Advertisement

ನಾಲ್ಕು ಗುದ್ದುಗಳಲ್ಲಿ ಬುದ್ಧಿ ಹೇಳುತ್ತಿದ್ದ ರಾಜಕುಮಾರರೆಲ್ಲಿ?

11:39 PM Jul 22, 2023 | Team Udayavani |

ಬ್ರೆಜಿಲ್‌ನ ಸಿನೆಮಾ “ದಿ ಸಿಟಿ ಆಫ್ ಗಾಡ್‌’. 2002ರಲ್ಲಿ ತೆರೆಗೆ ಬಂದದ್ದು. ಶೀರ್ಷಿಕೆಗಳು ಬರು ವಾಗ ಒಬ್ಬ ಕೋಳಿಯನ್ನು ಕತ್ತರಿಸಲು ಚಾಕುವನ್ನು ಮಸೆಯುತ್ತಿರುತ್ತಾನೆ. ಆ ಶಬ್ದ ಕತ್ತು ಕೊಯ್ದಂತೆಯೇ ಭೀಕರ ಎನಿಸುತ್ತದೆ. ತನ್ನ ಪಕ್ಕದಲ್ಲೇ ಕಟ್ಟಿ ಹಾಕಿದ ಒಂದೊಂದೇ ಕೋಳಿಗಳ ಪುಕ್ಕ ತೆಗೆದು ಕತ್ತನ್ನು ಕಸಕ್ಕನೆ ಕೊಯ್ಯ ತೊಡಗುತ್ತಾನೆ. ಇಡೀ ಪ್ರಕ್ರಿಯೆ ಕಂಡು ಭಯಗೊಂಡ ಮತ್ತೂಂದು ಕೋಳಿ ಕಷ್ಟಪಟ್ಟು ತಪ್ಪಿಸಿಕೊಂಡು ಕೆಳಗೆ ಹಾರುತ್ತದೆ. ಬದುಕಿದೆ ಎಂದುಕೊಂಡು ಕಣ್ಣರ ಳಿಸಿದಾಗ ರಸ್ತೆಯಲ್ಲಿ ಮಕ್ಕಳ ಗುಂಪು (ಒಬ್ಬ ಹದಿ ಹರೆಯ, ಉಳಿದವರು 10- 13 ರ ಆಸು ಪಾಸು) ಕೇಕೆ ಹಾಕುತ್ತಿದ್ದಾರೆ. ಮರುಕ್ಷಣ ಕೈಯಲ್ಲಿನ ಬಂದೂಕಿನಿಂದ ಗುಂಡಿನ ಮಳೆಗೆರೆಯುತ್ತಾ, ಕೂಗುತ್ತಾ ಕೋಳಿಯನ್ನು ಬೆನ್ನಟ್ಟುತ್ತಾರೆ. ಕೋಳಿ ಕಥೆ ಅಲ್ಲಿಗೆ ಬಿಡೋಣ.

Advertisement

ಆ ದೃಶ್ಯದಲ್ಲಿ ಕಾಣುವ ಹಿಂಸೆ-ಕ್ರೌರ್ಯದ ಸ್ವರೂಪ ಎದೆ ಝಲ್ಲೆನಿಸುವಂ ಥದ್ದು. ಚಿತ್ರವನ್ನು ಕಂಡು ಬೆಚ್ಚಿದ್ದೆ. ಇಡೀ ದೃಶ್ಯ ಆವೇಶ-ವೇಗ ಎರಡರ ಮಿಳಿತ. ಆ ಹದಿಹರೆಯ ದವರ ಕ್ರೌರ್ಯದ ಉನ್ಮಾದ, ತಕ್ಕನಾದ ಸಂಗೀತ…ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಕೋಳಿ ಕತ್ತು ಕೊಯ್ಯುವವನ ನಿರ್ಲಿಪ್ತತೆಗೂ, ಈ ಗುಂಪಿನ ದಾಳಿಯ ಭೀಕರತೆಗೂ ಬಹಳ ವ್ಯತ್ಯಾಸ ಇರಲಿಲ್ಲ.
