Advertisement

ಎಲ್ಲಿಂದ ಸ್ಪರ್ಧಿಸಲಯ್ಯಾ ನಾನು?

12:30 AM Mar 16, 2019 | Team Udayavani |

ಬೆಂಗಳೂರು: ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧೆಮಾಡಬೇಕು ಹಾಗೂ ಸ್ಪರ್ಧೆ ಮಾಡಲೇ ಬೇಕೆ-ಬೇಡವೇ ಎಂಬ ಜಿಜ್ಞಾಸೆ ಮೂಡಿದೆ. ಜತೆಗೆ ತಮ್ಮದೇ ಒಕ್ಕಲಿಗ ಸಮುದಾಯದ ಮುದ್ದಹನುಮೇಗೌಡ ಅವರಿಗೆ ಕ್ಷೇತ್ರ ತಪ್ಪಿಸಿದ ಅಪವಾದಕ್ಕೆ ಗುರಿಯಾಗುವ ಧರ್ಮಸಂಕಟವೂ ಎದುರಾಗಿದೆ. ಸೀಟು ಹಂಚಿಕೆ ನಂತರ ಬೆಂಗಳೂರು ಉತ್ತರ ಕ್ಷೇತ್ರವೋ, ತುಮಕೂರು ಕ್ಷೇತ್ರವೋ ಎಂಬ ಪ್ರಶ್ನೆ ಎದುರಾಗಿತ್ತಾದರೂ ಇದೀಗ ತುಮಕೂರು ಕ್ಷೇತ್ರ ಬಿಟ್ಟುಕೊಡುವಂತೆ ಹಾಲಿ ಸಂಸದ ಮುದ್ದಹನುಮೇಗೌಡ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ದುಂಬಾಲು ಬಿದ್ದಿರುವುದರಿಂದ ದೇವೇಗೌಡರ ಮನಸ್ಸಿನ ತುಮುಲಕ್ಕೆ ಅವಕಾಶ ಕಲ್ಪಿಸಿದೆ. 

Advertisement

ಒಂದು ಹಂತದಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದ ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ಗೂ ಆ ಬಗ್ಗೆ ತಿಳಿಸಿದ್ದರಾದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಠದಿಂದ ಮೈಸೂರು ಕಾಂಗ್ರೆಸ್‌ಗೆ ಬಿಟ್ಟು ಕೊಡುವಂತಾಯಿತು. ಹೀಗಾಗಿ, ಉಳಿದಿರು ವುದು ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರ ಮಾತ್ರ. ಎರಡರಲ್ಲಿ ಯಾವುದು ಸೂಕ್ತ ಎಂಬ ಗೊಂದಲ ದೇವೇಗೌಡರನ್ನು ಕಾಡುತ್ತಿರುವಂತಿದೆ. ಇತ್ತ ಬೆಂಗಳೂರು ಉತ್ತರದಲ್ಲಿಯೂ ಐವರು ಕಾಂಗ್ರೆಸ್‌ ಶಾಸಕರಿದ್ದಾರೆ. ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಾಗಿದ್ದರೂ ಬೆಂಗ ಳೂರು ನಗರ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಎಂದೂ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಹಾಲಿ ಕಾಂಗ್ರೆಸ್‌ ಶಾಸಕರು ಮನಃಪೂರ್ವಕವಾಗಿ ಕೆಲಸ ಮಾಡುತ್ತಾರಾ ಎಂಬ ಅನುಮಾನವೂ ಇದೆ.

ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇದೀಗ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬ ಗೊಂದಲವೂ ಅವರನ್ನು ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕುಟುಂಬದಿಂದ ಪ್ರಜ್ವಲ್‌ ರೇವಣ್ಣ ಹಾಸನ ಹಾಗೂ ನಿಖೀಲ್‌ ಮಂಡ್ಯ ದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದಲ್ಲಿ ಮೂವರ ಸ್ಪರ್ಧೆ ಬಗ್ಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಇದರಿಂದ ಬೇಸರಗೊಂಡಿರುವ ದೇವೇಗೌಡರು, ಸ್ಪರ್ಧೆ ಮಾಡದಿರುವ ಬಗ್ಗೆಯೂ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಹೀಗಾಗಿಯೇ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಂತಿಮ ವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್‌ ನಾಯಕರ ಜತೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ದೇವೇಗೌಡರು ಸ್ಪರ್ಧೆ ಮಾಡದಿದ್ದರೆ ತುಮಕೂರಿನಿಂದ ಸುರೇಶ್‌ ಬಾಬು ಅಥವಾ ರಮೇಶ್‌ ಬಾಬು, ಬೆಂಗಳೂರು ಉತ್ತರದಿಂದ ಹನುಮಂತೇ ಗೌಡ, ಜವರಾಯಿಗೌಡ ಅವರ ಹೆಸರು ಕೇಳಿಬರುತ್ತಿದೆ. ದೇವೇಗೌಡರ ತೀರ್ಮಾನದತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ.

