Advertisement

ಎಲ್ಲಿಗೆ ಹೋದರು ಇವರು!?

11:24 AM Apr 22, 2018 | |

ಮಂಗಳೂರು: ಬುದ್ಧಿವಂತರು, ಕಾನೂನನ್ನು ಗೌರವಿಸುವ ಸಜ್ಜನರ ಜಿಲ್ಲೆ ಎಂಬುದಾಗಿ ಗುರುತಿಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಕ್ಕೆ 100ಕ್ಕೂ ಅಧಿಕ ಮಂದಿ ನಾನಾ ಕಾರಣಗಳಿಗೆ ನಾಪತ್ತೆಯಾಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾಣೆಯಾಗಿರುವವರ ಸಂಖ್ಯೆ 2,110. ಈ ಪೈಕಿ 238 ಮಂದಿ ಇನ್ನೂ ಪತ್ತೆಯಾಗಿಲ್ಲ.

Advertisement

ಆರ್‌ಟಿಐನಡಿ ಜಿಲ್ಲಾ ಪೊಲೀಸರು ನೀಡಿರುವ ಅಂಕಿಅಂಶದ ಪ್ರಕಾರ, ಬಂಟ್ವಾಳ ತಾಲೂಕಿನಲ್ಲಿ 2013 ರಿಂದ 2017ರ ವರೆಗೆ ಒಟ್ಟು 226 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 91 ಮಂದಿ ಮಹಿಳೆಯರು. ಆದರೆ 88 ಮಂದಿ ಮಾತ್ರ ಪತ್ತೆಯಾಗಿದ್ದಾರೆ. 118 ಪುರುಷರು ಕಾಣೆಯಾಗಿದ್ದು, 93 ಮಂದಿ ಪತ್ತೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 216 ನಾಪತ್ತೆ ಪ್ರಕರಣ ದಾಖಲಾಗಿದ್ದು, 106 ಮಂದಿ ಪುರುಷರು ಮತ್ತು 75 ಮಂದಿ ಮಹಿಳೆಯರು. ಕಾಣೆಯಾದವರಲ್ಲಿ 96 ಮಂದಿ ಪುರುಷರು ಹಾಗೂ 71 ಮಂದಿ ಮಹಿಳೆಯರು ಪತ್ತೆಯಾಗಿದ್ದಾರೆ.

ಪುತ್ತೂರು ತಾಲೂಕಿನಲ್ಲಿ ಐದು ವರ್ಷಗಳಲ್ಲಿ ಒಟ್ಟು 223 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, 109 ಪುರುಷರು, 88 ಮಹಿಳೆಯರು. 95 ಪುರುಷರು, 81 ಮಹಿಳೆಯರನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಸುಳ್ಯ ತಾಲೂಕಿನಲ್ಲಿ 113 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, 46 ಪುರುಷರು, 46 ಮಹಿಳೆಯರು. 38 ಪುರುಷರು ಪತ್ತೆಯಾಗಿದ್ದು, ಎಲ್ಲ 46 ಮಂದಿ ಮಹಿಳೆಯರೂ ಪತ್ತೆಯಾಗಿದ್ದಾರೆ. 