lll
ವಿಶ್ವದ ಈಗಿನ ಬಹಳಷ್ಟು ಜನಪ್ರಿಯ ಸಿನೆಮಾ ಗಳಲ್ಲಿನ ಸಾಮಾನ್ಯ ದೃಶ್ಯಗಳು ಹೀಗಿರುತ್ತವೆ. ಈ ಮಾತು ಹಾಲಿವುಡ್‌ಗಳಿಂದ ನಮ್ಮ ವುಡ್‌ಗಳಿಗೂ ಅನ್ವಯ. ಹಾಡು ಹಗಲಲ್ಲೇ ನಡು ರಸ್ತೆಯಲ್ಲೇ ಒಬ್ಬ ಮಹಿಳೆಯನ್ನೋ, ಪುರುಷನನ್ನೋ ಒಬ್ಬ ನೋ ಆಥವಾ ಒಂದಿಷ್ಟು ಜನರ ಗುಂಪು ಅಟ್ಟಾಡಿ ಸಿಕೊಂಡು ಬರುತ್ತದೆ. ಮಹಿಳೆ ಅಥವಾ ಪುರುಷ ಏದುಸಿರುಬಿಡುತ್ತ ಒಂದು ದೊಡ್ಡ ಸರ್ಕಲ್‌ನಲ್ಲಿ ಗಕ್ಕನೆ ನಿಲ್ಲುತ್ತಾನೆ. ಸುತ್ತಲೂ ಜನ. ಆತನೋ ಅಥವಾ ಆ ಗ್ಯಾಂಗಿನ ನಾಯಕನೋ ನಿಂದಿಸುತ್ತಾ ಕೈಯಲ್ಲಿ ಕತ್ತಿಯನ್ನು ಝಳಪಿಸುತ್ತಾ ಹತ್ಯೆಗೆ ಮುಂದಾಗುತ್ತಾನೆ. ಮಹಿಳೆಯ ಸಂಗತಿಯಲ್ಲಿ ವಿವಸ್ತಗೊಳಿಸಿ ಮಾನಭಂಗಕ್ಕೆ ಮುಂದಾಗುತ್ತಾನೆ.

ಮೊದ ಮೊದಲು ಸಿನೆಮಾಗಳಲ್ಲಿ ಹೀಗೆ ಮಹಿಳೆಯ ಮೇಲೆ ಕೇಡಿ ಕೈ ಚಾಚುವಷ್ಟರಲ್ಲಿ ಎಲ್ಲೋ ಇದ್ದ ಹೀರೋ ಪ್ರತ್ಯಕ್ಷನಾಗುತ್ತಿದ್ದ. ಕೇಡಿಗೆ ಸರಿಯಾಗಿ ನಾಲ್ಕು ಹೊಡೆದು, ಮಹಿಳೆಯಲ್ಲಿ ತಪ್ಪಾಯ್ತು ಎಂದು ಕ್ಷಮೆ ಕೇಳಿಸುತ್ತಿದ್ದ. ಕ್ರಮೇಣ ಇದೇ ರೀತಿ ದೃಶ್ಯ ಪುನರಾವರ್ತನೆಯಾದರೆ ಪ್ರೇಕ್ಷಕನಿಗೆ ಆಸಕ್ತಿ ಇರದು ಎಂದು ಯಾರಿಗೆ ಎನಿಸಿತೋ ಬದಲಾವಣೆಯಾಗತೊಡಗಿತು. ಮಹಿಳೆಯನ್ನು ಸ್ವಲ್ಪ ವಿವಸ್ತ್ರಗೊಳಿಸುತ್ತಿದ್ದನಂತೆ ಹೀರೋ ಬರತೊಡಗಿದ. ಅದೂ ತೆರೆಗೆ ಸರಿದು, ಮಹಿಳೆಯ ನೆಲಕ್ಕೆ ಬೀಳಿಸಿ ಅತ್ಯಾಚಾರಕ್ಕೆ ಮುಂದಾಗುವಷ್ಟರಲ್ಲಿ ಹೀರೋ ಪ್ರವೇಶ (ಸಿನೆಮಾ ಭಾಷೆಯಲ್ಲಿ ಎಂಟ್ರಿ) ಆಗತೊಡಗಿತು. ಇತ್ತೀಚೆಗೆ ಕೆಲವೊಮ್ಮೆ ಅತ್ಯಾಚಾರ, ಕೊಲೆ ಎರಡೂ ಮುಗಿಯುತ್ತದೆ. ಆಮೇಲೆ ಆ ಘಟನೆಯಿಂದ ರೊಚ್ಚಿಗೆದ್ದ ಹೀರೋ ಕೇಡಿಯನ್ನು ಪ್ರತಿಯಾಗಿ ಬರ್ಬರವಾಗಿ ಕೊಲ್ಲುತ್ತಿದ್ದಾನೆ.