ಬದಲಾಗುತ್ತಾ?: ತುಮಕೂರು, ಉತ್ತರ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಮತ್ತೆ ಕಾಂಗ್ರೆಸ್‌ಗೆ ಕೊಟ್ಟು ಬೇರೆ ಕ್ಷೇತ್ರ ಪಡೆಯುವ ಕೊನೇ ಹಂತದ ಪ್ರಯತ್ನಗಳುಇನ್ನೂ ಚಾಲ್ತಿಯಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಗೌಡರ ಮೌನ

ಮೂರು ದಿನಗಳಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮೌನ ವಾಗಿದ್ದಾರೆ. ಕಾರ್ಯಕರ್ತರು ಹಾಗೂ ಮುಖಂಡರ ಜತೆ ಆಂತರಿಕ ಚರ್ಚೆಯಲ್ಲಿ ತೊಡಗಿರುವ ಅವರು ಸ್ಪರ್ಧೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಸೀಟುಹಂಚಿಕೆ ವಿಚಾರದಲ್ಲಿ ಮೈಸೂರು ಕ್ಷೇತ್ರ ಸಿಗದಿರುವ ಬಗ್ಗೆ ಅವರಿಗೆ ತೀವ್ರ ಅಸಮಾಧಾನ ವಿದೆ. ಹೀಗಾಗಿಯೇ ದೆಹಲಿ ಮಟ್ಟದಲ್ಲಿ ದೇವೇಗೌಡರು-ರಾಹುಲ್‌ಗಾಂಧಿ ಜತೆಗೂಡಿ ಸೀಟು ಹಂಚಿಕೆ ಬಗ್ಗೆ ಘೋಷಿಸಲು ಉದ್ದೇಶಿಸ ಲಾಗಿತ್ತು. ಆದರೆ, ಸೀಟು ಹಂಚಿಕೆಯಲ್ಲಿ ತಮಗೆ ಬೇಕಾದ ಕ್ಷೇತ್ರಗಳು ಸಿಗಲಿಲ್ಲ ಎಂಬ ಕಾರಣಕ್ಕೆ ಡ್ಯಾನಿಶ್‌ ಅಲಿ ಅವರನ್ನು ರಾಹುಲ್‌ಗಾಂಧಿಯವರ ಬಳಿ ಕಳುಹಿಸಿದರು. ಹಾಲಿ ಕಾಂಗ್ರೆಸ್‌ ಸಂಸದರು ಇರುವ ಕ್ಷೇತ್ರಕ್ಕೆ ಬೇಡಿಕೆ ಇಡದಿದ್ದರೂ ತುಮಕೂರು ಸೇರಿ ಎಂಟು ಸೀಟು ಬಿಟ್ಟುಕೊಟ್ಟು ಇದೀಗ ತಮ್ಮನ್ನು ವಿಲನ್‌ನಂತೆ ಕಾಂಗ್ರೆಸ್‌ನ ಕೆಲ ನಾಯಕರು ಚಿತ್ರಿಸುತ್ತಿದ್ದಾರೆಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನಗೆ ಕ್ಷೇತ್ರ ಯಾಕೆ ಮತ್ತು ಹೇಗೆ ತಪ್ಪಿತು ಎನ್ನುವುದು ಗೊತ್ತಿಲ್ಲ. ಕ್ಷೇತ್ರ ನನಗೇಸಿಗುತ್ತದೆ ಎನ್ನುವ  ವಿಶ್ವಾಸ ಇದೆ. ಸಂಸತ್ತಿನ ಕೊನೆ ಕಲಾಪದವರೆಗೂ ನಾನುಕೆಲಸ ಮಾಡಿದ್ದೇನೆ. ದೇವೇ ಗೌಡರು ಸ್ಪರ್ಧೆ ಮಾಡದಿದ್ದರೆ, ಕ್ಷೇತ್ರ ಬಿಟ್ಟುಕೊಡುವಂತೆಕೇಳಿದ್ದೇವೆ. ಹೆಚ್ಚಿಗೆ ಈಗಲೇ ನಾನೇನು ಮಾಡಲು ಆಗುವುದಿಲ್ಲ.
● ಮುದ್ದಹನುಮೇಗೌಡ, ತುಮಕೂರು ಸಂಸದ

Advertisement

Udayavani is now on Telegram. Click here to join our channel and stay updated with the latest news.

Next