Advertisement
ಕನಿಷ್ಠ 8ರಿಂದ 9 ಸ್ಥಾನಗಳನ್ನು ಗೆಲ್ಲುತ್ತೇವೆಂಬ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿರುವಂತೆ ಕಾಣುತ್ತಿದೆ. ಈಗ ಹುಣಸೂರು, ಕಾಗವಾಡ, ಅಥಣಿ, ರಾಣಿಬೆನ್ನೂರು ಬಗ್ಗೆ ಮಾತ್ರ ಆಶಾಭಾವನೆ ಹೊಂದಿದ್ದು, ಶಿವಾಜಿನಗರದಲ್ಲಿ ಅಚ್ಚರಿ ಫಲಿತಾಂಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದೆ. ಉಳಿದ ಕಡೆ ಅಂತಹ ಯಾವ ಲಕ್ಷಣಗಳೂ ಕಾಂಗ್ರೆಸ್ ಪಕ್ಷಕ್ಕೆ ಸದ್ಯಕ್ಕಂತೂ ಕಾಣುತ್ತಿಲ್ಲ.
Related Articles
Advertisement
ಲೆಕ್ಕಾಚಾರ ಬದಲಿಸಿದ “ಮೈತ್ರಿ’ ಮಾತು: ಉಪ ಸಮರ ಗೆಲ್ಲೋದು ನಾವೇ ಎಂದು ರಣರಂಗಕ್ಕೆ ಇಳಿದ ಕಾಂಗ್ರೆಸ್, ಚುನಾವಣಾ ಪ್ರಚಾರದ ಮೊದಲಾರ್ಧದಲ್ಲಿ ಅಷ್ಟೇನೂ ಉತ್ಸಾಹ, ಸಂಘಟಿತ ಪ್ರಯತ್ನ ನಡೆಸಿದಂತೆ ಕಂಡು ಬಂದಿಲ್ಲ. ಆದರೆ, ದೇವೇಗೌಡರು ಮೈತ್ರಿ ದಾಳ ಉರುಳಿಸುತ್ತಿದ್ದಂತೆ ಸಿಎಂ ಪಟ್ಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ತೇಲಿ ಬರುತ್ತಿದ್ದಂತೆ, ಪ್ರಚಾರ ಗರಿಗೆದರಿತು. ಪ್ರಚಾರದ ಕೊನೆಯಾರ್ಧದಲ್ಲಿ ಕಣ ದಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳು ಒಟ್ಟೊಟ್ಟಿಗೆ ಕಂಡು ಬಂದರು. ನಮಗೆ ಬಿಜೆಪಿಯಷ್ಟೇ ಜೆಡಿಎಸ್ ಸಹ ರಾಜಕೀಯವಾಗಿ ಶತ್ರು ಎಂಬ ಸಿದ್ದರಾಮಯ್ಯ ನವರ ಮಾತು ಮೈತ್ರಿಯ ಕನಸಿಗೆ ಭಂಗ ತಂದಿತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಷ್ಟಕ್ಕೂ, ಮೈತ್ರಿಯ ಮಾತೇ ಗೆಲ್ಲುವ ಸ್ಥಾನಗಳು, ಗೆಲ್ಲುವ ಲೆಕ್ಕಾಚಾರಕ್ಕೆ ಹಿನ್ನಡೆ ತಂದಿತು ಅನ್ನುವ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬಂದಿವೆ. ಏಕೆಂದರೆ, ಶಾಸಕರ ಅನರ್ಹತೆಯ ವಿಚಾರ ಇಟ್ಟುಕೊಂಡು ಪ್ರಚಾರ ಮಾಡಿದ್ದಿದ್ದರೆ ಹೆಚ್ಚು ಸ್ಥಾನ ಗೆಲ್ಲಬಹುದಿತ್ತು. ಆದರೆ, ಚುನಾವಣಾ ಪ್ರಚಾರದ ಕೊನೆ ಯಾರ್ಧದಲ್ಲಿ ಕೇಳಿ ಬಂದ ಮೈತ್ರಿಯ ಮಾತುಗಳು ಲೆಕ್ಕಾಚಾರ “ಕೈ’ ತಪ್ಪುವಂತೆ ಮಾಡಿತು. ಇದು ಬಿಜೆಪಿಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಿಕೊಟ್ಟಿತು. ಜೆಡಿಎಸ್ ನಾಯಕರು ಉದ್ದೇಶಪೂರ್ವಕವಾಗಿಯೇ ಕೊನೇ ಹಂತದಲ್ಲಿ ಮೈತ್ರಿ ಮಾತುಗಳನ್ನು ತೇಲಿ ಬಿಟ್ಟರು ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.
ಕೆಪಿಸಿಸಿ ಅಧ್ಯಕ್ಷರ ತಲೆದಂಡ?: ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ತಂಡು ಕೊಟ್ಟರೂ ಸದ್ಯಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ಪಲ್ಲಟ ಆಗುವ ಸಾಧ್ಯತೆಗಳು ಕಡಿಮೆ. ಆದರೆ, ಕೆಪಿಸಿಸಿ ಅಧ್ಯಕ್ಷರ “ತಲೆದಂಡ’ಕ್ಕೆ ಒತ್ತಡ ಹೆಚ್ಚಾಗಬಹುದು. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಸಿಗದಿದ್ದಾಗ “ನೈತಿಕ’ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಡಲು ಮುಂದಾಗಿದ್ದರು. ಬಳಿಕ, ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ಕೊಡುತ್ತೇನೆಂದು ಉಲ್ಟಾ ಹೊಡೆದಿದ್ದರು. ಇದೇ ವೇಳೆ, ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಶಾಸಕರ ಪೈಕಿ ಬಹುತೇಕ ಮಂದಿ ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದಿದ್ದರು.
* ರಫೀಕ್ ಅಹ್ಮದ್