Advertisement

ಆದರ್ಶ ಅನುಷ್ಠಾನದ ಬುನಾದಿ ಎಲ್ಲಿ?

12:23 AM Dec 10, 2022 | Team Udayavani |

ಒಗ್ಗಟ್ಟಿನಲ್ಲಿ ಬಲವಿದೆ- ಒಗ್ಗಟ್ಟಾಗಿರಬೇಕು, ಸತ್ಯವನ್ನು ನುಡಿಯಬೇಕು, ಪ್ರಾಮಾಣಿಕರಾಗಿರಬೇಕು- ಇತ್ಯಾದಿ ನುಡಿಮುತ್ತುಗಳನ್ನು ಉದುರಿಸುವವರಿಗೆ ಕೊರತೆ ಇದೆಯೆ? ಪ್ರಾಯಃ ಜಗತ್ತಿನ ಎಲ್ಲ 800 ಕೋಟಿ ಜನರೂ ಇಂತಹ ಮಾತುಗಳನ್ನು ಒಪ್ಪುವವರೇ… ಆದರೆ….

Advertisement

ಮನೆ-ದೇಶಗಳಲ್ಲಿ ಒಗ್ಗಟ್ಟು!: ದೇಶದೇಶಗಳನ್ನೂ ಒಂದುಗೂಡಿಸಲು ಆಗುತ್ತಿಲ್ಲ, ದೇಶವನ್ನೂ ವಿಭಜನೆ ಮಾಡಿದ್ದೇವೆ, ಜಗತ್ತಿನ ನಾನಾ ಕಡೆ ದೇಶ ವಿಭಜನೆ ನಡೆಯುತ್ತಲೇ ಇದೆ. ಮನೆಗಳಲ್ಲಿಯಾದರೂ ಒಗ್ಗಟ್ಟಿದೆಯೆ? ಮನೆಗಳಲ್ಲಿ ಒಗ್ಗಟ್ಟಿಲ್ಲದಿದ್ದರೆ, ಅವರೇ ಹೊರಗೆ ಸಮಾಜದಲ್ಲಿ, ಕಚೇರಿಗಳಲ್ಲಿ, ಸಂಘಸಂಸ್ಥೆಗಳಲ್ಲಿ, ಜಾತಿ ಸಂಘಟನೆಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಇವೆಲ್ಲ ಸೇರಿ ದೇಶದ ಮೇಲೆ ತಮ್ಮತನವನ್ನು ಹೇರುತ್ತಾರೆ. ಹೀಗಾದರೆ ಎಲ್ಲಿ ಒಗ್ಗಟ್ಟು? ಇನ್ನು ಸತ್ಯ, ಪ್ರಾಮಾಣಿಕತೆಗಳೆಲ್ಲ ಕುತ್ತಿಗೆಯ ಮೇಲಿನ ಮಾತುಗಳಾಗಿವೆ. ಮನೆಗಳಲ್ಲಿ ಒಗ್ಗಟ್ಟಿಲ್ಲದಿದ್ದರೆ ಸಮಾಜ, ದೇಶ ಒಗ್ಗಟ್ಟಿನಿಂದ ಇರುವುದಾದರೂ ಹೇಗೆಂದು ಯಾರೂ ಚಿಂತನೆ ನಡೆಸದೆ ಆದರ್ಶದ ಭಾಷಣಗಳನ್ನು ಬಿಗಿಯುತ್ತ ಹೋದದ್ದು ಮೂಲಭೂತ ಸಮಸ್ಯೆ ಎಂದೆನಿಸುತ್ತದೆ. ಉಪದೇಶ ಕೊಡುವುದಕ್ಕಿಂತ ಪಾಲನೆ ಮಾಡುವವರ ಅಗತ್ಯವಿದೆ. ಉಪದೇಶ ಕೊಡದಿದ್ದರೆ ನಷ್ಟವೇನೂ ಇಲ್ಲ, ಪಾಲಿಸಿದರೆ ಉದ್ದೇಶಗಳು ಈಡೇರುತ್ತವೆ, ಸಾಕಲ್ಲ ಇಷ್ಟು. 21ನೆಯ ಶತಮಾನದ ಈ ಆಧುನಿಕ ಕಾಲದಲ್ಲಿ ಯಶಸ್ವಿ ಉದ್ಯಮಿ ಕುಟುಂಬದ 50ರಿಂದ ಹಿಡಿದು 70ರ ವರೆಗಿನ ಎಲ್ಲ ಐವರು ಸಹೋದರರು ಒಂದೇ ಸಂಸ್ಥೆಯಲ್ಲಿ, ಒಂದೇ ಮನೆಯಲ್ಲಿರುವುದು ತಂದೆ ಹಾಕಿಕೊಟ್ಟ ನೈತಿಕ ಬದುಕಿನ ಭದ್ರಪಂಚಾಂಗ ಎನ್ನದೆ ನಿರ್ವಾಹವಿಲ್ಲ.

