Advertisement

PM ಮೋದಿ ಯಾವ ಮುಖ ಹೊತ್ತು ರಾಜ್ಯಕ್ಕೆ ಬರುತ್ತಾರೋ?

11:31 PM Apr 13, 2024 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಮೈಸೂರಿಗೆ ಯಾವ ಮುಖ ಹೊತ್ತುಕೊಂಡು ಬರುತ್ತಾರೋ ತಿಳಿಯುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

Advertisement

ನಗರದಲ್ಲಿ ಶನಿವಾರ ಆಯೋಜಿಸಿದ್ದ “ಪ್ರಜಾಧ್ವನಿ-2′ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಅನ್ಯಾಯ ಆದಾಗ ಸರಿಪಡಿಸಲು ಬರಲಿಲ್ಲ. ಬರಗಾಲದಲ್ಲಿ ರೈತರ ಕಷ್ಟವನ್ನು ಕೇಳಲು ಬರಲಿಲ್ಲ. ಪ್ರವಾಹ ಕಾಲದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಬರಲಿಲ್ಲ. ಬಡವರು, ಮಹಿಳೆಯರು ಮತ್ತು ದಲಿತರ ಪರ ಅಭಿವೃದ್ಧಿ ಕೆಲಸ ಮಾಡಲು ಬರಲಿಲ್ಲ. ಆದರೆ ರಾಜ್ಯದ ಜನತೆಯ ಮತ ಕೇಳಲು ಮಾತ್ರ ಬರುತ್ತಿರುವ ಪ್ರಧಾನಿಗೆ ಕರ್ನಾಟಕದ ಮೇಲೆ ದ್ವೇಷದ ಭಾವನೆ ಇದೆ. ಅವರು ಮಲತಾಯಿ ಧೋರಣೆ ಹೊಂದಿದ್ದಾರೆ. ಪ್ರಧಾನಿಯವರು ಮೈಸೂರಿಗೆ ಬಂದಾಗ ಮತದಾರರು ಈ ಬಗ್ಗೆ ಅವರನ್ನು ಪ್ರಶ್ನೆ ಮಾಡಬೇಕು. ಮೈಸೂರು ನಗರಕ್ಕೆ ನಿಮ್ಮ ಕೊಡುಗೆ ಏನು ಎಂದು ಕೇಳಬೇಕು ಎಂದು ಹೇಳಿದರು.

ಗ್ಯಾರಂಟಿ ನಿಲ್ಲುವುದಿಲ್ಲ
ಲೋಕಸಭಾ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ವಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಆದರೆ ಯಾವುದೇ ಕಾರಣಕ್ಕೂ, ಏನೇ ಆದರೂ, ಎಷ್ಟೇ ಖರ್ಚು ಬಂದರೂ ಗ್ಯಾರಂಟಿಯನ್ನು ನಿಲ್ಲಿಸುವುದಿಲ್ಲ ಎಂದು ಘಂಟಾಘೋಷವಾಗಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತು ಹೋಗಿದೆ, ಸರಕಾರದಲ್ಲಿ ಹಣವಿಲ್ಲ ಎಂದು ವಿಪಕ್ಷದವರು ಆರೋಪಿಸುತ್ತಿದ್ದಾರೆ. ಎಲ್ಲ ಕೆಲಸ ನಿಂತು ಹೋಗಿವೆ. ರಸ್ತೆ ಅಭಿವೃದ್ಧಿ, ನೀರಾವರಿ ಕೆಲಸ, ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು, ಎಸ್‌ಇಪಿ-ಟಿಎಸ್‌ಪಿ ಕಾರ್ಯಕ್ರಮ. ಪಿಂಚಣಿ ಇವುಗಳು ನಿಂತು ಹೋಗಿವೆಯೇ ಎಂದು ಪ್ರಶ್ನಿಸಿದರು.

ನೂರು ವರ್ಷಗಳಲ್ಲೇ ಭೀಕರವಾದ ಬರಗಾಲವನ್ನು ಕರ್ನಾಟಕ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ನಮ್ಮ ರಾಜ್ಯದ ತೆರಿಗೆ ಹಣವನ್ನು ನಮಗೆ ಕೊಡಲು ಅವರಿಗೆ ಹೊಟ್ಟೆ ಉರಿ. ಕಾಂಗ್ರೆಸ್‌ ಸರಕಾರ ಬಡವರ ಪರ ಕೆಲಸ ಮಾಡುತ್ತಿದ್ದು, ನಮಗೆ ತೊಂದರೆ ಕೊಡಬೇಕು ಎನ್ನುವ ದೃಷ್ಟಿಯಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

Advertisement

ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ಸುಮಾರು 35 ಸಾವಿರ ಕೋಟಿ ರೂ. ನಷ್ಟವಾಗಿದೆ. 223 ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು 18,171 ಕೋ. ರೂ. ಬರ ಪರಿಹಾರವನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಅವರೂ ಇಲ್ಲಿವರೆಗೂ ಒಂದು ರೂಪಾಯಿ ನೀಡಿಲ್ಲ. ನಾವು 44 ಲಕ್ಷ ರೈತರಿಗೆ 650 ಕೋಟಿ ರೂಪಾಯಿಯನ್ನು ಮಧ್ಯಾಂತರ ಪರಿಹಾರವಾಗಿ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಅಂಕಿ ಅಂಶ ಸಹಿತ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್, ಶಾಸಕ ಕೆ.ಹರೀಶ್‌ಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ| ಪುಷ್ಪಾ ಅಮರನಾಥ್‌ ಮೊದಲಾದವರು ಉಪಸ್ಥಿತರಿದ್ದರು.