lll
ಇನ್ನೂ ಹಲವು ಸಿನೆಮಾಗಳಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೆ ಒಳಗಾದವಳು ನಾಯಕ ನಟನ ಸೋದರಿ, ಅತ್ತಿಗೆ ಇತ್ಯಾದಿ ಸಂಬಂಧದೊಂದಿಗೆ ಕತೆ ಆರಂಭವಾಗುವುದೂ ಉಂಟು. ಕೇಡಿಯ ಪಾತ್ರಗಳಲ್ಲೂ ಅಷ್ಟೇ. ಮೊದ ಮೊದಲು ತಾನಿದ್ದಲ್ಲೇ (ಅವನ ಕೆಲಸದ ಸ್ಥಳದಲ್ಲೋ, ಹೋಟೆಲುಗಳಂಥ ಸಾರ್ವಜನಿಕ ಸ್ಥಳದಲ್ಲೋ) ಹೊಡೆದಾಟ, ಕೊಲೆ, ಹತ್ಯೆ ಎಲ್ಲವೂ ಮುಗಿಯು ತ್ತಿತ್ತು. ಈಗ ಅದು ಸಾಕಾಗದೆಂದು ಅಟ್ಟಾಡಿಸುವ, ನಡು ರಸ್ತೆಯಲ್ಲಿ ಕತ್ತಿ ಝಳಪಿಸುವವರೆಗೆ ಬಂದಿದೆ. ಇದರಲ್ಲೂ ಆಯಾಯ ನಟರ ಸಾಮರ್ಥ್ಯದ ಮೇಲೆ ಈ ಓಡುವಿಕೆ ಮತ್ತು ಮಧ್ಯೆ ಮಧ್ಯೆ ಕತ್ತಿ ಬೀಸಿ, ಹೀರೋ ಅಥವಾ ಸಂತ್ರಸ್ತ ತಪ್ಪಿಸಿಕೊಳ್ಳುವ ಆಟ ಮೀಟರ್‌ನಿಂದ ಕಿ.ಮೀ.ವರೆಗೂ ನಡೆಯುವುದುಂಟು. ಜತೆಗೆ ಒಂದು ಸಂಭಾಷಣೆ ಸೇರ್ಪಡೆಯಾಗಿದೆ -“ನನ್ನನ್ನು ಎದುರು ಹಾಕಿಕೊಂಡವರಿಗೆ ಯಾವ ಗತಿಯಾಗು ತ್ತದೋ ಅದು ಎಲ್ಲರಿಗೂ ತಿಳಿಯಬೇಕು’ ಎಂದು ಅಬ್ಬರಿಸುತ್ತಾನೆ. ಆ ಸರ್ಕಲ್‌ನ ಸುತ್ತಲೂ ನಿಂತ ನಾವೆಲ್ಲ ಪ್ರೇಕ್ಷಕರು, ಮೂಕ ಪ್ರೇಕ್ಷಕರು. ಕೇಡಿಯ ಅಬ್ಬರಿಸುವಿಕೆ, ಹಿಂಸೆ-ಕ್ರೌರ್ಯವನ್ನು ಕಾಣುತ್ತಾ ಅಸಹಾಯಕರಂತೆ ಇದ್ದು ಬಿಡುತ್ತೇವೆ. ಇಲ್ಲೂ ಸೇರ್ಪಡೆಯಾದ ಸಂಗತಿ ಇದೆ.

