Advertisement

ಮನೆಯೊಳಗೆ ಮನೆಯೊಡತಿ ಇದ್ದಾಳ್ಳೋ ಇಲ್ಲವೋ!

10:35 PM Jul 04, 2019 | mahesh |

ಮಕ್ಕಳಿಗೆ ಹೇಗೂ ಬೇಸಗೆ ರಜೆ. ತವರು ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರುತ್ತೇನೆ’ ಅಂತ ಮನೆಯಾಕೆ ಹೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. “ಗಂಡಸರೆಂದರೆ ಗಂಡಸರೇ’ ಅಂತ ನನ್ನ ಬಗ್ಗೆ ಇನ್ನೇನೇನೋ ತಪ್ಪುತಪ್ಪಾಗಿ ಊಹಿಸಿಕೊಳ್ಳದಿರಿ. ಶಾಲೆಗೆ ರಜೆ ಕೊಟ್ಟ ತಕ್ಷಣ, ಮಕ್ಕಳನ್ನು ತಲೆಯ ಮೇಲಿನ ಭಾರವೆಂಬಂತೆ ಬೇಸಿಗೆ ಶಿಬಿರಕ್ಕೆ ಕಳಿಸಿ, ರಜೆ ಮುಗಿದುಬಿಡಲಿ ಅಂತ ನಿಟ್ಟುಸಿರುಯ್ಯುವ ಜಾಯಮಾನ ಖಂಡಿತ ನನ್ನದಲ್ಲ. ಅದರ ಬದಲು, ಹೆಂಡತಿಯ ತವರಿಗೆ ಹೋದರೆ ಅಲ್ಲಿ ಆಟಕ್ಕೆ ಜೊತೆಯಾಗಲು ಅವಳ ಅಣ್ಣನ ಮಕ್ಕಳೂ ಇರುತ್ತಾರಲ್ಲ, ಜೊತೆಗೆ ಈ ಸಮಯದಲ್ಲಿ ತಾನೇ, ಚಿಕ್ಕಪ್ಪ, ದೊಡ್ಡಪ್ಪ , ಚಿಕ್ಕಮ್ಮ, ದೊಡ್ಡಮ್ಮ , ತಾತ, ಅಜ್ಜಿ , ಸೋದರಮಾವ ಅನ್ನುವ ಹತ್ತಿರದ ಸಂಬಂಧಗಳ ಪರಿಚಯ ಮಕ್ಕಳಿಗೆ ಆಗುವುದು? ಹಾಗಾಗಿ, ಆಕೆ ತವರಿಗೆ ಹೋಗುವುದು ಒಳ್ಳೆಯ ನಿರ್ಧಾರವೆನಿಸಿತು.

Advertisement

ಕೊಂಚ ಸತ್ಯವನ್ನೂ ಸೇರಿಸಬೇಕೆಂದರೆ ಮದುವೆಯಾದಾಗಿನಿಂದ ಒಬ್ಬನೇ ಈ ಮನೆಯಲ್ಲಿ ಉಳಿಯುವ ಸ್ವಾತಂತ್ರ್ಯ, ಅವಕಾಶ ಎರಡೂ ನನಗೆ ಸಿಕ್ಕಿರಲಿಲ್ಲ. ಅದಕ್ಕಿಂತಲೂ, ತಾನಿಲ್ಲದೇ ಈ ಮನೆಯ ಒಂದು ಹುಲ್ಲುಕಡ್ಡಿಯೂ ಅತ್ತಿತ್ತ ಸರಿಯುವುದಿಲ್ಲ ಅನ್ನುವ ಹೆಂಡತಿಯ ಅಹಮ್ಮಿಗೆ ಕೊಡಲಿ ಹಾಕಬೇಕಿತ್ತು. ಅದಕ್ಕಾಗಿಯೇ ಕಾಯುತ್ತಿದ್ದ ನನಗೆ, ಈ ಬೇಸಿಗೆ ರಜೆ ಬಂದಿದ್ದು ವರದಾನವೇ. “ನೀವೂ ಆಫೀಸಿಗೆ ಎರಡು ವಾರ ರಜೆ ಹಾಕಿ ನಮ್ಮೊಡನೆ ಬನ್ನಿ’ ಅಂತ ಆಕೆ ಕರೆಯುತ್ತಾಳಾದರೂ, ಸಿಗುವ ಸ್ವಾತಂತ್ರ್ಯವನ್ನು ಬಿಟ್ಟುಕೊಡುವ ಮೂರ್ಖತನವನ್ನು ಯಾವ ಬುದ್ಧಿವಂತ ಪತಿ ಮಾಡುತ್ತಾನೆ ಹೇಳಿ? ಹೊರಡುವ ಮೊದಲು ಮನೆಯ ನಿಯಮಗಳನ್ನೆಲ್ಲ ಹೇಳಿಯೇ ಹೋದಳು. ಅವರು ಹೋಗುವಾಗ ಹುಸಿ ಬೇಸರ ತೋರ್ಪಡಿಸಿದೆ.

