Advertisement

ಎಲ್ಲಿದೆ ಸಮಾನತೆ

12:30 AM Feb 22, 2019 | |

ಸಮಾನತೆ ಎಂಬುದು ಗಂಡು-ಹೆಣ್ಣಿನ ನಡುವೆ ಇದ್ದರೆ ಸಾಲದು. ತೃತೀಯ ಲಿಂಗಿಗಳ ಮೇಲೂ ಅನ್ವಯಿಸಬೇಕು. ಆಗ ಮಾತ್ರ ಸಮಾನತೆಯ ತತ್ವ ಬೆಲೆ ಪಡೆದುಕೊಳ್ಳಲು ಸಾಧ್ಯ.ಮಂಗಳಮುಖೀಯರೂ ಕೂಡ ನಮ್ಮಂತೆ ಜನಸಾಮಾನ್ಯರು.ಅವರನ್ನು ಗೌರವಿಸಬೇಕು.

Advertisement

ನಾನು ಮೊನ್ನೆ ಕಾಲೇಜಿನಿಂದ ಹಿಂದಿರುಗುವಾಗ ಸರ್ಕಾರಿ ಬಸ್ಸಿನಲ್ಲಿ ಒಂದು ಘಟನೆಯನ್ನು ನೋಡಿದೆ. ನಾನು ಬಸ್ಸಿನಲ್ಲಿ ಎರಡು ಸೀಟು ಇರುವ ಜಾಗದಲ್ಲಿ ಕುಳಿತುಕೊಂಡಿದ್ದೆ. ಕೆಲವು ನಿಮಿಷಗಳ ನಂತರ ಎರಡು ಜನ ಮಂಗಳಮುಖೀಯರು ಬಸ್‌ ಹತ್ತಿ ಮೂರು ಸೀಟು ಇರುವ ಜಾಗದಲ್ಲಿ ಕುಳಿತುಕೊಂಡರು. ಆ ಹೊತ್ತಿಗೆ ಬಸ್‌ ಜನರಿಂದ ಕಿಕ್ಕಿರಿದು ಇರಲಿಲ್ಲ. ಹಾಗಾಗಿ, ಅವರ ಪಕ್ಕ ಇದ್ದ ಒಂದು ಖಾಲಿ ಸೀಟು ಹಾಗೇ ಇತ್ತು. ಬಸ್‌ ಮುಂದೆ ಸಾಗಿತು.

ಸಂಜೆಯ ಸಮಯವಾಗಿದ್ದರಿಂದ ರಸ್ತೆಯ ಬದಿ ವಿದ್ಯಾರ್ಥಿಗಳ ದಂಡು ಬಸ್ಸಿಗಾಗಿ ಕಾಯುತ್ತ ನಿಂತಿತ್ತು. ನಾನು ಪ್ರಯಾಣಿಸುತ್ತಿದ್ದ ಬಸ್‌ ನಿಂತಾಗ ಬಸ್‌ ಹತ್ತಲು ದೌಡಾಯಿಸಿದರು. ಬಸ್‌ ವಿದ್ಯಾರ್ಥಿಗಳಿಂದಲೇ ತುಂಬಿ ಹೋಯಿತು. ಸ್ವಲ್ಪ ಸಮಯದ ನಂತರ ನನ್ನ ದೃಷ್ಟಿ ಮಂಗಳಮುಖೀಯರತ್ತ ಹರಿಯಿತು. ಅವರ ಪಕ್ಕದಲ್ಲಿದ್ದ ಸೀಟು ಖಾಲಿಯಾಗಿಯೇ ಗೋಚರಿಸಿತು. ಇನ್ನೂ ಕೆಲವರು ಅವರನ್ನು ವಿಚಿತ್ರವಾಗಿ ನೋಡಿದಾಗ ನನ್ನ ಮನದಲ್ಲೇನೋ ಸಂಕಟವಾದಂತಾಯಿತು. ಆ ಸಂದರ್ಭದಲ್ಲಿ ಅದು ಬರೀ ಖಾಲಿ ಸೀಟಾಗಿ ನನಗೆ ಕಾಣಲಿಲ್ಲ. ಬದಲಾಗಿ ಸಮಾನತೆಯ ಬೆಳಕು ಅಸಮಾನತೆ ಎಂಬ ಅಂಧಕಾರದಲ್ಲಿ ಸೆರೆಯಾಗುವಂತೆ ಕಂಡಿತು.

ಅದೆಷ್ಟೋ ಜನ ಬಸ್ಸಿನಲ್ಲಿ ನಿಂತೇ ಇದ್ದರು. ಆದರೂ ಅವರಿಗೆ ಆ ಸೀಟು ಅಂಧಕಾರದಿಂದಾಗಿ ಕಾಣಲೇ ಇಲ್ಲ. ಮಂಗಳಮುಖೀಯರಿಗೂ ನಮ್ಮಂತೆ ಭಾವನೆಗಳಿರುತ್ತವೆ. ಮಾತ್ರವಲ್ಲದೆ, ನಿಷ‌Rಲ್ಮಶವಾದ ಮನಸ್ಸೂ ಇರುತ್ತದೆ. ಸ್ವಲ್ಪ ಸಮಯದ ನಂತರ ಒಂದು ಹುಡುಗಿ ಅವರ ಪಕ್ಕ ಕುಳಿತಳು. ಆ ಹುಡುಗಿಯ ಬಗ್ಗೆ ನನಗೆ ನಿಜಕ್ಕೂ ಮೆಚ್ಚುಗೆ ಉಂಟಾಯಿತು. ಆ ಹುಡುಗಿಯನ್ನು ಮಾತನಾಡಿಸಬೇಕೆಂಬ ಹಂಬಲ ಈಡೇರಲಿಲ್ಲ. ಆಕೆ ನನಗೆ ಮಾನವೀಯತೆಯ ಪ್ರತಿಬಿಂಬವಾಗಿ ಕಂಡಳು. 

ಮಂಗಳಮುಖೀಯರೂ ಕೂಡ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅನೇಕ ಸಾಧಕರು ನಮಗೆ ಮಾರ್ಗದರ್ಶಕರಾಗುತ್ತಾರೆ. ಮಂಗಳಮುಖೀಯರು ಇಂದುಮುಖೀಯರು. ಹಾಗಾಗಿ ಅವರ ಸಾಧನೆಯನ್ನು ಬೆಂಬಲಿಸಿ ಗೌರವಿಸಿದಾಗ ನಮ್ಮ ಸಮಾಜ ಖಂಡಿತವಾಗಿಯೂ ಸಾರ್ಥಕವಾಗುತ್ತದೆ.

Advertisement

ಸೌಜನ್ಯಾ ಬಿ. ಎಂ. ಕೆಯ್ಯೂರು
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಕಾಲೇಜು, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next