ಇಂಥ ದೃಶ್ಯ ಕಂಡು ಜನರು ಹೇಗೆ ಸುಮ್ಮನಿರುತ್ತಾರೆ ಎಂಬ ತರ್ಕದ ಪ್ರಶ್ನೆ ಏಳಬಹುದು? ಯಾರಾದರೂ ಪ್ರಶ್ನಿಸಬಹುದು ಎಂದು ತರ್ಕ ಹುಡುಕಿ ಪೋಣಿಸಲಾಯಿತು. ಅದರ ಪರಿಣಾಮವಾಗಿ ಪ್ರೇಕ್ಷಕರ ಮಹಾಶ ಯರಲ್ಲಿ ಯಾರೋ ಒಂದಿಬ್ಬರು “ಹೇಯ್‌’ ಎಂದು ಕೇಡಿಯನ್ನು ತಡೆಯಲು ಹೋಗುತ್ತಾರೆ. ಅವನ ಮೇಲೆ ಹಲ್ಲೆ, ಬಳಿಕ ಹತ್ಯೆ ನಡೆಯುತ್ತದೆ. ಅದನ್ನು ಕಂಡ ಜನರು ಓಡಿ ಹೋಗುತ್ತಾರೆ, ಇಲ್ಲವೇ ಸುಮ್ಮನೆ ನಿಂತು ಸಾಕ್ಷಿಗಳಾಗುತ್ತಾರೆ. ಹೊಡೆದಾಟ, ಬಡಿದಾಟ ಎಲ್ಲ ಹೋಗಿ ಕೊಲ್ಲು ವುದು, ಕಡಿಯುವುದೂ ಮುಗಿದು “ಇಲ್ಲವಾಗಿಸಿ ಬಿಡುತ್ತೇನೆ, ಹುಟ್ಟಿಲ್ಲ ಎನ್ನಿಸಿಬಿಡುತ್ತೇನೆ’ ಎಂಬ “ಗುಂಡಿ’ನ ವರೆಗೆ ಬಂದು ಈಗ ಏನಿದ್ದರೂ ಗುಂಡಿನ ಶಬ್ದ ಮತ್ತು ಮೌನ…ಕೇಡಿಗಳನ್ನು ಸದೆಬಡಿಯಲು ಮಹಾ ಕೇಡಿಯಂತೆ ಆಗಿರುವ ನಾಯಕ ನಟನ ಆಕ್ರೋಶವಷ್ಟೇ ಕೇಳಿಸುವುದು.
lll
ಸಿನೆಮಾಗಳ ತೆರೆ ಸರಿಸಿ ಕೆಲ ಕ್ಷಣ ನಿಜ ಜೀವನಕ್ಕೆ ಬರೋಣ. ಹಾಡ ಹಗಲೇ ರಸ್ತೆ ಮಧ್ಯೆಯೇ ವ್ಯಕ್ತಿ ಯೊಬ್ಬನನ್ನು ಒಂದು ಗ್ಯಾಂಗ್‌ ಕೊಂದು ಬಿಡು ತ್ತದೆ. ತುಪಾಕಿ ಬೆಂಕಿ ಉಗುಳುತ್ತದೆ. ಸಾರ್ವಜನಿಕ ವಾಗಿಯೇ ಮಹಿಳೆಯೊಬ್ಬಳ ಕೊಲೆ, ಅತ್ಯಾಚಾರ ನಡೆಯುತ್ತದೆ. ಎಲ್ಲರೆದುರೇ ಯಾವನೋ ಒಬ್ಬ ಮಹಿಳೆಗೋ ಅಥವಾ ವ್ಯಕ್ತಿಗೋ ಚಾಕುವಿನಿಂದ ಇರಿಯುತ್ತಿದ್ದರೆ ನಾವು ಸರ್ಕಲ್‌ ನಲ್ಲಿ ನಿಂತ ಸಿನೆಮಾ ದಲ್ಲಿನ ಮೂಕ ಪ್ರೇಕ್ಷಕರಂತಾಗುತ್ತೇವೆ. ಯಾವುದರ ಬಗೆ‌ಯೂ ನಮ್ಮ ಪ್ರತಿರೋಧವೇ ಇಲ್ಲ.