4ನೇ ತರಗತಿ ಓದು, ಬದುಕು?: ಈ “ಪಂಚಾಗಕರ್ತ’ ಕಪ್ಪೆಟ್ಟು ಬೋಳ ಪೂಜಾರಿಯವರ ಜನ್ಮಶತಮಾನೋತ್ಸವ “ಸ್ವರಾಮೃತ’ ಉಡುಪಿ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಡಿ. 9ರಿಂದ 11ರ ವರೆಗೆ ನಡೆಯುತ್ತಿದೆ. ಅವರು ಕಲಿತದ್ದೇ ನಾಲ್ಕನೆಯ ತರಗತಿ. ಉಪದೇಶ ಕೊಡುವುದಾದರೂ ಹೇಗೆ? ಆದರೆ ಇವರಿಗೆ ದಾಸರ ಹಾಡುಗಳ ತಾತ್ವಿಕ ಚಿಂತನೆಯ ಸ್ಪಷ್ಟ ಪರಿಕಲ್ಪನೆ ಇತ್ತು. ಯಾರೋ ಒಬ್ಬರು ಕಾಲಗತಿ ಸರಿ ಇಲ್ಲ ಎಂದಾಗ ಶ್ರೀಮದ್ಭಾಗವತ ಪುರಾಣ ಗ್ರಂಥವನ್ನು ತರಿಸಿ ನಿರಂತರ ಓದುತ್ತಿದ್ದರಂತೆ. ಭಾರೀ ಭಾರೀ ಕಲಿತವರಿಗೆ ಎಷ್ಟು ಅರ್ಥವಾಗುತ್ತದೋ? ಅಥವಾ ಭಾಷಣ ಮಾಡಲು ಅರ್ಥವಾಗುತ್ತದೋ ಏನೋ! ಇವರಿಗೆ ಜೀವನ ಹೇಗೆ ನಡೆಸಬೇಕು? ಹೇಗೆ ಮಾದರಿಯಾಗಿ ಬದುಕಬೇಕು ಎಂಬ ಪಾಠವನ್ನು ದಾಸರ ಹಾಡುಗಳು, ಭಾಗವತ ಪುರಾಣ ಕಲಿಸಿತೆನ್ನಬಹುದು. ಇದೆಲ್ಲ ಸಾಧ್ಯವಾದದ್ದು ವ್ಯಾವಹಾರಿಕ ಜೀವನ ಬಿಟ್ಟಲ್ಲ. ಕೈಗರಸದಿಂದ ಮರದ ಸಾ ಮಿಲ್‌, ಸ್ವಿಚ್‌ ಬೋರ್ಡ್‌ ಉದ್ಯಮ ನಡೆಸಿದರು. ಯಂತ್ರೋಪಕರಣಗಳ ತಾಂತ್ರಿಕ ಕೌಶಲಗಳೂ ಕೈಗೂಡಿದ್ದವು. ಅವರ ಮಾರ್ಗದರ್ಶನದಲ್ಲಿ ಮುಂದೆ ಪ್ರಕಾಶ್‌ ರೀಟೈಲ್‌ ಪ್ರೈ.ಲಿ.ನ “ಹರ್ಷ’ ಆರಂಭಗೊಂಡಿತು. ಮೂಲ ಉದ್ದೇಶ “ಉದ್ಯೋಗಿಗಳಾಗುವ ಬದಲು ಉದ್ಯೋಗ ಕೊಡುವ ಉದ್ಯಮಿಯಾಗಿ. ಒಬ್ಬನಿಗೆ ಉದ್ಯೋಗ ಕೊಟ್ಟರೆ ನಾಲ್ಕು ಜನರಿಗೆ ಊಟ ಕೊಟ್ಟಂತೆ. ಮೈಕ್‌ ಬಂಗಾರ ಅತ್ತ್, ಮನುಷ್ಯ ಬಂಗಾರ ಆವೊಡು’ ಎಂಬ ನೀತಿ.