ಮನೆಯಲ್ಲಿ ಹೆಂಡತಿಯಂತೆ ಗಂಡನೂ ಅಡುಗೆ ಮಾಡಬೇಕು ಅನ್ನುವುದು ನನ್ನ ಪತ್ನಿಯ ಅಭಿಮತ. ಆದರೆ, ನಾನು ಇದುವರೆಗೆ ಅಡುಗೆ ಮನೆಗೆ ಕಾಲಿಟ್ಟವನಲ್ಲ. ಇದು ಎಂದೆಂದಿಗೂ ನಮ್ಮ ನಡುವಿನ ಜಗಳದ ಮೊದಲ ಅಧ್ಯಾಯ. ತಾನು ಹುಷಾರಿಲ್ಲದೇ ಮಲಗಿದ್ದಾಗ ಪತಿ, ಕೊಂಚವಾದರೂ ತನ್ನ ಕುರಿತು ಕಾಳಜಿ ವಹಿಸಲೆಂದು ಪತ್ನಿ ಆಶಿಸುತ್ತಾಳೆ. ಆದರೆ, ನನ್ನಂಥ ಗಂಡನಿಗೆ ಇಂಥ ಸರಳ ವಿಚಾರ ಅರ್ಥವಾಗುವುದಿಲ್ಲ.

ಕಳೆದ ತಿಂಗಳು ಪತ್ನಿಗೆ ಹುಷಾರಿಲ್ಲದಾಗ ದರ್ಶಿನಿಯಿಂದ ಇಡ್ಲಿ ಕಟ್ಟಿಸಿಕೊಂಡು ಬಂದಿದ್ದೆ. ಅದಕ್ಕಾಕೆ “ಮನೆಯಲ್ಲಿಯೇ ಅನ್ನ-ತಿಳಿಸಾರು ಮಾಡಬಹುದಿತ್ತಲ್ಲ’ ಎಂದು ಗೊಣಗಿದ್ದಳು. “ನಾನು ಅಡುಗೆ ಮನೆಗೆ? ಇಲ್ಲ ಇಲ್ಲ’ ಅಂತ ಮೀಸೆ ಮೇಲೆ ಕೈಯಾಡಿಸುತ್ತಲೇ ಸುಳ್ಳು ದರ್ಪ ತೋರಿಸಿದ್ದೆ. ಹೆಂಡತಿ ಇಲ್ಲದಾಗ ಪಕ್ಕದ್ಮನೆಯ ಶಾಂತಲಾ ಆಂಟಿ “ಯಾಕೋ ಹುಷಾರಿಲ್ಲ, ನಮ್ಮವರು ಆಫೀಸಿಗೆ ಹೋಗಿದ್ದಾರೆ. ಹೊಟೇಲ್‌ನಿಂದ ಊಟ ತಂದು ಕೊಡ್ತೀರಾ?’ ಎಂದು ಕೇಳಿದಾಗ ನಾನು ಇಂಟರ್‌ನೆಟ್‌ ನೋಡಿ ಉಪ್ಪಿಟ್ಟು ಮಾಡಿಕೊಟ್ಟಿದ್ದೆ. ನಾ ಮಾಡಿದ ತಪ್ಪೆಂದರೆ, ಡಬ್ಬಿಯನ್ನು ಆಗಲೇ ತೆಗೆದುಕೊಂಡು ಬರದೆ, ಅಲ್ಲೇ ಬಿಟ್ಟಿದ್ದು.

