ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿ ಆ್ಯಂಟಿಗುವಾದಲ್ಲಿ ನೆಲೆಸಿದ್ದ ವಜ್ರೋದ್ಯಮಿ ಮೆಹೂಲ್ ಚೋಕ್ಸಿಯನ್ನು ದ್ವೀಪರಾಷ್ಟ್ರದಲ್ಲಿ ಬಂಧಿಸಿದ ತರುವಾಯ ಭಾರತದಲ್ಲಿ ಅತೀ ಹೆಚ್ಚು ಜನರು ಡೊಮಿನಿಕಾ ದೇಶದ ಬಗ್ಗೆ ಸರ್ಜ್ (ಶೋಧಿಸು) ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕೋವಿಡ್ ನಿಂದ ದೂರವಿರಲು ಹಾವು ತಿಂದ ತಮಿಳುನಾಡಿನ ವ್ಯಕ್ತಿಯ ಬಂಧನ
62ವರ್ಷದ ಮೆಹೂಲ್ ಚೋಕ್ಸಿ ಭಾರತದಿಂದ ಪರಾರಿಯಾದ ನಂತರ 2018ರಿಂದ ಆ್ಯಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸ್ತವ್ಯ ಹೂಡಿದ್ದ. ಏತನ್ಮಧ್ಯೆ ಭಾನುವಾರ ಚೋಕ್ಸಿ ಆ್ಯಂಟಿಗುವಾದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ. ಆದರೆ ದಿಢೀರ್ ಬೆಳವಣಿಗೆಯಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಚೋಕ್ಸಿಯನ್ನು ಡೋಮಿನಿಕಾ ಗಣರಾಜ್ಯದಲ್ಲಿ ಅಧಿಕಾರಿಗಳು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದರು.
ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಎಲ್ಲರ ಮನಸ್ಸಿನಲ್ಲಿ ಮೂಡಿದ್ದು, ಡೊಮಿನಿಕಾ ದೇಶ ಎಲ್ಲಿದೆ? ಅಲ್ಲಿನ ನೀತಿ, ನಿಯಮಗಳೇನು ಎಂಬ ಬಗ್ಗೆ ಜನರು ಗೂಗಲ್ ನಲ್ಲಿ ಹೆಚ್ಚು ಸರ್ಜ್ ಮಾಡಿ ಮಾಹಿತಿ ಕಲೆಹಾಕಿದ್ದರು ಎಂದು ವರದಿ ತಿಳಿಸಿದೆ.
“ಡೊಮಿನಿಕಾ ಪೂರ್ವ ಕೆರಿಬಿಯನ್ ಸಮುದ್ರ ಪ್ರದೇಶದಲ್ಲಿದೆ. ಈ ದ್ವೀಪ ರಾಷ್ಟ್ರ ಲೆಸ್ಸರ್ ಆ್ಯಂಟಿಲ್ಲೀಸ್ ದ್ವೀಪಸಮೂಹದಲ್ಲಿರುವ ವಿಂಡ್ವರ್ಡ್ ದ್ವೀಪ ಸಮೂಹಗಳ ಒಂದು ಭಾಗವಾಗಿದೆ. ಡೊಮಿನಿಕಾದ ರೋಸೌ ಈ ದೇಶದ ರಾಜಧಾನಿ ಮತ್ತು ಮುಖ್ಯ ಬಂದರು ಪ್ರದೇಶವಾಗಿದೆ. ಇದು ದ್ವೀಪದ ಪಶ್ಚಿಮಭಾಗದಲ್ಲಿದೆ”.
ಡೊಮಿನಿಕಾ ದ್ವೀಪ ರಾಷ್ಟ್ರ 750 ಚದರ ಕಿಲೋಮೀಟರ್ ನಷ್ಟು ವ್ಯಾಪ್ತಿ ಹೊಂದಿದೆ. ಅಂದಾಜು 75 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ರೂಸ್ವೆ.ಲ್ಟ್ ಸ್ಕೆರಿಟ್ ಡೊಮಿನಿಕಾದ ಪ್ರಧಾನಿಯಾಗಿದ್ದಾರೆ. ಇವರು ಸತತ ನಾಲ್ಕು ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಏರಿದ್ದರು ಎಂದು ವರದಿ ತಿಳಿಸಿದೆ.
