ಫೇಸ್‌ಬುಕ್ ಪೇರೆಂಟ್ ಕಂಪೆನಿ ಮೆಟಾ, ಟ್ವಿಟರ್, ಎಚ್‌ಪಿ, ಗೂಗಲ್, ಅಮೆಜಾನ್ ಸಹಿತ ಜಗತ್ತಿನ ಹಲವಾರು ಕಂಪೆನಿಗಳು ಜಾಗತಿಕ ಆರ್ಥಿಕ ಹಿಂಜರಿಕೆಯ ಹೆದರಿಕೆಯಿಂದ ಕೆಲಸಗಾರರನ್ನು ತೆಗೆಯಲು ಶುರು ಮಾಡಿವೆ. ಆದರೆ ಭಾರತದಲ್ಲಿ ಹಿಂಜರಿಕೆಯ ಭೀತಿ ಇಲ್ಲದಿದ್ದರೂ ಭಾಗಶಃ ಪೆಟ್ಟು ಬೀಳುವ ಸಾಧ್ಯತೆ ಇದೆ.
ಹಿಂಜರಿತವನ್ನು ಹಿಮ್ಮೆಟ್ಟಿಸೀತೇ ಭಾರತ?
ಈಗಾಗಲೇ ಜಗತ್ತಿನ ಹಲವಾರು ವಿತ್ತ ಸಮೀಕ್ಷಾ ಸಂಸ್ಥೆಗಳು ಹೇಳಿರುವ ಪ್ರಕಾರ ಭಾರತಕ್ಕೆ ಅಷ್ಟಾಗಿ ಆರ್ಥಿಕ ಹಿಂಜರಿತದ ಪ್ರಭಾವ ಆಗುವುದಿಲ್ಲ. ಆದರೂ ಭಾಗಶಃ ಮಾತ್ರ. 2008ರಲ್ಲಿಯೂ ಜಗತ್ತನ್ನು ಕಾಡಿದ್ದ ಹಿಂಜರಿತದಿಂದ ಭಾರತಕ್ಕೆ ಅಂಥ ಪರಿಣಾಮವೇನೂ ಉಂಟಾಗಿರಲಿಲ್ಲ.
ಆರ್‌ಬಿಐನ ಕ್ರಮಗಳೇನು?
ಈಗಾಗಲೇ ಅಮೆರಿಕದಲ್ಲಿ ಹಣದುಬ್ಬರದ ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಬಡ್ಡಿದರಗಳನ್ನು ಏರಿಕೆ ಮಾಡಲಾಗುತ್ತಿದೆ. ಅದೇ ರೀತಿ ಭಾರತದಲ್ಲಿಯೂ ಬಡ್ಡಿದರ ಏರಿಕೆ ಮಾಡಲಾಗಿದೆ. ಈ ಮೂಲಕ ಬೇಡಿಕೆಯನ್ನು ಕುಗ್ಗಿಸಿ, ಹಣದ ಹರಿವನ್ನು ತಪ್ಪಿಸುವುದು ಇದರ ಉದ್ದೇಶ. ಹಾಗೆಯೇ ವ್ಯಾಪಾರ-ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲು ಆರ್‌ಬಿಐ ಮುಂದಾಗಿದೆ.
ತಜ್ಞರು ಏನು ಹೇಳುತ್ತಾರೆ?
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದಂತೆ, ಭಾರತಕ್ಕೆ ಹಣದುಬ್ಬರ ತಡೆದುಕೊಳ್ಳುವ ಶಕ್ತಿ ಇದೆ. ಈಗಾಗಲೇ ನಿಯಂತ್ರಣದತ್ತ ನಾವು ಹೆಜ್ಜೆ ಇಟ್ಟಿದ್ದೇವೆ. ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಾರತವೇ ಈ ವಿಚಾರದಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಹೀಗಾಗಿಯೇ ಭಾರತಕ್ಕೆ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಹಾಗೆಯೇ ಮುಂದಿನ ಹಣಕಾಸು ವರ್ಷದಲ್ಲಿಯೂ ಭಾರತದ ಆರ್ಥಿಕ ಬೆಳವಣಿಗೆ ಚೆನ್ನಾಗಿರಲಿದೆ ಎಂದಿದ್ದಾರೆ.