Advertisement
ಬಸ್ಸು, ಕಾರು, ರೈಲು, ಹೆಲಿಕಾಪ್ಟರ್ ಇವೆಲ್ಲಾ ಆಟಿಕೆಗಳೂ ಟೆಡ್ಡಿ ಬೇರ್‌ಗೆ ಸಮನಾಗದು. ಮಿಕ್ಕ ಆಟಿಕೆಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಆಟವಾಡಲು ಬೇಕಾಗುತ್ತದೆ. ಆದರೆ, ಟೆಡ್ಡಿ ಬೇರ್ ಮಲಗುವ ಕೋಣೆಯಲ್ಲೂ ಜಾಗ ಪಡೆದಿರುವುದು ವಿಶೇಷ.
ಬೇರ್ ಎಂದರೆ ಕರಡಿ. ಟೆಡ್ಡಿ ಎಂದರೆ ಯಾರು? ಅದರ ಹಿಂದೊಂದು ಕತೆ ಇದೆ. “ಟೆಡ್ಡಿ’ ಎನ್ನುವುದು ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡೋರ್ ರೂಸ್‌ವೆಲ್ಟ್ಅವರ ಅಡ್ಡಹೆಸರು. 1902ರಲ್ಲಿ ಒಮ್ಮೆ ಅವರು ಬೇಟೆಗೆ ಎಂದು ಕಾಡಿಗೆ ತೆರಳಿದ್ದರು. ಎಷ್ಟು ಸಮಯವಾದರೂ ಅವರಿಗೆ ಒಂದೇ ಒಂದು ಪ್ರಾಣಿ ಕಣ್ಣಿಗೆ ಬೀಳಲಿಲ್ಲ. ಅವರನ್ನು ಬೇಟೆಗೆ ಕರೆತಂದ ಸ್ನೇಹಿತರು ನಿಷ್ಣಾತ ಬೇಟೆಗಾರರಾಗಿದ್ದರು. ರೂಸ್‌ವೆಲ್ಟ್ರಿಗೆ ಶೂಟ್ ಮಾಡಲು ಒಂದೂ ಪ್ರಾಣಿ ಸಿಗಲಿಲ್ಲ ಎಂದು ಅವರಿಗೂ ಬೇಜಾರಾಯಿತು. ಅದಕ್ಕಾಗಿ ಅವರು ಒಂದು ಕರಡಿಯನ್ನು ಹಿಡಿದು ಮರವೊಂದಕ್ಕೆ ಕಟ್ಟಿ ಹಾಕಿದರು. ನಂತರ, ರೂಸ್‌ವೆಲ್ಟ್ರಿಗೆ ಶೂಟ್ ಮಾಡಿ ಎಂದರು. ಆದೆರ ಅಧ್ಯಕ್ಷ ರೂಸ್‌ವೆಲ್ಟರು ಆ ಮರಿ ಕರಡಿಗೆ ಗುಂಡಿಕ್ಕಲು ನಿರಾಕರಿಸಿದರು. ಇದು ಜಗತ್ತಿನಾದ್ಯಂತ ಸುದ್ದಿ ಮಾಡಿತು. ಘಟನೆಯ ನಂತರ…
ಇದಾದ ಕೆಲ ದಿನಗಳ ತರುವಾಯ ಅಮೆರಿಕದ ಆಟಿಕೆ ಮಾರಾಟಗಾರ ಮೋರಿಸ್ ಎಂಬಾತ ತನ್ನ ಅಂಗಡಿಯಲ್ಲಿ ಕರಡಿ ಮರಿಯ ಗೊಂಬೆಯನ್ನು ತೂಗು ಹಾಕಿ “ಟೆಡ್ಡೀಸ್ ಬೇರ್’ ಅಂದರೆ “ಟೆಡ್ಡಿಯ ಕರಡಿ’ ಎಂದು ಫಲಕವೊಂದನ್ನು ತೂಗು ಹಾಕಿದ. ಪಕ್ಕದಲ್ಲಿ ಅದರ ಕುರಿತಾದ ಪತ್ರಿಕೆಯ ಅಂಕಣವನ್ನೂ ಲಗತ್ತಿಸಿದ. ಈ ತಂತ್ರ ಅನೇಕರನ್ನು ಆಕರ್ಷಿಸಿತು. ನೂರಾರು ಟೆಡ್ಡಿ ಬೇರ್‌ಗಳು ಮಾರಾಟಗೊಂಡವು. ಅದೇ ಸಮಯದಲ್ಲಿ ಜರ್ಮನ್ ಆಟಿಕೆ ತಯಾರಕನೊಬ್ಬ ಕರಡಿಯ ಗೊಂಬೆಗಳನ್ನು ವಸ್ತುಪ್ರದರ್ಶನವೊಂದರಲ್ಲಿ ಪ್ರದರ್ಶನಕ್ಕಿಟ್ಟಿದ್ದ. ಅದನ್ನು ಅಮೆರಿಕದ ವ್ಯಾಪಾರಿ ಇಷ್ಟಪಟ್ಟು ಅದೇ ಗೊಂಬೆಯನ್ನು ಲಕ್ಷಾಂತರ ಸಂಖ್ಯೆಯಲ್ಲಿ ಖರೀದಿಸಿದ. ಅವುಗಳನ್ನು ಅಮೆರಿಕದಲ್ಲಿ ಟೆಡ್ಡಿ ಬೇರ್ ಎಂಬ ಹೆಸರಿನಲ್ಲಿ ಮಾರಾಟಕ್ಕಿಟ್ಟ. ಈ ರೀತಿಯಾಗಿ ಸುದ್ದಿಯೊಂದು ಗೊಂಬೆಗಳ ದೊಡ್ಡ ಮಾರುಕಟ್ಟೆಯನ್ನೇ ಹುಟ್ಟುಹಾಕಿತು. ಹೀಗಾಗಿ ಟೆಡ್ಡಿ ಬೇರ್‌ಅನ್ನು ಸೃಷ್ಟಿಸಿದ ಶ್ರೇಯ ಯಾರೋ ಒಬ್ಬರಿಗೆ ಸಲ್ಲುವುದಿಲ್ಲ. ಹಲವು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ.