ಭಾರತದಿಂದ ಚೋಕ್ಸಿ ಪರಾರಿಯಾದ ನಂತರ ಕೆರಿಬಿಯನ್ ಸಮುದ್ರ ಪ್ರದೇಶವನ್ನು ಆವರಿಸಿಕೊಂಡಿರುವ ಆ್ಯಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸ್ತವ್ಯ ಹೂಡಿದ್ದ. ಪ್ರಮುಖ ದ್ವೀಪಪ್ರದೇಶವಾದ ಆ್ಯಂಟಿಗುವಾ ಮತ್ತು ಬಾರ್ಬುಡಾ ಇತರ ಪುಟ್ಟ ದ್ವೀಪಗಳನ್ನೂ ಒಳಗೊಂಡಿದ್ದು, ಸೇಂಟ್ ಜಾನ್ಸ್ ಇದರ ರಾಜಧಾನಿಯಾಗಿದೆ. ಆ್ಯಂಟಿಗುವಾದಿಂದ ಡೊಮಿನಿಕಾ ಸುಮಾರು 188.55 ಕಿಲೋ ಮೀಟರ್ ದೂರದಲ್ಲಿದೆ.
ಮೆಹೂಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಗಡಿಪಾರು ಮಾಡಲು ಸಾಧ್ಯವೇ?
ಡೊಮಿನಿಕಾದ ಕಾಮನ್ ವೆಲ್ತ್ ಹೈಕೋರ್ಟ್ ವಜ್ರೋದ್ಯಮಿ ಮೆಹೂಲ್ ಜೋಕ್ಸಿಯನ್ನು ಭಾರತಕ್ಕೆ ಗಡಿಪಾರುವುದಕ್ಕೆ ತಡೆ ನೀಡಿದೆ. ಡೊಮಿನಿಕಾದ ಅಧಿಕಾರಿಗಳ ಪ್ರಕಾರ, ಚೋಕ್ಸಿಯನ್ನು ಆ್ಯಂಟಿಗುವಾಕ್ಕೆ ವಾಪಸ್ ಕಳುಹಿಸಲಾಗುವುದು. ಚೋಕ್ಸಿ ಆ್ಯಂಟಿಗುವಾದ ಪ್ರಜೆಯಾಗಿದ್ದಾರೆ. ಕಾನೂನು ಬಾಹಿರವಾಗಿ ಡೊಮಿನಿಕಾ ಪ್ರವೇಶಿಸಿದ್ದ ಚೋಕ್ಸಿ ವಿರುದ್ಧ ಕಾನೂನು ಪ್ರಕಾರ ನಾವು ಆ್ಯಂಟಿಗುವಾ/ಬಾರ್ಬುಡಾಕ್ಕೆ ವಾಪಸ್ ಕಳುಹಿಸಬೇಕಾಗಿದೆ ಎಂದು ಡಬ್ಲ್ಯುಐಸಿ ನ್ಯೂಸ್ ಗೆ
ತಿಳಿಸಿದ್ದಾರೆ.
ಚೋಕ್ಸಿ ಪರ ವಕೀಲರು ಕೂಡಾ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಮೆಹೂಲ್ ಚೋಕ್ಸಿ ಈಗ ಭಾರತದ ಪ್ರಜೆಯಲ್ಲ, ಆತ ಆ್ಯಂಟಿಗುವಾದ ನಾಗರಿಕ. ಅಲ್ಲದೇ ವಲಸೆ ಮತ್ತು ಪಾಸ್ ಪೋರ್ಟ್ ಕಾಯ್ದೆ ಸೆಕ್ಷನ್ 17 ಮತ್ತು 23ರ ಪ್ರಕಾರ ಚೋಕ್ಸಿಯನ್ನು ಆ್ಯಂಟಿಗುವಾಕ್ಕೆ ಮಾತ್ರ ಗಡಿಪಾರು ಮಾಡಬಹುದೇ ವಿನಃ, ಭಾರತಕ್ಕೆ ಸಾಧ್ಯವಿಲ್ಲ ಎಂದು ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.