ಸಿನೆಮಾದಲ್ಲಿನ ಕೇಡಿಯಂತೆ‌ಯೇ ಇಲ್ಲೂ ಕೆಲವರು ಹತ್ತಿರ ಬಂದರೆ ಸುಟ್ಟು ಬಿಡುತ್ತೇವೆ ಎಂದು ಗುಂಡಿನ ಮಳೆಗೆರೆಯುವುದುಂಟು, ಹತ್ತಿರ ಬಂದರೆ ಎಚ್ಚರಿಕೆ ಎನ್ನುವಂತೆ ಚಾಕು ತೋರಿಸಿ ಬೆದರಿಸಿ ತಮ್ಮ ಕೆಲಸ ಮುಗಿಸಿಕೊಳ್ಳು ವವರೂ ಇದ್ದಾರೆ. ಆದರೆ ನಾವು ಮಾತ್ರ ಸಿನೆಮಾದ ದೃಶ್ಯಕ್ಕೂ, ನಿಜ ಬದುಕಿನ ಘಟನೆಗೂ ಸಂಬಂಧವೇ ಇಲ್ಲ ಅಥವಾ ಎರಡೂ ಒಂದೇ (ನಾಟಕೀಯ-ಕೃತಕ) ಎನ್ನುವಂತೆ ತುಟಿಕ್‌ ಪಿಟಿಕ್‌ ಎನ್ನದೇ ಇರುತ್ತಿದ್ದೇವೆ. ಅದು ಎಷ್ಟು ದೊಡ್ಡ ಅಪಾಯಕಾರಿ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ.
ಈಗ ಸೇರಿಗೆ ಸವ್ವಾಸೇರು ಎಂಬಂತೆ ಈ ಅತ್ಯಾಚಾರ ಇತ್ಯಾದಿ ಅಮಾನವೀಯತೆಯಲ್ಲೂ ಅದರ ಕನಿಷ್ಠ ಮಟ್ಟ ಏನು ಎನ್ನುವುದನ್ನೇ ಹುಡು ಕುವಂತಾಗಿದೆ. ಇವೆಲ್ಲವೂ ಯಾವುದೋ ಒಂದು ಭಾಷೆಯ ಚಿತ್ರಗಳಿಗೆ ಅನ್ವಯವಾದದ್ದಲ್ಲ; ಎಲ್ಲ ಭಾಷೆ, ದೇಶಗಳನ್ನೂ ಮೀರಿದೆ. ಹಿಂಸೆ ಎನ್ನುವುದೇ ಆಪ್ಯಾಯಮಾನ ಆಗುತ್ತಿದೆಯೇನೋ ಎನ್ನಿಸತೊ ಡಗಿದೆ.
lll
ನಮ್ಮ ಹಳೆಯ ಚಿತ್ರಗಳಲ್ಲಿ ಕೇಡಿಯೊಬ್ಬ ಯಾವುದೋ ಕುಕೃತ್ಯ ನಡೆಸುತ್ತಿದ್ದರೆ ಮುಗಿ ಬೀಳುವ ಪ್ರೇಕ್ಷಕರಿದ್ದರು. ಅವರು ಏನಾದರು? ಎಲ್ಲಿ ಹೋದರು? ಸಿನೆಮಾದ ದೃಶ್ಯದಲ್ಲಿ ಕತ್ತಿ, ಚೂರಿಗಳಿಲ್ಲದೇ ಬರೀ ದೊಣ್ಣೆಗಳ, ಗುದ್ದುಗಳ ಹೊಡೆದಾಟಗಳಿದ್ದವು. ಅವು ಏನಾದವು? ಹಾಗೆಯೇ ಆ ಗುದ್ದುಗಳನ್ನು ಕಂಡೇ”ಇದು ಹೆಚ್ಚಾಯಿತು, ಇಷ್ಟೇಕೆ ಹಿಂಸೆ? ಇಷ್ಟೊಂದು ಹೊಡೆಯಬಾರದಿತ್ತಪ್ಪ’ ಎನ್ನುತ್ತಿದ್ದ ಪ್ರೇಕ್ಷಕ ಮಹಾಶಯ ನಮ್ಮೊಳಗೇ ಇದ್ದನಲ್ಲ? ಅವನು ಎಲ್ಲಿಗೆ ಕಾಣೆಯಾದ? ಗಾಂಧಿ ಸೀಟಿನಿಂದ ಹಿಡಿದು ಬಾಲ್ಕನಿವರೆಗೂ ಒಂದು ಹೀರೋ ಅಥವಾ ಕೇಡಿ ಕೊಚ್ಚಿಹಾಕುವ ಸ್ಪರ್ಧೆಗೆ ಇಳಿಯು ವಾಗ ಸೀಟಿ ಹೊಡೆಯುತ್ತಾ ಸಂಭ್ರಮಿಸುವ ಈ ಬೀಭತ್ಸ ನಮ್ಮೊಳಗೆ ಹೇಗೆ ತೂರಿಕೊಂಡಿತು? ಪ್ರಶ್ನೆಗಳಿಗೆ ಉತ್ತರ ಹಲವು ಮೂಲಗಳಲ್ಲಿದೆ.