Related Articles
ಇಂದು ಚೀನಾ ಮತ್ತು ಇಂಡೋನೇಷ್ಯಾ ಜಗತ್ತಿನ ಅತಿ ದೊಡ್ಡ ಟೆಡ್ಡಿ ಬೇರ್ ತಯಾರಕ ರಾಷ್ಟ್ರಗಳಾಗಿವೆ. ಪ್ರತಿ ವರ್ಷ ಜಗತ್ತಿನಾದ್ಯಂತ ಮಾರಾಟವಾಗುವ ಟೆಡ್ಡಿ ಬೇರ್‌ಗಳ ಸಂಖ್ಯೆ ನೂರು ಕೋಟಿಗೂ ಅಧಿಕ! ಇಂದು ಟೆಡ್ಡಿ ಬೇರ್‌ಗಳು ಗೊಂಬೆಯಾಗಿ ಮಾತ್ರವೇ ಉಳಿದಿಲ್ಲ. ಅದೊಂದು ಸಾಂಸ್ಕೃತಿಕ ಪ್ರಭಾವಳಿಗೂ ಕಾರಣವಾಗಿದೆ. ಮಕ್ಕಳ ಪದ್ಯಗಳು, ಕಥೆಗಳು, ಸಿನಿಮಾ, ಕಾಟೂìನು ಹೀಗೆ ನಾನಾ ಕಲಾಪ್ರಕಾರಗಳಲ್ಲಿ ಟೆಡ್ಡಿ ಬೇರ್ ಸ್ಥಾನ ಪಡೆದು ನಮ್ಮ ನಡುವೆ ಹಾಸುಹೊಕ್ಕಾಗಿದೆ.
Advertisement
ಟೆಡ್ಡಿ ಬೇರ್ ಮ್ಯೂಸಿಯಂ1984ರಲ್ಲಿ ಜಗತ್ತಿನ ಮೊದಲ ಟೆಡ್ಡಿ ಬೇರ್ ವಸ್ತು ಸಂಗ್ರಹಾಲಯ ಇಂಗ್ಲೆಂಡ್‌ನ ಪೀಟರ್ಫೀಲ್ಡ್‌ನಲ್ಲಿ ನಿರ್ಮಾಣವಾಯಿತು. 1990ರಲ್ಲಿ ಅಮೆರಿಕದ ಫ್ಲಾರಿಡಾದಲ್ಲೂ ಟೆಡ್ಡಿ ಬೇರ್ ಮ್ಯೂಸಿಯಮ ಕಟ್ಟಲಾಯಿತು. ಇಂದು ಜಗತ್ತಿನಾದ್ಯಂತ ಹಲವೆಡೆಗಳಲ್ಲಿ ಟೆಡ್ಡಿ ಬೇರ್‌ಗಳನ್ನು ಕಾಣಬಹುದಾಗಿದೆ. ಇಲ್ಲಿ ಮೊದಲ ಟೆಡ್ಡಿ ಬೇರ್ ಮಾದರಿಗಳಿಂದ ಹಿಡಿದು ನಾನಾ ರೀತಿಯಲ್ಲಿ ವಿಭಿನ್ನ ಎಂದು ಕರೆಸಿಕೊಳ್ಳುವ ಟೆಡ್ಡಿ ಬೇರ್‌ಗಳನ್ನು ಇಟ್ಟಿರುತ್ತಾರೆ. – ಹರ್ಷವರ್ಧನ್ ಸುಳ್ಯ