ಭಜನೆಯ ಶಕ್ತಿ: ಸುಮಾರು 80 ವರ್ಷಗಳ ಹಿಂದಿನ ಮಾತು. ಶ್ರೀಕೃಷ್ಣಜನ್ಮಾಷ್ಟಮಿ ರಾತ್ರಿ ಎಲ್ಲೆಲ್ಲೋ ಕುಳಿತು ಹರಟೆ ಹೊಡೆದು ರಾತ್ರಿ ಮನೆಗೆ ಬಂದು ಅಘÂì ಬಿಡುವ ರೂಢಿ ಇತ್ತಂತೆ. ಮನೆಯಲ್ಲಿ ಹೆಂಗಸರು ಗಂಡಸರನ್ನು ನಿದ್ದೆ ಬಿಟ್ಟು ಕಾಯುವುದು ಸಾಮಾನ್ಯವಾಗಿತ್ತು. ಹಿರಿಯರೊಬ್ಬರು ರಾತ್ರಿ ಭಜನೆ ಮಾಡಬಹುದಲ್ಲ ಎಂದು ತಿಳಿಸಿದರಂತೆ. ಒಳ್ಳೆಯ ಮಾತು ಎಲ್ಲಿಂದ ಬಂದರೂ ಅದಕ್ಕೆ “ಸೈ’. ಬೋಳ ಪೂಜಾರಿಯವರ ಮನೆಯಲ್ಲಿ ಜನ್ಮಾಷ್ಟಮಿ ದಿನ ಭಜನೆ ಆರಂಭಗೊಂಡಿತು. ಈಗಲೂ ಅಷ್ಟಮಿ ದಿನ ರಾತ್ರಿ 8ರಿಂದ 2 ಗಂಟೆವರೆಗೆ ಸಂಭ್ರಮದಿಂದ ನಡೆಯುತ್ತಿದೆ. ಕೊಲ್ಲಿ ರಾಷ್ಟ್ರದಲ್ಲಿರುವ ಮೊಮ್ಮಕ್ಕಳೂ ಅಷ್ಟಮಿಗೆ ಬರುತ್ತಾರೆ. ಡಿಸೆಂಬರ್‌ನಲ್ಲಿ ಬೋಳ ಪೂಜಾರಿಯವರ ಸ್ಮರಣಾರ್ಥ ಬನ್ನಂಜೆ ನಾರಾಯಣಗುರು ಮಂದಿರದಲ್ಲಿ ನಡೆಸುವ ಏಕಾಹ ಭಜನೆಗೂ ಬಂಧುಗಳೆಲ್ಲ ಒಟ್ಟಾಗುತ್ತಾರೆ. ಭಜನೆ ಇವರನ್ನು ಒಗ್ಗಟ್ಟಿನಲ್ಲಿ ಹಿಡಿದಿಟ್ಟಿದೆ. 1942ರಿಂದಲೇ ಅಲ್ಲಿ ವಾರದ ಭಜನೆಯಲ್ಲಿ ನಿರಂತರ ಪಾಲ್ಗೊಳ್ಳುತ್ತಿದ್ದರು. ವಿಷ್ಣು ಅರ್ಥಾತ್‌ ಶ್ರೀಕೃಷ್ಣ ಅವರ ಆರಾಧ್ಯದೇವ. ಆತ ಕೈಬಿಡುವುದಿಲ್ಲ ಎಂಬ ಅಚಲ ವಿಶ್ವಾಸ. 1961ರಿಂದ ನಿತ್ಯಾನಂದ ಮಂದಿರದಲ್ಲಿ ವಾರ್ಷಿಕ ಏಕಾಹ ಭಜನೆಯನ್ನು ಆರಂಭಿಸಿದವರು ಇವರೆ. ಕಲ್ಯಾಣಪುರ ವೆಂಕಟರಮಣ ದೇವಸ್ಥಾನದಲ್ಲಿ ಸುಮಾರು 45 ವರ್ಷಗಳಿಂದ ವಾರ್ಷಿಕ ಭಜನ ಸಪ್ತಾಹದಲ್ಲಿ ಷಷ್ಠಿà ತಿಥಿಯಂದು ಎರಡು ಗಂಟೆಯ ಭಜನ ಪಾಳಿ ಇವರಿಗೆ ಇದೆ. 2005ರಿಂದ ಉಡುಪಿ ವೆಂಕಟರಮಣ ದೇವಸ್ಥಾನದ ಭಜನ ಸಪ್ತಾಹದಲ್ಲಿಯೂ ಇವರ ಭಜನ ಪಾಳಿ ನಡೆಯುತ್ತಿದೆ. 60 ಭಜನ ಪದ್ಯಗಳನ್ನು ಪುಸ್ತಕ ನೋಡದೆ ಹಾಡುತ್ತಿದ್ದರು. ಈಗ ಮನೆಯ ಸದಸ್ಯರು 250ಕ್ಕೂ ಹೆಚ್ಚು ಹಾಡುಗಳನ್ನು ಪುಸ್ತಕ ನೋಡದೆ ಹಾಡುತ್ತ ತಲ್ಲೀನರಾಗುತ್ತಾರೆ. ಜತೆಗೆ ಹಾರ್ಮೋನಿಯಂ, ತಬ್ಲಾಗಳನ್ನು ನುಡಿಸುತ್ತಾರೆ.