ಎರಡು ವಾರ, ಎರಡು ತಾಸಿನ ಹಾಗೆ ಮುಗಿದು ಹೋಯ್ತು. ಹೆಂಡತಿ ಬರುವ ದಿನ ಮನೆಯ ಕಸ ಗುಡಿಸಿ, ಒರೆಸಿದ್ದೆ. ಆದರೆ, ಕಸವನ್ನು ಎತ್ತಿ ಹಾಕುವುದು ಮರೆತುಹೋಗಿತ್ತು. ಹಿಂದಿನ ರಾತ್ರಿ ಎರಡೆರಡು ಬಾರಿ ಉಜ್ಜಿ ತೊಳೆದರೂ ಪಾತ್ರೆಯ ತಳಕ್ಕೆ ಅಂಟಿದ ಜಿಡ್ಡು ಹೋಗಿರಲಿಲ್ಲ. “ಸಿಟಿ ಬಸ್ಸಿನಲ್ಲಿ ಬಂದಿಳಿಯುತ್ತೇನೆ, ಅಲ್ಲಿ ನೀವು ಕಾಯುತ್ತಿರಿ’ ಅಂತ ಪತ್ನಿ ಹೇಳಿದ್ದಳು. ಅವಳು ಹೇಳಿದ ಸಮಯಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಆದರೆ, ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ಎಂಟು ವರ್ಷ ಹಳೆಯ ಸ್ಕೂಟರ್‌ ಕೈಕೊಟ್ಟು ನಿಂತಿತು. ಎಷ್ಟು ಸಲ ಒದ್ದರೂ ಸ್ಟಾರ್ಟ್‌ ಆಗಲೇ ಇಲ್ಲ. ಏನಾಗಿದೆ ಅಂತ ನೋಡುವಾಗಲೇ ಫೋನಿಗೆ ಇನ್ನೊಂದು ಮೆಸೇಜು. “ನೀವೇನು ಬರುವುದು ಬೇಕಿಲ್ಲ, ಆಟೋದಲ್ಲೇ ಬರುತ್ತಿದ್ದೇನೆ. ಕೆಲಸವಿದ್ದರೆ ನೋಡಿಕೊಳ್ಳಿ’ ಅಂತ. ಕಡೆಯ ವಾಕ್ಯ ಯುದ್ಧ ಘೋಷಣೆಯ ಮುನ್ಸೂಚನೆ ಅಂತ ಅರ್ಥವಾಗದಿರಲಿಲ್ಲ. ಸರಿಯಾದ ಸಮಯಕ್ಕೆ ಕೈಕೊಟ್ಟು ಮತ್ತೂಂದು ಪ್ರಳಯಕ್ಕೆ ಕಾರಣವಾದ ಸ್ಕೂಟರನ್ನು ಬೈದುಕೊಳ್ಳುತ್ತ ಮನೆಯೊಳಕ್ಕೆ ಬಂದು ಗಡಿಬಿಡಿಯಿಂದ ಕಸ ಗುಡಿಸಿ, ಯಾವುದೋ ಮ್ಯಾಗಜಿನ್‌ ನೋಡುತ್ತ ಕುಳಿತೆ. ಬಾಗಿಲು ಬಡಿದ ಸದ್ದು. ಬಾಗಿಲು ತೆರೆದರೆ, ನನ್ನ ಹೆಂಡತಿ ಮಕ್ಕಳೊಂದಿಗೆ ಉರಿಮುಖದಲ್ಲಿ ನಿಂತಿದ್ದಳು. ಏನೂ ಆಗಿಲ್ಲವೆಂಬಂತೆ ನಟಿಸುತ್ತ, ಮಾತಿನಲ್ಲೇ ಅವಳನ್ನು ಸಮಾಧಾನಿಸಲೆತ್ನಿಸಿದೆ. ಏನೂ ಕೇಳಿಸಲಿಲ್ಲ ಎಂಬಂತೆ ಕೈಲಿದ್ದ ಬ್ಯಾಗುಗಳನ್ನು ಎಸೆದು, ಸೋಫಾದ ಮೇಲೆ ಕೂತಳು. ಟಿಪಾಯಿಯ ಮೇಲೆ ತೆರೆದಿಟ್ಟಿದ್ದ ಮ್ಯಾಗಜಿನ್‌ ಮತ್ತು ಅದರೊಳಗೆ ನಗುತ್ತಿದ್ದ ಮಾದಕ ನಟಿಯ ಫೋಟೊ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.