lll
ಈ ಹಿಂಸೆ ಮತ್ತು ಕ್ರೌರ್ಯಗಳು ಬಣ್ಣ ಬದಲಿಸಿ ಕೊಂಡು ನಮ್ಮೊಳಗೆ ಕರಗಿ ಹೋದವೇ? ಹಾಗಾಗಿ ಆ ಭಿನ್ನತೆಯನ್ನು ಗುರುತಿಸಲು ಸಾಧ್ಯ ವಾಗು ತ್ತಿಲ್ಲವೇ? ಬರೀ ಗುದ್ದುಗಳಲ್ಲಿ ಕೇಡಿಗೆ ಬುದ್ಧಿ ಕಲಿಸುವ ರಾಜಕುಮಾರರ (ನಾಯಕ ನಟರು)ರು ಎಲ್ಲಿ ಹೋದರು? ಇರುವೆಯನ್ನು ಕೊಂದರೂ ಅಯ್ಯೋ ಎನ್ನುತ್ತಿದ್ದ ನಮ್ಮೊಳಗಿನ ಸಂವೇದನೆಯ ಅಂತರ್ಜಲ ಮನುಷ್ಯನನ್ನು ಕಡಿ ದರೂ ಅಯ್ಯೋ ಎನ್ನಲಾರದಷ್ಟು ಪಾತಾಳಕ್ಕಿಳಿಯಿತೇ ?

Advertisement

ಇವೇ ಕೈಗೆ ಉತ್ತರ ಸಿಕ್ಕಂತೆ ಧುತ್ತನೆ ಎದುರಾಗಿ ಮತ್ತಷ್ಟು ಜಟಿಲ ಎನಿಸುತ್ತಿರುವ ಪ್ರಶ್ನೆಗಳು.
*
ಎರಡು ತಿಂಗಳಿನಿಂದ ಈಶಾನ್ಯ ರಾಜ್ಯದಲ್ಲಿನ ಹಿಂಸೆ, ಪಶ್ಚಿಮ ಬಂಗಾಲದಲ್ಲಿನ ಕ್ರೌರ್ಯ, ರಾಜ ಸ್ಥಾನದಲ್ಲಿನ ಅಮಾನವೀಯ ಕೃತ್ಯಗಳು- ಹೀಗೆ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವುದು ಹಿಂಸೆ , ಕ್ರೌರ್ಯ, ಅಮಾನವೀಯತೆ ಹಾಗೂ ಸಂವೇದನಾ ಶೂನ್ಯತೆ. ಜತೆಗೆ ಇದಕ್ಕೆ ಬೆರೆತಿರುವ ರಾಜಕೀಯ ಬಣ್ಣಗಳು. ತಳದ ಸತ್ಯ ದರ್ಶನವಾಗಲು ಕಲಕಿರುವ ನೀರು ತಿಳಿಯಾಗಲೇಬೇಕು. ಅಲ್ಲಿಯವರೆಗೆ ಕಾಯಬೇಕು.
ಅದೇ ಈ ಹೊತ್ತಿನ ಅನಿವಾರ್ಯತೆ.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next