ಬದುಕಲು ಕಲಿಸಬೇಕಲ್ಲವೆ?: ಇಂತಹ ಸಂಸ್ಕಾರ ಇದ್ದರೆ ಏನಾಗುತ್ತದೆ? 2008ರ ಡಿಸೆಂಬರ್‌ 17ರ ಅಪರಾಹ್ನ ಬೋಳ ಪೂಜಾರಿಯವರ ಆರೋಗ್ಯ ಹದಗೆಡುತ್ತಿದ್ದಾಗ ನಿತ್ಯ ರಾತ್ರಿ 7 ಗಂಟೆಗೆ ನಡೆಯುವ ಭಜನೆಯನ್ನು 6 ಗಂಟೆಗೆ ಮಕ್ಕಳು ನಡೆಸಿದರು. ಕೊನೆಯಲ್ಲಿ ಮೂರು ಬಾರಿ ಶಂಖ ಊದುವ ಕ್ರಮವಿದೆ. ಕೊನೆಯ ಬಾರಿ ಊದಿದಾಗ ಬೋಳ ಪೂಜಾರಿಯವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದಕ್ಕೆ ಒಂದು ವಾರ ಮುನ್ನ ಹೆಂಡತಿ, ಮಕ್ಕಳು, ಸೊಸೆಯಂದಿರನ್ನು ಕರೆದು “ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ನಿಮಗೆಲ್ಲ ದೇವರು ಒಳ್ಳೆಯದನ್ನು ಮಾಡಲಿ’ ಎಂದು ಥ್ಯಾಂಕ್ಸ್‌ ಕೊಟ್ಟರು. ಇಂತಹ ಮನಃಸ್ಥಿತಿ ಎಷ್ಟು ಜನರಿಗೆ ಬಂದೀತು ಎಂದು ಕೇಳುವುದಕ್ಕಿಂತ ಹೀಗೆ ಬದುಕಿನ ಕೊನೆ ಆಗಬೇಕೆಂದಿದ್ದರೆ ಹೇಗೆ ಬದುಕಬೇಕು ಎಂಬ ಸಂದೇಶವಿಲ್ಲಿದೆ ಎನ್ನುವುದು ಉತ್ತಮ. “ಬದುಕಲು ಕಲಿಯಿರಿ’ ಎಂಬ ಜನಜಾಗೃತಿ ರೂಪಿಸಿದರೆ ದೇಶದ, ಸಮಾಜದ ಅನೇಕ ಸಮಸ್ಯೆಗಳು ಬಗೆ ಹರಿಯದೆ ಇರದು.