Advertisement

“ಪಾಪ ನೀವೆಷ್ಟು ಬಿಝಿ ಇದ್ದೀರಿ’ ಅಂತ ಹೇಳಿ ಅತ್ತ ತಿರುಗಿದಳು. ನನ್ನ ದಡ್ಡತನಕ್ಕೆ ನಾನೇ ಶಪಿಸಿಕೊಂಡೆ. ವ್ಯರ್ಥ ಮಾತಿಗಿಂತ ಮೌನವೇ ಲೇಸು ಅಂತ ಸುಮ್ಮನೆ ಮಕ್ಕಳೊಡನೆ ಮಾತಾಡುತ್ತ ಕುಳಿತೆ. “ನಾನಿಲ್ಲದಿದ್ದರೆ ಈ ಮನೆ ಗತಿ ನೋಡಬೇಕು’ ಅಂತ ಗೊಣಗುತ್ತ, ನಾನು ಗುಡಿಸಿ, ಒರೆಸಿ ಶುಚಿಗೊಳಿಸಿದ್ದ ಮನೆಯನ್ನೇ ಇನ್ನೊಮ್ಮೆ ಗುಡಿಸತೊಡಗಿದಳು. ಅದೆಲ್ಲಿ ಅಡಗಿ ಕುಳಿತಿತ್ತೋ ಆ ಸೋಡಾ ಬಾಟೆಲ್ಲು, ಪೊರಕೆ ಸೋಕಿದ ಕ್ಷಣ ಸೋಫಾದ ಕೆಳಗಿಂದ ಲೊಳಲೊಳನೆ ಉರುಳಿ ಬಂತು. ಈಕೆ ಇನ್ನೂ ಮೂರು ದಿನ ಬರುವುದಿಲ್ಲವೆಂದು ಗೆಳೆಯರಿಗೆ ಹೇಳಿದ್ದೆ. ಇದೇ ಸುಸಂದರ್ಭವೆಂದು ತಿಳಿದ ಗೆಳೆಯರು “ತೀರ್ಥ ಸಮಾರಾಧನೆ’ ನಡೆಸಲು ಬಂದೇಬಿಟ್ಟರು. ನಾವು ಅದೇನೇ ಸಾಕ್ಷಿ ನಾಶ ಮಾಡಿದ್ದರೂ, ಈ ಖಾಲಿ ಸೋಡಾ ಬಾಟೆಲ್ಲು ಮಾತ್ರ ಸೋಫಾದ ಕೆಳಗೆ ಸೇರಿ ಸರಿಯಾದ ಸಮಯ ಕ್ಕಾಗಿ ಅಡಗಿ ಕುಳಿತಿತ್ತು. “ಇದಕ್ಕಲ್ಲವೇ ಎರಡು ವಾರದಲ್ಲಿ ಮೂರ್ನಾಲ್ಕು ಸಲವಷ್ಟೇ ಕರೆ ಮಾಡಿದ್ದು ನೀವು? ಈಗ ನಾನು ಬಂದದ್ದೇ ನಿಮಗೆ ಬೇಡವಾಗಿದೆ’ ಅಂದಳು ಕಣ್ಣೀರಧಾರೆ ಹರಿಸುತ್ತ. ಮತ್ತೆ ಸಮಾಧಾನ ಮಾಡುವ ನನ್ನ ಪ್ರಯತ್ನ ಯಶಸ್ವಿಯಾಗಲೇ ಇಲ್ಲ.