ಅಭ್ಯರ್ಥಿ ಹೆಸರಿಗೆ ಪಟ್ಟಿ ಅಂಟಿಸಿದರು
ಸಮಾವೇಶದ ವೇದಿಕೆಯ ಹಿಂಭಾಗದಲ್ಲಿ ಹಾಕಿದ್ದ ಬೃಹತ್‌ ಬ್ಯಾನರ್‌ನಲ್ಲಿದ್ದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರಿನ ಮೇಲೆ ಬಿಳಿಪಟ್ಟಿ ಅಂಟಿಸಿದ ಘಟನೆ ನಡೆಯಿತು. ಅಲ್ಲದೆ, ಅಭ್ಯರ್ಥಿಯ ಫೋಟೋ ಇದ್ದ ಜಾಗದ ಮುಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ್‌ ಇಡಲಾಯಿತು. ಅಭ್ಯರ್ಥಿ ಫೋಟೋ, ಹೆಸರು ಇದ್ದರೆ ಚುನಾವಣ ವೆಚ್ಚಕ್ಕೆ ಈ ಸಮಾವೇಶದ ಖರ್ಚು ಸೇರುತ್ತದೆ. ಆ ಕಾರಣದಿಂದ ಹೀಗೆ ಮಾಡಲಾಗಿದೆ ಎನ್ನುವ ಮಾತುಗಳು ಅಲ್ಲಿ ಕೇಳಿಬಂದವು.

ನಿಷ್ಠಾವಂತರಿಗೆ ಬಿಜೆಪಿ
ಉಂಡೆನಾಮ: ಡಿಕೆಶಿ ಟಾಂಗ್‌
ಹುಣಸೂರು: ರಾಜ್ಯದ 14 ಕಡೆ ಬಂಡಾಯ ಎದ್ದಿದ್ದಾರೆ. ಪ್ರತಾಪ್‌ಸಿಂಹ ಸಹಿತ ನಿಷ್ಠಾವಂತ 8 ಜನರಿಗೆ ಬಿಜೆಪಿಯವರು ಉಂಡೆನಾಮ ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಕಾಂಗ್ರೆಸ್‌ ಆಯೋಜಿಸಿದ್ದ ಬೃಹತ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುಳಿದ ಸಮುದಾಯಕ್ಕೆ ಟಿಕೆಟ್‌ ನೀಡಿಲ್ಲ. ನಾವು ಸಾಮಾಜಿಕ ನ್ಯಾಯದ ಜತೆಗೆ ಒಕ್ಕಲಿಗ ಸಮುದಾಯಕ್ಕೂ ಈ ಬಾರಿ 8 ಜನರಿಗೆ ಟಿಕೆಟ್‌ ನೀಡಿದ್ದೇವೆ ಎಂದರು.

ಈಶ್ವರಪ್ಪನನ್ನು ಆ ದೇವರೇ ಕಾಪಾಡಬೇಕು ಎಂದು ಡಿ.ಕೆ.ಶಿವಕುಮಾರ್‌ ಹಾಸ್ಯ ಚಟಾಕಿ ಹಾರಿಸಿದರು. ದೇವೇಗೌಡರು ಅಂತ್ಯಕಾಲದಲ್ಲಿ ಕುಮಾರಸ್ವಾಮಿಗೆ ಅಧಿಕಾರ ಕೊಟ್ಟು, ಬಿಜೆಪಿಗೆ ಅಳಿಯನನ್ನು ಕಳುಹಿಸಿ ಕೊಟ್ಟರು. ಆದರೆ ಕುಮಾರಸ್ವಾಮಿ ಜೆಡಿಎಸ್‌ ಪಕ್ಷವನ್ನು ಬಿಜೆಪಿಗೆ ಮಾರಾಟ ಮಾಡಿ ಕಾರ್ಯಕರ್ತರನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಜೆಡಿಎಸ್‌ ಕೇವಲ ಮೂರು ಜಿಲ್ಲೆಯಲ್ಲಿತ್ತು, ಈಗ ಅದನ್ನೂ ಮಾರಿಕೊಂಡಿದ್ದಾರೆಂದು ಕುಟಿಕಿದರು.

ಕುಮಾರಸ್ವಾಮಿ ನನಗೆ ವಿಷ ಹಾಕಿದ್ದೀನಿ ಅಂತಿದ್ದಾರೆ. ಅಧಿಕಾರದಿಂದ ಕೆಳಗಿಳಿಸಿದವರ ಜತೆಗೆ ಶಾಮೀಲಾಗಿದ್ದಾರೆಂದು ಟೀಕಿಸಿದ ಡಿ.ಕೆ.ಶಿವಕುಮಾರ್‌, ಈ ಬಗ್ಗೆ ಜಿ.ಟಿ.ದೇವೇಗೌಡರೇ ಉತ್ತರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next