Advertisement

ಸಕುಟುಂಬಾನಾಂ, ವಿಕುಟುಂಬಾನಾಂ…: ಎಲ್ಲ ಸಹೋದರರಿಗೂ ಸಮಾನ ಪ್ರಾತಿನಿಧ್ಯವಿರುವುದರಿಂದಲೇ ಈ “ದೊಡ್ಡ ಹಡಗು’ ವ್ಯವಸ್ಥಿತವಾಗಿ, ಶಾಂತವಾಗಿ ಮುನ್ನಡೆಯುತ್ತಿದೆ, “ಸಕುಟುಂಬಾನಾಂ’ ನಿಜಾರ್ಥದಲ್ಲಿ. ಈಗ ಲೋಕದಲ್ಲಿ ಕಂಡುಬರುವ ಮನೆ, ಸಂಸ್ಥೆಗಳ ವಿಪ್ಲವ (“ವಿಕುಟುಂಬಾನಾಂ’) ವಿದ್ಯಮಾನಗಳಿಗೆ ವಿರುದ್ಧ ಚಿತ್ರಣ ಇಲ್ಲಿ ಕಾಣಬೇಕಾದರೆ ಬೋಳ ಪೂಜಾರಿಯವರು ಹಾಕಿಕೊಟ್ಟ ಸಂಸ್ಕೃತಿಯ ಬೇರಿನ ಆಳವನ್ನು ಊಹಿಸುವುದು ಕಷ್ಟ, ಮನಸ್ಸಿದ್ದರೆ ಅಷ್ಟೇ ಸರಳ… ಬದುಕು ಸರಳವಾದಾಗ ಮಾತ್ರ.

ಪ್ರಜೋತ್ಪತ್ತಿ-ಭಗವತ್ಸರಣೆ: ರೀತಿ, ನೀತಿಗಳನ್ನು ಯಾರು ಪಾಲಿಸಬೇಕು? ಮನುಷ್ಯರೇ ಪಾಲಿಸಬೇಕಲ್ಲ! ಪಾಲಿಸಬೇಕಾದರೆ ಉತ್ತಮ ಮನಃಸ್ಥಿತಿ ಬೇಕಲ್ಲ! ಭಗವತ್ಸರಣೆ ಪೂರಕವಾಗಿ ಪ್ರಜೋತ್ಪತ್ತಿಗೆ ಬೋಳ ಪೂಜಾರಿ- ಯಶೋದಾ ದಂಪತಿ ತೊಡಗಿದ್ದರಿಂದಲೇ ಮಕ್ಕಳ ಮನಸ್ಸೂ ಆದರ್ಶ ಕಲ್ಪನೆಯತ್ತ ಚಲಿಸುತ್ತಿದೆಯೆ? ಇದೊಂದು ಸಾಧ್ಯವಾಗಬಹುದೋ? ಸಾಧ್ಯವಾಗಲಾರದೋ ಎಂಬಂತಹ ಸಂಶೋಧನ ಜಿಜ್ಞಾಸೆ…. ಬಿಕ್ಕಟ್ಟಿರುವಲ್ಲಿ ನಿಂತು ಹೋದ ಮನೆ ಭಜನೆ ಆರಂಭಿಸಬೇಕು ಎಂಬ ಸಂಶೋಧನಸೂತ್ರ ಸಿಗುತ್ತದೆ. ಇಂತಹ ಪ್ರಯೋಗ ಜಗತ್ಕಲ್ಯಾಣಕ್ಕೆ ಅತ್ಯಗತ್ಯ… ಮಾತನಾಡಿದರೆ ಆಗುವುದಿಲ್ಲ, ಹಾಗೆ ಬದುಕಬೇಕು. ತ್ಯಾಗವನ್ನು ನಿಸರ್ಗ ನಮ್ಮಿಂದ ಯಾಚಿಸುತ್ತದೆ… ಕೊಡಬೇಕಷ್ಟೆ…. ಕೊಟ್ಟರೆ ನಷ್ಟವಿಲ್ಲ ಎಂಬ ಖಾತ್ರಿಗೆ ಇಂತಹವರ ಬದುಕು ಸಾಕ್ಷಿ…

-ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next