ಅವಳಿಗೆ ತವರು ಮನೆಯಿಂದ ತಂದಿದ್ದ ಒಂದಷ್ಟು ನಿಪ್ಪಟ್ಟುಗಳನ್ನು ಎತ್ತಿಡಬೇಕಿತ್ತು. ಕೆಂಪು ಡಬ್ಬಿ ಎಲ್ಲಿ ಅಂತ ಕೇಳಿದಳು. ನಾನು, ಅಸಮಾಧಾನ ದಿಂದಲೇ “ಅಲ್ಲೇ ಇರಬೇಕು ನೋಡು. ನಿನ್ನ ಕೆಂಪು ಡಬ್ಬಿ ನನ್ನ ಜೇಬಿನಲ್ಲಿ ಇರುತ್ತದ?’ ಅಂತ ರೇಗಿದೆ. ಇದಾಗಿ ಒಂದೆರಡು ಗಂಟೆಗಳಾಗಿರಬಹುದು. ಶಾಂತಲಾ ಆಂಟಿಯ ಅನಿರೀಕ್ಷಿತ ಆಗಮನ… ಬಂದವರೇ, “ಅವತ್ತು ನಿಮ್ಮೆಜಮಾನ್ರು ಎಷ್ಟು ಚೆಂದ ಉಪ್ಪಿಟ್ಟು ಮಾಡಿಕೊಟ್ಟಿದ್ರು ಅಂತೀರ? ನಿಮ್ಮ ಗಂಡನ ಕೈ ಅಡುಗೆ ಚೆನ್ನಾಗಿದೆ. ನೀವೇ ಪುಣ್ಯವಂತರು’ ಎನ್ನಬೇಕೆ? ಹೇಳುವುದು ಹೇಳಿಬಿಟ್ಟು ಉಪ್ಪಿಟ್ಟು ತುಂಬಿಕೊಟ್ಟಿದ್ದ ಕೆಂಪು ಡಬ್ಬವನ್ನು ಸಾಕ್ಷಿಯೆಂಬಂತೆ ಕೊಟ್ಟು ಹೋದರು. ಇದೇ ಕೆಂಪು ಡಬ್ಬವನ್ನೇ ಈಕೆ ಹುಡುಕುತ್ತಿದ್ದದ್ದು ಅಂತ ತಿಳಿದು, ಗಂಟಲು ಉಡುಗಿತ್ತು. “ಅಯ್ಯೋ, ಸ್ವಲ್ಪ ಹೆಚ್ಚು ಉಪ್ಪಿಟ್ಟು ಮಾಡಿದ್ದೆ. ಯಾಕೆ ಬಿಸಾಡೋದು ಅಂತ ಅವರಿಗೆ ಕೊಟ್ಟೆ’ ಅಂತ ಹೇಳುವಷ್ಟರಲ್ಲಿ ಅಡುಗೆ ಮನೆಯ ಕಡೆಯಿಂದ ಪಾತ್ರೆಗಳ ಹಾರಾಟ ಶುರು. “ಹೆಂಡತಿ ಹಾಸಿಗೆ ಹಿಡಿದಾಗ ಕೆಲಸ ಮಾಡೋದಿಲ್ಲ, ಪಕ್ಕದ ಮನೆಯವಳ್ಯಾರಿಗೋ ಹುಷಾರಿಲ್ಲ ಅಂದರೆ, ಎಲ್ಲ ಕೆಲಸಾನೂ ಮಾಡೋಕಾಗುತ್ತೆ’ ಅಂತ ಬೆಂಕಿಯುಗುಳುವ ಡೈಲಾಗು ಮತ್ತು ಸ್ಟೀಲ್‌ ಲೋಟವೊಂದು ರಪ್ಪನೆ ಕಿವಿಗೆ ಬಡಿಯಿತು. ನಾನೇ ತೋಡಿಕೊಂಡ ಹಳ್ಳ ಅಂದುಕೊಂಡೆ. ಮತ್ತಷ್ಟು ಅನಾಹುತ ಆಗುವ ಮೊದಲೇ ಎಚ್ಚೆತ್ತು, “ಹೋಗ್ಲಿ ಬಿಡು ಮಾರಾಯ್ತಿ. ನನ್ನಿಂದ ತಪ್ಪಾಗಿದೆ. ಇನ್ನು ಮುಂದಿನ ಬೇಸಗೆ ರಜೆ ನಿಮ್ಮಮ್ಮನ ಮನೆಯಲ್ಲೇ. ಕೆಲಸಕ್ಕೆ ರಾಜೀನಾಮೆ ಕೊಟ್ಟಾದರೂ ಬರುತ್ತೇನೆ’ ಎಂದು ಅವಳ ಮುಂದೆ ಶಸ್ತ್ರಾಸ್ತ್ರಗಳನ್ನೆಲ್ಲ ತ್ಯಜಿಸಿದ ಎದುರಾಳಿ ಯಂತೆ ಶರಣಾದೆ. ಯುದ್ಧ ಗೆದ್ದ ಕಿರುನಗೆ ಆಕೆಯ ಮೊಗದ ಮೇಲಿತ್ತು!

ಸಂತೋಷ ಕುಮಾರ್‌ ಎಲ್‌. ಎಂ.

Advertisement

Udayavani is now on Telegram. Click here to join our channel and stay updated with the latest news.

Next