾನ್ಸಿಯ ಮಾಲಕ ಮಹಮ್ಮದ್ ರಫೀಕ್ ಅವರ ಮೊಬೈಲ್‌ಗೆ ಸಂದೇಶವೊಂದು ಬಂದಿದ್ದು, ತೆರೆದು ನೋಡಿದರೆ ಅದೇ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಮೂಲಕ ಅವರ ವಾಹನ ಹಾದು ಹೋಗಿದೆ ಎಂದು 30 ರೂ. ಪೇಟಿಎಂ ವ್ಯಾಲೆಟ್‌ನಿಂದ ಕಡಿತವಾಗಿರುವ ಮಾಹಿತಿ ಇತ್ತು. ಅವರ ಝೆನ್ ಎಸ್ಟಿಲೊ ವಾಹನ ಮಾತ್ರ ಅಲ್ಲೇ ಅಂಗಡಿ ಬಳಿಯಲ್ಲೇ ಇತ್ತು!
ಬಳಿಕ ಅವರು ಟೋಲ್ ಪ್ಲಾಜಾದ ನಿರ್ವಾಹಕ ನವೀನ್ ಶೆಟ್ಟಿ ಅವರನ್ನು ಸಂಪರ್ಕಿಸಿ ದೂರು ನೀಡಿ ಪತ್ರಿಕಾ ವರದಿಯ ಕುರಿತೂ ಉಲ್ಲೇಖ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಟೋಲ್‌ನವರು ಹಣ ಮರಳಿಸಿದ್ದಾರೆ. ಆದರೆ ಇಂತಹ ಅಚಾತುರ್ಯಗಳು ಪದೇ ಪದೆ ಸಂಭವಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.