ಕಾಣೆಯಾಗಲೇನು ಕಾರಣ?
ಸಾಮಾನ್ಯವಾಗಿ 18 ವರ್ಷದೊಳಗಿನವರು ಕಾಣೆಯಾದರೆ ನಾಪತ್ತೆ ಪ್ರಕರಣದ ಬದಲು ಅಪಹರಣ ಪ್ರಕರಣವನ್ನು ಪೊಲೀಸರು ದಾಖಲಿಸುತ್ತಾರೆ. ಈ ರೀತಿ ಮಕ್ಕಳು ಏಕಾಏಕಿ ಮನೆ ಬಿಟ್ಟು ಹೋಗುವುದಕ್ಕೆ ಹೆಚ್ಚಾಗಿ ಕ್ಷುಲ್ಲಕ ಕೌಟುಂಬಿಕ ಸಮಸ್ಯೆಗಳು ಕಾರಣ. ಮಲತಾಯಿ/ತಂದೆಯ ಕಿರುಕುಳ, ಪೋಷಕರ ಒತ್ತಡ, ಐಷಾರಾಮಿ ಜೀವನದ ಸೆಳೆತ, ಪ್ರೇಮ ಪ್ರಕರಣಗಳು ಕಾರಣವಾಗುತ್ತವೆ. ವಯಸ್ಕರಲ್ಲಿ ಗಂಡ/ಹೆಂಡತಿ ಕಲಹ, ಅನೈತಿಕ ಸಂಬಂಧ, ಕೌಟುಂಬಿಕ ವಿಚಾರ, ಸಾಲದ ಹೊರೆ, ಜೂಜು, ದುಷcಟಗಳಿಂದ ನಾಪತ್ತೆ ಸಾಧ್ಯತೆಗಳಿರುತ್ತವೆ. ಕೆಲವರು ಈ ಕಾರಣಕ್ಕೆ ಜಿಗುಪ್ಸೆಗೊಂಡು ನಿಗೂಢವಾಗಿ ಆತ್ಮಹತ್ಯೆಗೂ ಶರಣಾಗಬಹುದು ಎನ್ನುವುದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಬ್ಯೂರೋ ಸಿಬಂದಿಯೊಬ್ಬರ ಅಭಿಪ್ರಾಯ.

ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಕೂಡಲೇ ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಿಗೆ ನೋಟಿಸ್‌ ರವಾನಿಸಲಾಗುತ್ತದೆ. ರೈಲ್ವೇ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿ ಪೋಸ್ಟರ್‌ ಅಂಟಿಸಲಾಗುತ್ತದೆ. ನಾಪತ್ತೆಯಾದವರು ಪತ್ತೆಯಾದರೆ ಪೊಲೀಸ್‌ ಸಮಕ್ಷಮ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಒಂದು ನಾಪತ್ತೆ ಪ್ರಕರಣವನ್ನು ಭೇದಿಸಲು ಸ್ಥಳೀಯ ಪೊಲೀಸ್‌ ಠಾಣೆಗೆ 6 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ಪತ್ತೆಯಾಗದಿದ್ದರೆ ಸರ್ಕಲ್‌ ಇನ್ಸ್‌ಪೆಕ್ಟರ್‌ ತನಿಖೆ ನಡೆಸುತ್ತಾರೆ ಎನ್ನುತ್ತಾರೆ ಪೊಲೀಸರು.

ಮಂಗಳೂರಿನಲ್ಲೇ ಹೆಚ್ಚು 
ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ನಾಪತ್ತೆ ಯಾದವರ ಸಂಖ್ಯೆ ಅತಿ ಹೆಚ್ಚು. ಐದು ವರ್ಷಗಳಲ್ಲಿ 1,252 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, 1,080 ಮಂದಿ ಮಾತ್ರ ಪತ್ತೆಯಾಗಿದ್ದಾರೆ, 172 ಮಂದಿಯ ಸುಳಿವೇ ಇಲ್ಲ.


ನಾಪತ್ತೆಯಾದ ಪ್ರಕರಣಗಳ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಕ್ಕಳನ್ನು ಪತ್ತೆಹಚ್ಚಲು ವಿಶೇಷ ಒತ್ತು ನೀಡಿ ದ್ದೇವೆ. ನನ್ನ ಸಮಕ್ಷಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಬ್ಯೂರೋದ ಸಭೆ ಪ್ರತೀ ತಿಂಗಳು ನಡೆಯುತ್ತದೆ. ತ್ವರಿತಗತಿಯಲ್ಲಿ ಪ್ರಕರಣವನ್ನು ಭೇದಿಸಲು ತಿಳಿಸುತ್ತೇವೆ. ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಮೂಡಿಸುತ್ತೇವೆ.
– ಶಶಿಕಾಂತ್‌ ಸೆಂಥಿಲ್‌, 
ದ.ಕ. ಜಿಲ್ಲಾಧಿಕಾರಿ

Advertisement

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next