ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತೆ ಲೀಷಾ ಅವರಿಗೆ ಯಾವ ಇಲಾಖೆಯಲ್ಲಿ “ಸಿ’ ದರ್ಜೆ ಹುದ್ದೆ ನೀಡಲಾಗುತ್ತದೆ ಎಂಬ ಬಗ್ಗೆ ಎರಡು ವಾರಗಳಲ್ಲಿ ವರದಿ ನೀಡಿ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಮೌಖೀಕ ಸೂಚನೆ ನೀಡಿದೆ.
ಕೋರ್ಟ್ ಆದೇಶದ ಬಳಿಕವೂ ಉದ್ಯೋಗ ಕಲ್ಪಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಲಿಷಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾ. ಜಯಂತ್ ಪಟೇಲ್ ಹಾಗೂ ನ್ಯಾಯಮೂರ್ತಿ ಸುಜಾತಾ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ, ಲಿಷಾ ಅವರಿಗೆ ಸಿ ದರ್ಜೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಜೂನ್ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಆದರೆ, ಇದೊಂದು ವಿಶೇಷ ಪ್ರಕರಣವಾಗಿರುವುದರಿಂದ ಉದ್ಯೋಗ ಕಲ್ಪಿಸಲು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ನಿರ್ದಿಷ್ಟ ನಿಯಮಾವಳಿ ರೂಪಿಸಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಲಿಷಾ ಅವರಿಗೆ ಹುದ್ದೆ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಂತ್ರಸ್ತ ಯುವತಿಗೆ ಯಾವ ಇಲಾಖೆಯಲ್ಲಿ ಹುದ್ದೆ ನೀಡಲಾಗುತ್ತದೆ ಎಂಬುದನ್ನು ಪರಿಶೀಲನೆ ನಡೆಸಿ ಎರಡು ವಾರಗಳಲ್ಲಿ ವರದಿ ನೀಡಿ. ಮೊದಲು ಹುದ್ದೆ ನೀಡುವ ತೀರ್ಮಾನ ತೆಗೆದುಕೊಳ್ಳಿ. ಬಳಿಕ ವಿಶೇಷ ಪ್ರಕರಣದ ಬಗ್ಗೆ ನಿಯಮಾವಳಿ ರೂಪಿಸಿ ಎಂದು ಮೌಖೀಕ ಸಲಹೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?: 2013ರ ಏ.17ರಂದು ಬಿಜೆಪಿ ಕಚೇರಿ ಮುಂದೆ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಮಹಾರಾಣಿ ಕಾಲೇಜಿನಲ್ಲಿ ಬಿಸಿಎ ವ್ಯಾಸಾಂಗ ಮಾಡುತ್ತಿದ್ದ ಲಿಷಾ ಅವರು ಶೇ.50ರಿಂದ 70ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿ ಎಡಗಾಲು ಕಳೆದುಕೊಂಡಿದ್ದರು. ಪರಿಣಾಮ ಎಂಟಕ್ಕೂ ಅಧಿಕ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದ ಲಿಷಾ ಚಿಕಿತ್ಸೆಗೆ 25 ಲಕ್ಷಕ್ಕೂ ಅಧಿಕ ಹಣ ವೆಚ್ಚವಾಗಿತ್ತು.
ಈ ಮಧ್ಯೆ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೂಕ್ತ ಪರಿಹಾರ ಮತ್ತು ಉದ್ಯೋಗ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ 2014ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮನವಿ ಆಲಿಸಿದ ನ್ಯಾಯಪೀಠ, ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಲೀಷಾಗೆ ಉದ್ಯೋಗ ಕಲ್ಪಿಸಬೇಕು ಮತ್ತು ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು 2016ರ ಅ.17ರಂದು ಆದೇಶಿಸಿತ್ತು.
ಕೋರ್ಟ್ ಆದೇಶ ನೀಡಿ 9 ತಿಂಗಳ ಬಳಿಕವೂ ಉದ್ಯೋಗ ಮತ್ತು ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಲಿಷಾ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಹೀಗಾಗಿ ಲಿಷಾ ಅವರಿಗೆ “ಸಿ’ ದರ್ಜೆ ಹುದ್ದೆ ನೀಡಲು ಜೂನ್ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು.